ಲೈಫ್‌ಸ್ಟೈಲ್

ಮೆದುಳಿನ ಆರೋಗ್ಯ ತುಂಬಾ ಮುಖ್ಯ: ಈ ಚಟುವಟಿಕೆಗಳನ್ನು ಅನುಸರಿಸಿ, ಮೆದುಳನ್ನು ಸಕ್ರಿಯವಾಗಿರಿಸಿ

ರಮೇಶ್​ ಕುಮಾರ್​​ ಬಿ ಎಡಮೋಳೆ

ನವದೆಹಲಿ: ಮಾನವ ದೇಹದ ಪ್ರಮುಖ ಅಂಗವಾದ ಮೆದುಳನ್ನು ಯಾವಾಗಲೂ ಆರೋಗ್ಯವಾಗಿ ಇಟ್ಟುಕೊಳ್ಳಬೇಕು. ಇದಕ್ಕಾಗಿ ಮೆದುಳು ಸದಾ ಸಕ್ರಿಯ ಮತ್ತು ತಾರುಣ್ಯದಿಂದ ಇರುವಂತೆ ನೋಡಿಕೊಳ್ಳಬೇಕು ಎಂದು ಅನೇಕ ಸಂಶೋಧನೆಗಳು ಹೇಳುತ್ತವೆ. ವಯಸ್ಸಾಗುವುದು ಕೂಡ ದೇಹ ಮತ್ತು ಮನಸ್ಸಿನ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಹೀಗಾಗಿ ಮೆದುಳಿನ ಆರೋಗ್ಯದ ಮೇಲೆ ಗಮನ ಹರಿಸಿದರೆ, ವಯಸ್ಸಾದರೂ ಕೂಡ ಮೆದುಳನ್ನು ಚೆನ್ನಾಗಿ ಇಟ್ಟುಕೊಳ್ಳಬಹುದು. ಇಲ್ಲವಾದಲ್ಲಿ ಅಲ್ಜೈಮರ್‌ ಎಂಬ ಗಂಭೀರ ಮೆದುಳು ಸಮಸ್ಯೆ ಕಾಡಲಿದೆ.

ವ್ಯಾಯಾಮ ಮತ್ತು ದೈಹಿಕ ಚಟುವಟಿಕೆಗಳಿಂದ ಮೆದುಳಿನ ಸ್ಮರಣೆ, ಏಕಾಗ್ರತೆ ಮತ್ತು ಗಮನವನ್ನು ಸುಧಾರಿಸಬಹುದು. ನಿತ್ಯವೂ ದೇಹವನ್ನು ದಂಡಿಸುವುದರಿಂದ ಮೆದುಳಿಗೆ ಆರೋಗ್ಯಕರ ರಕ್ತದ ಹರಿವು ಪೂರೈಕೆ ಆಗಲಿದ್ದು, ಅತ್ಯುತ್ತಮ ಆಮ್ಲಜನಕವು ಮೆದುಳಿನ ಎಲ್ಲ ಕೋಶಗಳನ್ನು ತಲುಪಲಿದೆ. ಇದರಿಂದ ಮೆದುಳಿನ ಕೋಶಗಳ ಆರೋಗ್ಯ ವೃದ್ಧಿಯಾಗಿ ಮೆದುಳು ಕೂಡ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತದೆ.

ವ್ಯಾಯಾಮವು ಆತಂಕ ಮತ್ತು ಒತ್ತಡದಂತಹ ನೆಗೆಟಿವ್​ ಪರಿಣಾಮಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಆದ್ದರಿಂದ, ಎಲ್ಲ ವಯಸ್ಸಿನಲ್ಲೂ ಮೆದುಳನ್ನು ಸಕ್ರಿಯಗೊಳಿಸುವ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದು ತುಂಬಾ ಮುಖ್ಯವಾಗಿದೆ. ಒತ್ತಡ, ಖಿನ್ನತೆ, ಆತಂಕ ಮತ್ತು ಇತರ ಮಾನಸಿಕ ಕಾಯಿಲೆಗಳು ಏಕಾಗ್ರತೆಗೆ ಅಡ್ಡಿಯಾಗಲಿದ್ದು, ಇದು ಮೆಮೊರಿ ಲಾಸ್​ಗೆ ಕಾರಣವಾಗಬಹುದು.

ಮೆದುಳನ್ನು ಸದಾ ಸಕ್ರಿಯವಾಗಿಡಲು ಈ ಕೆಳಕಂಡ ಚಟುವಟಿಕೆಗಳನ್ನು ಅನುಸರಿಸಿ.

