More

    ಪರಿಷತ್‌ ಎಲ್ಲ ಸ್ಥಾನದಲ್ಲಿ ಕೈ ಗೆಲುವು

    ಬೀದರ್: ರಾಜ್ಯ ಕಾಂಗ್ರೆಸ್ ಸರ್ಕಾರ ಪದವೀಧರರು ಮತ್ತು ಶಿಕ್ಷಕರ ಹಲವು ಸಮಸ್ಯೆಗಳನ್ನು ನಿವಾರಿಸಿದ್ದರಿಂದ ಆರು ವಿಧಾನ ಪರಿಷತ್ ಸ್ಥಾನಗಳಿಗೆ ನಡೆಯಲಿರುವ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳು ಜಯ ಗಳಿಸಲಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ವಿಶ್ವಾಸ ವ್ಯಕ್ತಪಡಿಸಿದರು.
    ಪಂಚ ಗ್ಯಾರಂಟಿಗಳಲ್ಲಿ ಒಂದಾಗಿರುವ ಯುವನಿಧಿ ಜಾರಿಗೊಳಿಸಿ ಕಾಂಗ್ರೆಸ್ ನುಡಿದಂತೆ ನಡೆದಿದೆ. ಇದರಿಂದ ನಿರುದ್ಯೋಗ ಯುವಕರಿಗೆ ಬಹಳಷ್ಟು ಅನುಕೂಲವಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದ ಅವರು, ರಾಜ್ಯಾದ್ಯಂತ ಪಕ್ಷದ ಪರ ಅಲೆ ಇದೆ. ಈಶಾನ್ಯ ಪದವೀಧರ ಕ್ಷೇತ್ರದ ಡಾ.ಚಂದ್ರಶೇಖರ ಪಾಟೀಲ್ ಸೇರಿ ಎಲ್ಲ ಆರು ಸ್ಥಾನ ಕಾಂಗ್ರೆಸ್ ಪಾಲಾಗಲಿವೆ ಎಂದು ಹೇಳಿದರು.
    ಸರ್ಕಾರಿ ಸ್ವಾಮ್ಯದ ಆಸ್ತಿಗಳ ಖಾಸಗೀಕರಣ ಮೂಲಕ ಕೇಂದ್ರದ ಬಿಜೆಪಿ ಸಕರ್ಾರ ಯುವಕರ ಭವಿಷ್ಯ ಹಾಳು ಮಾಡುತ್ತಿದೆ. ವರ್ಷಕ್ಕೆ ಎರಡು ಕೋಟಿ ಉದ್ಯೋಗ ಸೃಷ್ಟಿಸುವ ಭರವಸೆ ಹುಸಿಯಾಗಿದ್ದರಿಂದ ಉದ್ಯೋಗದ ದೊಡ್ಡ ಸವಾಲು ಎದುರಾಗಿದೆ. ಕರ್ನಾಟಕ ಸೇರಿ ದೇಶದಲ್ಲಿ ಕಾಂಗ್ರೆಸ್ ನೇತೃತ್ವದ ಇಂಡಿಯಾ ಕೂಟ ಅಧಿಕಾರಕ್ಕೆ ಬರುವುದು ನಿಶ್ಚಿತ. ಬೀದರ್ ಲೋಕಸಭೆ ಸೇರಿ ರಾಜ್ಯದ 20 ಸ್ಥಾನಗಳಲ್ಲಿ ಪಕ್ಷ ಜಯ ಗಳಿಸಲಿದೆ ಎಂದು ಹೇಳಿದರು.
    ಅರಣ್ಯ ಇಲಾಖೆಯಲ್ಲಿ ಖಾಲಿ ಇರುವ 540 ವೀಕ್ಷಕರ ಹಾಗೂ 310 ವಾಚರ್ ಹುದ್ದೆಗಳನ್ನು ಶೀಘ್ರದಲ್ಲೇ ಭರ್ತಿ ಮಾಡಲಾಗುವುದು. ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿ ಇರುವುದರಿಂದ ಜೂ.4ರ ನಂತರ ಆಡಳಿತಾತ್ಮಕ ಅನುಮೋದನೆ ಪಡೆದು ಭರ್ತಿಗೆ ಕ್ರಮ ಕೈಗೊಳ್ಳಲಾಗುವುದು ಎಂದರು.
    ಕೆಪಿಸಿಸಿ ಕಾರ್ಯಾಧ್ಯಕ್ಷ ವಸಂತಕುಮಾರ ಮಾತನಾಡಿ, ವಿಧಾನಸಭೆಯಲ್ಲಿ ಪೂರ್ಣ ಬಹುಮತ ಸಾಧಿಸಿರುವ ಕಾಂಗ್ರೆಸ್‌ಗೆ ವಿಧಾನ ಪರಿಷತ್ನಲ್ಲಿ ಪೂರ್ಣ ಬಹುಮತ ಇಲ್ಲ. ಇದರಿಂದ ಜನಪರ ನಿರ್ಣಯ ಮತ್ತು ತಿದ್ದುಪಡಿ ಮಾಡಲು ಅಡ್ಡಿಯಾಗುತ್ತಿದೆ. ಪರಿಷತ್ನಲ್ಲೂ ಬಹುಮತಕ್ಕಾಗಿ ಪದವೀಧರ ಮತ್ತು ಶಿಕ್ಷಕರ ಕ್ಷೇತ್ರದ ಚುನಾವಣೆ ಮಹತ್ವದ್ದಾಗಿದೆ ಎಂದರು.
    ಪೌರಾಡಳಿತ ಸಚಿವ ರಹೀಮ್ ಖಾನ್, ಮಾಜಿ ಸಚಿವ ರಾಜಶೇಖರ ಪಾಟೀಲ್, ವಿಧಾನ ಪರಿಷತ್ನ ಕಾಂಗ್ರೆಸ್ ಅಭ್ಯರ್ಥಿ ಡಾ.ಚಂದ್ರಶೇಖರ ಪಾಟೀಲ್, ಎಂಎಲ್ಸಿಗಳಾದ ಅರವಿಂದಕುಮಾರ ಅರಳಿ, ಭೀಮರಾವ ಪಾಟೀಲ್, ಮಾಜಿ ಶಾಸಕ ಅಶೋಕ ಖೇಣಿ, ಮಾಜಿ ಎಂಎಲ್ಸಿ ಶರಣಪ್ಪ ಮಟ್ಟೂರ್, ಲೋಕಸಭೆ ಅಭ್ಯರ್ಥಿ ಸಾಗರ್ ಖಂಡ್ರೆ, ಪ್ರಮುಖರಾದ ಧನರಾಜ ತಾಳಂಪಳ್ಳಿ, ಮಾಲಾ ಬಿ.ನಾರಾಯಣರಾವ, ಭೀಮಸೇನರಾವ ಸಿಂಧೆ, ಅಭಿಷೇಕ ಪಾಟೀಲ್, ದತ್ತು ಮೂಲಗೆ ಇತರರಿದ್ದರು.

