ಲೈಫ್‌ಸ್ಟೈಲ್

ವಿಪತ್ತುಗಳು ಸಫಲತೆಯ ಸನ್ನೆಗಳಾಗಲಿ

|ಮಹಾದೇವ ಬಸರಕೋಡ ಅಮೀನಗಡ
ನಮ್ಮ ದೇಶದ ಶ್ರೇಷ್ಠ ಶೈಕ್ಷಣಿಕ ಸುಧಾರಕರು, ತತ್ವಜ್ಞಾನಿ ಗಳೂ ಆದ ಈಶ್ವರಚಂದ್ರ ವಿದ್ಯಾಸಾಗರ ಅವರು ಕೋಲ್ಕತ್ತಾ ವಿಶ್ವವಿದ್ಯಾಲಯ ಸ್ಥಾಪಿಸುವ ಸಲುವಾಗಿ ಅಯೋಧ್ಯೆಯ ನವಾಬರಿಂದ ದೇಣಿಗೆ ಪಡೆಯಲು ಅವರನ್ನು ಭೇಟಿಯಾದರು. ವಿಶ್ವವಿದ್ಯಾಲಯದ ಸ್ಥಾಪನೆ ಕಾರ್ಯಸೂಚಿಗಳನ್ನು ಅವರಿಗೆ ವಿವರಿಸಿ ದೇಣಿಗೆ ಕೇಳಿದರು. ವಿದ್ಯಾಭ್ಯಾಸ, ವಿಶ್ವವಿದ್ಯಾಲಯಗಳ ಅರಿವು ಇರದ ದಿವಾನರು ಅವರನ್ನು ತಿರಸ್ಕಾರ ಭಾವದಿಂದ ಕಂಡು ತಮ್ಮ ದಿವಾನ್​ಖಾನೆಯ ಮೂಲೆಯತ್ತ ಬೆರಳು ತೋರಿ ನಿಮಗೆ ಅಲ್ಲಿ ಏನು ಕಾಣುತ್ತಿದೆ? ಎಂದು ಕೇಳಿದರು. ಆಗ ವಿದ್ಯಾಸಾಗರರು ಅತ್ಯಂತ ವಿನಯದಿಂದ ನಿಮ್ಮ ಪಾದರಕ್ಷೆಗಳ ಜೋಡಿ ಕಾಣಿಸುತ್ತಿದೆ ಎಂದರು.

ನೀವು ಸ್ಥಾಪಿಸಲು ಬಯಸಿರುವ ವಿಶ್ವವಿದ್ಯಾಲಯಕ್ಕೆ ಅದನ್ನೇ ನನ್ನ ಕಾಣಿಕೆಯಾಗಿ ಕೊಡುತ್ತಿರುವೆ, ಸ್ವೀಕರಿಸಿ ಎಂದು ನವಾಬರು ಹೇಳಿದ. ವಿದ್ಯಾಸಾಗರರು ಅತ್ಯಂತ ಶಾಂತಚಿತ್ತರಾಗಿ, ಮುಗುಳ್ನಗೆ ಬೀರುತ್ತ ನಬಾಬರತ್ತ ನೋಡಿ, ತಮ್ಮ ಹೃದಯ ವೈಶಾಲ್ಯತೆ ಹಾಗೂ ಉದಾರ ದೇಣಿಗೆಗೆ ನಾನು ಅತ್ಯಂತ ಋಣಿಯಾಗಿದ್ದೇನೆ ಎಂದು ಹೇಳಿ ನವಾಬರ ಪಾದರಕ್ಷೆಗಳನ್ನು ತಮ್ಮ ಕೈ ಚೀಲದಲ್ಲಿ ಹಾಕಿಕೊಂಡು ಅಲ್ಲಿಂದ ಹೊರಟುಬಿಟ್ಟರು. ನವಾಬರು ಮತ್ತು ಅಲ್ಲಿಯ ಜನ ವಿದ್ಯಾಸಾಗರರನ್ನು ಆಶ್ಚರ್ಯಚಕಿತರಾಗಿ ನೋಡುತ್ತ ನಿಂತರು. ಕೆಲವು ದಿನಗಳ ನಂತರ ಪತ್ರಿಕೆಗಳಲ್ಲಿ ಇಂದು ಅಯೋಧ್ಯೆಯ ನವಾಬರ ಅತ್ಯಮೂಲ್ಯವಾದ ಪಾದರಕ್ಷೆಗಳನ್ನು ಹರಾಜು ಹಾಕಲಾಗುವುದು. ಆಸಕ್ತರು ಹರಾಜು ಪ್ರಕ್ರಿಯೆಯಲ್ಲಿ ಭಾಗವಹಿಸಬಹುದು ಎಂದು ವಿದ್ಯಾಸಾಗರರು ಜಾಹೀರಾತು ನೀಡಿದರು. ಇದನ್ನು ಗಮನಿಸಿದ ನವಾಬರು ತಮ್ಮ ಪಾದರಕ್ಷೆಗೆ ಹರಾಜಿನಲ್ಲಿ ಒಳ್ಳೆಯ ಬೆಲೆ ಬಾರದಿದ್ದರೆ ಅದು ತಮಗೆ ಅತ್ಯಂತ ಅಪಮಾನದ ಸಂಗತಿ ಎಂದು ಭಾವಿಸಿದರು. ತಮ್ಮ ಅಧಿಕಾರಿಗಳನ್ನು ಮಾರುವೇಷದಲ್ಲಿ ಹರಾಜಿನಲ್ಲಿ ಭಾಗವಹಿಸಲು ಸೂಚಿಸಿ ಅವುಗಳನ್ನು ಒಳ್ಳೆಯ ಬೆಲೆಗೆ ಖರೀದಿಸಲು ನಿರ್ದೇಶನ ನೀಡಿದರು. ಹರಾಜು ಪ್ರಕ್ರಿಯೆ ಪ್ರಾರಂಭವಾಯಿತು. ಹರಾಜಿನಲ್ಲಿ ಬೆಲೆ ಹೆಚ್ಚಿಸುವಂತೆ ನೋಡಿಕೊಳ್ಳಲಾಯಿತು. ಕೊನೆಗೆ ನವಾಬರ ಅಧಿಕಾರಿಗಳೇ ಆ ದಿನಮಾನಗಳಲ್ಲಿ ಬಹಳಷ್ಟು ಮೌಲ್ಯವಿದ್ದ ಹತ್ತು ಸಾವಿರ ರೂಪಾಯಿಗಳಿಗೆ ಖರೀದಿ ಮಾಡಿದರು. ವಿದ್ಯಾಸಾಗರರು ಹತ್ತು ಸಾವಿರ ರೂಪಾಯಿಗಳನ್ನು ಸ್ವೀಕರಿಸಿ ತಮ್ಮ ದೇಣಿಗೆ ಪುಸ್ತಕದಲ್ಲಿ ನಮೂದಿಸಿಕೊಂಡರು.

