ವಿಶ್ವದ ಹಲವು ರಾಷ್ಟ್ರಗಳಲ್ಲಿ ಪತ್ತೆಯಾಗಿರುವ ಕರೋನಾ ವೈರಸ್‌ನ ಹೊಸ ಸಾಲ್ಟೇಶನ್ ರೂಪಾಂತರಿ 'PJ.2.1' 
ಆರೋಗ್ಯ

ಎಚ್ಚರ! ಮತ್ತೆ ಕಾಲಿಟ್ಟ ಕೋವಿಡ್ ರೂಪಾಂತರಿ: ಏನಿದು 'PJ.2.1'? ಲಕ್ಷಣಗಳೇನು? ಪರಿಹಾರವೇನು? PJ21 Variant

ನವದೆಹಲಿ: ಕೊರೊನಾ ಮಹಾಮಾರಿ ಮುಗಿದೇ ಹೋಯ್ತು, ಇನ್ನು ನೆಮ್ಮದಿಯಾಗಿರಬಹುದು ಎಂದು ನಿಟ್ಟುಸಿರು ಬಿಟ್ಟಿದ್ದ ಜಗತ್ತಿಗೆ ಹೊಸ ರೂಪಾಂತರಿ ತಲೆನೋವು ಶುರುವಾಗಿದೆ. ಜಗತ್ತಿನ ಹಲವು ಪ್ರಮುಖ ದೇಶಗಳಲ್ಲಿ 'PJ.2.1' ಹೆಸರಿನ ಹೊಚ್ಚ ಹೊಸ ಕೋವಿಡ್ ತಳಿ ಪತ್ತೆಯಾಗಿದ್ದು, ಜನರಲ್ಲಿ ಮತ್ತೆ ಆತಂಕದ ಛಾಯೆ ಮೂಡಿಸಿದೆ.

ಕೆನಡಾದಲ್ಲಿ ಮೊದಲ ಬಾರಿಗೆ ಕಾಣಿಸಿಕೊಂಡ ಈ ವೈರಸ್, ಈಗ ಅಮೆರಿಕ, ಯುರೋಪ್, ಆಸ್ಟ್ರೇಲಿಯಾ, ನ್ಯೂಜಿಲೆಂಡ್ ಸೇರಿದಂತೆ ಏಷ್ಯಾದ ದೇಶಗಳಿಗೂ ಕಾಲಿಟ್ಟಿದೆ. ಹಾಗಾದ್ರೆ ಇದು ಮತ್ತೊಂದು ಡೇಂಜರಸ್ ಕೊರೊನಾ ಅಲೆಗೆ ಕಾರಣವಾಗುತ್ತಾ? ಹಾಲಿ ಇರುವ ಲಸಿಕೆಗಳು ಇದರ ಮೇಲೆ ಕೆಲಸ ಮಾಡ್ತಾವಾ? ವಿಜ್ಞಾನಿಗಳು ಏನು ಹೇಳ್ತಿದ್ದಾರೆ? ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್.

ಏನಿದು ಹೊಸ ವೇರಿಯಂಟ್ 'PJ.2.1'?

ವಿಜ್ಞಾನಿಗಳ ಪ್ರಕಾರ ಈ PJ.2.1 ಎಂಬುದು ಕೊರೊನಾ ವೈರಸ್‌ನ ಅತ್ಯಂತ ವೇಗವಾಗಿ ಬದಲಾದ ಹೊಸ ಅವತಾರ. ಇದನ್ನು ವೈಜ್ಞಾನಿಕವಾಗಿ 'ಸಾಲ್ಟೇಶನ್ ವೇರಿಯಂಟ್' ಎನ್ನುತ್ತಾರೆ. ಅಂದರೆ, ನಿಧಾನವಾಗಿ ಬದಲಾಗುವ ಬದಲು, ಒಂದೇ ಸಲಕ್ಕೆ ಭಾರಿ ಸಂಖ್ಯೆಯ ಆನುವಂಶಿಕ ಬದಲಾವಣೆಗಳೊಂದಿಗೆ (Mutations) ಈ ವೈರಸ್ ಎಂಟ್ರಿ ಕೊಟ್ಟಿದೆ.

ಈ ಹಿಂದೆ ಜಗತ್ತನ್ನೇ ಕಾಡಿದ್ದ JN.1 ವಂಶಾವಳಿಗೆ ಸೇರಿದ ಈ ತಳಿ, ಮೊದಲು ಕೆನಡಾದ ಒಂಟಾರಿಯೊದಲ್ಲಿ ಪತ್ತೆಯಾಯಿತು. ನೋಡನೋಡುತ್ತಿದ್ದಂತೆ ನ್ಯೂಯಾರ್ಕ್, ಕ್ಯಾಲಿಫೋರ್ನಿಯಾ, ಫ್ಲೋರಿಡಾ, ಸ್ಪೇನ್, ಫ್ರಾನ್ಸ್ ಹಾಗೂ ಸಿಂಗಾಪುರಕ್ಕೂ ಹಬ್ಬಿದೆ. ಒಂಟಾರಿಯೊ ಒಂದರಲ್ಲೇ ಪರೀಕ್ಷಿಸಲಾದ ಮಾದರಿಗಳಲ್ಲಿ ಶೇ. 25ಕ್ಕೂ ಹೆಚ್ಚು ಪ್ರಕರಣಗಳು ಇದೇ ಹೊಸ ರೂಪಾಂತರಿಯಿಂದ ಕೂಡಿವೆ ಎಂಬುದು ಆತಂಕಕಾರಿ ಸಂಗತಿ

ಇಷ್ಟೊಂದು ವೇಗವಾಗಿ ಹರಡಲು ಕಾರಣವೇನು?

'ಜರ್ನಲ್ ಆಫ್ ಇನ್ಫೆಕ್ಷನ್'ನಲ್ಲಿ ಪ್ರಕಟವಾದ ವರದಿ ಪ್ರಕಾರ, ಈ ವೈರಸ್‌ನ 'ಸ್ಪೈಕ್ ಪ್ರೋಟೀನ್'ನಲ್ಲಿ ಪ್ರಮುಖ ಬದಲಾವಣೆಗಳಾಗಿವೆ. ಕೊರೊನಾ ವೈರಸ್ ಮನುಷ್ಯನ ದೇಹವನ್ನು ಪ್ರವೇಶಿಸಲು ಬಳಸುವ ACE2 ರಿಸೆಪ್ಟರ್‌ಗೆ ಈ PJ.2.1 ಅತ್ಯಂತ ಗಟ್ಟಿಯಾಗಿ, ಸುಲಭವಾಗಿ ಅಂಟಿಕೊಳ್ಳುತ್ತದೆ. ಅಂದರೆ, ನಮ್ಮ ಜೀವಕೋಶಗಳಿಗೆ ನುಗ್ಗುವ ಸಾಮರ್ಥ್ಯ ಇದಕ್ಕೆ ಹಳೆಯ ತಳಿಗಳಿಗಿಂತ ಹೆಚ್ಚಾಗಿದೆ.

ಆದರೆ ಸಮಾಧಾನಕರ ವಿಷಯವೆಂದರೆ, ಇದು ನಾವು ಪಡೆದ ಲಸಿಕೆಯ ರೋಗನಿರೋಧಕ ಶಕ್ತಿಯನ್ನು ಸಂಪೂರ್ಣವಾಗಿ ವಂಚಿಸಿ ತಪ್ಪಿಸಿಕೊಳ್ಳುತ್ತಿಲ್ಲ. ಲಸಿಕೆಯಿಂದ ಉತ್ಪತ್ತಿಯಾದ ಆ್ಯಂಟಿಬಾಡಿಗಳು ಈ ವೈರಸ್ ಅನ್ನು ಎದುರಿಸುವ ಶಕ್ತಿ ಹೊಂದಿವೆ ಎಂಬುದು ಪ್ರಯೋಗಾಲಯದ ಪರೀಕ್ಷೆಗಳಲ್ಲಿ ಸಾಬೀತಾಗಿದೆ.

ಲಕ್ಷಣಗಳೇನು? ಸಾಮಾನ್ಯ ಫ್ಲೂ ಎಂದು ನಿರ್ಲಕ್ಷಿಸಬೇಡಿ!

ವಿಶ್ವ ಆರೋಗ್ಯ ಸಂಸ್ಥೆ ಹೇಳುವ ಪ್ರಕಾರ, PJ.2.1 ಗೆ ಅಂತ ಯಾವುದೇ ವಿಶೇಷ ಅಥವಾ ವಿಚಿತ್ರ ಲಕ್ಷಣಗಳಿಲ್ಲ. ಹಳೆಯ ಕೊರೊನಾ ಮತ್ತು ಸಾಮಾನ್ಯ ಕಾಲೋಚಿತ ಜ್ವರಕ್ಕೆ ಬರುವ ಲಕ್ಷಣಗಳೇ ಇದಕ್ಕೂ ಇರುತ್ತವೆ:

  1. ಜ್ವರ ಅಥವಾ ಮೈ ನಡುಗುವ ಚಳಿ

  2. ಒಣ ಕೆಮ್ಮು ಮತ್ತು ಗಂಟಲು ನೋವು

  3. ಮೂಗು ಕಟ್ಟುವುದು ಅಥವಾ ಮೂಗು ಸೋರುವುದು

  4. ತೀವ್ರ ತಲೆನೋವು, ಮೈಕೈ-ಸ್ನಾಯು ಸೆಳೆತ

  5. ನಿಶ್ಯಕ್ತಿ ಮತ್ತು ಸುಸ್ತು

  6. ಕೆಲವರಲ್ಲಿ ರುಚಿ, ವಾಸನೆ ಇಲ್ಲದಿರುವುದು ಅಥವಾ ಅಜೀರ್ಣ ಸಮಸ್ಯೆ ಕಾಣಿಸಿಕೊಳ್ಳಬಹುದು.

ಸಾಮಾನ್ಯ ನೆಗಡಿ, ಫ್ಲೂ ಮತ್ತು ಕೋವಿಡ್ ನಡುವೆ ಲಕ್ಷಣಗಳಲ್ಲಿ ವ್ಯತ್ಯಾಸ ಕಂಡುಹಿಡಿಯುವುದು ಕಷ್ಟ. ಹಾಗಾಗಿ ಸುಮ್ಮನೆ ಜ್ವರ ಎಂದು ಸ್ವಯಂ ಔಷಧ ತೆಗೆದುಕೊಳ್ಳದೆ, ವೈದ್ಯರ ಬಳಿ ತಪಾಸಣೆ ಮಾಡಿಸಿಕೊಳ್ಳುವುದು ಒಳ್ಳೆಯದು.

ಇದು ಹಳೆಯ ತಳಿಗಳಿಗಿಂತ ಹೆಚ್ಚು ಅಪಾಯಕಾರಿಯೇ?

ಸದ್ಯಕ್ಕೆ ಲಭ್ಯವಿರುವ ವೈಜ್ಞಾನಿಕ ಪುರಾವೆಗಳ ಪ್ರಕಾರ, PJ.2.1 ಸೋಂಕಿತರನ್ನು ಹೆಚ್ಚು ಗಂಭೀರ ಸ್ಥಿತಿಗೆ ತಳ್ಳುತ್ತದೆ ಅಥವಾ ಆಸ್ಪತ್ರೆ ದಾಖಲಾತಿ ಹೆಚ್ಚಿಸುತ್ತದೆ ಎಂಬುದಕ್ಕೆ ಯಾವುದೇ ಆಧಾರಗಳಿಲ್ಲ. ವೈರಸ್ ವೇಗವಾಗಿ ಹರಡಿದ ತಕ್ಷಣ ಅದು ಮಾರಣಾಂತಿಕ ಎಂದರ್ಥವಲ್ಲ. ಆದರೆ 70 ವರ್ಷ ದಾಟಿದ ಹಿರಿಯರು, ಸಕ್ಕರೆ ಕಾಯಿಲೆ, ಬಿಪಿ, ಕಿಡ್ನಿ ಸಮಸ್ಯೆ ಅಥವಾ ದುರ್ಬಲ ರೋಗನಿರೋಧಕ ಶಕ್ತಿ ಹೊಂದಿರುವವರು ಹೆಚ್ಚಿನ ಜಾಗ್ರತೆ ವಹಿಸುವುದು ಅಗತ್ಯ.

ಭಾರತದಲ್ಲಿ ಪರಿಸ್ಥಿತಿ ಹೇಗಿದೆ? ಭಯ ಬೇಡ, ಎಚ್ಚರವಿರಲಿ!

ಇನ್ನು ಭಾರತದಲ್ಲಿ ಈ ವೈರಸ್ ಪತ್ತೆಯಾಗಿರುವ ಬಗ್ಗೆ ಅಧಿಕೃತ ಪುರಾವೆಗಳಿಲ್ಲ. ದೇಶದ INSACOG ಸಂಸ್ಥೆ ಸತತವಾಗಿ ಜೀನೋಮಿಕ್ ನಿಗಾ ವಹಿಸುತ್ತಿದೆ. ಜಾಗತಿಕ ಮಟ್ಟದಲ್ಲೂ ವಿಶ್ವ ಆರೋಗ್ಯ ಸಂಸ್ಥೆ ಇದನ್ನು ಇನ್ನೂ 'ತೀವ್ರ ಕಳವಳಕಾರಿ ತಳಿ' ಪಟ್ಟಿಗೆ ಸೇರಿಸಿಲ್ಲ. ಹಾಗಾಗಿ ಅನಗತ್ಯವಾಗಿ ಭಯಭೀತರಾಗುವ ಅಗತ್ಯವಿಲ್ಲ. ಗಂಟಲು ನೋವು, ಜ್ವರ ಬಂದರೆ ಜನನಿಬಿಡ ಪ್ರದೇಶಗಳಲ್ಲಿ ಮಾಸ್ಕ್ ಧರಿಸುವುದು, ಕೈಗಳನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ಮತ್ತು ವೈದ್ಯರ ಸಲಹೆ ಪಡೆಯುವುದು ಉತ್ತಮ, (ಏಜೆನ್ಸೀಸ್​).