ಲೈಫ್‌ಸ್ಟೈಲ್

ನೆಲ್ಲಿಕಾಯಿ ಆರೋಗ್ಯಕ್ಕೆ ಚಮತ್ಕಾರಿ! ತಿನ್ನೋದ್ರರಿಂದ ಏನೆಲ್ಲ ಪ್ರಯೋಜನ? ಇಲ್ಲಿದೆ ಉಪಯುಕ್ತ ಮಾಹಿತಿ | Amla

Amla: ಪ್ರತಿನಿತ್ಯ ಕೆಲಸದ ಜಂಜಾಟದಲ್ಲಿ ಏನು ತಿನ್ನಬೇಕು, ಏನನ್ನು ತಿನ್ನಬಾರದು ಎಂಬ ಯೋಚನೆಯೇ ಕೆಲವರಿಗೆ ಇರುವುದಿಲ್ಲ. ಒತ್ತಡದ ಬದುಕಿನಲ್ಲಿ ಕೆಲವೊಮ್ಮೆ ಅಲ್ಲ, ಹಲವೊಮ್ಮೆ ಸಮಯಕ್ಕೆ ಸರಿಯಾಗಿ ತಿಂಡಿ-ಊಟ ಮಾಡುವುದಿಲ್ಲ. ಇದು ತೀವ್ರ ಹಾಗೂ ಗಂಭೀರ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು. ಊಟದ ಜತೆ ಜತೆಯಲ್ಲಿ ದಿನಕ್ಕೆ ಒಂದು ಆಮ್ಲ ಅಥವಾ ನೆಲ್ಲಿಕಾಯಿ ತಿನ್ನೋದ್ರರಿಂದ ನಿಮ್ಮ ದೇಹದಲ್ಲಿ ಆಗುವ ಬದಲಾವಣೆಗಳು ಒಂದೆರೆಡಲ್ಲ. ಅಸಲಿಗೆ ಇದರ ಸೇವನೆಯಿಂದ ನಿಮಗೆ ದೊರೆಯುವ ಪ್ರಯೋಜನಗಳ ಬಗ್ಗೆ ಅರಿತರೆ ನಿಜಕ್ಕೂ ಹುಬ್ಬೇರೋದು ಖಚಿತ.

ವಿಟಮಿನ್ ಸಿ, ಆ್ಯಂಟಿ-ಆಕ್ಸಿಡೆಂಟ್‌ಗಳು, ಫೈಬರ್ ಮತ್ತು ಇತರ ಪೌಷ್ಟಿಕಾಂಶಗಳಲ್ಲಿ ಸಮೃದ್ಧವಾಗಿರುವ ನೆಲ್ಲಿಕಾಯಿ, ಕೂದಲಿಂದ ಹಿಡಿದು ಆಂತರಿಕ ಸಮಸ್ಯೆಗಳ ನಿವಾರಣೆಗೆ ಚಮತ್ಕಾರಿ ಔಷಧ ಎಂಬುದರಲ್ಲಿ ಅನುಮಾನವಿಲ್ಲ. ಆದಾಗ್ಯೂ, ಹಸಿ ಆಮ್ಲಾ ತಿನ್ನುವುದು ಅಥವಾ ರಸದ ರೂಪದಲ್ಲಿ ಸೇವಿಸುವುದರಿಂದ ಆರೋಗ್ಯಕ್ಕೆ ಹತ್ತು ಹಲವು ಪ್ರಯೋಜನಗಳಿವೆ. ನೆಲ್ಲಿಕಾಯಿಯಲ್ಲಿನ ಉತ್ಕರ್ಷಣ ನಿರೋಧಕಗಳು, ಚರ್ಮದಲ್ಲಿ ಕಾಲಜನ್ ಉತ್ಪಾದನೆಯನ್ನು ಹೆಚ್ಚಿಸುತ್ತವೆ ಮತ್ತು ಚರ್ಮವು ಕಾಂತಿಯುತವಾಗಿ ಹೊಳೆಯುವಂತೆ ಮಾಡುತ್ತದೆ.

