More

    ಮೋದಿ ನವಹಾದಿ; 9 ವರ್ಷಗಳ ಆಡಳಿತದ ಚಿತ್ರಣ

    ನರೇಂದ್ರ ಮೋದಿ ನೇತೃತ್ವದಲ್ಲಿನ ಕೇಂದ್ರ ಸರ್ಕಾರ ಇಂದು, 9 ವರ್ಷಗಳನ್ನು ಪೂರೈಸುತ್ತಿದೆ. ಎರಡು ಅವಧಿಗಳಲ್ಲಿ ಸರ್ಕಾರ ಕೈಗೊಂಡ ಮಹತ್ವದ ಯೋಜನೆ, ಕಾರ್ಯಕ್ರಮ, ನಡೆ-ನಿರ್ಧಾರಗಳ ಸಂಕ್ಷಿಪ್ತ ಚಿತ್ರಣ ಇಲ್ಲಿದೆ.

    ಒಂಬತ್ತು ವರ್ಷಗಳ ಹಿಂದೆ, 2014ರಲ್ಲಿ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್​ಡಿಎ ಮೈತ್ರಿಕೂಟ ಬಹುಮತ ಗಳಿಸಿ ನರೇಂದ್ರ ಮೋದಿ ಮೊದಲ ಬಾರಿಗೆ ಪ್ರಧಾನಿಯಾಗಿ, ಅವರ ನೇತೃತ್ವದ ಸಚಿವ ಸಂಪುಟ 2014ರ ಮೇ 26ರಂದು ಅಧಿಕಾರ ವಹಿಸಿಕೊಂಡಿತು. 2019ರಲ್ಲಿ, ಐದು ವರ್ಷಗಳ ನಂತರ ಬಿಜೆಪಿ ಹೆಚ್ಚಿನ ಸಂಖ್ಯಾಬಲದೊಂದಿಗೆ ಲೋಕಸಭೆ ಚುನಾವಣೆಯಲ್ಲಿ ಜಯ ಗಳಿಸಿತು. 1971ರಲ್ಲಿ ಇಂದಿರಾ ಗಾಂಧಿ ನಂತರ ಬಹುಮತದೊಂದಿಗೆ ಅಧಿಕಾರಕ್ಕೆ ಮರಳಿದ ಪ್ರಧಾನಿ ಎಂಬ ಶ್ರೇಯಸ್ಸಿಗೆ ಮೋದಿ ಪಾತ್ರರಾದರು. ಸ್ಪಷ್ಟ ಬಹುಮತದೊಂದಿಗೆ ಎರಡನೇ ಅವಧಿಗೆ ಅಧಿಕಾರಕ್ಕೆ ಬಂದ ಬೆನ್ನಲ್ಲೇ ಕಾಡಿದ್ದು ಕೋವಿಡ್ ಸಾಂಕ್ರಾಮಿಕ ಬಿಕ್ಕಟ್ಟು. ಆದರೆ, ಸವಾಲುಗಳನ್ನೇ ಅವಕಾಶಗಳನ್ನಾಗಿ ಪರಿವರ್ತಿಸಿದ ಮೋದಿ ಸರ್ಕಾರ ಕೆಲ ದಿಟ್ಟ ಕ್ರಮಗಳನ್ನು ಕೈಗೊಂಡ ಪರಿಣಾಮವಾಗಿ ಭಾರತ ಈಗ ಆರ್ಥಿಕವಾಗಿ ಶಕ್ತಿಶಾಲಿಯಾಗಿ ರೂಪುಗೊಂಡಿದ್ದು, ಜಾಗತಿಕ ಮಟ್ಟದಲ್ಲಿ ದೇಶದ ವರ್ಚಸ್ಸು ವೃದ್ಧಿಸಿದೆ. ಜಾಗತಿಕವಾಗಿ ಐದನೇ ಅತಿದೊಡ್ಡ ಆರ್ಥಿಕ ಶಕ್ತಿಯಾಗಿ ರೂಪುಗೊಂಡಿರುವುದು ಮಹತ್ವದ ಸಾಧನೆಯಾಗಿದೆ. 2025ರ ಹೊತ್ತಿಗೆ 5 ಟ್ರಿಲಿಯನ್ ಡಾಲರ್ ( 413 ಲಕ್ಷ ಕೋಟಿ ರೂಪಾಯಿ) ಆರ್ಥಿಕತೆಯಾಗಿ ಭಾರತವನ್ನು ರೂಪಿಸುವ ಮಹತ್ವಾಕಾಂಕ್ಷೆ ಮೋದಿ ಅವರದ್ದಾಗಿದೆ. ಈಗಾಗಲೇ ಭಾರತದ ಜಿಡಿಪಿ 3.7 ಟ್ರಿಲಿಯನ್ ಡಾಲರ್ (306 ಲಕ್ಷ ಕೋಟಿ ರೂಪಾಯಿ) ತಲುಪಿರುವುದು ಈ ನಿಟ್ಟಿನಲ್ಲಿ ಆಗಿರುವ ಪ್ರಗತಿಯ ದ್ಯೋತಕವೆನ್ನಬಹುದು.