    ನುಡಿದಂತೆ ನಡೆಯುವ ಕಾಂಗ್ರೆಸ್
    ಕಾಂಗ್ರೆಸ್ ಸರ್ಕಾರ ನುಡಿದಂತೆ ನಡೆದಿದೆ. ಸರ್ಕಾರಿ ನೌಕರರಿಗೆ 7ನೇ ವೇತನ ಆಯೋಗ ಜಾರಿ, ಹೊಸ ಪಿಂಚಣಿ ಯೋಜನೆ ರದ್ದುಗೊಳಿಸಿ ಹಳೆಯ ಪದ್ಧತಿ ಜಾರಿ, ಸರ್ಕಾರಿ ಇಲಾಖೆಯಲ್ಲಿ ಖಾಲಿ ಹುದ್ದೆಗಳ ಭರ್ತಿ ಮಾಡಿ ನಿರುದ್ಯೋಗ ಪದವೀಧರರ ಸಮಸ್ಯೆ ನಿವಾರಣೆಗೆ ಸರ್ಕಾರ ಮುಂದಾಗಿದೆ ಎಂದು ಡಾ.ಚಂದ್ರಶೇಖರ ಪಾಟೀಲ್ ಹೇಳಿದರು. ಈಶಾನ್ಯ ಪದವೀಧರ ಕ್ಷೇತ್ರದಿಂದ ಕಳೆದ ಬಾರಿ ಸ್ಪರ್ಧಿಸಿ ವಿಧಾನ ಪರಿಷತ್ ಸದಸ್ಯನಾಗಿ ಪ್ರಾಯಾಣಿಕ ಕೆಲಸ ಮಾಡಿರುವೆ. ಈಗ ಮತ್ತೊಮ್ಮೆ ಸ್ಪರ್ಧಿಸಿದ್ದೇನೆ. ಕಲ್ಯಾಣ ಕರ್ನಾಟಕಕ್ಕೆ ಔದ್ಯೋಗಿಕ ಮತ್ತು ಶೈಕ್ಷಣಿಕ ಮೀಸಲಾತಿ ಸೌಲಭ್ಯ ಸಮರ್ಪಕ ಜಾರಿ ಹಾಗೂ ಈ ಭಾಗದ ಜ್ವಲಂತ ಸಮಸ್ಯೆಗಳ ಪರಿಹಾರಕ್ಕೆ ಧ್ವನಿಯಾಗಲು ಮತದಾರರು ಬೆಂಬಲಿಸಬೇಕು ಎಂದು ಮನವಿ ಮಾಡಿದರು. ಬಿಜೆಪಿ ಅಭ್ಯರ್ಥಿ ಅಮರನಾಥ ಪಾಟೀಲ್ ಅವರಿಗಿಂತ ನಾನು ಸುಶಿಕ್ಷಿತ. ಡಾಕ್ಟರೇಟ್ ಪಡೆದಿರುವೆ. ಎಲ್.ಕೆಜಿ ಯಿಂದ ಪಿಜಿವರೆಗೆ ಶಿಕ್ಷಣ ಸಂಸ್ಥೆಗಳನ್ನು ನಡೆಸುತ್ತಿರುವೆ. ಹೀಗಾಗಿ ಪದವೀಧರರು ಮತ್ತು ಶಿಕ್ಷಕರ ಸಮಸ್ಯೆಗಳ ಬಗ್ಗೆ ಅರಿವಿದೆ. ಮತ್ತೊಂದು ಬಾರಿ ಸೇವೆ ಸಲ್ಲಿಸಲು ಅವಕಾಶ ನೀಡಬೇಕು ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts