Psychology Facts : ಬಾಲ್ಯದಲ್ಲಿ ಅನೇಕ ಮಕ್ಕಳು ತಮ್ಮದೇ ಆದ ಕಾಲ್ಪನಿಕ ಜಗತ್ತನ್ನು ಸೃಷ್ಟಿಸಿಕೊಳ್ಳುತ್ತಾರೆ. ಅಲ್ಲಿ ಅವರಿಗೆ ಕಾಣದ ಗೆಳೆಯರಿರುತ್ತಾರೆ, ಅವರೊಂದಿಗೆ ಮಾತನಾಡುತ್ತಾರೆ, ಆಟವಾಡುತ್ತಾರೆ, ಕೆಲವೊಮ್ಮೆ ತಮ್ಮ ರಹಸ್ಯಗಳನ್ನೂ ಹಂಚಿಕೊಳ್ಳುತ್ತಾರೆ. ಮನೆಯವರಿಗೆ ಆ ಗೆಳೆಯರು ಕಾಣಿಸದಿದ್ದರೂ ಮಕ್ಕಳಿಗೆ ಮಾತ್ರ ಅವರು ನಿಜವಾಗಿಯೇ ತಮ್ಮ ಪಕ್ಕದಲ್ಲಿರುವಂತೆ ಭಾಸವಾಗುತ್ತದೆ. ವಯಸ್ಸು ಹೆಚ್ಚಾದಂತೆ ಈ ಕಲ್ಪನೆಯ ಸ್ನೇಹಿತರು ನಿಧಾನವಾಗಿ ಮರೆಯಾಗುತ್ತಾರೆ. ಆದರೆ, ಬಾಲ್ಯದಲ್ಲಿ ಇಂತಹ ಕಾಲ್ಪನಿಕ ಗೆಳೆಯರನ್ನು ಹೊಂದಿದ್ದ ಅನುಭವಕ್ಕೂ, ದೊಡ್ಡವರಾದ ಬಳಿಕ ಒಬ್ಬರೇ ಇರುವಾಗಲೂ ಯಾರೋ ತಮ್ಮ ಪಕ್ಕದಲ್ಲಿದ್ದಾರೆ ಎಂಬ ವಿಚಿತ್ರ ಭಾವನೆಗೂ ಸಂಬಂಧವಿರಬಹುದೇ? ಇತ್ತೀಚಿನ ವೈಜ್ಞಾನಿಕ ಅಧ್ಯಯನವೊಂದು ಇಂತಹ ಕುತೂಹಲಕಾರಿ ಪ್ರಶ್ನೆಯನ್ನು ಮುಂದಿಟ್ಟಿದೆ.
ಟರ್ಕಿಯ ಇಜ್ಮಿರ್ ಯೂನಿವರ್ಸಿಟಿ ಆಫ್ ಎಕನಾಮಿಕ್ಸ್ಗೆ ಸಂಬಂಧಿಸಿದ ಸಂಶೋಧಕರು ಈ ವಿಷಯವನ್ನು ಅಧ್ಯಯನ ಮಾಡಿದ್ದಾರೆ. ಮಾನಸಿಕ ಅಥವಾ ನರಮಂಡಲಕ್ಕೆ ಸಂಬಂಧಿಸಿದ ಯಾವುದೇ ಕಾಯಿಲೆಯ ಇತಿಹಾಸವಿಲ್ಲದ 185 ವಯಸ್ಕರನ್ನು ಅಧ್ಯಯನಕ್ಕೆ ಒಳಪಡಿಸಲಾಗಿತ್ತು. ಇವರಲ್ಲಿ 45 ಮಂದಿ ತಮ್ಮ ಬಾಲ್ಯದಲ್ಲಿ ಕಾಲ್ಪನಿಕ ಸ್ನೇಹಿತರನ್ನು ಹೊಂದಿದ್ದಾಗಿ ನೆನಪಿಸಿಕೊಂಡಿದ್ದಾರೆ. ಸಂಶೋಧಕರು ಭಾಗವಹಿಸಿದ ಎಲ್ಲರಿಗೂ ಕಳೆದ ಒಂದು ತಿಂಗಳ ಅವಧಿಯಲ್ಲಿ ಯಾವುದೇ ಸ್ಪಷ್ಟವಾದ ದೃಶ್ಯ ಅಥವಾ ಶ್ರವಣ ಆಧಾರವಿಲ್ಲದಿದ್ದರೂ ತಮ್ಮ ಸಮೀಪದಲ್ಲಿ ಯಾರೋ ಇದ್ದಾರೆ ಎಂಬ ಅನುಭವ ಎಷ್ಟು ಬಾರಿ ಆಗಿದೆ ಎಂಬುದನ್ನು ತಿಳಿಯುವ ಪ್ರಶ್ನಾವಳಿಯನ್ನು ನೀಡಿದ್ದರು.
ಇದರಲ್ಲಿ ಬಾಲ್ಯದಲ್ಲಿ ಕಾಲ್ಪನಿಕ ಸ್ನೇಹಿತರನ್ನು ಹೊಂದಿದ್ದವರು ಸರಾಸರಿ 25.51 ಅಂಕಗಳನ್ನು ಪಡೆದರೆ, ಅಂತಹ ಅನುಭವವಿಲ್ಲದವರು 20.07 ಅಂಕಗಳನ್ನು ಪಡೆದಿದ್ದರು. ಈ ಅಂಕಗಳನ್ನು 15ರಿಂದ 75ರವರೆಗಿನ ಮಾಪಕದಲ್ಲಿ ಲೆಕ್ಕಹಾಕಲಾಗಿತ್ತು. ಹೆಚ್ಚಿನ ಅಂಕಗಳು ಇಂತಹ ಅನುಭವ ಹೆಚ್ಚು ಬಾರಿ ಉಂಟಾಗಿರುವುದನ್ನು ಸೂಚಿಸುತ್ತವೆ. ಅಂದರೆ, ಬಾಲ್ಯದಲ್ಲಿ ಕಾಲ್ಪನಿಕ ಸ್ನೇಹಿತರನ್ನು ಹೊಂದಿದ್ದಾಗಿ ನೆನಪಿಸಿಕೊಂಡ ವಯಸ್ಕರಲ್ಲಿ ಯಾರೋ ತಮ್ಮ ಸಮೀಪದಲ್ಲಿದ್ದಾರೆ ಎಂಬ ಭಾವನೆ ತುಸು ಹೆಚ್ಚಾಗಿ ಕಂಡುಬಂದಿದೆ.
ಈ ಸಂಶೋಧನೆಯ ಮತ್ತೊಂದು ಕುತೂಹಲಕಾರಿ ಅಂಶವೆಂದರೆ, ಬಾಲ್ಯದಲ್ಲಿ ಮಕ್ಕಳು ತಮ್ಮ ಕಾಲ್ಪನಿಕ ಸ್ನೇಹಿತರನ್ನು ಕಲ್ಪಿಸಿಕೊಳ್ಳುತ್ತಿದ್ದ ಸ್ಥಳ. ಸಂಶೋಧನೆಯಲ್ಲಿ ಭಾಗವಹಿಸಿದವರು ತಮ್ಮ ಕಾಲ್ಪನಿಕ ಸ್ನೇಹಿತರು ಸಾಮಾನ್ಯವಾಗಿ ತಮ್ಮ ಮುಂದೆ ಅಥವಾ ಪಕ್ಕದಲ್ಲಿ ಇರುತ್ತಿದ್ದರು ಎಂದು ನೆನಪಿಸಿಕೊಂಡಿದ್ದಾರೆ. ಒಟ್ಟು 114 ದೂರದ ಅಂದಾಜುಗಳಲ್ಲಿ 76 ಅಂದಾಜುಗಳು ದೇಹದಿಂದ 70 ಸೆಂಟಿಮೀಟರ್ ಒಳಗಿನ ಅಂತರವನ್ನು ಸೂಚಿಸಿದ್ದವು.
ಇದಕ್ಕೆ ವಿಜ್ಞಾನದಲ್ಲಿ ಪೆರಿಪರ್ಸನಲ್ ಸ್ಪೇಸ್ ಎಂದು ಕರೆಯಲಾಗುತ್ತದೆ. ಅಂದರೆ, ನಮ್ಮ ದೇಹದ ಸುತ್ತಲಿನ ಸಮೀಪದ ಪ್ರದೇಶ. ನಾವು ಕೈ ಚಾಚುವುದು, ವಸ್ತುಗಳನ್ನು ಮುಟ್ಟುವುದು, ಚಲಿಸುವುದು ಅಥವಾ ಇನ್ನೊಬ್ಬ ವ್ಯಕ್ತಿಯೊಂದಿಗೆ ಸಂವಹನ ನಡೆಸುವಾಗ ಮೆದುಳು ಈ ಜಾಗವನ್ನು ಗುರುತಿಸಿ ಪ್ರತಿಕ್ರಿಯಿಸುತ್ತದೆ. ಕಾಲ್ಪನಿಕ ಸ್ನೇಹಿತರಿಗೂ ಈ ಜಾಗಕ್ಕೂ ಸಂಬಂಧವಿರಬಹುದು ಎಂಬುದು ಸಂಶೋಧಕರ ಅಭಿಪ್ರಾಯ. ನಮ್ಮ ಮೆದುಳು ದೇಹದ ಸುತ್ತಲಿನ ಜಾಗವನ್ನು ಹೇಗೆ ಗುರುತಿಸುತ್ತದೆ ಎಂಬುದೇ, ಕಾಣದ ವ್ಯಕ್ತಿಯೊಬ್ಬರು ನಮ್ಮ ಪಕ್ಕದಲ್ಲಿದ್ದಾರೆ ಎಂಬ ಅನುಭವಕ್ಕೆ ಕಾರಣವಾಗಿರಬಹುದೆಂದು ಅವರು ಊಹಿಸಿದ್ದಾರೆ.
ಇದಕ್ಕೆ ಸಂಬಂಧಿಸಿದಂತೆ ಹಿಂದಿನ ರೋಬೋಟ್ ಪ್ರಯೋಗಗಳೂ ಗಮನ ಸೆಳೆದಿವೆ. ಆ ಪ್ರಯೋಗಗಳಲ್ಲಿ ಭಾಗವಹಿಸಿದವರು ತಮ್ಮ ಕೈಗಳನ್ನು ಚಲಿಸುವಾಗ ರೋಬೋಟ್ ಅವರ ಬೆನ್ನನ್ನು ಸ್ಪರ್ಶಿಸುವಂತೆ ವ್ಯವಸ್ಥೆ ಮಾಡಲಾಗಿತ್ತು. ಕೈ ಚಲನೆ ಮತ್ತು ಬೆನ್ನಿನ ಸ್ಪರ್ಶದ ನಡುವೆ ಸಂಶೋಧಕರು ಸ್ವಲ್ಪ ಸಮಯದ ವಿಳಂಬವನ್ನು ಉಂಟುಮಾಡಿದ್ದರು.ಈ ಸಂದರ್ಭದಲ್ಲಿ ಕೆಲವರಿಗೆ ತಮ್ಮ ಹಿಂದೆ ಮತ್ತೊಬ್ಬ ವ್ಯಕ್ತಿ ನಿಂತಿರುವಂತೆ ಅನುಭವವಾಗಿತ್ತು. ದೇಹದಿಂದ ಬರುವ ಸಂಕೇತಗಳಲ್ಲಿ ಉಂಟಾಗುವ ವ್ಯತ್ಯಾಸದಿಂದ ಮೆದುಳು ತನ್ನದೇ ದೇಹದ ಚಲನೆಯಿಂದ ಉಂಟಾದ ಸಂವೇದನೆಯನ್ನು ಬೇರೊಬ್ಬರ ಉಪಸ್ಥಿತಿಯೆಂದು ತಪ್ಪಾಗಿ ಅರ್ಥೈಸಿರಬಹುದು ಎಂಬುದು ಸಂಶೋಧಕರ ವಿವರಣೆ.
ಈ ಅಧ್ಯಯನದ ಫಲಿತಾಂಶಗಳು ಯಾವುದೇ ಅತೀಂದ್ರಿಯ ಶಕ್ತಿಗಳು ಅಥವಾ ದೆವ್ವಗಳ ಅಸ್ತಿತ್ವಕ್ಕೆ ಸಾಕ್ಷಿಯಲ್ಲ. ಬದಲಾಗಿ, ಮನುಷ್ಯನ ಮೆದುಳು ತನ್ನ ದೇಹ ಮತ್ತು ಸುತ್ತಮುತ್ತಲಿನ ಜಾಗವನ್ನು ಹೇಗೆ ಗ್ರಹಿಸುತ್ತದೆ ಎಂಬುದನ್ನು ಅರ್ಥಮಾಡಿಕೊಳ್ಳಲು ನೆರವಾಗುವ ಸುಳಿವುಗಳನ್ನು ನೀಡುತ್ತವೆ. ಆದರೆ, ಈ ಸಂಶೋಧನೆಗೆ ಕೆಲವು ಮಿತಿಗಳೂ ಇವೆ. ಭಾಗವಹಿಸಿದವರು ತಮ್ಮ ಬಾಲ್ಯದ ಅನುಭವಗಳನ್ನು ವರ್ಷಗಳ ನಂತರ ನೆನಪಿಸಿಕೊಂಡು ಉತ್ತರಿಸಿದ್ದಾರೆ. ಹೀಗಾಗಿ ನೆನಪಿನ ವ್ಯತ್ಯಾಸಗಳು ಫಲಿತಾಂಶದ ಮೇಲೆ ಪ್ರಭಾವ ಬೀರಿರಬಹುದು. ಅಲ್ಲದೆ, ಸಂಶೋಧಕರು ಮಕ್ಕಳನ್ನು ಬಾಲ್ಯದಿಂದಲೇ ಬೆಳೆದು ದೊಡ್ಡವರಾಗುವವರೆಗೆ ನಿರಂತರವಾಗಿ ಗಮನಿಸಿರಲಿಲ್ಲ. ಆದ್ದರಿಂದ ಕಾಲ್ಪನಿಕ ಸ್ನೇಹಿತರೇ ಮುಂದೆ ಇಂತಹ ಅನುಭವಗಳಿಗೆ ಕಾರಣವಾಗುತ್ತಾರೆ ಎಂದು ಖಚಿತವಾಗಿ ಹೇಳಲು ಸಾಧ್ಯವಿಲ್ಲ.
ಬಾಲ್ಯದ ಕಾಲ್ಪನಿಕ ಜಗತ್ತು ಮತ್ತು ವಯಸ್ಕರ ಮನಸ್ಸಿನಲ್ಲಿ ಮೂಡುವ ವಿಚಿತ್ರ ಉಪಸ್ಥಿತಿಯ ಭಾವನೆಗಳ ನಡುವೆ ಸಂಬಂಧವಿರಬಹುದೆಂಬ ಹೊಸ ಸಂಶೋಧನಾ ಚರ್ಚೆಗೆ ಈ ಅಧ್ಯಯನ ನಾಂದಿ ಹಾಡಿದೆ. ಬಾಲ್ಯದಲ್ಲಿ ನಮ್ಮೊಂದಿಗೆ ಆಟವಾಡುತ್ತಿದ್ದ ಆ ಕಾಣದ ಗೆಳೆಯರು ನಿಜಕ್ಕೂ ಕೇವಲ ಕಲ್ಪನೆಯೇ? ಅಥವಾ ನಮ್ಮ ಮೆದುಳು ಜಗತ್ತನ್ನು ಗ್ರಹಿಸುವ ರೀತಿಯ ಬಗ್ಗೆ ತಿಳಿಸುವ ಮತ್ತೊಂದು ಕುತೂಹಲಕಾರಿ ಸುಳಿವೇ? ಈ ಪ್ರಶ್ನೆಗೆ ಉತ್ತರ ಕಂಡುಕೊಳ್ಳಲು ಇನ್ನಷ್ಟು ದೀರ್ಘಕಾಲೀನ ಸಂಶೋಧನೆಗಳ ಅಗತ್ಯವಿದೆ, (ಏಜೆನ್ಸೀಸ್).