More

    ಸಿನಿಸ್ಟಾರ್‌ಗಳ ಸಮ್ಮುಖದಲ್ಲಿ ಕುಂದಾಪುರ ಕನ್ನಡ ಹಬ್ಬ; ಅಧ್ಯಯನ‌ ಪೀಠದ ಅನುದಾನಕ್ಕಾಗಿ ಒತ್ತಾಯ

    ಬೆಂಗಳೂರು: ಮಂಗಳೂರು ವಿಶ್ವವಿದ್ಯಾಲಯದಲ್ಲಿ ಸ್ಥಾಪನೆ ಆಗಿರುವ ಕುಂದಾಪ್ರ ಕನ್ನಡ ಅಧ್ಯಯನ ಪೀಠಕ್ಕಾಗಿ ಅನುದಾನ ನೀಡುವಂತೆ ಒತ್ತಾಯ ಕುಂದಾಪ್ರ ಕನ್ನಡ ಹಬ್ಬದಲ್ಲಿ ವ್ಯಕ್ತವಾಯಿತು.

    ‘ಕುಂದಾಪ್ರ ಕನ್ನಡ ಪ್ರತಿಷ್ಠಾನ’ವು ‘ವಿಶ್ವ ಕುಂದಾಪುರ ಕನ್ನಡ ದಿನಾಚರಣೆ’ ಪ್ರಯುಕ್ತ ಇಂದು ಬಂಟರ ಸಂಘದಲ್ಲಿ ಹಮ್ಮಿಕೊಂಡಿದ್ದ ‘ಕುಂದಾಪ್ರ ಕನ್ನಡ ಹಬ್ಬ’ದಲ್ಲಿ ಈ ಕುರಿತು‌ ಮನವಿ ನೀಡಲಾಯಿತು. ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಕೆ. ಜಯಪ್ರಕಾಶ ಹೆಗ್ಡೆ ಅವರಿಗೆ ಕುಂದಾಪ್ರ ಕನ್ನಡ ಪ್ರತಿಷ್ಠಾನದವರು ಈ ಮನವಿ ಸಲ್ಲಿಸಿ ಸರ್ಕಾರದಿಂದ ಅನುದಾನ ಕೊಡಿಸುವಂತೆ ಮನವಿ ಮಾಡಿಕೊಂಡರು. 

    ಮನವಿ ಸ್ವೀಕರಿಸಿದ ಜಯಪ್ರಕಾಶ್ ಹೆಗ್ಡೆಯವರು ಕುಂದಾಪ್ರ ಕನ್ನಡ ಅಧ್ಯಯನ ಪೀಠಕ್ಕೆ ಅನುದಾನ ಒದಗಿಸುವ ಕುರಿತ ಈ ಮನವಿ ಮುಖ್ಯಮಂತ್ರಿಯವರಿಗೆ ಒಪ್ಪಿಸಿ, ನಾನು ಕೂಡ ಕೋರಿಕೊಳ್ಳುವುದಾಗಿ ಹೇಳಿದರು. ಕುಂದಾಪುರ ಕನ್ನಡ ಕುರಿತು ಎಲ್ಲರ ಜೊತೆ ಚರ್ಚೆ ಮಾಡಿ ಪರಿಣತರು ತಜ್ಞರನ್ನು ಅಧ್ಯಯನ ಸಮಿತಿಯಲ್ಲಿ ಹಾಕಿಕೊಳ್ಳಲಾಗುವುದು ಎಂದರು. ಊರ ಸನ್ಮಾನಕ್ಕೆ ಪಾತ್ರರಾದ ಪ್ರೊ.ಎ.ವಿ.ನಾವಡ ಅವರು ಕೂಡ ಅನುದಾನ ಒದಗಿಸುವಲ್ಲಿ ವಿಳಂಬ ಆಗುತ್ತಿರುವ ಕುರಿತು ಬೇಸರ ವ್ಯಕ್ತಪಡಿಸಿ, ಸರ್ಕಾರ ಬೇಗ ಅನುದಾನ ನೀಡುವಂತಾಗಬೇಕು ಎಂದು ಆಗ್ರಹಿಸಿದರು.

