ನ್ಯೂಸ್

ಸೇತುವೆಯಿಂದ ಕಣಿವೆಗೆ ಬಿದ್ದ ಬಸ್​: 10 ಮಂದಿ ದುರಂತ ಸಾವು, 20ಕ್ಕೂ ಹೆಚ್ಚು ಮಂದಿಯ ಸ್ಥಿತಿ ಗಂಭೀರ

ಶ್ರೀನಗರ: ಸಾರಿಗೆ ಬಸ್​ ಒಂದು ಸೇತುವೆಯಿಂದ ಕಣಿವೆಗೆ ಬಿದ್ದ ಪರಿಣಾಮ 10 ಮಂದಿ ದುರಂತ ಸಾವಿಗೀಡಾಗಿರುವ ಹೃದಯವಿದ್ರಾವಕ ಘಟನೆ ಜಾಜ್ಜರ್​ ಕೋಟ್ಲಿ ಬಳಿ ಇರುವ ಜಮ್ಮು ಮತ್ತು ಕಾಶ್ಮೀರ ರಾಷ್ಟ್ರೀಯ ಹೆದ್ದಾರಿಯಲ್ಲಿ ಇಂದು (ಮೇ 30) ಬೆಳಗ್ಗೆ ನಡೆದಿದೆ.

ಅಪಘಾತದ ಸಮಯದಲ್ಲಿ 75 ಪ್ರಯಾಣಿಕರನ್ನು ಹೊತ್ತ ಬಸ್ ಅಮೃತಸರದಿಂದ ಕತ್ರಾಕ್ಕೆ ತೆರಳುತ್ತಿತ್ತು. ಈ ಅವಘಡದಲ್ಲಿ ಸುಮಾರು 20ಕ್ಕೂ ಹೆಚ್ಚು ಮಂದಿಯ ಸ್ಥಿತಿ ಗಂಭೀರವಾಗಿದ್ದು, ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ. ಚಾಲಕನ ನಿಯಂತ್ರಣ ಕಳೆದುಕೊಂಡ ಬಸ್​ ಸೇತುವೆಯಿಂದ ಕೆಳಗೆ ಬಿದ್ದು ದುರ್ಘಟನೆ ಸಂಭವಿಸಿದೆ.

ನಿನ್ನೆ ರಾಜಸ್ಥಾನದ ಜುಂಜುನು ಜಿಲ್ಲೆಯಲ್ಲಿ ಟ್ರ್ಯಾಕ್ಟರ್​ ಟ್ರಾಲಿ ಕಣಿವೆಗೆ ಬಿದ್ದು ಆರು ಮಹಿಳೆಯರು ಹಾಗೂ ಇಬ್ಬರು ಅಪ್ರಾಪ್ತರು ಸೇರಿ 8 ಮಂದಿ ಮೃತಪಟ್ಟಿದ್ದರು. ಅಲ್ಲದೆ, 26ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು. ಈ ಘಟನೆ ನಡೆದ ಬೆನ್ನಲ್ಲೇ ಜಮ್ಮು-ಕಾಶ್ಮೀರದಲ್ಲಿ ಅದೇ ಮಾದರಿಯಲ್ಲಿ ಬಸ್​ ಅವಗಢ ಸಂಭವಿಸಿದೆ.