ನ್ಯೂಸ್

ಕಳವಳಕಾರಿ ಬೆಳವಣಿಗೆ: ನಕ್ಸಲರ ಸ್ಫೋಟದಲ್ಲಿ 11 ಪೊಲೀಸ್ ಸಿಬ್ಬಂದಿ ಬಲಿ

ಛತ್ತೀಸ್​ಗಢದ ದಾಂತೆವಾಡ ಜಿಲ್ಲೆಯಲ್ಲಿ ನಕ್ಸಲರು ನಡೆಸಿದ ಬಾಂಬ್ ಸ್ಪೋಟದಲ್ಲಿ 10 ಪೊಲೀಸ್ ಸಿಬ್ಬಂದಿ ಮತ್ತು ಒಬ್ಬ ಚಾಲಕ ಮೃತಪಟ್ಟಿರುವ ದುರಂತ ಬುಧವಾರ ನಡೆದಿರುವುದು, ಬಹುತೇಕ ಕಣ್ಮರೆಯಾಗಿದೆ ಎಂಬಂತಿದ್ದ ನಕ್ಸಲ್ ಚಟುವಟಿಕೆಗಳು ಭಾರತದಲ್ಲಿನ್ನೂ ಜೀವಂತವಾಗಿವೆ ಎಂಬುದರ ಸಂದೇಶವನ್ನು ರವಾನಿಸಿವೆ.

ಪೊಲೀಸ್ ಜಿಲ್ಲಾ ರಿಸರ್ವ್ ಗಾರ್ಡ್​ಗಳ ತಂಡವು ನಕ್ಸಲ್ ವಿರೋಧಿ ಕಾರ್ಯಾಚರಣೆ ಮುಕ್ತಾಯಗೊಳಿಸಿ ವಾಪಸಾಗುತ್ತಿರುವ ಸಂದರ್ಭದಲ್ಲೇ ಅರನ್ಪುರ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ದಾಳಿ ನಡೆದಿರುವುದು ಹಾಗೂ ಭದ್ರತಾ ಪಡೆಗಳು ಸಂಚರಿಸುತ್ತಿದ್ದ ಮಿನಿ ಗೂಡ್ಸ್ ವಾಹನವನ್ನು ಸುಧಾರಿತ ಸ್ಪೋಟಕ ಸಾಧನದ ಮೂಲಕ ಸ್ಪೋಟಿಸಿರುವುದನ್ನು ನೋಡಿದರೆ ನಕ್ಸಲರು ಮತ್ತೆ ಪ್ರಬಲರಾಗುತ್ತಿದ್ದಾರೆಯೇ ಎಂಬ ಆತಂಕ ಸಹಜವಾಗಿ ಮೂಡುತ್ತದೆ.

ನಕ್ಸಲರಿಂದ ಯಾವುದೇ ಪ್ರಮುಖ ಹಿಂಸಾಚಾರದ ಘಟನೆಗಳು ನಡೆದಿರುವುದು ಕಳೆದ ಎರಡು ವರ್ಷಗಳಿಂದ ವರದಿಯಾಗಿರಲಿಲ್ಲ. 2021ರ ಏಪ್ರಿಲ್​ನಲ್ಲಿ ಛತ್ತೀಸ್​ಗಢದ ಸುಕ್ಮಾ-ಬಿಜಾಪುರ ಜಿಲ್ಲೆಗಳ ನಡುವಿನ ತೆರಾ›ಂ ಅರಣ್ಯ ಪ್ರದೇಶದಲ್ಲಿ ನಕ್ಸಲೀಯರು 22 ಪೊಲೀಸರನ್ನು ಕೊಂದು ಹಾಕಿದ್ದು ಈ ಹಿಂದಿನ ಅತಿದೊಡ್ಡ ಪ್ರಕರಣವಾಗಿತ್ತು. ಇದಕ್ಕೂ ಮೊದಲು 2021ರ

ಮಾರ್ಚ್​ನಲ್ಲಿ ಜಾರ್ಖಂಡ್ ಪಶ್ಚಿಮ ಸಿಂಗ್​ಭುಮ್ ಜಿಲ್ಲೆಯಲ್ಲಿ ನಕ್ಸಲರ ಸ್ಪೋಟಕ್ಕೆ ಮೂವರು ಪೊಲೀಸರು ಬಲಿಯಾಗಿದ್ದರು. 2020ರ ಮಾರ್ಚ್​ನಲ್ಲಿ ಛತ್ತೀಸ್​ಗಢದ ಸುಕ್ಮಾ ಪ್ರದೇಶದಲ್ಲಿ 17 ಪೊಲೀಸರನ್ನು ಕೊಲೈಗೈಯಲಾಗಿತ್ತು. ಬಿಹಾರದ ಗಯಾ ಜಿಲ್ಲೆಯಲ್ಲಿ 2020ರ ಫೆಬ್ರವರಿಯಲ್ಲಿ ಶಾಲೆಯೊಂದನ್ನು ಕೂಡ ನಕ್ಸಲರು ಸ್ಪೋಟಿಸಿದ್ದರು. 2019ರ ನವೆಂಬರ್​ನಲ್ಲಿ ಜಾರ್ಖಂಡ್​ನ ಲತೆಹಾರ್ ಜಿಲ್ಲೆಯಲ್ಲಿ ನಕ್ಸಲರ ದಾಳಿಯಲ್ಲಿ ನಾಲ್ವರು ಭದ್ರತಾ ಸಿಬ್ಬಂದಿ ಸಾವನ್ನಪ್ಪಿದ್ದರು. ಹೀಗೆ ನಕ್ಸಲರ ದಾಳಿಗಳು ಛತ್ತೀಸ್​ಗಢ ಹಾಗೂ ಅದರ ಸುತ್ತಮುತ್ತಲ ರಾಜ್ಯಗಳಲ್ಲಿ ಕೇಂದ್ರೀಕೃತವಾಗಿರುವುದನ್ನು ಈ ಘಟನೆಗಳು ತೋರಿಸಿಕೊಡುತ್ತವೆ. ಭೂಮಾಲೀಕರ ಶೋಷಣೆಗೆ ಒಳಗಾದ ಕೃಷಿ ಕಾರ್ವಿುಕರ ಪರವಾಗಿ ನಕ್ಸಲರ ಹೋರಾಟ ಮೊದಲು ಶುರುವಾಯಿತು. ಪಶ್ಚಿಮ ಬಂಗಾಳ ರಾಜ್ಯದ ನಕ್ಷಲ್​ಬಾಡಿಯಲ್ಲಿ ಆರಂಭವಾಗಿ ಅದೇ ಹೆಸರು ಪಡೆದುಕೊಂಡಿತು. ಶೋಷಿತರ ಪರವಾಗಿ, ನ್ಯಾಯದ ಪರವಾಗಿ ಹೋರಾಡುತ್ತೇವೆ ಎಂಬ ಸದುದ್ದೇಶಗಳನ್ನೇ ನಕ್ಸಲರು ಬಿಂಬಿಸಿದರೂ ಅವರ ಹಿಂಸಾಮಾರ್ಗವನ್ನು ನಾಗರಿಕ ಸಮಾಜ ಒಪ್ಪಿಕೊಳ್ಳಲಾಗದು. ಹಿಂಸಾಚಾರ ತೊರೆದು ಮುಖ್ಯವಾಹಿನಿಗೆ ವಾಪಸು ಬರುವ ಅವಕಾಶಗಳನ್ನು ಈ ಹಿಂದೆ ವಿವಿಧ ರಾಜ್ಯಗಳ ಸರ್ಕಾರಗಳು ನಕ್ಸಲಿಯರಿಗೆ ನೀಡಿರುವುದು ಸಾಕಷ್ಟು ಫಲಪ್ರದವಾಗಿದೆ. ಎಷ್ಟೋ ಮಂದಿ ಹಿಂಸಾಚಾರ ಮಾರ್ಗ ತೊರೆದು ಸಹಜ ಜೀವನಕ್ಕೆ ವಾಪಸಾಗಿದ್ದಾರೆ. ಆದರೆ, ಇನ್ನೂ ಕೆಲವರು ಹಿಂಸಾಮಾರ್ಗದಲ್ಲಿ ಸಾಗಿರುವುದು ಕಳವಳಕಾರಿ ಸಂಗತಿಯಾಗಿದೆ. ಯಾವುದೇ ರಾಜಕೀಯ ಕೆಸರೆಚಾಟಕ್ಕೆ ಆಸ್ಪದ ಕೊಡದೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಒಗ್ಗೂಡಿ ಈ ಹಿಂಸಾಚಾರವನ್ನು ಹತ್ತಿಕ್ಕಿ ಶಾಂತಿ ನೆಲೆಸುವಂತೆ ಮಾಡುವುದು ಇಂದಿನ ಅಗತ್ಯವಾಗಿದೆ.