    ರವಿ ಬಸ್ರೂರು ಅವರು ಊರಿನ ಅಭಿಮಾನದಿಂದ ಅಲ್ಲೇ ಸ್ಟುಡಿಯೋ ಮಾಡಿದ್ದಾರೆ. ಇದರಿಂದ ಊರಿನ ಹುಡುಗರಿಗೆ ಕೆಲಸ ಸಿಗುತ್ತಿರುವುದಲ್ಲದೆ, ಬೇರೆ ಊರಿನವರೂ ನಮ್ಮೂರಿಗೆ ಬರುವಂತಾಗಿರುವುದು ಉತ್ತಮ ಬೆಳವಣಿಗೆ ಎಂದು ಜಯಪ್ರಕಾಶ್ ಹೆಗ್ಡೆ ಮೆಚ್ಚುಗೆ ಸೂಚಿಸಿದರು‌.

    ಕಾಶೀನಾಥ್, ಉಪೇಂದ್ರ, ರಿಷಬ್, ಪ್ರಮೋದ್ ಶೆಟ್ಟಿ ಎಲ್ಲರೂ ಚಿತ್ರರಂಗದಲ್ಲಿ ಸಾಧನೆ ಮಾಡಿದ್ದಾರೆ. ನೀವೆಲ್ಲ ಮಕ್ಕಳಿಗೆ ಬರೀ ವಿದ್ಯಾಭ್ಯಾಸದ ಬಗ್ಗೆ ಮಾತ್ರ ಒತ್ತಾಯ ಮಾಡದೆ ಅವರ ಆಸಕ್ತಿಯ ಕ್ಷೇತ್ರಗಳಲ್ಲಿ ಮುಂದುವರಿಯಲು ಅನುಕೂಲ ಮಾಡಿಕೊಡಿ. ಈ ಸಾಧಕರೆಲ್ಲರೂ ತಮ್ಮ ಆಸಕ್ತಿಯ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿದ್ದರಿಂದ ಮುಂದೆ ಬಂದರು ಎಂದ ಜಯಪ್ರಕಾಶ್ ಹೆಗ್ಡೆ ಕಿವಿಮಾತು ಹೇಳಿದರು.

    ಖ್ಯಾತ ನಟ-ನಿರ್ದೇಶಕ ರಿಷಬ್ ಶೆಟ್ಟಿ ಮಾತನಾಡಿ, ಜೀವ ಕೊಟ್ಟಿದ್ದು ಕುಂದಾಪುರ, ಜೀವನ‌ ಕೊಟ್ಟಿದ್ದು ಬೆಂಗಳೂರು. ಬೆಂಗಳೂರಿಗೆ ಬಂದು ಬದುಕು ಕಟ್ಟಿಕೊಂಡರೂ‌ ನಾವು ಕುಂದಾಪುರ ಭಾಷೆಯನ್ನು ಬಿಡಲಿಲ್ಲ ಎಂದರು.

    ನಮ್ಮೂರು ಕುಂದಾಪುರದ ಕೆರಾಡಿ ಸರ್ಕಾರಿ ಶಾಲೆಯಲ್ಲೇ ಶಿಕ್ಷಕರಿಲ್ಲ. ಮುಖ್ಯಮಂತ್ರಿಯವರು ಬಂದಿದ್ದರೆ ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರಿಲ್ಲದಿರುವ ಕುರಿತು ಗಮನ ತರಬೇಕಂತಿದ್ದೆ. ಅವರು ಬರಲಿಲ್ಲ, ಈ ವಿಷಯ ಅವರಿಗೆ ಮಾಧ್ಯಮದ ಮೂಲಕ ತಲುಪಿ ಪರಿಹಾರ ಒದಗುತ್ತದೆ ಅಂತ ಆಶಿಸುತ್ತೇನೆ ಎಂದು ರಿಷಬ್ ಶೆಟ್ಟಿ ಹೇಳಿದರು.

    kundapura kannada habba

    ಕನ್ನಡ ಚಿತ್ರರಂಗಕ್ಕೆ ಕುಂದಾಪುರದ ಕೊಡುಗೆ ದೊಡ್ಡದು. ಆಗಷ್ಟೇ ಮಾತನಾಡಿದ ಉಪೇಂದ್ರ ಅವರು ನನ್ನ ಗುರು ಕಾಶಿನಾಥ್ ಎಂದರು. ಅವರಿಬ್ಬರೂ ಕುಂದಾಪುರದವರು. ಉಪೇಂದ್ರ ಅವರಿಗೆ ಕಾಶೀನಾಥ್ ಗುರುವಾದರೆ ನಮಗೆ ಉಪೇಂದ್ರ ಅವರು ಗುರುಗಳು‌. ಅವರಿಂದ ಸ್ಫೂರ್ತಿಗೊಂಡೇ ಚಿತ್ರರಂಗಕ್ಕೆ ಬಂದೆ, ನಮ್ಮೂರಿನಿಂದ ಇನ್ನಷ್ಟು ಮಂದಿ ಚಿತ್ರರಂಗಕ್ಕೆ ಬರುವಂತಾಗಲಿ, ನಿಮ್ಮ ಈ ಬೆಂಬಲ ಇದೇ ರೀತಿ ಇರಲಿ, ಇನ್ನಷ್ಟು ಸಿನಿಮಾ ಮಾಡುವ ಶಕ್ತಿ ಬರುತ್ತದೆ ಎಂದು ರಿಷಬ್ ಶೆಟ್ಟಿ ಹೇಳಿದರು. 