ಮತ್ತೊಂದು ದಿನ ವಿದ್ಯಾಸಾಗರರು ನವಾಬರ ಬಳಿ ಹೋಗಿ ಅತ್ಯಂತ ವಿನಯದಿಂದ ನವಾಬರೇ, ಬಹುದೊಡ್ಡ ಮೌಲ್ಯದ ಹತ್ತು ಸಾವಿರ ರೂ.ಗಳನ್ನು ವಿಶ್ವವಿದ್ಯಾಲಯ ಸ್ಥಾಪನೆಗೆ ನೀಡಿದ್ದೀರಿ. ತಮ್ಮ ಉದಾರ ದೇಣಿಗೆಗೆ ನಾನು ಋಣಿಯಾಗಿದ್ದೇನೆ. ತಮಗೆ ನಾನು ಮತ್ತೊಮ್ಮೆ ಅತ್ಯಂತ ಹೃದಯಪೂರ್ವಕವಾಗಿ ಅಭಿನಂದನೆ ಸಲ್ಲಿಸುತ್ತೇನೆ ಎಂದರು. ನವಾಬರಿಗೆ ತಮ್ಮ ತಪ್ಪಿನ ಅರಿವಾಗಿತ್ತು. ನಾಚಿಕೆಯಿಂದ ಅವರು ವಿದ್ಯಾಸಾಗರರ ಮುಂದೆ ತಲೆ ತಗ್ಗಿಸಿದರು.

ಯಾವುದೇ ಸನ್ನಿವೇಶವನ್ನು ಅಪಮಾನ, ಸೋಲೆಂದು ಪರಿಭಾವಿಸಿ ಕುಗ್ಗಿಹೋಗುವ ಬದಲಾಗಿ, ಅದನ್ನು ತಮ್ಮ ಮುಂದಿನ ಹಾದಿಯ ಗೆಲುವಿನ ಮೆಟ್ಟಿಲನ್ನಾಗಿ ಪರಿವರ್ತಿಸಿಕೊಳ್ಳುವ ವಿವೇಚನೆ ಬೆಳೆಸಿಕೊಳ್ಳಬೇಕು. ನಾವು ಯಾವುದೇ ಹಿನ್ನಡೆಯನ್ನು ಸಮಸ್ಯೆ ಎಂದು ತಿಳಿಯದೆ ಅದನ್ನು ಇನ್ನೂ ಹೆಚ್ಚಿನದನ್ನು ಸಾಧಿಸುವ ಅವಕಾಶವೆಂದು ತಿಳಿಯಬೇಕು. ನಾವು ಸಂಕಷ್ಟ ಸನ್ನಿವೇಶವನ್ನು ಸ್ವೀಕರಿಸುವ ಮತ್ತು ಅದಕ್ಕೆ ಪ್ರತಿಕ್ರಿಯಿಸುವ ರೀತಿ ನಿಜಕ್ಕೂ ನಮ್ಮ ಜೀವನವನ್ನು ಪ್ರಭಾವಿಸುತ್ತದೆ. ಅದನ್ನು ಅತ್ಯಂತ ವಿವೇಕದಿಂದ ನಿಭಾಯಿಸುವುದು ನಮ್ಮ ನಿತ್ಯದ ನಡೆಯಾಗಬೇಕು.

(ಲೇಖಕರು ಅಧ್ಯಾಪಕರು, ಹವ್ಯಾಸಿ ಬರಹಗಾರರು)