ಲೈಫ್‌ಸ್ಟೈಲ್

ಹೆದರಿಕೆ ಅನಗತ್ಯ, ಎಚ್ಚರಿಕೆ ಅನಿವಾರ್ಯ

lakshmihegde
ಆಯುರ್ವೆದದಲ್ಲಿ ಹೇಳಿದ ಅನೇಕ ವಿಚಾರಗಳ ಆಳ ಅಗಲ ಎಷ್ಟೆಂಬುದನ್ನು ಸಂಪೂರ್ಣವಾಗಿ ಅರ್ಥೈಸಿ ಜೀರ್ಣಿಸಿಕೊಳ್ಳುವುದು ಸುಲಭದ ವಿಚಾರವೇನಲ್ಲ. ಹಾಗೆಂದು ಅದನ್ನು ಪೂರ್ತಿ ಅರಿತರೆ ಮಾತ್ರ ಫಲ ಪ್ರಾಪ್ತಿಯಾಗುತ್ತದೆ ಎನ್ನುವುದೂ ಸರಿಯಲ್ಲ. ಚಿಕಿತ್ಸೆ ನೀಡುವ ವೈದ್ಯರು ಮಾತ್ರ ತಿಳಿದಿರಬೇಕಾದ ಜ್ಞಾನರಾಶಿ ಆಯುರ್ವೆದದಲ್ಲಿ ಇರುವುದಲ್ಲ. ಸಮಗ್ರ ಜನತೆಗೆ ಶ್ರೇಷ್ಠವಾದ ಸ್ವಸ್ಥ ಜೀವನ ನಡೆಸಲು ಬೇಕಾದ ಅಪಾರವಾದ ಮಾಹಿತಿಗಳೆಲ್ಲವೂ ತುಂಬಿರುವುದರಿಂದ ಆಯುರ್ವೆದವು ಕೇವಲ ಒಂದು ವೈದ್ಯಪದ್ಧತಿಯಾಗಿ ಕಾಣುವುದಿಲ್ಲ. ಅದು ಅತ್ಯುತ್ಕೃಷ್ಟ ಜೀವನವಿಜ್ಞಾನ. ಸಾಂಕ್ರಾಮಿಕ ರೋಗ ಬಂದೆರಗಿದ ಸಂದರ್ಭದಲ್ಲಿ ಕೇವಲ ರೋಗದ ನಿರ್ವಹಣೆಯನ್ನಷ್ಟೇ ಮಾಡಿದರೆ ಅದು ಆಂಶಿಕ ನಿರ್ವಹಣೆಯಾಗುತ್ತದೆ. ರೋಗಿಗಳಿಗೆ ಆಸ್ಪತ್ರೆ ಸೌಲಭ್ಯ, ಸಾವಿರಾರು ಹಾಸಿಗೆಗಳ ಸೌಕರ್ಯ, ಐಸಿಯು ವ್ಯವಸ್ಥೆ, ವೆಂಟಿಲೇಟರ್​ಗಳ ಉಪಲಭ್ಯತೆ ಇವೆಲ್ಲವೂ ಬೇಕೇ ಬೇಕು. ಆದರೆ ಇವುಗಳು ರೋಗ ಬಂದ ನಂತರದ ನಿರ್ವಹಣೆಯ ವಿಚಾರಗಳು. ರೋಗಿಗಳ ಸಂಖ್ಯೆ ಕಡಿಮೆಯಾಗಬೇಕಾದರೆ ಬರದಂತೆ ತಡೆಯುವ ವಿಧಾನಗಳೇನು ಎಂಬುದೇ ಅತ್ಯಂತ ಮುಖ್ಯವಾಗುತ್ತದೆ. ಇದನ್ನೂ ಓದಿ: ತುಳಸಿಯಲ್ಲಿದೆ ಕೆಟ್ಟ ಬ್ಯಾಕ್ಟೀರಿಯಾ, ವೈರಸ್ ಮತ್ತು ಫಂಗಸ್​ ಕೊಲ್ಲುವ ಶಕ್ತಿ