    ಇದನ್ನೂ ಓದಿ: ಜೋರಾಯ್ತು ವರುಣನ ಅಬ್ಬರ, ತುಂಗಾ ಜಲಾಶಯದ 21 ಕ್ರಸ್ಟ್​ ಗೇಟ್​ ಓಪನ್

    ನಟ-ನಿರ್ದೇಶಕ ರಾಜ್ ಬಿ. ಶೆಟ್ಟಿ ಮಾತನಾಡಿ, ಆರು ತಿಂಗಳು ಕುಂದಾಪುರ ಪ್ರದೇಶದಲ್ಲಿ ಕೆಲಸ ಮಾಡಿದ್ದೆ, ಅಲ್ಲಿನ ಭಾಷೆ ಸ್ವಲ್ಪ ಕಲಿತಿದ್ದೆ ಎಂದರು. ಒಂದು ಭಾಷೆಯ ಹಬ್ಬ ಮುಖ್ಯ. ಕುಂದಾಪುರದ ಭಾಷೆಯಲ್ಲಿ ಒಂದು ವೇಗ, ಒಂದು ಜೋರು ಇದೆ ಎನ್ನುತ್ತ ಅದಕ್ಕೆ ಕಾರಣವನ್ನು ವಿಶ್ಲೇಷಿದರು. ಕುಂದಾಪುರದವರ ಯಶಸ್ಸಿಗೆ ಅವರ ಭಾಷೆ ಕಾರಣ ಎಂದ ರಾಜ್ ಬಿ. ಶೆಟ್ಟಿ, ಅದು ಅಲ್ಲಿನ ಮಕ್ಕಳ ಮಾನಸಿಕ ಬೆಳವಣಿಗೆಯಲ್ಲಿ ಹೇಗೆ ಪಾತ್ರ ವಹಿಸುತ್ತದೆ ಎಂಬುದನ್ನೂ ಹೇಳಿದರು. ಅಲ್ಲದೆ ಕುಂದಾಪುರದ ಜನರು ತಮ್ಮ ಮಕ್ಕಳಿಗೆ ಕುಂದಾಪುರ ಭಾಷೆ ಕಲಿಸಿ ಮಾತನಾಡುವಂತೆ ಮಾಡುವ ಮೂಲಕ ಅವರ ಯಶಸ್ಸಿಗೆ ಕಾರಣರಾಗಬಹುದು ಎಂದರು.

    ಖ್ಯಾತ ಸಂಗೀತ ನಿರ್ದೇಶಕ ರವಿ ಬಸ್ರೂರು ಮಾತನಾಡಿ,  ಮೊದಲು ನಾವೆಲ್ಲ ಬೆಂಗಳೂರಿಗೆ ಬಂದಾಗ ಯಾವ ಊರು ಕೇಳಿದರೆ ಮೊದಲು ಮಂಗಳೂರು ಎನ್ನುತ್ತಿದ್ದೆವು. ಮಂಗಳೂರಲ್ಲಿ ಎಲ್ಲಿ ಕೇಳಿದರೆ ಉಡುಪಿ ಎನ್ನುತ್ತಿದ್ದೆವು, ಉಡುಪಿಯಲ್ಲಿ ಎಲ್ಲಿ ಕೇಳಿದರೆ ಆಗ ಕುಂದಾಪುರ ಅಂತ ಹೇಳುತ್ತಿದ್ದೆವು. ಆಮೇಲೆ ನಾನು ಊರು ಯಾವುದು ಕೇಳಿದರೆ ಮೊದಲು ಬಸ್ರೂರು ಅಂತ ಹೇಳುತ್ತಿದ್ದೆ, ಬಸ್ರೂರು ಎಲ್ಲಿ ಕೇಳಿದರೆ ಕುಂದಾಪುರ, ಕುಂದಾಪುರ ಎಲ್ಲಿ ಕೇಳಿದರೆ ಉಡುಪಿ, ಉಡುಪಿ ಎಲ್ಲಿ ಕೇಳಿದರೆ ಮಂಗಳೂರು ಎನ್ನಲಾರಂಭಿಸಿದೆ. ಹೀಗೆ ಬದಲಾವಣೆ ತಂದುಕೊಂಡೆ ಎಂದರು. ನೀವೆಲ್ಲ ಕುಂದಾಪುರ ಕನ್ನಡ ಮಾತನಾಡಲು ಹಿಂಜರಿಯಬೇಡಿ, ಮುಜುಗರವಿಲ್ಲದೆ ಮಾತನಾಡಿ ಎಂದರು.

    ನಟ ಪ್ರಮೋದ್ ಶೆಟ್ಟಿ ಮಾತನಾಡಿ, ನಾನು ಬೆಂಗಳೂರಲ್ಲೇ ಹುಟ್ಟಿ ಇಲ್ಲೇ ಬೆಳೆದರೂ ಕುಂದಾಪುರ ಕನ್ನಡ ಮಾತಾಡುತ್ತಿರುವುದಕ್ಕೆ ನನ್ನ ತಂದೆ-ತಾಯಿಯೇ ಕಾರಣ.ಇಲ್ಲಿರುವ ತಾಯಂದಿರು ತಮ್ಮ ಮಕ್ಕಳಿಗೆ ಕುಂದಾಪುರ ಕನ್ನಡ ಭಾಷೆ ಕಲಿಸಿ ಅಂತ ಕೇಳುತ್ತೇನೆ ಎಂದರು. ಅರೆಹೊಟ್ಟೆ, ಅರೆಭಾಷೆ, ಅರೆಬಟ್ಟೆ ಎಂದು ಕುಂದಾಪುರವನ್ನು ಉಪೇಂದ್ರರವರು ಉತ್ತಮವಾಗಿ ವ್ಯಾಖ್ಯಾನಿಸಿದ್ದನ್ನು ನೆನಪಿಸಿಕೊಂಡರು.

    ಇಡೀ ದಿನ ನಡೆದ ಈ ಕುಂದಾಪ್ರ ಕನ್ನಡ ಹಬ್ಬಕ್ಕೆ ಬೆಳಗ್ಗೆ ಕುಂದಾಪುರ ಶಾಸಕ ಕಿರಣ್ ಕೊಡ್ಗಿ, ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ, ಕಂಬಳ ಕ್ಷೇತ್ರದ ಧುರೀಣ  ಶಾಂತರಾಮ ಶೆಟ್ಟಿ ಬಾರ್ಕೂರು ಅವರು ಚಾಲನೆ ನೀಡಿದರು.

    ಊರಿನ ಸಾಧಕರಾದ ಖ್ಯಾತ ಸಂಗೀತ ನಿರ್ದೇಶಕ ರವಿ ಬಸ್ರೂರು, ಪ್ರೊ.ಎ.ವಿ.ನಾವಡ ಅವರನ್ನು ಸನ್ಮಾನಿಸಲಾಯಿತು. ಇಡೀ ದಿನ ವಿವಿಧ ಸಾಂಸ್ಕೃತಿಕ-ಮನೋರಂಜನಾ ಕಾರ್ಯಕ್ರಮಗಳಿದ್ದು, ಕುಂದಾಪ್ರ ಸಂಸ್ಕೃತಿ, ಭಾಷೆ-ಬದುಕಿನ ಅನಾವರಣವಾಯಿತು.

    ಕುಂದಾಪ್ರ ಕನ್ನಡ ಪ್ರತಿಷ್ಠಾನದ ಗೌರವಾಧ್ಯಕ್ಷ ಪ್ರಮೋದಚಂದ್ರ ಭಂಡಾರಿ, ಅಧ್ಯಕ್ಷ ಎಂ. ಮುರಳೀಧರ ಹೆಗ್ಡೆ, ಉಪಾಧ್ಯಕ್ಷ ನರಸಿಂಹ ಬೀಜಾಡಿ, ಕಾರ್ಯದರ್ಶಿ ರಾಘವೇಂದ್ರ ಕಾಂಚನ್, ಕೋಶಾಧಿಕಾರಿ ವಿಜಯ್ ಶೆಟ್ಟಿ ಹಾಲಾಡಿ, ಜಂಟಿ ಕಾರ್ಯದರ್ಶಿ ಅಜಿತ್ ಶೆಟ್ಟಿ ಉಳ್ತೂರು ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts