Brain Activity: ರಾತ್ರಿ ನೆಮ್ಮದಿಯಾಗಿ ನಿದ್ರಿಸುತ್ತಿರುವಾಗ ಇದ್ದಕ್ಕಿದ್ದಂತೆ ಭಯಾನಕ ಕನಸು ಬೀಳುತ್ತದೆ. ಯಾರೋ ನಮ್ಮನ್ನು ಬೆನ್ನಟ್ಟುತ್ತಿದ್ದಾರೆ, ಅಪಾಯ ಎದುರಾಗಿದೆ, ಎತ್ತರದಿಂದ ಕೆಳಗೆ ಬೀಳುತ್ತಿದ್ದೇವೆ ಅಥವಾ ಪರಿಚಯವಿಲ್ಲದ ಜಾಗದಲ್ಲಿ ಸಿಲುಕಿಕೊಂಡಿದ್ದೇವೆ ಎಂಬ ಅನುಭವವಾಗುತ್ತದೆ. ಕನಸಿನಲ್ಲಿಯೇ ಜೋರಾಗಿ ಕಿರುಚಲು ಪ್ರಯತ್ನಿಸಿದರೂ ಧ್ವನಿ ಹೊರಬರುವುದಿಲ್ಲ. ಕೆಲವೊಮ್ಮೆ ಬೆವರುತ್ತಾ, ಎದೆ ಬಡಿತ ಹೆಚ್ಚಿಸಿಕೊಂಡು ದಿಢೀರ್ ಎಚ್ಚರವಾಗುತ್ತೇವೆ. ಎಚ್ಚರವಾದ ಮೇಲೂ ಆ ಭಯ ಸ್ವಲ್ಪ ಸಮಯದವರೆಗೆ ಕಾಡುತ್ತದೆ. ಅಷ್ಟಕ್ಕೂ ನಿದ್ದೆಯಲ್ಲಿರುವಾಗ ಇಂತಹ ಭಯಾನಕ ಕನಸುಗಳು ಬೀಳಲು ಕಾರಣವೇನು? ಆ ಸಮಯದಲ್ಲಿ ನಮ್ಮ ಮೆದುಳಿನಲ್ಲಿ ಏನಾಗುತ್ತಿರುತ್ತದೆ? ಮೆದುಳು ಆಡುವ ಆಟದ ಬಗ್ಗೆ ನಿಮಗೆ ಗೊತ್ತಾ? ಈ ಕುರಿತಾದ ಒಂದು ಉಪಯುಕ್ತ ಮಾಹಿತಿ ಇಲ್ಲಿದೆ.
ನಮ್ಮ ನಿದ್ರೆಯಲ್ಲಿ ಗಾಢ ನಿದ್ರೆ ಮತ್ತು ಹಗುರವಾದ ನಿದ್ರೆ ಎಂಬ ಎರಡು ಪ್ರಮುಖ ಹಂತಗಳಿವೆ. ಇವು ರಾತ್ರಿ ಪೂರ್ತಿ ಚಕ್ರದಂತೆ ಬದಲಾಗುತ್ತಿರುತ್ತವೆ. ಸಾಮಾನ್ಯವಾಗಿ ನಿದ್ರೆ ಆರಂಭವಾದ ಸುಮಾರು 90 ನಿಮಿಷಗಳ ನಂತರ ಮೊದಲ ಗಾಢ ನಿದ್ರೆ ಹಂತ ಕಾಣಿಸಿಕೊಳ್ಳುತ್ತದೆ. ಈ ಸಮಯದಲ್ಲಿ ಕಣ್ಣುಗಳು ವೇಗವಾಗಿ ಚಲಿಸುತ್ತವೆ ಮತ್ತು ಮೆದುಳಿನ ಚಟುವಟಿಕೆ ಹೆಚ್ಚಾಗಿರುತ್ತದೆ. ಸ್ಪಷ್ಟವಾದ ಹಾಗೂ ನೈಜ ಅನುಭವ ನೀಡುವ ಕನಸುಗಳು ಹೆಚ್ಚಾಗಿ ಈ ಹಂತದಲ್ಲಿ ಕಾಣಿಸಿಕೊಳ್ಳುತ್ತವೆ.
ಈ ಸಮಯದಲ್ಲಿ ಮೆದುಳು ಸಕ್ರಿಯವಾಗಿದ್ದರೂ ದೇಹದ ಬಹುತೇಕ ಸ್ನಾಯುಗಳ ಚಲನೆ ತಾತ್ಕಾಲಿಕವಾಗಿ ನಿಯಂತ್ರಣದಲ್ಲಿರುತ್ತದೆ. ಇದರಿಂದ ನಾವು ಕನಸಿನಲ್ಲಿ ಓಡಾಡಿದರೂ ನಿಜ ಜೀವನದಲ್ಲಿ ಅದೇ ರೀತಿ ಚಲಿಸುವುದಿಲ್ಲ. ಹೀಗೆ ನಿದ್ರೆಯಲ್ಲಿರುವಾಗ ದೇಹಕ್ಕೆ ವಿಶ್ರಾಂತಿ ದೊರೆಯುವಂತೆ ಮೆದುಳು ವ್ಯವಸ್ಥೆ ಮಾಡುತ್ತದೆ.