ಆಯುರ್ವೆದ ಆಪದ್ಬಾಂಧವನಾಗಿ ಜನತೆಗೆ ನೆರವಾಗುವುದರಲ್ಲಿ ಎಳ್ಳಷ್ಟೂ ಸಂಶಯವಿಲ್ಲ. ದಿನಚರ್ಯು, ಋತುಚರ್ಯು, ರಾತ್ರಿಚರ್ಯು, ಸದ್​ವೃತ್ತ, ಸ್ವಸ್ಥವೃತ್ತ, ಆಹಾರ ವಿಹಾರಗಳು, ಆಚಾರ ವಿಚಾರಗಳು ಇವುಗಳನ್ನೆಲ್ಲ ಅತ್ಯಂತ ಶ್ರೇಷ್ಠ ರೀತಿಯಲ್ಲಿ ವೈಜ್ಞಾನಿಕವಾಗಿ ವಿವರಿಸಿರುವ ಆಯುರ್ವೆದದ ಮೊರೆಹೋಗುವುದು ಈಗಿರುವ ಜಾಣತನ. ವೈರಾಣು ರೋಗವೆಂದ ಮೇಲೆ ವ್ಯಾಧಿಯ ತಡೆ ಪೂರ್ಣವಾಗಿ ಸಾಧ್ಯವಿಲ್ಲ. ‘ಆಗಂತುಕ’ನಾಗಿರುವ ವೈರಾಣು ದೇಹದ ಮೇಲೆ ಯಾವುದೇ ಸಂದರ್ಭದಲ್ಲಿ ಪ್ರವೇಶಿಸಲು ಅವಕಾಶವಿದೆ. ನಂತರದ ಪರಿಣಾಮ ಗೌಣವಾಗಿರಬೇಕಾದರೆ ನಮ್ಮ ದೇಹ ಗಟ್ಟಿಯಿರಬೇಕು. ವೈರಾಣುಗಳನ್ನು ದಮನಗೊಳಿಸುವ ಸಾಮರ್ಥ್ಯ ಶರೀರಕ್ಕಿರಬೇಕು. ಇದಕ್ಕಾಗಿ ದೇಹವನ್ನು ಸಕಲ ರೀತಿಯಲ್ಲಿ ಸಜ್ಜುಗೊಳಿಸಲು ಆಯುರ್ವೆದದ ಮೂಲಕ ಸಾಧ್ಯವಿದೆ ಎಂಬುದೇ ನೆಮ್ಮದಿಯ ಸಂಗತಿ. ಇದನ್ನೂ ಓದಿ: ಬೆನ್ನಿನ ಸಾಮರ್ಥ್ಯ ಬಲಪಡಿಸುವ ಯೋಗಾಭ್ಯಾಸ

ಒಮ್ಮೆ ಸಾಂಕ್ರಾಮಿಕವಾಗಿ ಕಾಡಿದ ವ್ಯಾಧಿ ಪೂರ್ತಿಯಾಗಿ ಹೋಗುವುದಿಲ್ಲ. ಅಲ್ಪ ಪ್ರಮಾಣದಲ್ಲಿ ನೆಲೆನಿಲ್ಲುತ್ತದೆ. ಹಾಗೆಂದು ರೋಗವನ್ನು ಮಣಿಸಲು ಅನೇಕ ಮಾಗೋಪಾಯಗಳಿವೆ. ಎಲ್ಲೆಡೆಯೂ ರೋಗವಿದೆಯೆಂದು ಚಡಪಡಿಸುವುದಲ್ಲ. ಬದಲಾಗಿ ಕೆಲಸದತ್ತ ಚಿತ್ತ ನೆಟ್ಟಿರಬೇಕು. ಕಾರ್ಯಗಳಲ್ಲಿ ಎಚ್ಚರ ವಹಿಸಬೇಕು. ರೋಗವನ್ನು ಎದುರಿಸುವ ವೀರತ್ವ ಬೇಕು. ಏಕೆಂದರೆ ಪ್ರಸ್ತುತ ವಿಶ್ವವನ್ನು ದಂಗುಬಡಿಸಿರುವ ವೈರಾಣುವಿನ ಸಮಸ್ಯೆ ವಿಚಿತ್ರ ಸ್ವರೂಪದ್ದು. ಶೇ. 80ಕ್ಕಿಂತ ಹೆಚ್ಚು ಜನರಲ್ಲಿ ಲಕ್ಷಣಗಳೇ ಇಲ್ಲದಿರುವುದು ಈಗಿನ ತಲೆನೋವು. ಇದು ಒಂದು ರೀತಿಯಲ್ಲಿ ಅನುಕೂಲವೂ ಹೌದು. ಕಾಯಿಲೆ ಬಂದವರಿಗೆ ಬಳಲುವಿಕೆ ಇಲ್ಲ ಎಂದರೆ ಅನುಕೂಲವೇ. ಆದರೆ ತೊಂದರೆ ಇರುವುದೂ ಇಲ್ಲೇ! ಲಕ್ಷಣಗಳಿರುವ ರೋಗಗಳಿದ್ದಾಗ ರೋಗಿಯಾಗಲಿ, ನಿಕಟವರ್ತಿಗಳಾಗಲಿ ಎಚ್ಚರ ವಹಿಸುವುದು ಸುಲಭ. ರೋಗ-ರೋಗಿ ಕಾಣುತ್ತಿರುತ್ತಾರೆ. ಇಲ್ಲಿ ಹಾಗಲ್ಲ. ರೋಗ ಯಾರಿಗೆಲ್ಲ ಇದೆ ಎಂಬುದೇ ಗೊತ್ತಿಲ್ಲ! ಸಾರಾಂಶವಿಷ್ಟೇ. ಹೆದರಿಕೆ ಅನಗತ್ಯ, ಎಚ್ಚರಿಕೆ ಅನಿವಾರ್ಯ.

ಕೊನೇ ಹನಿ: ಅಶೋಕಮರದ ಎಲೆಯ ಎರಡು ಚಮಚ ರಸಕ್ಕೆ ಒಂದು ಚಮಚ ಜೀರಿಗೆ ಸೇರಿಸಿ ಕುಡಿದರೆಋತುಕಾಲದ  ಹೊಟ್ಟೆನೋವು ಶಮನ.