ಬೊಜ್ಜು ಅಥವಾ ಸ್ಥೂಲಕಾಯದಿಂದ ಬಳಕುವ ಬಳ್ಳಿಯಂತಾಗುವುದು ಯಾರಿಗಿಷ್ಟ ಇಲ್ಲ ಹೇಳಿ. ಬಹುತೇಕ ಮಹಿಳೆಯರು ಬಯಸುವುದನ್ನು ಇದನ್ನೇ ತಾನೆ. ಆದರೆ ದಡೂತಿ ದೇಹದಿಂದ ತೆಳ್ಳಗಾಗುವ ಪ್ರಕ್ರಿಯೆಯಲ್ಲಿ ದೇಹ ದಂಡಿಸಲು ವ್ಯಾಯಾಮ, ಡಯಟ್‌ಗಳನ್ನು ಕೈಗೊಳ್ಳುವುದು ಸಾಮಾನ್ಯ ಸಂಗತಿ. ಆದರೆ ಈ ತೂಕ ನಷ್ಟ ಕಾರ್ಯದಲ್ಲಿ ನಾವು ಮಾಡುವ ಕೆಲ ತಪ್ಪುಗಳು ದೇಹದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿ, ಕೆಲ ಸಮಸ್ಯೆಗಳಿಗೆ ಕಾರಣವಾಗಬಹುದು. ಅವುಗಳಲ್ಲಿ ಮೈಗ್ರೇನ್ ಸಮಸ್ಯೆಯೂ ಒಂದು. ನಾವಿಂದು ತೂಕನಷ್ಟ ಕಾರ್ಯದಲ್ಲಿ ಅನುಭವಿಸುವ ಮೈಗ್ರೇನ್‌ಗೆ ನಿರ್ದಿಷ್ಟ ಕಾರಣಗಳೇನು, ಅದಕ್ಕೆ ಪರಿಹಾರೋಪಾಯಗಳೇನು ಎಂಬುದರ ಬಗ್ಗೆ ತಿಳಿದುಕೊಳ್ಳೋಣ.
ತೂಕನಷ್ಟ ಸಮಯದಲ್ಲಿ ತಲೆನೋವು
ತೂಕವನ್ನು ಕಳೆದುಕೊಳ್ಳುವುದು ಸುಲಭದ ಪ್ರಕ್ರಿಯೆಯಲ್ಲ. ಅಧಿಕ ತೂಕ ಅಥವಾ ಸ್ಥೂಲಕಾಯವು ನಿರಂತರ ತಲೆನೋವು ಉಂಟುಮಾಡುವ ಸಾಧ್ಯತೆ ಹೆಚ್ಚಾಗಿರುತ್ತದೆ. ಕೆಲವೊಮ್ಮೆ ಇದು ತೂಕ ಕಳೆದುಕೊಳ್ಳುವ ಯೋಜನೆಗಳ ಪರಿಣಾಮವಾಗಿ ಉಂಟಾಗಬಹುದು. ಹೌದು ಮಹಿಳೆಯರೇ! ನಿಮ್ಮ ದೇಹ ಅಗತ್ಯಕ್ಕಿಂತ ಕಡಿಮೆ ಕ್ಯಾಲರಿಗಳನ್ನು ಪಡೆದಾಗ ಅಥವಾ ಸಮರ್ಪಕವಾಗಿ ಹೈಡ್ರೇಟ್ ಆಗದಿರುವಾಗ, ಆಹಾರ ಪದ್ಧತಿಗಳ ವ್ಯತ್ಯಾಸ, ಊಟ ಬಿಟ್ಟುಬಿಡುವುದು, ಒತ್ತಡ ಮತ್ತು ಅನಿಯಮಿತ ನಿದ್ರೆ ಹೀಗೆ ವಿವಿಧ ಕಾರಣಗಳಿಂದ ನೀವು ಮೈಗ್ರೇನ್ ಸಮಸ್ಯೆಗೆ ತುತ್ತಾಗಬಹುದು.