ಮೆದುಳಿನಲ್ಲಿ ಅಮಿಗ್ಡಾಲಾ ಎಂಬ ಪ್ರಮುಖ ಭಾಗವಿದೆ. ಇದು ಭಯ, ಆತಂಕ ಸೇರಿದಂತೆ ವಿವಿಧ ಭಾವನೆಗಳನ್ನು ಸಂಸ್ಕರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ನಿದ್ರೆಯಲ್ಲಿಯೂ ಭಾವನೆಗಳಿಗೆ ಸಂಬಂಧಿಸಿದ ಮೆದುಳಿನ ಚಟುವಟಿಕೆ ಮುಂದುವರಿಯುತ್ತದೆ. ವಿಶೇಷವಾಗಿ ಗಾಢನಿದ್ರೆಯ ಸಮಯದಲ್ಲಿ ಅಮಿಗ್ಡಾಲಾ ಸೇರಿದಂತೆ ನೆನಪು ಮತ್ತು ಭಾವನೆಗಳಿಗೆ ಸಂಬಂಧಿಸಿದ ಮೆದುಳಿನ ಭಾಗಗಳು ಸಕ್ರಿಯವಾಗಿರುತ್ತವೆ. ಹೀಗಾಗಿ ಭಯ, ಆತಂಕ ಅಥವಾ ಹಿಂದಿನ ಅನುಭವಗಳಿಗೆ ಸಂಬಂಧಿಸಿದ ನೆನಪುಗಳು ಕನಸಿನ ರೂಪದಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆಯಿದೆ. ಆದರೆ ಭಯಾನಕ ಕನಸುಗಳು ರೂಪುಗೊಳ್ಳಲು ಇದೇ ಒಂದೇ ಕಾರಣ ಎಂದು ಹೇಳಲು ಸಾಧ್ಯವಿಲ್ಲ. ಈ ಪ್ರಕ್ರಿಯೆಯ ಕುರಿತು ವಿಜ್ಞಾನಿಗಳು ಇನ್ನೂ ಅಧ್ಯಯನ ನಡೆಸುತ್ತಿದ್ದಾರೆ.
ಹೌದು, ಕೆಲವು ಸಂದರ್ಭಗಳಲ್ಲಿ ಹಗಲಿನ ಮಾನಸಿಕ ಒತ್ತಡ ರಾತ್ರಿ ಕನಸುಗಳ ಮೇಲೂ ಪರಿಣಾಮ ಬೀರಬಹುದು. ಕೆಲಸದ ಒತ್ತಡ, ಕುಟುಂಬದ ಸಮಸ್ಯೆಗಳು, ಭವಿಷ್ಯದ ಚಿಂತೆ, ಆತಂಕ ಅಥವಾ ಯಾವುದಾದರೂ ಕಹಿ ಅನುಭವಗಳು ಮನಸ್ಸಿನಲ್ಲಿ ಉಳಿದಿರಬಹುದು. ಇಂತಹ ಭಾವನೆಗಳು ನಿದ್ರೆಯ ಸಮಯದಲ್ಲಿ ಕನಸುಗಳ ರೂಪದಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆಯಿದೆ. ಅಲ್ಲದೆ, ಮಲಗುವ ಮೊದಲು ಭಯಾನಕ ಸಿನಿಮಾ ನೋಡುವುದು, ಅಪರಾಧ ಸುದ್ದಿಗಳನ್ನು ಓದುವುದು ಅಥವಾ ಆತಂಕ ಮೂಡಿಸುವ ದೃಶ್ಯಗಳನ್ನು ವೀಕ್ಷಿಸುವುದು ಕೆಲವರಲ್ಲಿ ಕೆಟ್ಟ ಕನಸುಗಳಿಗೆ ಪ್ರಚೋದನೆ ನೀಡಬಹುದು. ನಿದ್ರೆಯ ಕೊರತೆ, ಕೆಲವು ಔಷಧಿಗಳ ಅಡ್ಡಪರಿಣಾಮಗಳು ಮತ್ತು ನಿದ್ರೆಗೆ ಸಂಬಂಧಿಸಿದ ಸಮಸ್ಯೆಗಳೂ ಭಯಾನಕ ಕನಸುಗಳಿಗೆ ಕಾರಣವಾಗಬಹುದು.
ಕೆಲವರಿಗೆ ಕನಸಿನಲ್ಲಿ ಅಪಾಯ ಎದುರಾದಾಗ ಓಡಲು ಪ್ರಯತ್ನಿಸಿದರೂ ಕಾಲುಗಳು ಚಲಿಸುವುದಿಲ್ಲ. ಕಿರುಚಲು ಪ್ರಯತ್ನಿಸಿದರೂ ಧ್ವನಿ ಹೊರಬರುವುದಿಲ್ಲ. ಇದಕ್ಕೆ ಗಾಢ ನಿದ್ರೆಯ ಸಮಯದಲ್ಲಿ ದೇಹದ ಸ್ನಾಯುಗಳ ಚಲನೆ ತಾತ್ಕಾಲಿಕವಾಗಿ ನಿಯಂತ್ರಣದಲ್ಲಿರುವುದು ಒಂದು ಕಾರಣ. ಆದರೆ ಕನಸಿನಲ್ಲಿ ಇಂತಹ ಅನುಭವವಾಗುವುದಕ್ಕೆ ಇದೇ ಏಕೈಕ ಕಾರಣವಲ್ಲ. ಇನ್ನು ಕೆಲವರು ನಿದ್ರೆಯಿಂದ ಎಚ್ಚರವಾಗುವ ಸಮಯದಲ್ಲಿ ದೇಹವನ್ನು ಅಲುಗಾಡಿಸಲು ಅಥವಾ ಮಾತನಾಡಲು ಸಾಧ್ಯವಾಗದ ಅನುಭವ ಎದುರಿಸುತ್ತಾರೆ. ಇದನ್ನು ಸ್ಲೀಪ್ ಪ್ಯಾರಾಲಿಸಿಸ್ ಎಂದು ಕರೆಯಲಾಗುತ್ತದೆ. ಈ ಸ್ಥಿತಿಯಲ್ಲಿ ವ್ಯಕ್ತಿಗೆ ಎಚ್ಚರವಾಗಿರುವ ಅರಿವು ಇದ್ದರೂ ಕೆಲಕಾಲ ದೇಹವನ್ನು ಚಲಿಸಲು ಸಾಧ್ಯವಾಗುವುದಿಲ್ಲ. ಇದು ಸಾಮಾನ್ಯ ಭಯಾನಕ ಕನಸಿಗಿಂತ ಭಿನ್ನವಾದ ನಿದ್ರೆಯ ಸ್ಥಿತಿಯಾಗಿದೆ.
ಒಮ್ಮೊಮ್ಮೆ ಭಯಾನಕ ಕನಸು ಬೀಳುವುದು ಸಾಮಾನ್ಯ. ಆದರೆ, ಪದೇಪದೆ ಕೆಟ್ಟ ಕನಸುಗಳು ಬಂದು ನಿದ್ರೆ ಹಾಳಾಗುತ್ತಿದ್ದರೆ ಕೆಲವು ಅಭ್ಯಾಸಗಳಲ್ಲಿ ಬದಲಾವಣೆ ಮಾಡಿಕೊಳ್ಳುವುದು ಉತ್ತಮ. ಪ್ರತಿದಿನ ನಿಗದಿತ ಸಮಯಕ್ಕೆ ಮಲಗುವುದು, ಸಾಕಷ್ಟು ನಿದ್ರೆ ಮಾಡುವುದು ಮತ್ತು ಮಲಗುವ ಮುನ್ನ ಮೊಬೈಲ್‌ನಲ್ಲಿ ಆತಂಕಕಾರಿ ಸುದ್ದಿಗಳು ಹಾಗೂ ಭಯಾನಕ ದೃಶ್ಯಗಳನ್ನು ನೋಡುವುದನ್ನು ಕಡಿಮೆ ಮಾಡುವುದು ಸಹಾಯಕವಾಗಬಹುದು.
ಭಯಾನಕ ಕನಸುಗಳು ನಿರಂತರವಾಗಿ ಕಾಡಿ ನಿದ್ರೆ, ಮನಸ್ಥಿತಿ ಅಥವಾ ದೈನಂದಿನ ಜೀವನದ ಮೇಲೆ ಪರಿಣಾಮ ಬೀರುತ್ತಿದ್ದರೆ ವೈದ್ಯರು ಅಥವಾ ನಿದ್ರಾ ತಜ್ಞರನ್ನು ಸಂಪರ್ಕಿಸುವುದು ಸೂಕ್ತ.ಒಟ್ಟಿನಲ್ಲಿ, ಭಯಾನಕ ಕನಸುಗಳು ಕೇವಲ ಕಲ್ಪನೆಯಲ್ಲ. ನಿದ್ರೆಯ ಸಮಯದಲ್ಲಿ ಮೆದುಳಿನಲ್ಲಿ ನಡೆಯುವ ಸಂಕೀರ್ಣ ಚಟುವಟಿಕೆಗಳು, ಭಾವನೆಗಳು ಮತ್ತು ನೆನಪುಗಳು ಇವುಗಳೊಂದಿಗೆ ಸಂಬಂಧ ಹೊಂದಿರಬಹುದು, (ಏಜೆನ್ಸೀಸ್).