    ಸ್ವಚ್ಛ ಭಾರತ ಅಭಿಯಾನ

    ದೇಶದಲ್ಲಿ ಸಾರ್ವತ್ರಿಕ ನೈರ್ಮಲ್ಯವನ್ನು ಉತ್ತೇಜಿಸಲು 2014ರಲ್ಲಿ ಗಾಂಧಿ ಜಯಂತಿಯಂದು ಪ್ರಧಾನಿ ಮೋದಿ ಸ್ವಚ್ಛ ಭಾರತ ಅಭಿಯಾನವನ್ನು ಪ್ರಾರಂಭಿಸಿದರು. ಐದು ವರ್ಷಗಳಲ್ಲಿ 10 ಕೋಟಿ ಶೌಚಗೃಹಗಳನ್ನು ನಿರ್ವಿುಸುವ ಮೂಲಕ ಗ್ರಾಮೀಣ ಭಾರತವನ್ನು ಬಯಲು ಶೌಚಮುಕ್ತಗೊಳಿಸಲು ಯೋಜನೆ ರೂಪಿಸಲಾಯಿತು. ಈವರೆಗೆ 11.5 ಕೋಟಿಗೂ ಹೆಚ್ಚು ಮನೆಗಳಿಗೆ ಶೌಚಗೃಹಗಳನ್ನು ಒದಗಿಸಲಾಗಿದೆ ಎಂದು ಸರ್ಕಾರ ಹೇಳಿದೆ. ಈ ಯೋಜನೆಯ ಎರಡನೇ ಹಂತವು ಎಲ್ಲಾ ನಗರಗಳನ್ನು ಕಸಮುಕ್ತ ಮತ್ತು ಎಲ್ಲಾ ಸಣ್ಣ ಪಟ್ಟಣಗಳನ್ನು ಬಯಲು ಶೌಚಮುಕ್ತ ಮಾಡುವ ಗುರಿ ಹೊಂದಿದೆ.

    ಆಯುಷ್ಮಾನ್ ಭಾರತ ಜಗತ್ತಿನ ಅತಿದೊಡ್ಡ ಆರೋಗ್ಯ ಯೋಜನೆ

    2018ರ ಸೆಪ್ಟೆಂಬರ್ 23ರಂದು ಜಾರಿಗೊಳಿಸಲಾದ ಆಯುಷ್ಮಾನ್ ಭಾರತ ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆಯು ಕಡಿಮೆ ಆದಾಯದವರಿಗೆ ಆರೋಗ್ಯ ವಿಮೆ ರಕ್ಷಣೆಯನ್ನು ಉಚಿತವಾಗಿ ಒದಗಿಸುತ್ತದೆ. 50 ಕೋಟಿಗೂ ಹೆಚ್ಚು ಫಲಾನುಭವಿಗಳನ್ನು ಹೊಂದಿರುವ ವಿಶ್ವದ ಅತಿದೊಡ್ಡ ಸರ್ಕಾರಿ ಅನುದಾನಿತ ಆರೋಗ್ಯ ಕಾರ್ಯಕ್ರಮ ಇದಾಗಿದೆ. ಖಾಸಗಿ ಅಥವಾ ಸರ್ಕಾರಿ ಆಸ್ಪತ್ರೆಗಳಲ್ಲಿ ಒಂದು ಕುಟುಂಬವು ವಿಮೆ ಮೂಲಕ ವಾರ್ಷಿಕವಾಗಿ 5 ಲಕ್ಷ ರೂಪಾಯಿ ಮೊತ್ತದವರೆಗಿನ ಚಿಕಿತ್ಸೆಯನ್ನು ಪಡೆಯಬಹುದು.