1. ವ್ಯಾಯಾಮ ಅವಶ್ಯಕ: ತೂಕ ಇಳಿಕೆಗೆ ಆರಂಭದಲ್ಲಿ ಡಯಟ್ ಮಾಡುವ ಮೊದಲು ವ್ಯಾಯಾಮ ಮಾಡುವ ಅಭ್ಯಾಸ ರೂಢಿಸಿಕೊಳ್ಳುವುದು ಒಳಿತು. ಇದು ನಿಮ್ಮ ದೇಹವನ್ನು ದಿನಚರಿಯೊಂದಿಗೆ ಸರಿಹೊಂದಿಸಲು ಸಹಾಯ ಮಾಡುತ್ತದೆ. ಅಲ್ಲದೆ ವ್ಯಾಯಾಮ ಆರಂಭಿಸಿದ ಕನಿಷ್ಠ ಒಂದು ವಾರದ ಬಳಿಕ ಡಯಟ್ ಅಥವಾ ಆಹಾರ ಕ್ರಮವನ್ನು ಪ್ರಾರಂಭಿಸುವುದು ಒಳಿತು ಎನ್ನುತ್ತಾರೆ ವೈದ್ಯರು.
2. ಬೆಳಗಿನ ಉಪಾಹಾರ ಸ್ಕಿಪ್ ಅಥವಾ ಬಿಡಬೇಡಿ: ತೂಕ ಇಳಿಸುವ ವೇಳೆ ಕೆಲವರು ಬೆಳಗಿನ ತಿಂಡಿಯನ್ನು ಏಕಾಏಕಿ ತ್ಯಜಿಸಿ ಜ್ಯೂಸ್ ಅಥವಾ ಹಣ್ಣುಗಳ ಸೇವನೆಯ ಮೊರೆ ಹೋಗುತ್ತಾರೆ. ಹಣ್ಣುಗಳ ಸೇವನೆ ಒಳಿತೇ ಆದರೆ ಬೆಳಗಿನ ಉಪಾಹಾರವನ್ನು ಯಾವುದೇ ಕಾರಣಕ್ಕೂ ಸ್ಕಿಪ್ ಮಾಡಬಾರದು. ಇದು ಮೈಗ್ರೇನ್ ಸಮಸ್ಯೆಗೆ ಟ್ರಿಗರ್ ಮಾಡುತ್ತದೆ. ಜತೆಗೆ ಬೆಳಗಿನ ತಿಂಡಿಯು ಇಡೀ ದಿನಕ್ಕಾಗುವ ಶಕ್ತಿ ನೀಡುತ್ತದೆ. ಆದರೆ ಉಪಾಹಾರ ತ್ಯಜಿಸುವುದರಿಂದ ನಿಮ್ಮ ಮೆಟಾಬಾಲಿಸಂ ಅಥವಾ ಚಯಾಪಚಯಕ್ರಿಯೆಗೆ ತೊಂದರೆ ಉಂಟಾಗುತ್ತದೆ. ದೇಹದಲ್ಲಿ ಶಕ್ತಿ ಸಂಚಯನ ಕುಂಠಿತಗೊಳ್ಳುತ್ತದೆ. ಕಡಿಮೆ ಕ್ಯಾಲರಿಗಳ ಕೊರತೆಯಿಂದಾಗಿ ತಲೆನೋವು ಆರಂಭವಾಗುತ್ತದೆ.
3. ಆಲ್ಕೋಹಾಲ್ ಮಿತಿಯಲ್ಲಿರಲಿ: ನೀವು ತಲೆನೋವು ಅಥವಾ ಮೈಗ್ರೇನ್ ಸಮಸ್ಯೆಗೆ ತುತ್ತಾಗಿದ್ದರೆ, ಆಲ್ಕೋಹಾಲ್ ಸೇವನೆ ಒಳ್ಳಯೆದಲ್ಲ. ಆಲ್ಕೋಹಾಲ್ ತಲೆನೋವನ್ನು ಮತ್ತಷ್ಟು ಹೆಚ್ಚುಮಾಡುತ್ತದೆ. ಹಾಗಾಗಿ ಇದರ ಬಳಕೆ ಮಿತಿಯಲ್ಲಿರಲಿ.
4. ಫೈಬರ್ ಆಹಾರ ಸೇವನೆ ಹೆಚ್ಚಿಸಿ: ಜರ್ನಲ್ ಆಫ್ ಹೆಡೆಕ್ ಆಂಡ್ ಪೇನ್‌ನಲ್ಲಿ 2004 ರಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ, ಕಡಿಮೆ ಕೊಬ್ಬಿನ ಆಹಾರ ಮತ್ತು ಸಸ್ಯ ಆಧಾರಿತ ಹೆಚ್ಚಿನ ಫೈಬರ್ ಪದಾರ್ಥಗಳನ್ನು ಸೇವಿಸುವುದರಿಂದ ಮೈಗ್ರೇನ್ ಸಮಸ್ಯೆ ಉಂಟಾಗುವುದಿಲ್ಲ ಎಂದು ತಿಳಿಸಿದೆ.
