ನ್ಯೂಸ್

ಲಸಿಕೀಕರಣದಲ್ಲಿ ಕರ್ನಾಟಕ ದಶಕೋಟಿ ಸಾಧನೆ; ಇದಕ್ಕೆ ತಗುಲಿದ ದಿನಗಳೆಷ್ಟು ಗೊತ್ತೇ?

ಬೆಂಗಳೂರು: ಭಾರತ ಕೈಗೊಂಡಿರುವ ಬೃಹತ್ ಲಸಿಕೀಕರಣ ಅಭಿಯಾನದಲ್ಲಿ ಕರ್ನಾಟಕ ಇದೀಗ ಮತ್ತೊಂದು ಮಜಲನ್ನು ತಲುಪಿದ್ದು, ಹೊಸದೊಂದು ಮೈಲಿಗಲ್ಲನ್ನು ಸ್ಥಾಪಿಸಿದೆ. ಮತ್ತೊಂದೆಡೆ ಕರೊನಾ ಪ್ರಕರಣಗಳ ಸಂಖ್ಯೆ ಗಣನೀಯವಾಗಿ ಇಳಿದಿದೆ.

ರಾಜ್ಯದಲ್ಲಿ ನಿನ್ನೆಯ ಕರೊನಾ ಬುಲೆಟಿನ್ ಪ್ರಕಾರ ಸಕ್ರಿಯ ಪ್ರಕರಣಗಳ ಸಂಖ್ಯೆ 10,406ಕ್ಕೆ ಇಳಿದಿದ್ದು, ಇನ್ನು ಕೆಲವೇ ದಿನಗಳಲ್ಲಿ ಕೋವಿಡ್-19 ಹೇಳ ಹೆಸರಿಲ್ಲದಂತಾದರೂ ಅಚ್ಚರಿ ಏನಿಲ್ಲ.

ಈ ಮಧ್ಯೆಯೇ ರಾಜ್ಯದಿಂದ ಆ ನಿಟ್ಟಿನಲ್ಲಿ ಮತ್ತೊಂದು ಖುಷಿಯ ಸಮಾಚಾರ ಹೊರಬಿದ್ದಿದೆ. ಅದೇನೆಂದರೆ ರಾಜ್ಯದಲ್ಲಿ ಇದೀಗ 10 ಕೋಟಿ ಡೋಸ್ ಕರೊನಾ ಲಸಿಕೆ ನೀಡಲಾಗಿದೆ. ಅದರಲ್ಲೂ ಫಸ್ಟ್​ ಡೋಸ್​ನಲ್ಲಿ ಶೇ. 100 ಸಾಧನೆ ಆಗಿದ್ದರೆ, ಸೆಕೆಂಡ್​ ಡೋಸ್​ನಲ್ಲಿ ಶೇ. 93 ಸಾಧನೆ ಆಗಿದೆ. ಅದರಲ್ಲೂ ಒಂದು ವರ್ಷ 39 ದಿನಗಳಲ್ಲಿ ಒಟ್ಟು 10 ಕೋಟಿ ಡೋಸ್​ ಲಸಿಕೆ ನೀಡುವ ಮೂಲಕ ರಾಜ್ಯ ಗಣನೀಯ ಸಾಧನೆ ಮಾಡಿದೆ.