1. ಹೊಸ ವಿಷಯಗಳ ಕಲಿಕೆ: ಜೀವನದಲ್ಲಿ ಹೊಸತನ್ನು ಕಲಿಯಿರಿ. ಅಂದರೆ, ಹೊಸ ಭಾಷೆ, ಸಂಗೀತ ಸಾಧನಗಳು ಮತ್ತು ಹಾಡುಗಳನ್ನು ಕಲಿಯಲು ಪ್ರಾರಂಭಿಸಿ. ನಿಮ್ಮ ಜ್ಞಾನವನ್ನು ವಿಸ್ತರಿಸಿಕೊಳ್ಳಲು ಯಾವುದೇ ಕಾರಣಕ್ಕೂ ಹಿಂಜರಿಯಬೇಡಿ.

2. ವಿಡಿಯೋ ಗೇಮ್ಸ್​ ಆಡಿ: ವಿಡಿಯೋ ಗೇಮ್ಸ್​ ಅಥವಾ ಮೊಬೈಲ್​ ಗೇಮ್ಸ್​ಗಳಲ್ಲಿ ತೊಡಗಿಸಿಕೊಳ್ಳುವುದರಿಂದ ಮೆದುಳನ್ನು ಕ್ರಿಯಾಶೀಲವಾಗಿರಿಸಿಕೊಳ್ಳಬಹುದು. ಆದರೆ, ಮೊಬೈಲ್​ ಗೇಮ್ಸ್​ ಚಟವಾಗಬಾರದು. ಮೊಬೈಲ್​ ಗೇಮ್ಸ್​ಗಳಿಗೆ ದಾಸರಾದರೆ ಅನೇಕ ಆರೋಗ್ಯ ಸಮಸ್ಯೆಗಳು ಎದುರಾಗುತ್ತವೆ. ಹೆಚ್ಚೆಚ್ಚು ಮೊಬೈಲ್​ ಸ್ಕ್ರೀನ್​ ನೋಡುವುದರಿಂದ ಕಣ್ಣಿನ ಸಮಸ್ಯೆಯು ಕಾಡಬಹುದು.

3. ದೈಹಿಕ ಚಟುವಟಿಕೆಯಲ್ಲಿ ತೊಡಗಿ: ಬೆಳಗ್ಗೆ ಮತ್ತು ಸಂಜೆ ಸಮಯದಲ್ಲಿ ವಾಕಿಂಗ್​ ಮಾಡುವುದನ್ನು ಅಭ್ಯಾಸ ಮಾಡಿಕೊಳ್ಳಿ. ಬೆಳಗ್ಗೆ ಬೇಗ ಏಳುವ ಅಭ್ಯಾಸ ಮಾಡಿಕೊಳ್ಳಿ. ಬೆಳಗಿನ ಜಾವ ಸೂರ್ಯನ ಬಿಸಿಲಿಗೆ ಮೈಯೊಡ್ಡಿ. ಯೋಗ ಮಾಡುವುದು ಕೂಡ ಮೆದುಳಿನ ಆರೋಗ್ಯ ಸಹಕಾರಿಯಾಗಲಿದೆ.

4. ಬೋರ್ಡ್​ ಗೇಮ್ಸ್​ ಆಡಿ: ಕುಟುಂಬದ ಸದಸ್ಯರೊಂದಿಗೆ ಸಮಯ ಕಳೆಯುವಾಗ, ವಿವಿಧ ಆಟಗಳಲ್ಲಿ ತೊಡಗಿಸಿಕೊಳ್ಳುವುದು ಒಳ್ಳೆಯದು. ಬೋರ್ಡ್ ಆಟಗಳು ಮೆದುಳನ್ನು ಸಕ್ರಿಯವಾಗಿರಿಸುತ್ತದೆ. ಚೆಸ್​, ಕ್ಯಾರಂ ಬೋರ್ಡ್​, ಅಳಿಗುಳಿ ಮನೆ ಸೇರಿದಂತೆ ಮುಂತಾದ ಆಟಗಳಲ್ಲಿ ತೊಡಗಿಸಿಕೊಳ್ಳಿ.

5. ಮಾನಸಿಕ ವ್ಯಾಯಾಮಗಳಿಗೆ ಸಮಯ ಕೊಡಿ: ಓದುವುದು, ಬರೆಯುವುದು, ಒಗಟುಗಳನ್ನು ಪರಿಹರಿಸುವುದು ಮತ್ತು ಕ್ರಾಸ್‌ವರ್ಡ್‌ಗಳನ್ನು ಪರಿಹರಿಸುವುದು ಮತ್ತು ಆಪ್ಟಿಕಲ್​ ಇಲ್ಯೂಶನ್​ಗಳು ಮೆದುಳನ್ನು ಉತ್ತೇಜಿಸುವ ದೈನಂದಿನ ಚಟುವಟಿಕೆಗಳಾಗಿವೆ. ಹೀಗಾಗಿ ಇವುಗಳಲ್ಲಿ ತೊಡಗಿಸಿಕೊಳ್ಳುವುದರಿಂದ ಮೆದುಳಿನ ಆರೋಗ್ಯ ಉತ್ತಮವಾಗಿರಲಿದೆ. (ಏಜೆನ್ಸೀಸ್​)