ಲೈಫ್‌ಸ್ಟೈಲ್

ನೀವು ತಲೆನೋವಿನೊಂದಿಗೆ ಬೆಳಗ್ಗೆ ಎಚ್ಚರಗೊಳ್ಳುತ್ತೀರಾ? ಹಾಗಾದ್ರೆ ವೈದ್ಯರನ್ನು ಸಂಪರ್ಕಿಸಲು ತಡ ಮಾಡಬೇಡಿ!

ನವದೆಹಲಿ: ನಿಮ್ಮ ದಿನ ತಲೆನೋವಿನೊಂದಿಗೆ ಪ್ರಾರಂಭವಾಗುತ್ತದೆಯೇ? ನೀವು ಬೆಳಗ್ಗೆ ಕಣ್ಣು ತೆರೆದ ತಕ್ಷಣ ನಿಮ್ಮ ತಲೆ ಭಾರ ಮತ್ತು ಕುತ್ತಿಗೆ ಗಟ್ಟಿಯಾಗಿರುವ ಅನುಭವ ಆಗುತ್ತದೆಯೇ? ಎದ್ದ ತಕ್ಷಣ ವಾಕರಿಕೆ ಅಥವಾ ವಾಂತಿಯಾಗುತ್ತಿದೆಯೇ? ಈ ಪ್ರಶ್ನೆಗಳಿಗೆ ಉತ್ತರ ಹೌದು ಎಂದಾದರೆ, ನಿಮ್ಮ ಆರೋಗ್ಯವನ್ನು ನೀವು ಹೆಚ್ಚು ಗಂಭೀರವಾಗಿ ಪರಿಗಣಿಸಬೇಕು ಎಂದರ್ಥ.

ಸರ್ವಿಕೋಜೆನಿಕ್ ತಲೆನೋವು 

ದೀರ್ಘಕಾಲದ ಕುತ್ತಿಗೆ ನೋವಿನಿಂದ ಬಳಲುತ್ತಿರುವ ಜನರು ಬೆಳಗಿನ ತಲೆನೋವು ಹೊಂದಿರುತ್ತಾರೆ. ರಾತ್ರಿ ಸರಿಯಾಗಿ ನಿದ್ದೆ ಮಾಡದೇ ಇರುವುದು ಮತ್ತು ಕತ್ತಿನ ನರಗಳ ಒತ್ತಡವೂ ಕೂಡ ತಲೆನೋವಿಗೆ ಕಾರಣವಾಗಬಹುದು. ಈ ಕುತ್ತಿಗೆ ನೋವಿನಿಂದ ಉಂಟಾಗುವ ತಲೆನೋವುಗಳನ್ನು ಸರ್ವಿಕೋಜೆನಿಕ್ ತಲೆನೋವು ಎಂದು ಕರೆಯಲಾಗುತ್ತದೆ.

ಬೆಳಗ್ಗೆ ಎದ್ದಕೂಡಲೇ ಉಂಟಾಗುವ ತಲೆನೋವನ್ನು ನಿರ್ಲಕ್ಷಿಸಬೇಡಿ. ಒಂದು ವೇಳೆ ನಿರ್ಲಕ್ಷ್ಯ ಮಾಡಿದರೆ, ಕಾಲಾನಂತರದಲ್ಲಿ, ಈ ನೋವು ಕುತ್ತಿಗೆಗೆ ಮತ್ತು ನಂತರ ಭುಜಕ್ಕೆ ಹರಡುತ್ತದೆ. ಇದರಿಂದ ಕುತ್ತಿಗೆಯಲ್ಲಿ ಬಿಗಿತ ಉಂಟಾಗುತ್ತದೆ.

ಪದೇ ಪದೇ ತಲೆನೋವು?

ಈ ಕೆಳಗಿನ ಯಾವುದೇ ರೀತಿಯ ನೋವನ್ನು ನೀವು ಅನುಭವಿಸುತ್ತಿದ್ದರೆ, ಮನೆಮದ್ದುಗಳನ್ನು ತೆಗೆದುಕೊಳ್ಳುವ ಬದಲು ನೀವು ಸಾಧ್ಯವಾದಷ್ಟು ಬೇಗ ವೈದ್ಯರನ್ನು ಸಂಪರ್ಕಿಸಬೇಕು.

* ಪ್ರತಿದಿನ ಬೆಳಗ್ಗೆ ತಲೆನೋವು

* ಮಲಗುವ ಮುನ್ನ ತಲೆ ನೋವು

* 15 ರಿಂದ 30 ನಿಮಿಷಗಳಿಗೆ ಒಮ್ಮೆ ಇದ್ದಕ್ಕಿದ್ದಂತೆ ತಲೆ ನೋವು ಬರುವುದು

* ತಲೆಯ ಒಂದು ಭಾಗದಲ್ಲಿ ನೋವು ಕಾಣಿಸಿಕೊಳ್ಳುವುದು ಮತ್ತು ಮುಖದ ಯಾವುದೇ ಭಾಗದಲ್ಲಿ ನೋವು ಕಾಣಿಸಿಕೊಳ್ಳುವುದು.

ತಲೆ ನೋವಿಗೆ ಕಾರಣಗಳು

ದಿನಕ್ಕೆ ಒಮ್ಮೆಯಾದರೂ ತಲೆನೋವು ಕಾಣಿಸಿಕೊಳ್ಳುವುದಕ್ಕೆ ಹಲವಾರು ಕಾರಣಗಳಿವೆ. ಅವುಗಳಲ್ಲಿ ಒತ್ತಡವು ತಲೆನೋವಿನ ಸಾಮಾನ್ಯ ಕಾರಣಗಳಲ್ಲಿ ಒಂದಾಗಿದೆ. ಆದ್ದರಿಂದ ನಿಮ್ಮ ಮೇಲಿನ ಒತ್ತಡವನ್ನು ನಿವಾರಿಸಲು ದೈನಂದಿನ ವ್ಯಾಯಾಮ, ನಡಿಗೆ, ಧ್ಯಾನ ಮತ್ತು ಯೋಗ ಬಹಳ ಮುಖ್ಯವಾಗಿದೆ. (ಏಜೆನ್ಸೀಸ್​)