    ಕಿಸಾನ್ ಸಮ್ಮಾನ ನಿಧಿ ಯೋಜನೆ

    ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯು ದೇಶಾದ್ಯಂತ ಎಲ್ಲಾ ಅರ್ಹ ರೈತ ಕುಟುಂಬಗಳಿಗೆ ಪ್ರತಿ ನಾಲ್ಕು ತಿಂಗಳಿಗೊಮ್ಮೆ 2,000 ರೂಪಾಯಿಗಳಂತೆ ವಾರ್ಷಿಕವಾಗಿ 6,000 ರೂಪಾಯಿಗಳ ಪ್ರೋತ್ಸಾಹಧನ ಒದಗಿಸುತ್ತದೆ. ಈ ಹಣ ನೇರವಾಗಿ ರೈತರ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಲಾಗುತ್ತದೆ. 2018ರ ಡಿಸೆಂಬರ್ 1ರಂದು ಜಾರಿಗೆ ಬಂದಿತು. ಪ್ರಸ್ತುತ 8 ಕೋಟಿ ರೈತರು ಫಲಾನುಭವಿಗಳಾಗಿದ್ದಾರೆ. ವಾರ್ಷಿಕವಾಗಿ ಅಂದಾಜು 50 ಸಾವಿರ ಕೋಟಿ ರೂ.ಗಳನ್ನು ಈ ಯೋಜನೆಗೆ ವ್ಯಯಿಸಲಾಗುತ್ತದೆ.

    ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ

    ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಬಿಜೆಪಿಯ ಪ್ರಣಾಳಿಕೆಯ ಮಹತ್ವದ ಅಂಶವಾಗಿದ್ದು, ಈ ಚುನಾವಣೆ ಭರವಸೆ ಈಗ ಈಡೇರುವ ಹಾದಿಯಲ್ಲಿದೆ. ಮೋದಿ ಅವರು 2020ರ ಆಗಸ್ಟ್ 5ರಂದು ಅಯೋಧ್ಯೆಯಲ್ಲಿ ಮಂದಿರ ನಿರ್ವಣಕ್ಕೆ ಶಿಲಾನ್ಯಾಸ ಮಾಡಿದರು. ಮಂದಿರ ನಿರ್ಮಾಣ ಕಾರ್ಯ ಈಗ ತ್ವರಿತಗತಿಯಲ್ಲಿ ಸಾಗುತ್ತಿದೆ. 1800 ಕೋಟಿ ರೂಪಾಯಿ ವೆಚ್ಚದ ಯೋಜನೆಯಾಗಿದ್ದು, ಮುಂದಿನ ಲೋಕಸಭೆ ಚುನಾವಣೆಗೆ ಕೆಲ ದಿನಗಳ ಮೊದಲು, 2024ರ ಜನವರಿಯಲ್ಲಿ ಉದ್ಘಾಟನೆಗೊಳ್ಳುವ ನಿರೀಕ್ಷೆ ಇದೆ.

    370ನೇ ವಿಧಿ ರದ್ದು ಭಯೋತ್ಪಾದನೆಗೆ ಕಡಿವಾಣ

    ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುತ್ತಿದ್ದ ಸಂವಿಧಾನದ 370ನೇ ವಿಧಿಯನ್ನು ರದ್ದುಗೊಳಿಸುವ ಮಹತ್ವದ ನಿರ್ಧಾರವನ್ನು 2019ರ ಆಗಸ್ಟ್ 5ರಂದು ಮೋದಿ ಸರ್ಕಾರ ಕೈಗೊಂಡಿತು. ಅಲ್ಲದೆ, ರಾಜ್ಯದ ಸ್ಥಾನಮಾನವನ್ನು ತೆಗೆದುಹಾಕಿ, ಜಮ್ಮು-ಕಾಶ್ಮೀರ ಮತ್ತು ಲಡಾಖ್ ಎಂಬ ಎರಡು ಕೇಂದ್ರಾಡಳಿತ ಪ್ರದೇಶಗಳನ್ನಾಗಿ ವಿಭಜಿಸಲಾಯಿತು. ಅಭಿವೃದ್ಧಿ ಕಾರ್ಯಕ್ರಮಗಳನ್ನು ಕೈಗೊಳ್ಳುವ ಮೂಲಕ ಭಯೋತ್ಪಾದನೆ ಚಟುವಟಿಕೆಗಳನ್ನು ಹತ್ತಿಕ್ಕಲು ಇದರಿಂದ ನೆರವಾಗಿದೆ. 2006 ಮತ್ತು 2013ರ ನಡುವೆ 4,766 ಭಯೋತ್ಪಾದಕ ಘಟನೆಗಳು ಈ ಪ್ರದೇಶದಲ್ಲಿ ನಡೆದಿದ್ದರೆ, 370ನೇ ವಿಧಿಯನ್ನು ರದ್ದುಗೊಳಿಸಿದ ನಂತರ 2019ರಿಂದ 2022ರ ಅವಧಿಯಲ್ಲಿ ಭಯೋತ್ಪಾದಕ ಘಟನೆಗಳು 721ಕ್ಕೆ ಇಳಿದಿವೆ.

    ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ)

    ಮೋದಿ ಸರ್ಕಾರ ಅನುಷ್ಠಾನಗೊಳಿಸಿದ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಮಹತ್ವದ ರಾಜಕೀಯ ಕ್ರಮಗಳಲ್ಲಿ ಒಂದೆಂದು ಪರಿಗಣಿತವಾಗಿದೆ. ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನದ ಮುಸ್ಲಿಮೇತರ ಅಲ್ಪಸಂಖ್ಯಾತರಿಗೆ ಭಾರತೀಯ ಪೌರತ್ವ ನೀಡಲು ಅನುಕೂಲವಾಗುವ ಸಿಎಎಯನ್ನು 2019ರ ಡಿಸೆಂಬರ್ 11ರಂದು ಸಂಸತ್ತಿನಲ್ಲಿ ಅಂಗೀಕರಿಸಲಾಯಿತು. ಈ ಕಾಯ್ದೆಯು ದೇಶದ ವಿವಿಧ ಭಾಗಗಳಲ್ಲಿ ಪ್ರತಿಭಟನೆಗೂ ಕಾರಣವಾಯಿತು.

    ಆರ್ಥಿಕ ಮೈಲಿಗಲ್ಲು

    • 306 ಲಕ್ಷ ಕೋಟಿ ರೂ.: ಇದು ಪ್ರಸ್ತುತ ಭಾರತದ ಒಟ್ಟು ದೇಶೀಯ ಉತ್ಪನ್ನ (ಜಿಡಿಪಿ). 2019ರಲ್ಲಿ ಭಾರತವು ಇಂಗ್ಲೆಂಡನ್ನು ಹಿಂದಿಕ್ಕಿ ಜಗತ್ತಿನ 5ನೇ ಅತಿದೊಡ್ಡ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮಿತು. ಮೋದಿ ಪ್ರಧಾನಿಯಾಗುವ ಹಿಂದಿನ ಹಣಕಾಸು ವರ್ಷವಾದ 2013-2014ರಲ್ಲಿ ಭಾರತವು ಆರ್ಥಿಕವಾಗಿ ವಿಶ್ವದಲ್ಲಿ 11ನೇ ಸ್ಥಾನದಲ್ಲಿದ್ದು, ಆಗ ಜಿಡಿಪಿ 133 ಲಕ್ಷ ಕೋಟಿ ರೂಪಾಯಿ ಆಗಿತ್ತು.
    • 1.97 ಲಕ್ಷ ರೂಪಾಯಿ: ಇದು ಭಾರತೀಯರ ವಾರ್ಷಿಕ ತಲಾದಾಯ. ಮೋದಿ ಸರ್ಕಾರದ ಅವಧಿಯಲ್ಲಿ ತಲಾದಾಯವು ದುಪ್ಪಟ್ಟಾಗಿದೆ. 2013-14ರಲ್ಲಿ ತಲಾದಾಯವು ಅಂದಾಜು 75 ಸಾವಿರ ರೂಪಾಯಿ ಇತ್ತು.
    • 27 ಕೋಟಿ: ಪ್ರಸ್ತುತ ಇಪಿಎಫ್​ಒ (ಉದ್ಯೋಗಿಗಳ ಭವಿಷ್ಯ ನಿಧಿ ಸಂಘಟನೆ) ಸದಸ್ಯರ ಸಂಖ್ಯೆ. ಒಂಬತ್ತು ವರ್ಷಗಳಲ್ಲಿ ಈ ಸಂಖ್ಯೆ ದುಪ್ಪಟ್ಟಾಗಿದೆ.

