ನ್ಯೂಸ್

ಕೃಷಿ ಮೇಳದಲ್ಲಿ ರೈತರ ಆದಾಯ ದ್ವಿಗುಣಕ್ಕೆ ಆದ್ಯತೆ; ಒಂದೇ ಸೂರಿನಡಿ ಎಲ್ಲ ಮಾಹಿತಿ ಲಭ್ಯ, ಶುಕ್ರವಾರ 1.76 ಲಕ್ಷ ಜನ ಭೇಟಿ

ಬೆಂಗಳೂರು: ಗಾಂಧಿ ಕೃಷಿ ವಿಜ್ಞಾನ ಕೇಂದ್ರದಲ್ಲಿ(ಜಿಕೆವಿಕೆ) ನಡೆಯುತ್ತಿರುವ ಕೃಷಿ ಮೇಳದಲ್ಲಿ ರೈತರ ಆದಾಯವನ್ನು ದ್ವಿಗುಣಗೊಳಿಸುವ ಬಗ್ಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಆಶಯದಂತೆ ರೈತರ ಆದಾಯವನ್ನು 2022ಕ್ಕೆ ದ್ವಿಗುಣಗೊಳಿಸಲು ಕೃಷಿ ವಿವಿ ಅಂಗಸಂಸ್ಥೆಯಾದ ಕೃಷಿ ವಿಜ್ಞಾನ ಕೇಂದ್ರ(ಕೆವಿಕೆ) ಮೇಳದಲ್ಲಿ ತೆರೆದಿರುವ ಬೃಹತ್ ಮಳಿಗೆಯಲ್ಲಿ ರೈತರಿಗೆ ಎಲ್ಲ ಮಾಹಿತಿ ನೀಡುತ್ತಿದೆ.

ಕೆಲಸ ಅರಸಿ ನಗರಕ್ಕೆ ವಲಸೆ ಹೋಗಿದ್ದವರು ಕರೊನಾ ನಂತರ ಊರುಗಳಿಗೆ ಬರುತ್ತಿದ್ದು, ಸ್ವಾವಲಂಬನೆ ಬದುಕು ರೂಪಿಸಿಕೊಳ್ಳುವ ಸಲುವಾಗಿ ಕೃಷಿ, ತೋಟಗಾರಿಕೆ, ಅರಣ್ಯೀಕರಣ, ಮೀನುಗಾರಿಕೆ, ಹೈನುಗಾರಿಕೆ ಮತ್ತು ಕೋಳಿಸಾಗಣೆ ಸೇರಿ ಇನ್ನಿತರ ಬಗ್ಗೆ ನೂತನ ತಂತ್ರಜ್ಞಾನ ಮೂಲಕ ಸಲಹೆಗಳನ್ನು ನೀಡುತ್ತಿದೆ. ಕೃಷಿ ಮೇಳದ 2ನೇ ದಿನವಾದ ಶುಕ್ರವಾರದಂದು 1.76 ಲಕ್ಷ ಜನರು ಬಂದಿದ್ದರು. ಆನ್​ಲೈನ್​ನಲ್ಲಿ 4.20 ಲಕ್ಷ ಮಂದಿ ವೀಕ್ಷಣೆ ಮಾಡಿದ್ದಾರೆ.

ಮೇಳದ ವಿಶೇಷತೆ

  • ಮುಜೆಂಟಿ, ಮೊಜೆಂಟಿ, ಮಿಸ್ರಿ, ನಸ್ರಿ, ರಾಳಜೇನು, ನುಸಿ ಜೇನು, ಕಿರು ಜೇನು ಸೇರಿ ಅನೇಕ ಹೆಸರುಗಳಿಂದ ಕರೆಯುವ ಚುಚ್ಚದ ಜೇನು ಸಾಕಿದರೆ ಅಧಿಕ ಲಾಭ ಗಳಿಸಬಹುದು. ಕೇರಳದಲ್ಲಿ ಒಂದು ಕೆಜಿ ಜೇನು ತಪ್ಪಕ್ಕೆ 4 ಸಾವಿರ ರೂ.ಇದೆ. ಕ್ಯಾನ್ಸರ್ ಸೇರಿ ಇನ್ನಿತರ ಗಂಭೀರ ಕಾಯಿಲೆ ನಿವಾರಿಸುವ ಅಂಶ ಇದರಲ್ಲಿದೆ. ಕರ್ನಾಟಕದಲ್ಲಿ ಇದರ ಬಗ್ಗೆ ಜನರಿಗೆ ಹೆಚ್ಚಿನ ಅರಿವು ಮೂಡಿಸಬೇಕಿದೆ. ಕೃಷಿ ಮೇಳದಲ್ಲಿ ಇದರ ಬಗ್ಗೆ ರೈತರಿಗೆ ಮಾಹಿತಿ ಸಿಗಲಿದೆ.
  • ಮೇಳದಲ್ಲಿ ಮತ್ತೊಂದು ಆಕರ್ಷಣೆ ರಾಗಿಯಿಂದ ಮಾಡಿರುವ ಪೌಷ್ಠಿಕ ಲಡ್ಡು. ಇದನ್ನು ಸೇವಿಸಿದರೆ ಆರೋಗ್ಯ ವೃದ್ಧಿಯಾಗಲಿದೆ.
  • ವಿವಿಧ ಕ್ಷೇತ್ರಗಳಲ್ಲಿ ಅತ್ಯಂತ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಾ, ಯಶಸ್ಸು ಕಂಡಿರುವ ಡ್ರೋಣ್​ಗಳು ಇದೀಗ ಕೃಷಿ ಕ್ಷೇತ್ರಕ್ಕೂ ಲಗ್ಗೆ ಇಟ್ಟಿವೆ. 5 ನಿಮಿಷದಲ್ಲಿ ಒಂದು ಎಕರೆಗೆ ಔಷಧ ಸಿಂಪಡಿಸಬಹುದು. ಎಕರೆಗೆ ಔಷಧ ಸಿಂಪಡಿಸಲು 250-300 ರೂ.ವೆಚ್ಚವಾಗುತ್ತದೆ.
  • ತೆಂಗಿನ ಕಾಯಿ ಸಿಪ್ಪೆ ಸುಲಿಯಲು ಕೃಷಿ ಕಾರ್ವಿುಕರಿಗಾಗಿ ರೈತರ ಪರದಾಟ ತಪ್ಪಿಸಲು ಎಆರ್​ಎಸ್ ಎಂಜಿನಿಯರಿಂಗ್ ಸಂಸ್ಥೆಯು ಪರಿಹಾರ ಕಲ್ಪಿಸಿದೆ. ಗಂಟೆಗೆ 800-1,000 ತೆಂಗಿನಕಾಯಿ ಸಿಪ್ಪೆ ಸುಲಿಯಲು ಯಂತ್ರವನ್ನು ಸಂಶೋಧಿಸಿದೆ.