ಸಾಂದರ್ಭಿಕ ಚಿತ್ರ 
ಆಹಾರ

ಎಳನೀರು Vs ಮಜ್ಜಿಗೆ: ಬೇಸಿಗೆಯ ಬಿಸಿಲಿಗೆ ನಿಮ್ಮ ದೇಹಕ್ಕೆ ಯಾವುದು ಬೆಸ್ಟ್? ತಜ್ಞರು ಹೇಳುವ ಆರೋಗ್ಯ ರಹಸ್ಯ ಇಲ್ಲಿದೆ! Coconut Water vs Buttermilk

ಪ್ರಮುಖ ಮುಖ್ಯಾಂಶಗಳು

  • ಹೆಚ್ಚಾಗುತ್ತಿರುವ ಬೇಸಿಗೆಯ ಧಗೆ
  • ಎಳನೀರು ಮತ್ತು ಮಜ್ಜಿಗೆಯಲ್ಲಿ ಯಾವುದು ಉತ್ತಮ? ಎಂಬ ಪ್ರಶ್ನೆ
  • ಈ ಕುರಿತು ತಜ್ಞರು ಹೇಳುವುದೇನು?
ಬೆಂಗಳೂರು: ಬೇಸಿಗೆ ಬಂತು ಎಂದರೆ ಸಾಕು, ಬಾಯಾರಿಕೆ ಹೆಚ್ಚಾಗೋದು ಸಹಜ. ಕಚೇರಿಯ ಕೆಲಸವಿರಲಿ ಅಥವಾ ತಿರುಗಾಟವಿರಲಿ, ಎಷ್ಟೇ ನೀರು ಕುಡಿದರೂ ಬಾಯಾರಿಕೆ ನೀಗಲ್ಲ. ಇಂತಹ ಸಮಯದಲ್ಲಿ ನಮ್ಮ ಕಣ್ಣ ಮುಂದೆ ಬರೋದು ತಂಪಾದ ಎಳನೀರು ಮತ್ತು ಮಜ್ಜಿಗೆ(Coconut Water vs Buttermilk).
ಆದರೆ, ಈ ಎರಡರಲ್ಲಿ ಯಾವುದು ದೇಹಕ್ಕೆ ಬೇಗ ಚೈನತ್ಯವನ್ನು ನೀಡುತ್ತದೆ, ಜೊತೆಗೆ ಯಾವುದು ಆರೋಗ್ಯಕ್ಕೆ ಹೆಚ್ಚು ಒಳ್ಳೆಯದು? ಎಂಬ ಪ್ರಶ್ನೆ ಸಾಮಾನ್ಯವಾಗಿ ಜನರನ್ನು ಕಾಡುತ್ತಿರುತ್ತದೆ. ಅದಕ್ಕೆ ಉತ್ತರ ಇಲ್ಲಿದೆ.

ತಜ್ಞರ ಅಭಿಪ್ರಾಯವೇನು?

ತಜ್ಞರ ಪ್ರಕಾರ, ಬೇಸಿಗೆಯಲ್ಲಿ ದೇಹವನ್ನು ಆರೋಗ್ಯವಾಗಿಡಲು ದಿನಕ್ಕೆ ಕನಿಷ್ಠ ಮೂರು ಬಾರಿ ಪಾನೀಯಗಳನ್ನು ಸೇವಿಸುವುದು ಅವಶ್ಯಕ. ಏವಿಯೇಷನ್, ಸ್ಪೇಸ್ ಮತ್ತು ಎನ್ವಿರಾನ್ಮೆಂಟಲ್ ಜರ್ನಲ್​ನ ಸಂಶೋಧನೆಯ ಪ್ರಕಾರ, ಶಾಖದ ಅಲೆಗಳಿಂದ ದೇಹವನ್ನು ರಕ್ಷಿಸಿಕೊಳ್ಳಲು ಇಂತಹ ಪಾನೀಯಗಳು ಅನಿವಾರ್ಯ ಎನ್ನಲಾಗಿದೆ.

ಎಳನೀರು: ಪ್ರಕೃತಿ ನೀಡಿರುವ ಎನರ್ಜಿ ಡ್ರಿಂಕ್!

