Walking : ಪ್ರತಿದಿನ ಬೆಳಗ್ಗೆ ಅಥವಾ ಸಂಜೆ ವಾಕಿಂಗ್ ಮಾಡುವ ಅಭ್ಯಾಸ ಇರುವವರು 6-6-6 ವಿಧದ ವಾಕಿಂಗ್ ಬಗ್ಗೆ ಖಂಡಿತವಾಗಿ ತಿಳಿದಿರಬೇಕು. ವಾಕಿಂಗ್ ಮಾಡುವ ಅಭ್ಯಾಸ ಇಲ್ಲದವರು ಮತ್ತು ಮಾಡುವ ಬಯಕೆ ಇರುವವರು ಕೂಡ ಇದರತ್ತ ಗಮನ ಹರಿಸಿದರೆ ಉತ್ತಮ. ಅಷ್ಟಕ್ಕೂ ಈ 6-6-6 ಪ್ರಕಾರ ಯಾವುದು ಅಂತ ತಿಳಿಯೋಣ.
ಪ್ರತಿದಿನ ಬೆಳಗ್ಗೆ 6 ಅಥವಾ ಸಂಜೆ 6 ಗಂಟೆಗೆ 60 ನಿಮಿಷಗಳ ಕಾಲ ನಡೆಯಿರಿ. ಮುಖ್ಯವಾದ ವಿಚಾರ ಏನೆಂದರೆ, ನಡಿಗೆಯನ್ನು ಪ್ರಾರಂಭಿಸುವ ಮೊದಲು 6 ನಿಮಿಷಗಳ ವಾರ್ಮಪ್ ವ್ಯಾಯಾಮಗಳನ್ನು ಮಾಡಿ ಮತ್ತು ವಾಕಿಂಗ್ ಮುಗಿಸಿದ ನಂತರ ಇನ್ನೊಂದು 6 ನಿಮಿಷಗಳ ನಂತರವೂ ಕೂಲ್ ಡೌನ್ ವ್ಯಾಯಾಮಗಳನ್ನು ಮಾಡಿ. ಈ ಸಂಪೂರ್ಣ ಪ್ರಕ್ರಿಯೆಯನ್ನು 6-6-6 ವಾಕಿಂಗ್ ಎಂದು ಕರೆಯಲಾಗುತ್ತದೆ.
ಪ್ರತಿದಿನ 60 ನಿಮಿಷಗಳ ಕಾಲ ನಡೆಯುವುದರಿಂದ ಹೃದಯದ ಆರೋಗ್ಯ ಸುಧಾರಿಸುತ್ತದೆ. ಅಲ್ಲದೆ, ದೇಹದ ತೂಕವನ್ನೂ ನಿಯಂತ್ರಣದಲ್ಲಿಡುತ್ತದೆ. ಒಟ್ಟಾರೆ ದೈಹಿಕ ಆರೋಗ್ಯ ಉತ್ತಮವಾಗಿರುತ್ತದೆ. ಬೆಳಗ್ಗೆ ಬೇಗನೆ ಎದ್ದೇಳಲು ಸಾಧ್ಯವಾಗದವರು ಸಂಜೆ ವಾಕಿಂಗ್ ಮಾಡುತ್ತಾರೆ. ತಜ್ಞರ ಪ್ರಕಾರ, ಸಂಜೆಯ ವೇಳೆ ವಾಕಿಂಗ್ ಮಾಡುವುದರಿಂದ ಉತ್ತಮ ನಿದ್ದೆ ಬರುತ್ತದೆ. ಇದಲ್ಲದೆ, ದೇಹದಲ್ಲಿನ ಸಕ್ಕರೆಯ ಮಟ್ಟವು ನಿಯಂತ್ರಣದಲ್ಲಿರುತ್ತದೆ. ನಿರ್ದಿಷ್ಟವಾಗಿ, ಜೀರ್ಣಕ್ರಿಯೆಯು ಸುಧಾರಿಸುತ್ತದೆ.
ಬೆಳಗ್ಗೆ 6 ಗಂಟೆಗೆ ನಡೆಯುವುದರಿಂದ ಚಯಾಪಚಯವು ಸುಧಾರಿಸುತ್ತದೆ. ಈ ಸಮಯದಲ್ಲಿ ದೇಹದಲ್ಲಿನ ಕ್ಯಾಲೊರಿಗಳನ್ನು ಚೆನ್ನಾಗಿ ಕರಗಿಸಬಹುದು. ಅನಗತ್ಯ ಒತ್ತಡ ಮತ್ತು ಆತಂಕ ಕಡಿಮೆಯಾಗಿ ಮಾನಸಿಕವಾಗಿ ಆರೋಗ್ಯವಾಗಿರಬಹುದು.
ವಾಕಿಂಗ್ ಪ್ರಾರಂಭಿಸುವ ಮೊದಲು 6 ನಿಮಿಷಗಳ ಕಾಲ ವಾರ್ಮಪ್ ಮಾಡುವುದರಿಂದ ದೇಹದ ಉಷ್ಣತೆ ಹೆಚ್ಚಾಗುತ್ತದೆ. ಇದರಿಂದ ಸ್ನಾಯುಗಳಿಗೆ ರಕ್ತದ ಹರಿವು ಹೆಚ್ಚಾಗಿ, ವ್ಯಾಯಾಮವನ್ನು ಸುಲಭಗೊಳಿಸುತ್ತದೆ. ಅದೇ ರೀತಿ ವ್ಯಾಯಾಮದ ನಂತರ ದಣಿದ ದೇಹವನ್ನು ಶಾಂತಗೊಳಿಸಲು, ನಿಮ್ಮ ದೇಹದ ಉಷ್ಣತೆಯನ್ನು ಸ್ಥಿರಗೊಳಿಸಲು ನೀವು ಕೂಲ್-ಡೌನ್ ವ್ಯಾಯಾಮವನ್ನು ಮಾಡಬೇಕು.
ಹಕ್ಕು ನಿರಾಕರಣೆ: ಲೇಖನದಲ್ಲಿ ಉಲ್ಲೇಖಿಸಲಾದ ಸಲಹೆಗಳು ಸಾಮಾನ್ಯ ಮಾಹಿತಿಗಾಗಿ ಮಾತ್ರ. ನೀವು ಯಾವುದೇ ಪ್ರಶ್ನೆಗಳನ್ನು ಹೊಂದಿದ್ದರೆ ಯಾವಾಗಲೂ ನಿಮ್ಮ ವೈದ್ಯರನ್ನು ಸಂಪರ್ಕಿಸಿ.