ಲೈಫ್‌ಸ್ಟೈಲ್

ಉತ್ತಮ ಮೌಲ್ಯಗಳು ನಮ್ಮದಾಗಲಿ

Webdesk - Manjunatha B
ರಶ್ಮಿ ಹೆಗಡೆ, ಮುಂಬೈ
ಒಂದೂರಿನಲ್ಲಿ ಪತಿ, ಪತ್ನಿ ಹಾಗೂ ಇಬ್ಬರು ಮಕ್ಕಳಿದ್ದ ಬಡಕುಟುಂಬವೊಂದಿತ್ತು. ಮದ್ಯವ್ಯಸನಿಯಾಗಿದ್ದ ಮನೆಯ ಯಜಮಾನ ಪ್ರತಿನಿತ್ಯ ಕುಡಿದು ಬಂದು ಹೆಂಡತಿ, ಮಕ್ಕಳನ್ನು ಹಿಂಸಿಸುತ್ತಿದ್ದ. ಆ ನಿಂದನೆ ಹಾಗೂ ಹಿಂಸೆಯನ್ನು ಅನುಭವಿಸುತ್ತಿದ್ದ ಮಕ್ಕಳೀರ್ವರೂ ತಮ್ಮದೇ ವಿಶಿಷ್ಟ ರೀತಿಯಲ್ಲಿ ಬೆಳೆಯತೊಡಗಿದರು. ಕಿರಿಯ ಮಗ ಕಲಿತು, ವಿದ್ಯಾವಂತನಾಗಿ ಯಶಸ್ವಿ ಉದ್ಯಮಿಯಾದರೆ, ಹಿರಿಯ ಮಗ ವಿದ್ಯೆಯನ್ನು ಅರ್ಧಕ್ಕೇ ನಿಲ್ಲಿಸಿ ಪುಂಡನಾದ. ಒಂದೇ ವಾತಾವರಣದಲ್ಲಿ ಬೆಳೆದ ಇಬ್ಬರು ಮಕ್ಕಳ ವ್ಯಕ್ತಿತ್ವ ಹಾಗೂ ಬೆಳವಣಿಗೆಯಲ್ಲಿ ತುಂಬ ವ್ಯತ್ಯಾಸ ಕಂಡು ಊರಿನವರು ಆಶ್ಚರ್ಯ ಪಟ್ಟಿದ್ದರು.

ಒಂದು ದಿನ ಊರಿನವರು ಹಿರಿಯ ಮಗನನ್ನು ಪ್ರಶ್ನಿಸುತ್ತ, ನಿನ್ನ ತಮ್ಮ ಯಶಸ್ವಿ ಉದ್ಯಮಿಯಾಗಿದ್ದಾನೆ. ನೀನ್ಯಾಕಪ್ಪಾ ಹೀಗೆ ಕುಡುಕನಾಗಿದ್ದೀಯಾ?’ ಎಂದು ಕೇಳಿದರು. ಅದಕ್ಕಾತ, ‘ನಾನು ಹೀಗಾಗಲು ನನ್ನಪ್ಪನೇ ಕಾರಣ. ಚಿಕ್ಕಂದಿನಿಂದಲೂ ನನ್ನ ಮನಸ್ಸು, ದೇಹವನ್ನು ನೋಯಿಸಿ ಹಿಂಸಿಸುತ್ತಿದ್ದ ಅಪ್ಪನ ಬೈಗುಳ, ಹೊಡೆತಗಳು ನನ್ನನ್ನು ಈ ರೀತಿ ಮಾಡಿವೆ. ಈ ಸಮಾಜ ಕುಡುಕನ ಕುಟುಂಬವೆಂದು ನಮ್ಮನ್ನು ತಾತ್ಸಾರದಿಂದ ಕಾಣುತ್ತಿತ್ತು. ನೆಂಟರಿಷ್ಟರ ಇಲ್ಲಸಲ್ಲದ ಅಪವಾದ, ಕೆಟ್ಟ ಹೆಸರು, ತಿರಸ್ಕಾರ ತುಂಬಿದ್ದ ಬಾಲ್ಯ ಮುಂತಾದ ನೋವಿನಿಂದ ಹೊರಬರಲು ಕುಡಿಯತೊಡಗಿದೆ. ಕೊನೆಗೆ ಕುಡಿತವೇ ಜೀವನವಾಯಿತು’ ಎಂದ.

ಅದೇ ರೀತಿ ಕಿರಿಯ ಮಗನನ್ನು ಪ್ರಶ್ನಿಸಿ, ‘ನಿನ್ನ ತಂದೆಯ ಮದ್ಯವ್ಯಸನ ನಿನ್ನ ಜೀವನದ ಅಭಿವೃದ್ಧಿಗೆ ಮಾರಕವಾಗಿಲ್ಲವೇ?’ ಎಂದು ಕೇಳಿದರು. ಅದಕ್ಕಾತ, ‘ಅಪ್ಪ ಕುಡಿದು ಬಂದು ಗಲಾಟೆ ಮಾಡಿ ನಮಗೆಲ್ಲ ಹೊಡೆದಾಗ ಪ್ರತಿ ಹೊಡೆತಕ್ಕೂ ನನ್ನ ಮನಸ್ಸು ರೊಚ್ಚಿಗೇಳುತ್ತಿತ್ತು. ಅಪ್ಪನಂತೆ ನಾನು ಕುಡುಕನಾಗಬಾರದು ಎಂಬ ತೀರ್ವನಕ್ಕೆ ಬಂದೆ. ಸಮಾಜದಿಂದ ನಮಗಾದ ತಿರಸ್ಕಾರ, ಅವಮಾನಾದಿಗಳು ನನ್ನ ಜೀವನದ ಗುರಿಯನ್ನು ಗಟ್ಟಿಗೊಳಿಸುತ್ತ ಹೋಯಿತು. ಗೌರವದಿಂದ ಜೀವನ ಸಾಗಿಸಬೇಕೆಂಬ ಛಲ ಹೊತ್ತು, ಓದಿ ಮುಂದೆ ಬಂದೆ’ ಎಂದ. ಆತನ ತಿಳಿವಳಿಕೆಗೆ ಹಾಗೂ ಜೀವನದೆಡೆಗಿನ ದೃಷ್ಟಿಕೋನಕ್ಕೆ ಜನ ತಲೆಬಾಗಿದರು.

ಜೀವನವೆಂಬ ಪಾಠಶಾಲೆಯಲ್ಲಿ ನೋವು, ಸೋಲು ಹಾಗೂ ಸಮಾಜ ನಮಗೆ ಅನೇಕ ಪಾಠಗಳನ್ನು ಕಲಿಸುತ್ತವೆ. ನಾವು ಆ ಪಾಠವನ್ನು ಯಾವ ರೀತಿಯಲ್ಲಿ ಸ್ವೀಕರಿಸಿ ಮುನ್ನಡೆಯುತ್ತೇವೆ ಎಂಬುದು ಮುಖ್ಯ. ಯಾವುದೇ ವ್ಯಕ್ತಿಯ ಅಭಿವೃದ್ಧಿ ಅಥವಾ ಅವನತಿ ಕೇವಲ ಹುಟ್ಟಿ ಬೆಳೆದ ವಾತಾವರಣ, ಕೌಟುಂಬಿಕ ಪರಿಸ್ಥಿತಿಯನ್ನಷ್ಟೇ ಅವಲಂಬಿಸಿರುವುದಿಲ್ಲ. ಜೀವನದೆಡೆಗಿನ ನಮ್ಮ ದೃಷ್ಟಿಕೋನ, ಚಿಂತನೆ, ವೈಚಾರಿಕ ಸಾಮರ್ಥ್ಯ ಹಾಗೂ ಆಲೋಚನೆಗಳು ನಮ್ಮ ಜೀವನವನ್ನು ರೂಪಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತವೆ. ನಮ್ಮ ಜೀವನ ನಮ್ಮದೇ ಆಂತರಿಕ ಆಲೋಚನೆಗಳ ಪ್ರತಿಬಿಂಬ. ಮನಸ್ಸಿನ ಆಕಾರ, ವಿಕಾರಗಳು ದೇಹವೆಂಬ ಯಂತ್ರವನ್ನು ನಿಯಂತ್ರಿಸುವ ವಿಶೇಷ ಶಕ್ತಿಗಳು. ನಮ್ಮ ಸೋಲಿಗೆ ಅನ್ಯರನ್ನು ತಪ್ಪಿತಸ್ಥರನ್ನಾಗಿಸದೆ, ಸಾಧಿಸುವ ಛಲ, ಆತ್ಮವಿಶ್ವಾಸ, ಸಕಾರಾತ್ಮಕ ನಡೆ ಹಾಗೂ ಉತ್ತಮ ಮೌಲ್ಯಗಳನ್ನು ನಮ್ಮದಾಗಿಸಿಕೊಂಡು ಆದರ್ಶದ ಜೀವನ ಹಾಗೂ ವ್ಯಕ್ತಿತ್ವ ರೂಪಿಸಿಕೊಳ್ಳೋಣ.

(ಲೇಖಕರು ಹವ್ಯಾಸಿ ಬರಹಗಾರರು)