5. ಪ್ರೋಟಿನ್‌ಯುಕ್ತ ಆಹಾರಪದಾರ್ಥ ಸೇವನೆ ಒಳ್ಳೆಯದು: ತಲೆನೋವು ನಿರ್ವಹಿಸುವಲ್ಲಿ ಪ್ರೋಟಿನ್ ಪ್ರಯೋಜನಗಳು ಇನ್ನೂ ಸಾಬೀತಾಗಿಲ್ಲವಾದರೂ, ಪ್ರೋಟಿನ್ ಕೊರತೆಯು ತಲೆನೋವು ಸಮಸ್ಯೆಯನ್ನು ಇನ್ನಷ್ಟು ಹದಗೆಡಿಸಬಹುದು ಎಂಬುದು ವೈದ್ಯರ ಅಭಿಪ್ರಾಯ. ಹಾಗಾಗಿ ವೇಟ್‌ಲಾಸ್ ವೇಳೆ ಹೆಚ್ಚೆಚ್ಚು ಪ್ರೋಟಿನ್‌ಯುಕ್ತ ಆಹಾರಪದಾರ್ಥಗಳನ್ನು ಸೇವಿಸಿ.
6. ಹಸಿರು ತರಕಾರಿ, ಸೊಪ್ಪು, ಮತ್ತು ಪಾನೀಯಗಳ ಸೇವನೆ: ತೂಕ ನಷ್ಟ ವೇಳೆ ಹಸಿರು ಎಲೆಗಳ ತರಕಾರಿಗಳು, ಬೀಜಗಳು, ಕೊಬ್ಬಿನ ಮೀನುಗಳು, ಹಣ್ಣುಗಳು ಮತ್ತು ಧಾನ್ಯಗಳನ್ನು ಹೆಚ್ಚಾಗಿ ಸೇವಿಸುವ ಮೂಲಕ ಮೈಗ್ರೇನ್ ಸಮಸ್ಯೆಗೆ ಕಡಿವಾಣ ಹಾಕಬಹುದು.
ಆಲೂಗಡ್ಡೆ ಚಿಪ್ಸ್, ಸಂಸ್ಕರಿಸಿದ ಆಹಾರಗಳು, ತುಂಬಾ ದಿನದ ಚೀಸ್, ಒಣಗಿಸಿದ ಸಾಲ್ಮಾನ್, ಕಲ್ಚರ್ಡ್ ಡೈರಿ ಉತ್ಪನ್ನಗಳು ಮತ್ತು ಕಾರ್ಬೋಹೈಡ್ರೇಟ್‌ಗಳು, ಸಕ್ಕರೆ ಮತ್ತು ಉಪ್ಪಿನಿಂದ ಕೂಡಿದ ಆಹಾರ ಪದಾರ್ಥಗಳನ್ನು ತಿನ್ನದೇ ಇರುವುದು ಒಳಿತು.
7. ಹೆಚ್ಚೆಚ್ಚು ನೀರು ಕುಡಿಯಿರಿ: ಒಟ್ಟಾರೆ ಉತ್ತಮ ಆರೋಗ್ಯಕ್ಕಾಗಿ ಸಾಕಷ್ಟು ನೀರು ಕುಡಿಯುವುದು ಅತ್ಯಗತ್ಯ. ಅಸಮರ್ಪಕ ಜಲ ಸಂಚಯವು ತಲೆನೋವು ಮತ್ತು ಇತರ ಅನೇಕ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಆಯಾಸ, ಸುಸ್ತಾಗುವುದು ಮತ್ತು ಬಾಯಿ ಒಣಗುವುದು ದೇಹ ನಿರ್ಜಲೀಕರಣದ ಚಿಹ್ನೆಗಳು.
8. ವಿಶ್ರಾಂತಿ ಮತ್ತು ಒತ್ತಡದ ನಿವಾರಣೆ: ನೀವು ಒತ್ತಡದಲ್ಲಿದ್ದರೆ ತಲೆನೋವು ಹೆಚ್ಚಾಗಿ ಸಂಭವಿಸುತ್ತದೆ. ತೂಕನಷ್ಟ ಕಾರ್ಯದಲ್ಲಿ ಕೆಲವೊಮ್ಮೆ ಸರಿಯಾಗಿ ನಿದ್ರಿಸದೆ ವಿಶ್ರಾಂತಿ ಪಡೆಯದಿದ್ದಲ್ಲಿ ಮೈಗ್ರೇನ್ ಉಂಟಾಗುತ್ತದೆ. ಹಾಗಾಗಿ ದೇಹದ ಒತ್ತಡದ ನಿವಾರಣೆಗಾಗಿ ಸಮರ್ಪಕವಾಗಿ ನಿದ್ರಿಸುವುದು ಅವಶ್ಯಕ.
9. ಕ್ಯಾಲರಿ ಸೇವನೆಯನ್ನು ಅತಿಯಾಗಿ ನಿರ್ಬಂಧಿಸುವುದು ಒಳ್ಳೆಯದಲ್ಲ: ಕಡಿಮೆ ಕ್ಯಾಲರಿ ಸೇವಿಸಿದಾಗ ನಿಮಗೆ ಕ್ಯಾಲರಿ ಕೊರತೆ ಕಾಡಬಹುದು. ಪಬ್‌ಮೆಡ್ ಸೆಂಟ್ರಲ್‌ನಲ್ಲಿ ಪ್ರಕಟವಾದ ಸಂಶೋಧನಾ ಲೇಖನದ ಪ್ರಕಾರ, ಕಡಿಮೆ ಕ್ಯಾಲರಿ ಸೇವನೆಯು ದೇಹದ ತೂಕ ಇಳಿಕೆಗೆ ಸಹಾಯ ಮಾಡಬಹುದು. ಇದೇ ವೇಳೆ ತಲೆನೋವಿನಂತಹ ಸಮಸ್ಯೆಗೂ ಕಾರಣವಾಗುತ್ತದೆ ಎಂಬುದನ್ನು ನೀವು ಮರೆಯಬಾರದು.
10. ಅಲರ್ಜಿಗೆ ಕಾರಣವಾಗುದ ಆಹಾರ ಪದಾರ್ಥಗಳನ್ನು ತ್ಯಜಿಸಿ: ಟ್ಯೂನ, ಪಾಲಾಕ್, ವೈನ್, ಚೀಸ್, ಹುದುಗಿಸಿದ ಆಹಾರಗಳು ಮತ್ತು ಬದನೆಕಾಯಿ ಸೇರಿದಂತೆ ಮುಂತಾದ ಆಹಾರಗಳಲ್ಲಿ ಹಿಸ್ಟಮೈನ್ ಇರುತ್ತದೆ. ಈ ಸಂಯುಕ್ತವು ಅಲರ್ಜಿಗೆ ಕಾರಣವಾಗುವುದಲ್ಲದೆ, ನಾಳೀಯ ರೀತಿಯ ತಲೆನೋವು ಉಂಟುಮಾಡುತ್ತದೆ ಎಂದು ತಿಳಿದುಬಂದಿದೆ.
11. ಯೋಗ/ಧ್ಯಾನದೊಂದಿಗೆ ವಿಶ್ರಾಂತಿ ಅಗತ್ಯ: ಯೋಗ ಮತ್ತು ಧ್ಯಾನ ಅಭ್ಯಾಸ ಮಾಡುವುದರಿಂದ ಒತ್ತಡ ನಿವಾರಿಸಲು ಮತ್ತು ಮನಸ್ಸನ್ನು ಶಾಂತಗೊಳಿಸಲು ಸಹಾಯ ಮಾಡುತ್ತದೆ. ಮೈಗ್ರೇನ್ ಸಮಸ್ಯೆಗೆ ಯೋಗವು ಅತ್ಯುತ್ತಮ ಮದ್ದು.
12. ತುಳಸಿ ಎಲೆಗಳನ್ನು ಅಗೆಯಿರಿ: 7-8 ತುಳಸಿ ಎಲೆಗಳನ್ನು ಅಗಿಯುವುದರಿಂದ ತಲೆನೋವು ಕಡಿಮೆ ಆಗುತ್ತದೆ. ಜತೆಗೆ ಸ್ನಾಯುಗಳು ವಿಶ್ರಾಂತಿ ಪಡೆಯುತ್ತವೆ. ಏಕೆಂದರೆ ತುಳಸಿಯು ನೋವು ನಿವಾರಕ ಮತ್ತು ಶಾಂತಗೊಳಿಸುವ ಅಂಶವನ್ನು ಹೊಂದಿದೆ.