ಸೀತೆ ಕೈಗೆ ಖಡ್ಗ ಕೊಟ್ಟು ಯುದ್ಧ ಭೂಮಿಗೆ ಇಳಿಸಿದ್ದಕ್ಕೆ ನೆಟ್ಟಿಗರ ಆಕ್ರೋಶ: ರಾಮಾಯಣ ತಿರುಚಿದ್ರಾ? ನಿರ್ದೇಶಕರ ಸ್ಪಷ್ಟನೆ ಏನು? Ramayana

ಪ್ರೇಕ್ಷಕರ ಪೈಕಿ ಕೆಲವರು ಈ ದೃಶ್ಯಾವಳಿಯನ್ನು ಸಮರ್ಥಿಸಿಕೊಂಡು ಮಾತನಾಡಿದ್ದಾರೆ. ವಾಲ್ಮೀಕಿ ರಾಮಾಯಣದ ಜತೆಗೆ ಭಾರತೀಯ ಪರಂಪರೆಯಲ್ಲಿ ಹಲವು ಆವೃತ್ತಿಗಳಿದ್ದು, 'ಅದ್ಭುತ ರಾಮಾಯಣ' ಎಂಬ ಗ್ರಂಥದಲ್ಲಿ ಸೀತಾಮಾತೆಯನ್ನು ಮಹಾಶಕ್ತಿಯಾಗಿ ಹಾಗೂ ಅಸುರ ಸಂಹಾರಿಣಿಯಾಗಿ ಚಿತ್ರಿಸಲಾಗಿದೆ ಎಂಬುದನ್ನು ಬೊಟ್ಟು ಮಾಡಿದ್ದಾರೆ.
Ramayana
ಸೀತೆ ಕೈಗೆ ಖಡ್ಗ ಕೊಟ್ಟು ಯುದ್ಧ ಭೂಮಿಗೆ ಇಳಿಸಿದ್ದಕ್ಕೆ ನೆಟ್ಟಿಗರ ಆಕ್ರೋಶ: ರಾಮಾಯಣ ತಿರುಚಿದ್ರಾ?
Published on: 

ಮುಂಬೈ: ನಿತೇಶ್ ತಿವಾರಿ ನಿರ್ದೇಶನದ ಹಾಗೂ ರಣಬೀರ್​ ಕಪೂರ್​, ಯಶ್​ ಮತ್ತು ಸಾಯಿ ಪಲ್ಲವಿ ನಟನೆಯ ಬಿಗ್​ ಬಜೆಟ್‌ 'ರಾಮಾಯಣ' ( Ramayana ) ಸಿನಿಮಾ ಇಂದು ಚಿತ್ರಮಂದಿರಗಳಿಗೆ ಅದ್ಧೂರಿಯಾಗಿ ಲಗ್ಗೆ ಇಟ್ಟಿದೆ. ಈ ಸಿನಿಮಾಗೆ ಒಂದೆಡೆ ಪಾಸಿಟಿವ್​ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿದ್ರೆ, ಮತ್ತೊಂದೆಡೆ ಕೆಲ ದೃಶ್ಯಗಳ ವಿರುದ್ಧ ವಿವಾದವೂ ಸೃಷ್ಟಿಯಾಗಿದೆ. ಚಿತ್ರದಲ್ಲಿ ಸೀತೆಯ ಪಾತ್ರದಲ್ಲಿ ನಟಿಸಿರುವ ಸಾಯಿ ಪಲ್ಲವಿ ಅವರು ಅರಣ್ಯದಲ್ಲಿ ರಾಕ್ಷಸರ ವಿರುದ್ಧ ಶ್ರೀರಾಮನ ಜತೆಗೂಡಿ ಖಡ್ಗ ಹಿಡಿದು ಯುದ್ಧ ಮಾಡುವ ದೃಶ್ಯಗಳನ್ನು ನೋಡುತ್ತಿದ್ದಂತೆ ಸಾಮಾಜಿಕ ಜಾಲತಾಣಗಳಲ್ಲಿ ನೆಟ್ಟಿಗರು ಕಟು ಟೀಕೆ ವ್ಯಕ್ತಪಡಿಸುತ್ತಿದ್ದಾರೆ. ಪವಿತ್ರ ಗ್ರಂಥಗಳಲ್ಲಿ ಸೀತಾಮಾತೆ ಯುದ್ಧ ಮಾಡಿದ ಉಲ್ಲೇಖವಿಲ್ಲ, ಕಥೆಯನ್ನು ತಿರುಚಲಾಗಿದೆ ಎಂದು ಅನೇಕರು ನಿರ್ದೇಶಕರ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿರುವ ಆಕ್ರೋಶದ ಪೋಸ್ಟ್‌ಗಳಲ್ಲಿ ನೆಟ್ಟಿಗರು ಮೂಲ ರಾಮಾಯಣದ ಸನ್ನಿವೇಶಗಳನ್ನು ನೆನಪಿಸುತ್ತಿದ್ದಾರೆ. "ಖರ-ದೂಷಣರ 14,000 ಅಸುರರ ಸೈನ್ಯದ ವಿರುದ್ಧ ಶ್ರೀರಾಮಚಂದ್ರನೊಬ್ಬನೇ ಏಕಾಂಗಿಯಾಗಿ ಹೋರಾಡಿದ್ದನೆಂದು ಪವಿತ್ರ ಗ್ರಂಥಗಳಲ್ಲಿ ಸ್ಪಷ್ಟವಾಗಿ ಹೇಳಲಾಗಿದೆ. ಲಕ್ಷ್ಮಣ ಹಾಗೂ ಸೀತಾಮಾತೆಯನ್ನು ಸುರಕ್ಷಿತವಾಗಿಡಲು ರಾಮ ಅವರನ್ನು ದೂರ ಕಳುಹಿಸಿದ್ದ. ಆದರೆ, ಸಿನಿಮಾದಲ್ಲಿ ಸೀತೆಯನ್ನು ಯುದ್ಧರಂಗಕ್ಕೆ ಇಳಿಸಿರುವುದು ಸನಾತನ ಧರ್ಮದ ಇತಿಹಾಸವನ್ನು ವಿಕೃತಗೊಳಿಸಿದಂತೆ" ಎಂದು ಬಳಕೆದಾರರೊಬ್ಬರು ಕಿಡಿಕಾರಿದ್ದಾರೆ. ಮತ್ತೊಬ್ಬರು, "ಸೀತಾಮಾತೆ ಪರಮ ಸೌಮ್ಯತೆಯ ಸಂಕೇತ, ರಾಮಚಂದ್ರ ಎಂದಿಗೂ ಆಕೆಯನ್ನು ಸಮರಭೂಮಿಗೆ ಇಳಿಯಲು ಬಿಡುತ್ತಿರಲಿಲ್ಲ" ಎಂದು ಕಮೆಂಟ್ ಮಾಡಿದ್ದಾರೆ.

ಆದಾಗ್ಯೂ, ಪ್ರೇಕ್ಷಕರ ಪೈಕಿ ಕೆಲವರು ಈ ದೃಶ್ಯಾವಳಿಯನ್ನು ಸಮರ್ಥಿಸಿಕೊಂಡು ಮಾತನಾಡಿದ್ದಾರೆ. ವಾಲ್ಮೀಕಿ ರಾಮಾಯಣದ ಜತೆಗೆ ಭಾರತೀಯ ಪರಂಪರೆಯಲ್ಲಿ ಹಲವು ಆವೃತ್ತಿಗಳಿದ್ದು, 'ಅದ್ಭುತ ರಾಮಾಯಣ' ಎಂಬ ಗ್ರಂಥದಲ್ಲಿ ಸೀತಾಮಾತೆಯನ್ನು ಮಹಾಶಕ್ತಿಯಾಗಿ ಹಾಗೂ ಅಸುರ ಸಂಹಾರಿಣಿಯಾಗಿ ಚಿತ್ರಿಸಲಾಗಿದೆ ಎಂಬುದನ್ನು ಬೊಟ್ಟು ಮಾಡಿದ್ದಾರೆ. ಆದರೆ, ವಾಲ್ಮೀಕಿ ರಾಮಾಯಣದ ಪ್ರಕಾರ 14 ವರ್ಷಗಳ ವನವಾಸದ ಸಮಯದಲ್ಲಿ ಸೀತೆ ರಾಕ್ಷಸರ ವಿರುದ್ಧ ಹೋರಾಡಿದ ಉಲ್ಲೇಖವಿಲ್ಲ. ಶೂರ್ಪಣಖಿಯ ಗರ್ವಭಂಗವನ್ನು ಲಕ್ಷ್ಮಣ ಮಾಡಿದರೆ, ವಿರಾಧ ಹಾಗೂ ಖರ-ದೂಷಣರ ಸಂಹಾರವನ್ನು ಶ್ರೀರಾಮನೊಬ್ಬನೇ ನಡೆಸಿದ್ದನೆಂಬುದು ಪ್ರಚಲಿತದಲ್ಲಿರುವ ನಂಬಿಕೆಯಾಗಿದೆ.

Also Read
ರಾಮಾಯಣ: ರಣಬೀರ್ ಕಪೂರ್ vs ಯಶ್, ಇಬ್ಬರಲ್ಲಿ ಮಿಂಚಿದವರು ಯಾರು? ಇಲ್ಲಿದೆ ಒಂದು ಸಮಗ್ರ ವಿಶ್ಲೇಷಣೆ... Ramayana
Ramayana

ಈ ವಿವಾದದ ಕುರಿತು ಹಾಗೂ ಕಥೆಯಲ್ಲಿ ತೆಗೆದುಕೊಂಡ ಸ್ವಾತಂತ್ರ್ಯದ ಬಗ್ಗೆ ನಿರ್ದೇಶಕ ನಿತೇಶ್ ತಿವಾರಿ ಅವರು ಲಾಸ್ ಏಂಜಲೀಸ್‌ನಲ್ಲಿ ನಡೆದ ಪ್ರೀಮಿಯರ್ ಪ್ರದರ್ಶನದ ವೇಳೆ ಮುಕ್ತವಾಗಿ ಮಾತನಾಡಿದ್ದಾರೆ. "ಶ್ರೀರಾಮನ ಕ್ಯಾರಕ್ಟರ್ ವಿಷಯದಲ್ಲಿ ನಾವು ಯಾವುದೇ ರೀತಿಯ ಬದಲಾವಣೆ ಮಾಡಲು ಸಾಧ್ಯವಿಲ್ಲ, ಪ್ರತಿಯೊಂದು ಆವೃತ್ತಿಯಲ್ಲೂ ಆತ ಮರ್ಯಾದಾ ಪುರುಷೋತ್ತಮ. ಆದರೆ, ಸೀತಾಮಾತೆಯ ಪಾತ್ರದ ವಿಷಯಕ್ಕೆ ಬಂದರೆ, 'ಅದ್ಭುತ ರಾಮಾಯಣ'ದಲ್ಲಿ ಆಕೆಯನ್ನು ಯೋಧೆಯಾಗಿ ಬಿಂಬಿಸಲಾಗಿದೆ. ಆ ಆವೃತ್ತಿಯಿಂದ ಪ್ರೇರಿತರಾಗಿ ನಾವು ಈ ದೃಶ್ಯವನ್ನು ಸೇರಿಸಿದ್ದೇವೆ. ಇದು ಪಾತ್ರಕ್ಕೆ ಹೊಸ ಆಯಾಮ ಮತ್ತು ಮೆರುಗು ನೀಡುತ್ತದೆ," ಎಂದು ಅವರು ಸ್ಪಷ್ಟನೆ ನೀಡಿದ್ದಾರೆ.

ನಮಿತ್ ಮಲ್ಹೋತ್ರಾ ನಿರ್ಮಾಣದ 4,000 ಕೋಟಿ ರೂಪಾಯಿ ಬೃಹತ್ ಬಜೆಟ್‌ನ ಈ 'ರಾಮಾಯಣ' ಸಿನೆಮಾವನ್ನು ಎರಡು ಭಾಗಗಳಲ್ಲಿ ತೆರೆಗೆ ತರಲಾಗುತ್ತಿದೆ. ಮೊದಲ ಭಾಗವು ದೀಪಾವಳಿ ಹಬ್ಬದ ಪ್ರಯುಕ್ತ ನವೆಂಬರ್ 5, 2026 ರಂದು ಜಾಗತಿಕವಾಗಿ ಬಿಡುಗಡೆಯಾಗಿದ್ದು, ಎರಡನೇ ಭಾಗವು 2028ರ ದೀಪಾವಳಿಗೆ ಪ್ರದರ್ಶನಗೊಳ್ಳಲಿದೆ. ರಣಬೀರ್ ಕಪೂರ್, ಸಾಯಿ ಪಲ್ಲವಿ, ಯಶ್, ಸನ್ನಿ ಡಿಯೋಲ್ ಮತ್ತು ರವಿ ದುಬೆ ಅವರಂತಹ ಬೃಹತ್ ತಾರಾಗಣವನ್ನು ಹೊಂದಿರುವ ಈ ಚಿತ್ರವು ವಿವಾದಗಳ ನಡುವೆಯೂ ಬಾಕ್ಸ್ ಆಫೀಸ್‌ನಲ್ಲಿ ಭಾರಿ ಸದ್ದು ಮಾಡುತ್ತಿದೆ, (ಏಜೆನ್ಸೀಸ್​).