ಲೈಫ್‌ಸ್ಟೈಲ್

ನಿತ್ಯವೂ ಈರುಳ್ಳಿ ಚಹಾ ಕುಡಿದರೆ ಏನಾಗುತ್ತೆ ಗೊತ್ತಾ? ಇಲ್ಲಿದೆ ನೋಡಿ ಅಚ್ಚರಿಯ ಮಾಹಿತಿ | Onion Tea

Onion Tea : ಈರುಳ್ಳಿ ಇಲ್ಲದ ಅಡುಗೆ ಮನೆಯೇ ಇಲ್ಲ. ಯಾವುದೇ ಅಡುಗೆ ಮಾಡಲಿ ಅಲ್ಲಿ ಈರುಳ್ಳಿಯನ್ನು ತಪ್ಪದೇ ಬಳಸುತ್ತಾರೆ. ಒಗ್ಗರಣೆ ಹಾಕುವಾಗಲಂತೂ ಈರುಳ್ಳಿ ಬೇಕೇ ಬೇಕು. ಕೇವಲ ರುಚಿಗೆ ಮಾತ್ರವಲ್ಲ ಆರೋಗ್ಯ ಮತ್ತು ಸೌಂದರ್ಯಕ್ಕೂ ಈರುಳ್ಳಿ ತುಂಬಾನೇ ಒಳ್ಳೆಯದು. ಮಿಕ್ಸಿಯಲ್ಲಿ ರುಬ್ಬಿ ಅಥವಾ ಸಣ್ಣ ಸಣ್ಣ ತುಂಡುಗಳಾಗಿ ಕತ್ತರಿಸಿ ಸಾಂಬಾರ್​ ಸೇರಿದಂತೆ ಇನ್ನಿತರ ಆಹಾರ ಪದಾರ್ಥಗಳನ್ನು ಸಿದ್ಧಪಡಿಸುತ್ತಾರೆ ಎಂಬುದು ಎಲ್ಲರಿಗು ಗೊತ್ತು. ಆದರೆ, ಈರುಳ್ಳಿಯಿಂದ ಚಹಾ ಮಾಡಬಹುದು ಅನ್ನೋದು ಗೊತ್ತಿದೆಯಾ?

ಅಧಿಕ ಕೊಲೆಸ್ಟ್ರಾಲ್ ಇಂದು ಪ್ರತಿಯೊಬ್ಬರ ಸಮಸ್ಯೆಯಾಗಿದೆ. ಅನಾರೋಗ್ಯಕರ ಜೀವನಶೈಲಿ ಮತ್ತು ಕೆಟ್ಟ ಆಹಾರ ಪದ್ಧತಿ ಇದಕ್ಕೆ ಮುಖ್ಯ ಕಾರಣ. ಆಹಾರದ ವಿಷಯದಲ್ಲಿ ಅನೇಕ ಜನರು ರುಚಿಯನ್ನು ಮಾತ್ರ ಬಯಸುತ್ತಾರೆ. ಆರೋಗ್ಯ ಮತ್ತು ಪೌಷ್ಟಿಕಾಂಶದ ಮೌಲ್ಯಗಳ ಬಗ್ಗೆ ಗಮನವಹಿಸುವುದೇ ಇಲ್ಲ. ಎಣ್ಣೆ ಪದಾರ್ಥಗಳ ಅತಿಯಾದ ಸೇವನೆ ಮತ್ತು ವ್ಯಾಯಾಮದ ಕೊರತೆಯಿಂದ ಕೊಲೆಸ್ಟ್ರಾಲ್ ಸಮಸ್ಯೆ ಉಂಟಾಗುತ್ತಿದೆ. ಇದು ಅನೇಕ ಅವಘಡಗಳಿಗೂ ಕಾರಣವಾಗುತ್ತದೆ. ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಲು ಈರುಳ್ಳಿ ಚಹಾವನ್ನು ಕುಡಿಯಬಹುದು ಎನ್ನುತ್ತಾರೆ ತಜ್ಞರು.

ಅಧಿಕ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಲು ಈರುಳ್ಳಿ ಚಹಾ ತುಂಬಾ ಪ್ರಯೋಜನಕಾರಿಯಾಗಿದೆ. ಪುದೀನಾ, ಕ್ಯಾಮೊಮೈಲ್, ದಾಸವಾಳದಂತಹ ಕೆಲವು ವಿಶೇಷ ರೀತಿಯ ಚಹಾಗಳ ಬಗ್ಗೆ ನೀವು ಕೇಳಿರಬಹುದು. ಆದರೆ, ಈರುಳ್ಳಿ ಚಹಾ ತುಂಬಾ ಅಪರೂಪ. ಇದು ರುಚಿಯಲ್ಲಿ ಸ್ವಲ್ಪ ಕಹಿಯಾಗಿರುತ್ತದೆ. ಆದಾಗ್ಯೂ, ಇದು ಹೃದಯದ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು. ಅಧಿಕ ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಏಕೆಂದರೆ, ಈರುಳ್ಳಿಯು ಕಡಿಮೆ ಸಾಂದ್ರತೆಯ ಲಿಪೊಪ್ರೋಟೀನ್‌ಗೆ ಸಹಾಯ ಮಾಡುವ ಫ್ಲೇವನಾಯ್ಡ್‌ಗಳನ್ನು ಹೊಂದಿರುತ್ತದೆ.

ಈರುಳ್ಳಿ ಚಹಾದ ಆರೋಗ್ಯ ಪ್ರಯೋಜನಗಳು

ಈರುಳ್ಳಿಯು ಕೆಲವು ಫ್ಲೇವನಾಯ್ಡ್‌ಗಳು ಮತ್ತು ಪಾಲಿಫಿನಾಲ್‌ಗಳನ್ನು ಹೊಂದಿರುತ್ತದೆ. ಇವೆರಡೂ ಉತ್ತಮ ಉತ್ಕರ್ಷಣ ನಿರೋಧಕಗಳಾಗಿ ಕಾರ್ಯನಿರ್ವಹಿಸುತ್ತವೆ ಮತ್ತು ರಕ್ತನಾಳಗಳನ್ನು ಆರೋಗ್ಯವಾಗಿಡುತ್ತವೆ. ಆಕ್ಸಿಡೇಟಿವ್ ಹಾನಿಯಿಂದ ರಕ್ತನಾಳಗಳ ಗೋಡೆಗಳನ್ನು ರಕ್ಷಿಸಲು ಕೆಲಸ ಮಾಡುತ್ತವೆ. ಈರುಳ್ಳಿ ಚಹಾದಲ್ಲಿನ ಉತ್ಕರ್ಷಣ ನಿರೋಧಕಗಳು ಮತ್ತು ಅವುಗಳ ಸಂಯುಕ್ತಗಳು ಉರಿಯೂತದ ವಿರುದ್ಧ ಹೋರಾಡುತ್ತವೆ ಮತ್ತು ಟ್ರೈಗ್ಲಿಸರೈಡ್‌ಗಳನ್ನು ಕಡಿಮೆ ಮಾಡುತ್ತದೆ. ಅಲ್ಲದೆ, ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುತ್ತವೆ. ಇದರಿಂದಾಗಿ ಹೃದ್ರೋಗದ ಅಪಾಯವನ್ನು ಮತ್ತಷ್ಟು ಕಡಿಮೆಯಾಗುತ್ತದೆ. ಅಧಿಕ ರಕ್ತದೊತ್ತಡವನ್ನು ಕಡಿಮೆ ಮಾಡಲು ಮತ್ತು ರಕ್ತ ಹೆಪ್ಪುಗಟ್ಟುವಿಕೆಯನ್ನು ತಡೆಯಲು ಸಹಾಯ ಮಾಡುತ್ತದೆ.

ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುವಲ್ಲಿ ಈರುಳ್ಳಿ ಚಹಾ ದೊಡ್ಡ ಜಾದೂ ಮಾಡುತ್ತದೆ. ಏಕೆಂದರೆ ಇದು ದೇಹದಲ್ಲಿ ಕೆಟ್ಟ ಲಿಪಿಡ್‌ಗಳು ಸಂಗ್ರಹವಾಗುವುದನ್ನು ತಡೆಯುತ್ತದೆ. ಅಲ್ಲದೆ, ಇದು ಒಳ್ಳೆಯ ಕೊಲೆಸ್ಟ್ರಾಲ್ ಅನ್ನು ಉತ್ತೇಜಿಸುತ್ತದೆ. ಇದನ್ನು ಕುಡಿಯುವುದರಿಂದ ರಕ್ತನಾಳಗಳೂ ಶುದ್ಧವಾಗುತ್ತವೆ.

ಈರುಳ್ಳಿ ಚಹಾ ( Onion Tea ) ವನ್ನು ಹೇಗೆ ತಯಾರಿಸುವುದು

ಈರುಳ್ಳಿ ಟೀ ಮಾಡುವುದು ಕಷ್ಟದ ಕೆಲಸವೇನಲ್ಲ. ಮೊದಲು ಈರುಳ್ಳಿಯನ್ನು ಕತ್ತರಿಸಿ 2 ಕಪ್ ನೀರಿಗೆ ಹಾಕಿ ಚೆನ್ನಾಗಿ ಕುದಿಸಿ. ಪಾತ್ರೆಯಲ್ಲಿ ನೀರು ಅರ್ಧವಾಗುವವರೆಗೆ ಕುದಿಸಿ. ಇದಾದ ನಂತರ, ನೀರನ್ನು ಒಂದು ಕಪ್​ಗೆ ಸೋಸಿಕೊಂಡು ಅದಕ್ಕೆ ಸ್ವಲ್ಪ ಜೇನುತುಪ್ಪ ಮತ್ತು ನಿಂಬೆ ರಸವನ್ನು ಮಿಶ್ರಣ ಮಾಡಿ ಬೆಚ್ಚಗಿರುವಾಗ ಕುಡಿಯಿರಿ. ನೀವು ಇದನ್ನು ಬೆಳಿಗ್ಗೆ ಅಥವಾ ಸಂಜೆ ಯಾವುದೇ ಸಮಯದಲ್ಲಿ ಕುಡಿಯಬಹುದು.

ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಲ್ಲಿ ದೊರೆತ ಮಾಹಿತಿ ಆಧಾರದ ಮೇಲೆ ಸಂಗ್ರಹಿಸಲಾಗಿದ್ದು, ಇದು ಕೇವಲ ಜಾಗೃತಿಗಾಗಿ ಮಾತ್ರ. ಇದನ್ನು ವಿಜಯವಾಣಿ.ನೆಟ್​ ದೃಢೀಕರಿಸುವುದಿಲ್ಲ. ಇದನ್ನು ಅನುಸರಿಸುವ ಮೊದಲು ವೈದ್ಯರ ಸಲಹೆಯನ್ನು ತೆಗೆದುಕೊಳ್ಳುವುದು ಯಾವಾಗಲೂ ಉತ್ತಮ.