    ಸಂಖ್ಯೆಗಳಲ್ಲಿ ಸಾಧನೆ

    • 220 ಕೋಟಿ: ಕೋವಿಡ್ ನಿಯಂತ್ರಣಕ್ಕಾಗಿ 102 ಕೋಟಿ ಜನರಿಗೆ ನೀಡಲಾದ ಉಚಿತ ಲಸಿಕೆ ಪ್ರಮಾಣ.
    • 47.8 ಕೋಟಿ: ಪಿಎಂ ಜನಧನ ಯೋಜನೆಯಲ್ಲಿ ತೆರೆಯಲಾದ ಬ್ಯಾಂಕ್ ಖಾತೆಗಳು.
    • 11.7 ಕೋಟಿ: ಸ್ವಚ್ಛ ಭಾರತ ಯೋಜನೆಯಡಿ ನಿರ್ವಿುಸಲಾದ ಶೌಚಗೃಹಗಳು.
    • 9.6 ಕೋಟಿ: ಉಜ್ವಲ ಯೋಜನೆಯಡಿ ವಿತರಿಸಲಾದ ಎಲ್​ಪಿಜಿ ಸಂಪರ್ಕಗಳು.
    • 50 ಕೋಟಿ: ಪ್ರಧಾನ ಮಂತ್ರಿ ಆಯುಷ್ಮಾನ್ ಭಾರತ ಯೋಜನೆ ಅಡಿಯಲ್ಲಿ ಐದು ಲಕ್ಷ ರೂ.ವರೆಗೆ ಉಚಿತ ಚಿಕಿತ್ಸೆ ಪಡೆಯಲು ಸವಲತ್ತು ಪಡೆದುಕೊಂಡಿರುವ ಫಲಾನುಭವಿಗಳು.
    • 3 ಕೋಟಿ: ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ ಜನರು ನಿರ್ವಿುಸಿಕೊಂಡಿರುವ ಮನೆಗಳು.

    ಆತ್ಮನಿರ್ಭರ ಭಾರತ

    ಆತ್ಮನಿರ್ಭರ ಭಾರತ ಅಭಿಯಾನವನ್ನು (ಸ್ವಾವಲಂಬಿ ಭಾರತ ಯೋಜನೆ) ಕೋವಿಡ್ ಬಿಕ್ಕಟ್ಟಿನ ಸಂದರ್ಭದಲ್ಲಿ ಪ್ರಧಾನಿ ಮೋದಿ 2020ರ ಮೇ ತಿಂಗಳಲ್ಲಿ ಘೋಷಿಸಿದರು. ಈ ಯೋಜನೆಯಲ್ಲಿ ಕೇಂದ್ರ ಸರ್ಕಾರವು ಆರ್ಥಿಕ ಉತ್ತೇಜನದ 20 ಲಕ್ಷ ಕೋಟಿ ರೂಪಾಯಿಯ ಪ್ಯಾಕೇಜ್ ಘೋಷಿಸಿದೆ. ದೇಶವನ್ನು ವಿವಿಧ ಕ್ಷೇತ್ರಗಳಲ್ಲಿ ಸ್ವತಂತ್ರ ಮತ್ತು ಸ್ವಾವಲಂಬಿಯನ್ನಾಗಿ ಮಾಡುವುದು ಈ ಯೋಜನೆಯ ಗುರಿಯಾಗಿದೆ. ವ್ಯಾಪಾರವನ್ನು ಉತ್ತೇಜಿಸಲು, ಹೂಡಿಕೆಯನ್ನು ಆಕರ್ಷಿಸಲು, ಸ್ಥಳೀಯ ಪೂರೈಕೆ ಸರಪಳಿಯನ್ನು ಸುಧಾರಿಸಲು ಮತ್ತು ಮೇಕ್ ಇನ್ ಇಂಡಿಯಾವನ್ನು ಇನ್ನಷ್ಟು ಬಲಪಡಿಸಲು ಸುಧಾರಣೆಗಳ ಉಪಕ್ರಮಗಳನ್ನು ಒಳಗೊಂಡ ಯೋಜನೆ ಇದಾಗಿದೆ.

    ತ್ರಿವಳಿ ತಲಾಖ್ ರದ್ದತಿ

    2017ರ ಆಗಸ್ಟ್ 22ರಂದು ನೀಡಿದ ಬಹುಮತದ ತೀರ್ಪಿನಲ್ಲಿ ಸುಪ್ರೀಂ ಕೋರ್ಟ್ ತ್ರಿವಳಿ ತಲಾಖ್ ಆಚರಣೆಯು ಸಂವಿಧಾನಬಾಹಿರ ಎಂದು ಹೇಳಿತ್ತು. ಆದರೆ, ಸೂಕ್ತ ಕಾನೂನು ಇಲ್ಲದ್ದರಿಂದ ಪದ್ಧತಿ ಮುಂದುವರಿದಿತ್ತು. ಈ ಹಿನ್ನೆಲೆಯಲ್ಲಿ ಮೋದಿ ಸರ್ಕಾರವು ಮುಸ್ಲಿಂ ಮಹಿಳೆಯರ (ವಿವಾಹದ ಹಕ್ಕುಗಳ ರಕ್ಷಣೆ) ಕಾಯ್ದೆ 2019 ಜಾರಿಗೊಳಿಸುವ ಮೂಲಕ ತ್ರಿವಳಿ ತಲಾಖ್ ಅಥವಾ ತಲಾಖ್-ಎ-ಬಿದ್ದತ್​ಗೆ ನಿಷೇಧ ಹೇರಿತು. ಈ ಕುರಿತ ಮಸೂದೆಯನ್ನು 2019ರ ಜುಲೈನಲ್ಲಿ ಸಂಸತ್ತು ಅಂಗೀಕರಿಸಲಾಯಿತು.

    ಈಶಾನ್ಯ ರಾಜ್ಯಗಳ ಪ್ರಗತಿಗೆ ಒತ್ತು

    ಇತ್ತೀಚಿನ ವರ್ಷಗಳಲ್ಲಿ ಕೇಂದ್ರ ಸರ್ಕಾರವು ಈಶಾನ್ಯ ಮತ್ತು ಇತರ ರಾಜ್ಯಗಳ ನಡುವಿನ ಸಂಪರ್ಕವನ್ನು ಹೆಚ್ಚಿಸುವಲ್ಲಿ ಮಹತ್ತರ ಕ್ರಮಗಳನ್ನು ಕೈಗೊಂಡಿದೆ. ಬಜೆಟ್ ಹಂಚಿಕೆಯಲ್ಲಿ ಈಶಾನ್ಯಗಳ ರಾಜ್ಯಗಳ ಪಾಲು ಐದು ಪಟ್ಟು ಹೆಚ್ಚಿದೆ. ರಸ್ತೆ, ಸೇತುವೆ ಸೇರಿದಂತೆ ಮೂಲಸೌಕರ್ಯಗಳ ಅಭಿವೃದ್ಧಿಗೆ ಒತ್ತು ನೀಡಲಾಗಿದೆ. ತಂಟೆಕೋರ ಚೀನಾದೊಂದಿಗೆ ಇರುವ ಗಡಿ ಪ್ರದೇಶಗಳಲ್ಲಿ ಸರ್ವಋತು ರಸ್ತೆಗಳನ್ನು ನಿರ್ವಿುಸುವ ಮೂಲಕ ಭದ್ರತಾ ಪಡೆಗಳಿಗೆ ಅಗತ್ಯವಿರುವ ಸರಕುಗಳನ್ನು ತ್ವರಿತವಾಗಿ ಸಾಗಿಸುವ ವ್ಯವಸ್ಥೆ ರೂಪಿಸಲಾಗಿದೆ. ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುವುದರೊಂದಿಗೆ ಪ್ರತ್ಯೇಕತಾವಾದಿ ಮನೋಭಾವವನ್ನು ನಿವಾರಿಸುವ ಮೂಲಕ ಭಯೋತ್ಪಾದನೆಗಳನ್ನು ಚಟುವಟಿಕೆಗಳಿಗೆ ಬಹುತೇಕವಾಗಿ ಕಡಿವಾಣ ಹಾಕಲಾಗಿದೆ.

    ಹೆದ್ದಾರಿ ನಿರ್ಮಾಣ ತ್ವರಿತ

    ರಾಷ್ಟ್ರೀಯ ಹೆದ್ದಾರಿಗಳ ವಿಸ್ತರಣೆ ತ್ವರಿತವಾಗಿ ಸಾಗುತ್ತಿದೆ. 2022ರ ಮಾರ್ಚ್​ನಲ್ಲಿ ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರು ಲೋಕಸಭೆಗೆ ನೀಡಿದ ಮಾಹಿತಿ ಪ್ರಕಾರ ಮೋದಿ ಸರ್ಕಾರವು ಎಂಟು ವರ್ಷಗಳಲ್ಲಿ 49,903 ಕಿಮೀ ರಾಷ್ಟ್ರೀಯ ಹೆದ್ದಾರಿಗಳನ್ನು ಸೇರಿಸಿದೆ. ಇದರರ್ಥ ದಿನಕ್ಕೆ 17.1 ಕಿಮೀ ದರದಲ್ಲಿ ರಾಷ್ಟ್ರೀಯ ಹೆದ್ದಾರಿಗಳನ್ನು ನಿರ್ವಿುಸಲಾಗಿದೆ.

    ಸರ್ಜಿಕಲ್, ಏರ್ ಸ್ಟ್ರೈಕ್

    ಕಳೆದ ಒಂಬತ್ತು ವರ್ಷಗಳ ಅವಧಿಯಲ್ಲಿ ಭಾರತ-ಪಾಕಿಸ್ತಾನ ಸಂಬಂಧಗಳು 2 ನಿರ್ಣಾಯಕ ಕ್ಷಣಗಳಿಗೆ ಸಾಕ್ಷಿಯಾಗಿವೆ. 2016ರ ಸೆಪ್ಟೆಂಬರ್​ನಲ್ಲಿ ಪಾಕ್ ಆಕ್ರಮಿತ ಕಾಶ್ಮೀರದೊಳಗೆ ಭಯೋತ್ಪಾದಕರ ವಿರುದ್ಧ ಭಾರತೀಯ ವಿಶೇಷ ಪಡೆಗಳು ‘ಸರ್ಜಿಕಲ್ ಸ್ಟ್ರೈಕ್’ಗಳನ್ನು ನಡೆಸಿದವು. 2019ರ ಫೆಬ್ರವರಿಯಲ್ಲಿ ಪಾಕಿಸ್ತಾನದ ಖೈಬರ್-ಪಖ್ತುಂಕ್ವಾ ಪ್ರಾಂತ್ಯದ ಬಾಲಾಕೋಟ್​ನಲ್ಲಿ ಭಯೋತ್ಪಾದಕ ಶಿಬಿರಗಳ ವಿರುದ್ಧ ಭಾರತೀಯ ವಾಯುಪಡೆಯು ‘ವೈಮಾನಿಕ ದಾಳಿ’ ನಡೆಸಿತು.

    ವಂದೇ ಭಾರತ ಎಕ್ಸ್​ಪ್ರೆಸ್

    ಹೆಚ್ಚು ವೇಗದ ರೈಲುಗಳನ್ನು ಸಂಪೂರ್ಣ ದೇಶೀಯವಾಗಿ ತಯಾರಿಸಲು ಸರ್ಕಾರ ಉತ್ತೇಜನ ನೀಡಿತು. ಈ ರೈಲುಗಳಿಗೆ ವಂದೇ ಭಾರತ ಎಕ್ಸ್​ಪ್ರೆಸ್ ಎಂದು ನಾಮಕರಣ ಮಾಡಲಾಯಿತು. 2019ರ ಫೆಬ್ರುವರಿ 15ರಂದು ಪ್ರಥಮ ರೈಲಿಗೆ ನವದೆಹಲಿ ಮತ್ತು ವಾರಾಣಸಿ ನಡುವೆ ಚಾಲನೆ ನೀಡಲಾಯಿತು. ಗಂಟೆಗೆ 180 ಕಿ.ಮೀ. ವೇಗದಲ್ಲಿ ಸಂಚರಿಸುವ ಸಾಮರ್ಥ್ಯವಿರುವ ಈ ರೈಲುಗಳು ಈಗ ದೇಶದ ಹಲವು ಮಾರ್ಗಗಳಲ್ಲಿ ಸಂಚರಿಸುತ್ತಿವೆ.

    ಭೀಕರ ಅಪಘಾತ: ಸಾವಿಗೀಡಾದ ಹತ್ತೂ ಮಂದಿ ಒಂದೇ ಕುಟುಂಬದವರು; ಮನ ಕಲಕುವ ಪರಿಸ್ಥಿತಿಯಲ್ಲಿ ಮಗು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts