ನ್ಯೂಸ್

33 ಲಕ್ಷ ರೂ. ಮೌಲ್ಯದ 10,000 ಡೊನಟ್ಸ್ ಕಳ್ಳತನ!; ಬೇಕರಿ ಮಾಲೀಕ ಕಂಗಾಲು

ನ್ಯೂ ಸೌತ್ ವೇಲ್ಸ್: ಸಿಹಿ ಪ್ರಿಯಳಾಗಿದ್ದ ಮಹಿಳೆಯೊಬ್ಬಳು ಆಗ ತಾನೆ ಮಾಡಿಟ್ಟಿದ್ದ ತಾಜಾ 10,000 ಡೋನಟ್‌ಗಳನ್ನು ಕಳ್ಳತನ ಮಾಡಬೇಕೆಂಬ ಹೊಂಚು ಹಾಕಿದ್ದು, ಅದನ್ನು ಸಾಗಿಸುತ್ತಿದ್ದ ಕ್ರಿಸ್ಪಿ ಕ್ರೀಮ್ ವ್ಯಾನ್ ಸಮೇತ ಖದ್ದು ಪರಾರಿಯಾದ ಘಟನೆ ಆಸ್ಟ್ರೇಲಿಯಾದ ನ್ಯೂ ಸೌತ್ ವೇಲ್ಸ್​ನಲ್ಲಿ ವರದಿಯಾಗಿದೆ.

ಚಾಲಾಕಿ ಕಳ್ಳಿಯನ್ನು 30ರ ಆಸುಪಾಸಿನ ಮಹಿಳೆ ಎಂದು ಊಹಿಸಲಾಗಿದ್ದು, ಡೋನಟ್​ ಸಾಗಿಸಲು ಇರಿಸಲಾಗಿದ್ದ ವಾಹನದೊಳಗೆ ನುಗ್ಗಿ, ಸ್ವೀಟ್​ ಸಮೇತ ವಾಹನ ಚಲಾಯಿಸಿಕೊಂಡು ಸ್ಥಳದಿಂದ ಕ್ಷಣಮಾತ್ರದಲ್ಲಿ ಪರಾರಿಯಾಗಿದ್ದಾಳೆ. ಘಟನೆ ವಿವರಿಸಿದ ಬೇಕರಿ ಮಾಲೀಕರು ಒಂದು ಡೋನಟ್‌ನ ಬೆಲೆ ಸುಮಾರು 333 ರೂ. ಇದ್ದು, 10,000ಕ್ಕೂ ಹೆಚ್ಚು ಡೊನಟ್ಸ್​ ಇತ್ತು ಎಂದು ತಿಳಿಸಿದ್ದಾರೆ.

ಆರೋಪಿ ಮಹಿಳೆ ಸುಮಾರು ಮೂವತ್ಮೂರು ಲಕ್ಷ ರೂಪಾಯಿ ಮೌಲ್ಯದ ಡೋನಟ್‌ಗಳನ್ನು ಕಳ್ಳತನ ಮಾಡಿದ್ದಾರೆ ಎಂದು ವರದಿ ಉಲ್ಲೇಖಿಸಿದೆ.

ಮುಂಜಾನೆ ಸುಮಾರು 3 ಗಂಟೆಗೆ ಬೇಕರಿ ಬ್ರಾಂಡ್‌ನ ವ್ಯಾನ್ ಡ್ರೈವರ್ ಡೋನಟ್ ತುಂಬಿದ ವ್ಯಾನ್ ಅನ್ನು ಆಸ್ಟ್ರೇಲಿಯಾದ ನ್ಯೂ ಸೌತ್ ವೇಲ್ಸ್‌ನ ನ್ಯೂಕ್ಯಾಸಲ್ ಪ್ರದೇಶದ ಸರ್ವೀಸ್ ಸ್ಟೇಷನ್‌ನಲ್ಲಿ ನಿಲ್ಲಿಸಿದ್ದನು. ಆ ವೇಳೆ ಹಿಂಬಾಲಿಸಿಕೊಂಡು ಬಂದಿದ್ದ ಮಹಿಳೆ, ಡೊನಟ್​ ಇದ್ದ ವಾಹನ ಸಮೇತ ಸ್ಥಳದಿಂದ ಕಾಲ್ಕಿತ್ತಿದ್ದಾಳೆ.

ಘಟನೆ ಪರಿಶೀಲಿಸಿದ ಪೊಲೀಸರು, ಮಹಿಳೆಯ ಯಾವುದೇ ಸುಳಿವುಗಳು ಕಂಡಲ್ಲಿ ಜನರು ತಮಗೆ ಮಾಹಿತಿ ತಿಳಿಸುವಂತೆ ಮನವಿ ಮಾಡಿದ್ದು, ವ್ಯಾನ್ ಮತ್ತು ಶಂಕಿತ ಡೋನಟ್ ಕಳ್ಳಿಯ ಹುಡುಕಾಟಕ್ಕಾಗಿ ಬಲೆ ಬೀಸಿದ್ದೇವೆ ಎಂದು ತಿಳಿಸಿದ್ದಾರೆ,(ಏಜೆನ್ಸೀಸ್).