ಎಳನೀರು ಕೇವಲ ಬಾಯಾರಿಕೆ ತಣಿಸುವುದಿಲ್ಲ, ಇದೊಂದು ನೈಸರ್ಗಿಕ ಎಲೆಕ್ಟ್ರೋಲೈಟ್ ಎನ್ನುತ್ತಾರೆ ತಜ್ಞರು. ಇದರಲ್ಲಿ ಕ್ಯಾಲೋರಿ ಕಡಿಮೆ, ಪೊಟ್ಯಾಸಿಯಮ್ ಅಧಿಕ. ನೀವು ಕಠಿಣ ವ್ಯಾಯಾಮ ಮಾಡಿ ಬಂದಿದ್ದೀರಿ ಅಥವಾ ವಿಪರೀತ ಬಿಸಿಲಿನಲ್ಲಿ ಕೆಲಸ ಮಾಡಿ ಸುಸ್ತಾಗಿದ್ದೀರಿ ಎಂದಾದಲ್ಲಿ, ಎಳನೀರು ಮ್ಯಾಜಿಕ್‌ನಂತೆ ಕೆಲಸ ಮಾಡುತ್ತದೆ ಎಂದು ಹೇಳಲಾಗಿದೆ.

ಯಾವಾಗ ಕುಡಿಯಬೇಕು?

ಖಾಲಿ ಹೊಟ್ಟೆಯಲ್ಲಿ ಕುಡಿದರೆ ಇದರ ಪರಿಣಾಮ ದ್ವಿಗುಣಗೊಳ್ಳುತ್ತದೆ. ಸ್ಪೋರ್ಟ್ಸ್ ಡ್ರಿಂಕ್‌ಗಳ ಬದಲು ತೆಂಗಿನ ನೀರು ಸೇವಿಸುವುದು ಆರೋಗ್ಯಕರ.

ಮಜ್ಜಿಗೆ: ಜೀರ್ಣಕ್ರಿಯೆಯ ಕಿಂಗ್!

ಮಜ್ಜಿಗೆ ನಮ್ಮ ಹಿರಿಯರ ಕಾಲದ ಸೂಪರ್ ಪಾನೀಯ. ಇದರಲ್ಲಿರುವ ಪ್ರೋಬಯಾಟಿಕ್ಸ್ ಕರುಳಿನ ಆರೋಗ್ಯವನ್ನು ವೃದ್ಧಿಸುತ್ತದೆ. ಅತಿಯಾದ ಬಿಸಿಲಿನಿಂದ ಜೀರ್ಣಕ್ರಿಯೆ ನಿಧಾನವಾದಾಗ, ಮಜ್ಜಿಗೆ ಅದ್ಭುತವಾಗಿ ಕೆಲಸ ಮಾಡುತ್ತದೆ.

ಯಾವಾಗ ಕುಡಿಯಬೇಕು?

ಮಧ್ಯಾಹ್ನದ ಊಟದ ನಂತರ ಮಜ್ಜಿಗೆ ಸೇವಿಸುವುದು ಉತ್ತಮ. ಜೀರಿಗೆ, ಕಪ್ಪು ಉಪ್ಪು ಅಥವಾ ಮೆಣಸಿನಕಾಯಿ ಪುಡಿ ಸೇರಿಸಿ ಕುಡಿದರೆ ಇದರ ರುಚಿ ಮತ್ತು ಆರೋಗ್ಯ ಲಾಭ ಎರಡೂ ಹೆಚ್ಚುತ್ತದೆ. ಸಿಹಿ ಮಜ್ಜಿಗೆಯ ಬದಲು ಖಾರದ ಮಜ್ಜಿಗೆಯನ್ನು ಆರಿಸಿಕೊಳ್ಳುವುದು ಉತ್ತಮ.

ಯಾವುದು ಬೆಸ್ಟ್?

ವಾಸ್ತವವಾಗಿ, ಎಳನೀರು ಮತ್ತು ಮಜ್ಜಿಗೆ ಎರಡೂ ತಮ್ಮದೇ ಆದ ವಿಶಿಷ್ಟ ಪ್ರಯೋಜನಗಳನ್ನು ಹೊಂದಿವೆ. ಯಾವುದನ್ನೂ ಒಂದಕ್ಕೆ ಸೀಮಿತಗೊಳಿಸಬೇಡಿ. ಇವೆರಡನ್ನೂ ಅದಲು ಬದಲಾಗಿ ಸೇವಿಸುವುದೇ ಅತ್ಯುತ್ತಮ ವಿಧಾನ ಎಂದು ಹೇಳಬಹುದು.
ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್” ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ.