Diwali celebration : ದೀಪಾವಳಿಯ ಸಂದರ್ಭದಲ್ಲಿ ಲಕ್ಷ್ಮೀದೇವಿಗಾಗಿ ಹಣತೆ ಹಚ್ಚುವುದು ಎಲ್ಲರಿಗೂ ತಿಳಿದಿರುವ ವಿಚಾರ. ಆದರೆ, ಇದೇ ಹಬ್ಬದ ಸಂದರ್ಭದಲ್ಲಿ ಸಾವಿನ ಅಧಿಪತಿ ಯಮನ ಹೆಸರಿನಲ್ಲೂ ವಿಶೇಷ ದೀಪವನ್ನು ಬೆಳಗಿಸಲಾಗುತ್ತದೆ. ಅಕಾಲಿಕ ಮರಣದ ಭಯ ದೂರವಾಗಲಿ, ಕುಟುಂಬಕ್ಕೆ ದೀರ್ಘಾಯುಷ್ಯ ದೊರೆಯಲಿ ಎಂಬ ನಂಬಿಕೆಯ ಹಿಂದೆ ರಾಜಕುಮಾರಿಯೊಬ್ಬಳ ಬುದ್ಧಿವಂತಿಕೆಯ ಕಥೆ ನಿಮಗೆ ಗೊತ್ತೆ? ದೀಪಾವಳಿಯ ಆಚರಣೆಗಳಲ್ಲಿ ಸಾವಿನ ಅಧಿಪತಿ ಎಂದೇ ಕರೆಯಲ್ಪಡುವ ಯಮನಿಗೂ ವಿಶೇಷ ಸ್ಥಾನವಿದೆ ಎಂಬುದು ಅನೇಕರಿಗೆ ತಿಳಿದಿಲ್ಲ. ಸಾಮಾನ್ಯವಾಗಿ ಸಂಪತ್ತು ಮತ್ತು ಸಮೃದ್ಧಿಗಾಗಿ ದೀಪ ಹಚ್ಚುವ ನಾವು, ಅಕಾಲಿಕ ಮರಣದಿಂದ ಕುಟುಂಬವನ್ನು ರಕ್ಷಿಸಲಿ ಎಂಬ ಪ್ರಾರ್ಥನೆಯೊಂದಿಗೆ ಯಮನಿಗೂ ದೀಪ ಅರ್ಪಿಸುವ ಸಂಪ್ರದಾಯವಿದೆ. ಇದನ್ನು ಯಮದೀಪ ಅಥವಾ ಯಮ ದೀಪದಾನ ಎಂದು ಕರೆಯಲಾಗುತ್ತದೆ.
ಈ ಸಂಪ್ರದಾಯದ ಹಿಂದೆ ಒಂದು ಕುತೂಹಲಕಾರಿ ಪೌರಾಣಿಕ ಕಥೆಯಿದೆ. ಅದರ ಪ್ರಕಾರ, ಹಿಮ ಎಂಬ ರಾಜನಿಗೆ ಬಹಳ ವರ್ಷಗಳ ನಂತರ ಗಂಡು ಮಗು ಜನಿಸುತ್ತದೆ. ಮಗನ ಜನನದಿಂದ ಇಡೀ ಅರಮನೆಯಲ್ಲಿ ಸಂಭ್ರಮ ಮನೆಮಾಡಿರುತ್ತದೆ. ಆದರೆ, ಜ್ಯೋತಿಷಿಗಳು ಮಗುವಿನ ಭವಿಷ್ಯವನ್ನು ಪರಿಶೀಲಿಸಿದಾಗ ಒಂದು ಆತಂಕಕಾರಿ ಸಂಗತಿಯನ್ನು ತಿಳಿಸುತ್ತಾರೆ. ಆ ರಾಜಕುಮಾರ ಮದುವೆಯಾದ ನಾಲ್ಕನೇ ದಿನವೇ ಹಾವಿನ ಕಡಿತದಿಂದ ಸಾವಿಗೀಡಾಡುತ್ತಾನೆ ಎಂಬ ಭವಿಷ್ಯವಾಣಿ ಮಾಡುತ್ತಾರೆ.
ಈ ವಿಚಾರ ರಾಜನಿಗೆ ತೀವ್ರ ದುಃಖ ಉಂಟುಮಾಡುತ್ತದೆ. ಮಗನನ್ನು ಸಾವಿನಿಂದ ರಕ್ಷಿಸಲು ಸಾಧ್ಯವಿರುವ ಎಲ್ಲ ಪ್ರಯತ್ನಗಳನ್ನೂ ಮಾಡುತ್ತಾನೆ. ಆದರೆ, ವಿಧಿಯ ಬರಹವನ್ನು ಬದಲಿಸಲು ಸಾಧ್ಯವಿಲ್ಲ ಎಂಬ ಆತಂಕ ಆತನನ್ನು ಕಾಡುತ್ತಿರುತ್ತದೆ. ಕಾಲಕ್ರಮೇಣ ರಾಜಕುಮಾರ ಬೆಳೆದು ವಿವಾಹವಾಗುತ್ತಾನೆ. ಮದುವೆಯಾದ ನಾಲ್ಕನೇ ದಿನ ಸಮೀಪಿಸುತ್ತಿದ್ದಂತೆ ಆತನ ಪತ್ನಿಗೆ ಭವಿಷ್ಯವಾಣಿಯ ವಿಚಾರ ತಿಳಿಯುತ್ತದೆ.
ತನ್ನ ಪತಿಯನ್ನು ಸಾವಿನಿಂದ ರಕ್ಷಿಸಲು ನಿರ್ಧರಿಸಿದ ರಾಜಕುಮಾರಿ ಒಂದು ಉಪಾಯ ಮಾಡುತ್ತಾಳೆ. ಮದುವೆಯಾದ ನಾಲ್ಕನೇ ದಿನ ರಾತ್ರಿ ಪತಿ ಮಲಗದಂತೆ ನೋಡಿಕೊಳ್ಳಲು ನಿರ್ಧರಿಸುತ್ತಾಳೆ. ಅರಮನೆಯ ಬಾಗಿಲ ಬಳಿ ಚಿನ್ನ, ಬೆಳ್ಳಿ ಆಭರಣಗಳು ಮತ್ತು ನಾಣ್ಯಗಳನ್ನು ರಾಶಿಯಾಗಿ ಜೋಡಿಸುತ್ತಾಳೆ. ಮನೆಯ ಸುತ್ತಲೂ ನೂರಾರು ದೀಪಗಳನ್ನು ಬೆಳಗಿಸುತ್ತಾಳೆ. ರಾತ್ರಿ ಪೂರ್ತಿ ಪತಿಗೆ ಕಥೆಗಳನ್ನು ಹೇಳುತ್ತಾ, ಹಾಡುಗಳನ್ನು ಹಾಡುತ್ತಾ ಎಚ್ಚರವಾಗಿರುವಂತೆ ಮಾಡುತ್ತಾಳೆ.
ಅಂದು ರಾತ್ರಿ ಯಮನು ಹಾವಿನ ರೂಪದಲ್ಲಿ ರಾಜಕುಮಾರನ ಪ್ರಾಣವನ್ನು ತೆಗೆದುಕೊಳ್ಳಲು ಬರುತ್ತಾನೆ. ಆದರೆ ಮನೆಯ ಸುತ್ತಲೂ ಬೆಳಗುತ್ತಿದ್ದ ದೀಪಗಳ ಪ್ರಕಾಶ ಮತ್ತು ಚಿನ್ನಾಭರಣಗಳ ಹೊಳಪಿನಿಂದ ಆತನ ಕಣ್ಣುಗಳು ಮಂಜಾಗುತ್ತವೆ. ರಾಜಕುಮಾರಿಯ ಹಾಡು ಮತ್ತು ಕಥೆಗಳಿಂದ ರಾತ್ರಿ ಕಳೆಯುತ್ತದೆ. ಹೀಗಾಗಿ ಯಮನಿಗೆ ರಾಜಕುಮಾರನ ಬಳಿಗೆ ಹೋಗಲು ಸಾಧ್ಯವಾಗುವುದಿಲ್ಲ ಎಂಬುದು ಜನಪ್ರಿಯ ಧನ್ತೇರಸ್ ಕಥೆಯಲ್ಲಿನ ವಿವರಣೆ. ಬೆಳಗಾಗುವ ಹೊತ್ತಿಗೆ ಯಮನು ಅಲ್ಲಿಂದ ಹಿಂದಿರುಗುತ್ತಾನೆ. ಹೀಗೆ ರಾಜಕುಮಾರಿಯ ಬುದ್ಧಿವಂತಿಕೆ ಮತ್ತು ದೀಪಗಳ ಬೆಳಕು ರಾಜಕುಮಾರನ ಜೀವವನ್ನು ಉಳಿಸಿತು ಎಂಬ ನಂಬಿಕೆಯಿದೆ.
ಈ ಕಥೆಯ ನೆನಪಿಗಾಗಿ ಧನತ್ರಯೋದಶಿಯಂದು ಯಮನ ಹೆಸರಿನಲ್ಲಿ ದೀಪ ಬೆಳಗಿಸುವ ಸಂಪ್ರದಾಯ ಆರಂಭವಾಯಿತು ಎಂಬುದು ಜನಪ್ರಿಯ ನಂಬಿಕೆ. ಕಾರ್ತಿಕ ಮಾಸದ ಕೃಷ್ಣ ಪಕ್ಷದ ತ್ರಯೋದಶಿಯಂದು ಸಂಜೆ ಮನೆಯ ಮುಖ್ಯ ಬಾಗಿಲಿನ ಹೊರಭಾಗದಲ್ಲಿ ಮಣ್ಣಿನ ಹಣತೆಯನ್ನು ಬೆಳಗಿಸಲಾಗುತ್ತದೆ. ಇದನ್ನು ಯಮದೀಪ ಎಂದು ಕರೆಯುತ್ತಾರೆ.
ಕೆಲವು ಸಂಪ್ರದಾಯಗಳಲ್ಲಿ ಹಣತೆಯನ್ನು ದಕ್ಷಿಣ ದಿಕ್ಕಿಗೆ ಮುಖಮಾಡಿ ಇಡಲಾಗುತ್ತದೆ. ಹಿಂದೂ ಧಾರ್ಮಿಕ ನಂಬಿಕೆಗಳ ಪ್ರಕಾರ ದಕ್ಷಿಣ ದಿಕ್ಕು ಯಮನ ದಿಕ್ಕು ಎಂದು ಪರಿಗಣಿಸಲಾಗಿದೆ. ಕೆಲವು ಕುಟುಂಬಗಳಲ್ಲಿ ಎಳ್ಳೆಣ್ಣೆ ಅಥವಾ ಸಾಸಿವೆ ಎಣ್ಣೆಯಿಂದ ದೀಪ ಬೆಳಗಿಸಿದರೆ, ಇನ್ನೂ ಕೆಲವು ಕಡೆ ಹದಿಮೂರು ಹಣತೆಗಳನ್ನು ಹಚ್ಚುವ ಪದ್ಧತಿಯೂ ಇದೆ. ಆದರೆ ಆಚರಣೆಯ ವಿಧಾನಗಳು ಪ್ರದೇಶ ಮತ್ತು ಕುಟುಂಬದ ಸಂಪ್ರದಾಯಗಳಿಗೆ ಅನುಗುಣವಾಗಿ ಬದಲಾಗುತ್ತವೆ.
ಯಮದೀಪದಾನದ ಹಿಂದಿರುವ ಪ್ರಮುಖ ಉದ್ದೇಶ ಅಕಾಲಿಕ ಮರಣದಿಂದ ರಕ್ಷಣೆ ದೊರೆಯಲಿ, ಮನೆಯ ಸದಸ್ಯರಿಗೆ ಉತ್ತಮ ಆರೋಗ್ಯ ಮತ್ತು ದೀರ್ಘಾಯುಷ್ಯ ಲಭಿಸಲಿ ಎಂದು ಪ್ರಾರ್ಥಿಸುವುದಾಗಿದೆ. ಧನ್ತೇರಸ್ ದಿನದಂದು ಯಮನಿಗಾಗಿ ಬೆಳಗಿಸುವ ಈ ದೀಪವು ಜೀವನದ ಅಮೂಲ್ಯತೆಯನ್ನು ನೆನಪಿಸುವ ಸಂಕೇತವಾಗಿಯೂ ಕಾಣಬಹುದು.
ದೀಪದ ಬೆಳಕು ಕತ್ತಲೆಯನ್ನು ದೂರ ಮಾಡುವಂತೆ, ಬದುಕಿನಲ್ಲಿ ಭಯ ಮತ್ತು ಅನಿಶ್ಚಿತತೆಯನ್ನು ಎದುರಿಸುವ ಧೈರ್ಯವನ್ನು ಈ ಕಥೆ ಸಾರುತ್ತದೆ. ರಾಜಕುಮಾರಿಯ ಬುದ್ಧಿವಂತಿಕೆ, ಪ್ರೀತಿ ಮತ್ತು ಎಚ್ಚರಿಕೆಯ ಮನೋಭಾವವೇ ಈ ಪೌರಾಣಿಕ ಕಥೆಯ ಮತ್ತೊಂದು ಸಂದೇಶವಾಗಿದೆ. ಹೀಗಾಗಿ ದೀಪಾವಳಿಯ ದೀಪಗಳು ಕೇವಲ ಸಂಪತ್ತು ಮತ್ತು ಸಮೃದ್ಧಿಯ ಸಂಕೇತವಲ್ಲ, ಬದುಕಿನ ಬಗ್ಗೆ ಕಾಳಜಿ ವಹಿಸುವುದನ್ನೂ ನೆನಪಿಸುತ್ತವೆ.