ಸಾಕ್ಷಾತ್ ದತ್ತ ಅವತಾರಿಗಳಾದ ಅಜಮೀರ ಗುರುಗಳು ಮಹಾನ್ ಸಿದ್ಧಿಪುರುಷರು. ತಿರುಮಲರಿಗೆ ಋಷಿಮುನಿಗಳ ತಪಸ್ಸಿನ ಶಕ್ತಿ, ದೇವಾನುದೇವತೆಗಳ ಕೃಪೆಯ ಸಿದ್ಧಾನ್ನವನ್ನು ತಿನಿಸಿ ಬ್ರಹ್ಮಜ್ಞಾನ ಕರುಣಿಸಿದರು. ಶುಕ್ಲ ಯಜುರ್ವೆದ ಶಾಖೆಯ ವೇದವಲ್ಲಭ ಮತ್ತು ಸುಕಲ್ಯಾಣಿ ಎಂಬ ಪಾಂಡುರಂಗನ ಶ್ರೇಷ್ಠಭಕ್ತರ ಮಗನೇ ತಿರುಮಲ. ತಿರುಮಲರಿಗೆ ಪಾರ್ವತಿ ಎಂಬ ಕನ್ಯೆಯೊಂದಿಗೆ ವಿವಾಹವಾಯಿತು. ಮುಂದೊಂದು ದಿನ ತಿರುಮಲರು ತಂದೆ-ತಾಯಿಯ ಅನುಮತಿ ಪಡೆದು ಪತ್ನಿಸಮೇತ ಗುರುಶೋಧನಗೆ ಹೊರಟರು. ತಾಪಿತ ನದಿ ತೀರಕ್ಕೆ ಬಂದ ಈ ದಂಪತಿಗೆ ಚಾಂಗದೇವನ ದರ್ಶನವಾಯಿತು. ಅಲ್ಲಿ ತಿರುಮಲರು ಚಾಂಗದೇವರಿಂದ ಯೋಗಸಾಧನೆಯ ವಿಷಯಗಳನ್ನು ಅಭ್ಯಸಿಸಿ ಸಾಧನಾತತ್ಪರರಾದರು. ಇವರ ಸಾಧನೆಯಿಂದ ಸಂತೋಷಗೊಂಡ ಚಾಂಗದೇವರು ತಿರುಮಲರನ್ನು ಕರೆದುಕೊಂಡು ಆಳಂದಿಗೆ ಬಂದು ಮಹಾವಿಷ್ಣು ಅವತಾರಿಯಾದ ಜ್ಞಾನೇಶ್ವರರ ದರ್ಶನ ಮಾಡಿಸಿದರು
ಜ್ಞಾನೇಶ್ವರರು ಮತ್ತು ಚಾಂಗದೇವರು ತಿರುಮಲರಿಗೆ ಆಶೀರ್ವಾದ ಮಾಡಿದರು. ಅಲ್ಲಿಂದ ಕಾಶಿ ಕ್ಷೇತ್ರಕ್ಕೆ ಬಂದ ತಿರುಮಲರಿಗೆ ಸದಾನಂದ ತೀರ್ಥರೆಂಬ ಸನ್ಯಾಸಿಗಳ ದರ್ಶನವಾಯಿತು. ಆತ್ಮಜ್ಞಾನದ ಹಸಿವಿನಲ್ಲಿದ್ದ ತಿರುಮಲರಿಗೆ ಸದಾನಂದ ತೀರ್ಥರು ಗೋಕಾಕ್ ಬಳಿ ಇರುವ ಅರಣ್ಯದಲ್ಲಿ, ‘ನಿನ್ನ ಮನದಿಚ್ಛೆ ಪೂರ್ಣ ಮಾಡಿದ್ದೇನೆ’ ಎಂದು ಹೇಳಿ ಆಶೀರ್ವದಿಸಿದರು. ಗೋಕಾಕ ಜಲಪಾತದ ಬಳಿ ಯೋಗ ಸಾಧನೆಯಲ್ಲಿದ್ದ ತಿರುಮಲರಿಗೆ ಸದ್ಗುರುಗಳ ದರ್ಶನವಾಯಿತು. ‘ನೀನು ಮದರಕಂಡಿ ಎಂಬ ಗುಹೆಯಲ್ಲಿ ತಪಸ್ಸು ಮಾಡು. ಅಲ್ಲಿ ಗಂಧದ ಧೂಪದಿಂದ ದೀನ್ ಎಂಬ ಶಬ್ದ ಬರುವುದು. ಯವನ ರೂಪದಲ್ಲಿ ನಿನಗೆ ಸದ್ಗುರುನಾಥನ ದರ್ಶನವಾಗುವುದು’ ಎಂದು ಆಶೀರ್ವದಿಸಿದರು. ತಿರುಮಲರು ಗುಹೆಯಲ್ಲಿ ಕಠಿಣ ತಪಶ್ಚರ್ಯ ಮಾಡುತ್ತಿದ್ದರು. ಕಲ್ಲೋಳಿಯ ವೆಂಕಟೇಶ್ವರನ ಸೇವೆ ಮಾಡುತ್ತಿದ್ದಾಗ ಫಾಲ್ಗುಣವದ್ಯ ಪ್ರತಿಪದದಂದು ತ್ರಿಮೂರ್ತಿ ಸ್ವರೂಪೀ ದತ್ತಾತ್ರೇಯರು ಅಜ್ಮೀರ ಸಾಹೇಬರೆಂಬ ಯವನ ರೂಪದಿಂದ ತಿರುಮಲರಿಗೆ ದರ್ಶನ ಕೊಟ್ಟರು.