ಅದ್ಭುತ ಔಷಧ ಗುಣ

ನೆಲ್ಲಿಕಾಯಿ ಸೇವನೆ ಆರೋಗ್ಯಕ್ಕೆ ತುಂಬಾ ಒಳ್ಳೆಯದು ಎಂದು ವೈದ್ಯರು ಸಹ ಸಲಹೆ ನೀಡುತ್ತಾರೆ. ನಿಮ್ಮನ್ನು ಕಾಡುವ ತಲೆಹೊಟ್ಟು ಸಮಸ್ಯೆಯನ್ನು ನಿಯಂತ್ರಣಕ್ಕೆ ತರುವ ಆಮ್ಲಾ, ಕೂದಲು ಸೊಂಪಾಗಿ ಬೆಳೆಯಲು ಕಾರಣವಾಗುತ್ತದೆ. ಹಲವು ಪ್ರಯೋಜನಗಳನ್ನು ಹೊಂದಿರುವ ನೆಲ್ಲಿಕಾಯಿಯನ್ನು ನೇರವಾಗಿ ತಿನ್ನಲು ಸಾಧ್ಯವಾಗದಿದ್ದರೆ, ಸಲಾಡ್, ಜ್ಯೂಸ್ ಮತ್ತು ಜಾಮ್ ರೂಪದಲ್ಲಿಯೂ ಸೇವಿಸಬಹುದು.

ಆಮ್ಲಾ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಗುಣಗಳನ್ನು ಹೊಂದಿದೆ. ಆದಾಗ್ಯೂ, ಇದನ್ನು ನಿಯಮಿತವಾಗಿ ಸೇವಿಸುವುದರಿಂದ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ ಮತ್ತು ಜೀರ್ಣಕಾರಿ ಸಮಸ್ಯೆಗಳಿರುವವರಿಗೆ ಉತ್ತಮ ಮನೆಮದ್ದು. ಇದರಲ್ಲಿ ಒತ್ತಡವನ್ನು ಕಡಿಮೆ ಮಾಡುವ ಗುಣವಿದೆ. ಫ್ಲೇವನಾಯ್ಡ್‌ಗಳು ಮತ್ತು ಉತ್ಕರ್ಷಣ ನಿರೋಧಕಗಳು ದೇಹದಲ್ಲಿರುವ ಹಾನಿಕಾರಕ ಸ್ವತಂತ್ರ ರಾಡಿಕಲ್‌ಗಳ ವಿರುದ್ಧ ಹೋರಾಡಿ ಒತ್ತಡವನ್ನು ನಿಯಂತ್ರಿಸುತ್ತದೆ.

ಮಧುಮೇಹಕ್ಕೆ ರಾಮಬಾಣ

ರಕ್ತದಲ್ಲಿರುವ ಸಕ್ಕರೆ ಮಟ್ಟವನ್ನು ಸಮತೋಲನಗೊಳಿಸುವಲ್ಲಿ ನೆಲ್ಲಿಕಾಯಿ ಅದ್ಭುತ. ಮಧುಮೇಹಿಗಳಿಗೆ ಇದರ ಸೇವನೆ ಬಹಳ ಒಳ್ಳೆಯದು.

ತೂಕ ಇಳಿಕೆಗೆ ಸಹಾಯ

ಜೀರ್ಣಕ್ರಿಯೆಯನ್ನು ಸುಧಾರಿಸಿ, ಕೊಬ್ಬಿನಾಂಶವನ್ನು ಕರಗಿಸುವಲ್ಲಿ ನೆಲ್ಲಿಕಾಯಿ ಸಹಕಾರಿ. ರಸದ ರೂಪದಲ್ಲಿ ಸೇವಿಸಿದರೆ ಇನ್ನಷ್ಟು ಪ್ರಯೋಜನಕಾರಿ.

ವಿಶೇಷ ಸೂಚನೆ: ಲೇಖನದಲ್ಲಿ ಉಲ್ಲೇಖಿಸಲಾದ ಸಲಹೆಗಳು ಸಾಮಾನ್ಯ ಮಾಹಿತಿ ಉದ್ದೇಶಗಳಿಗಾಗಿ ಮಾತ್ರ. ನೀವು ಯಾವುದೇ ಪ್ರಶ್ನೆಗಳನ್ನು ಹೊಂದಿದ್ದರೆ, ಯಾವಾಗಲೂ ನಿಮ್ಮ ವೈದ್ಯರನ್ನು ಸಂಪರ್ಕಿಸಿ.