ಇಂಫಾಲ್: ಗಲಭೆ ಪೀಡಿತ ಮಣಿಪುರದಲ್ಲಿ ಶಂಕಿತ ಕೂಕಿ ಬಂಡುಕೋರರೊಂದಿಗಿನ ಗುಂಡಿನ ಚಕಮಕಿಯಲ್ಲಿ ಗಡಿ ಭದ್ರತಾ ಪಡೆ(BSF)ಯ ಯೋಧರೊಬ್ಬರು ಹುತಾತ್ಮರಾಗಿದ್ದು, ಅಸ್ಸಾಂ ರೈಫಲ್ನ ಇಬ್ಬರು ಸೈನಿಕರು ಗಂಭೀರವಾಗಿ ಗಾಯಗೊಂಡಿದ್ಧಾರೆ.
ಮೃತ ಸೈನಿಕನನ್ನು ರಂಜಿತ್ ಯಾದವ್ ಎಂದು ಗುರುತಿಸಲಾಗಿದೆ. ಕಾಕ್ಜಿಂಗ್ ಜಿಲ್ಲೆಯ ಸುಗನು ಪ್ರದೇಶದಲ್ಲಿರುವ ಸೆರೌ ಶಾಲೆಯಲ್ಲಿ ಬಿಎಸ್ಎಫ್ ಯೋಧರು ಹಾಗೂ ಶಂಕಿತ ಬಂಡುಕೋರರ ನಡುವೆ ಗುಂಡಿನ ಕಾಳಗ ನಡೆದಿದೆ.
ಸೆರೌ ಫ್ರೌಢಶಾಲೆಗೆ ಬಿಎಸ್ಎಫ್ ಯೋಧರನ್ನು ನಿಯೋಜಿಸಲಾಗಿತ್ತು. ಜೂನ್ 6ರಂದು ನಸುಕಿನ 4:15ರ ಸುಮಾರಿಗೆ ಬಂಡುಕೋರರು ಏಕಾಏಕಿ ಗುಂಡಿನ ದಾಳಿ ನಡೆಸಿದ್ಧಾರೆ. ಗುಂಡಿನ ಚಕಮಕಿಯಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಯೋಧ ರಂಜಿತ್ ಯಾದವ್ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಮಾರ್ಗಮಧ್ಯೆ ಮೃತಪಟ್ಟಿದ್ದರು ಎಂದು ಅಧಿಕಾರಿ ಒಬ್ಬರು ತಿಳಿಸಿದ್ಧಾರೆ.
ಗಂಭೀರವಾಗಿ ಗಾಯಗೊಂಡಿರುವ ಅಸ್ಸಾಂ ರೈಫಲ್ನ ಇಬ್ಬರು ಯೋಧರನ್ನು ಏರ್ ಆ್ಯಂಬುಲೆನ್ಸ್ ಮೂಲಕ ಹೆಚ್ಚಿನ ಚಿಕಿತ್ಸೆಗಾಗಿ ಮಂತ್ರಿಪುಖ್ರಿಗೆ ಕಳುಹಿಸಿಕೊಡಲಾಗಿದೆ ಎಂದು ಬಿಎಸ್ಎಫ್ನ ಹಿರಿಯ ಅಧಿಕಾರಿ ಒಬ್ಬರು ತಿಳಿಸಿದ್ಧಾರೆ.