ಅಜ್ಮೀರ ಗುರುಗಳ ನಿಜ ಸ್ಥಿತಿಯನ್ನರಿತ ತಿರುಮಲರು, ‘ಸದ್ಗುರುನಾಥ ನೀವು ಕಾಶಿಯಲ್ಲಿ, ಗೋಕಾಕ ಗುಹೆಯಲ್ಲಿ ಅನೇಕ ರೂಪದಲ್ಲಿ ನನಗೆ ದರ್ಶನ ನೀಡಿದ ಮಹಾತ್ಮರು. ಸಹಜಾನಂದ, ಸದಾನಂದ, ಅಜ್ಮೀರ ಈ ಮೂರೂ ರೂಪದ ದತ್ತಾತ್ರೇಯರು ನೀವೇ ಇದ್ದೀರಿ. ನನಗೆ ಬ್ರಹ್ಮಾನಂದ ಸುಖ ನೀಡಿ’ ಎಂದು ಪ್ರಾರ್ಥಿಸಿದರು. ಆಗ ಬ್ರಹ್ಮ, ವಿಷ್ಣು, ಶಿವ ಸ್ವರೂಪೀ ದತ್ತಾತ್ರೇಯರ ಪ್ರತ್ಯಕ್ಷ ದರ್ಶನವಾಯಿತು. ಮತ್ತು ತಿರುಮಲರಿಗೆ ಪರಮಹಂಸ ಪದವಿಯೂ ಪ್ರಾಪ್ತವಾಯಿತು. ಪರಮಹಂಸರು ರೋಗಿಷ್ಠರನ್ನು ಗುಣಪಡಿಸಿದರು, ನಿರ್ಗತಿಕರಿಗೆ ಅನ್ನ ನೀಡಿದರು, ದುಃಖಿತ ಸಂಸಾರದಲ್ಲಿ ಸುಖ ಅನುಗ್ರಹಿಸಿದರು, ಬರಗಾಲದಲ್ಲೂ ಮಳೆ ತರಿಸಿದರು, ಅತೃಪ್ತ ಆತ್ಮಗಳು ಮತ್ತು ಬ್ರಹ್ಮರಾಕ್ಷಸರಿಗೆ ಸದ್ಗತಿ ನೀಡಿದರು, ಲೋಕದ ಅಜ್ಞಾನಿ ಜನರನ್ನು ಸಾಧನಾಮಾರ್ಗಕ್ಕೆ ಹಚ್ಚಿದರು. ಅಧ್ಯಾತ್ಮದ ಸುಧೆಯನ್ನು ಉಣಬಡಿಸಿದರು. ಸಹಸ್ರಾರು ಜನರಿಗೆ ಸನ್ಮಾರ್ಗದ ಬೆಳಕು ತೋರಿದರು. ಲೋಕಾಪುರ ಮಠವನ್ನು ಸ್ಥಾಪಿಸಿ ಜನರ ಉದ್ಧಾರಕ್ಕಾಗಿ 783 ವರ್ಷಗಳ ಕಾಲ ದೇಹ ಧಾರಣೆ ಮಾಡಿದ್ದರು.
ಗುರುಗಳಾದ ಅಜ್ಮೀರ ಸಾಹೇಬರ ಗದ್ದುಗೆ ನಿರ್ವಿುಸಿ, ತಾವು ಸಜೀವ ಸಮಾಧಿಯಾದರು. ಈಗಲೂ ಅಲ್ಲಿರುವ ಶಕ್ತಿಯನ್ನು ಸಹಸ್ರಾವಧೀ ಜನರು ಅನುಭವಿಸುತ್ತಿದ್ದಾರೆ. ನಾಡಿನ ವಿವಿಧ ಭಾಗಗಳಿಂದ ಭಕ್ತರು ಅಪಾರ ಸಂಖ್ಯೆಯಲ್ಲಿ ಭೇಟಿ ನೀಡುತ್ತಾರೆ. ಲೋಕಾಪುರದ ಪರಮಹಂಸ ಕ್ಷೇತ್ರವು ಕಲಿಯುಗದ ಕಾಮಧೇನು ಎಂಬ ಪ್ರಸಿದ್ಧಿಗೆ ಪಾತ್ರವಾಗಿದೆ.