ಪೆಟ್ರೋಲ್ ಸಿಗಲ್ಲ ಎಂಬ ಆತಂಕ: ನೀರಿನ ಕ್ಯಾನ್ ಹಿಡಿದು ಬಂಕ್‌ಗೆ ಮುಗಿಬಿದ್ದ ಜನ; ವಿಡಿಯೋ ವೈರಲ್​! Viral Video

ಪೆಟ್ರೋಲ್​ ಬಂಕ್​ಗೆ ನೀರಿನ ಕ್ಯಾನ್​ ಹಿಡಿದು ಬರುತ್ತಿರುವ ಜನ
ಪೆಟ್ರೋಲ್​ ಬಂಕ್​ಗೆ ನೀರಿನ ಕ್ಯಾನ್​ ಹಿಡಿದು ಬರುತ್ತಿರುವ ಜನ
Published on

ಪ್ರಮುಖ ಮುಖ್ಯಾಂಶಗಳು

  • ಮಧ್ಯಪ್ರಾಚ್ಯದಲ್ಲಿ ಮುಂದುವರಿಯುತ್ತಿರುವ ಸಂಘರ್ಷ
  • ಭಾರತದಲ್ಲಿ ಇಂಧನ ಅಭಾವವಾಗುವ ಬಗ್ಗೆ ವದಂತಿ
  • ಪೆಟ್ರೋಲ್​ ಬಂಕ್​ಗೆ ನೀರಿನ ಕ್ಯಾನ್​ ಹಿಡಿದು ಬರುತ್ತಿರುವ ಜನ
ತಮಿಳುನಾಡು: ಮಧ್ಯಪ್ರಾಚ್ಯದಲ್ಲಿ ಯುದ್ಧದ ಕಾವು ಹೆಚ್ಚಾಗುತ್ತಿದ್ದಂತೆ, ಭಾರತದಲ್ಲೂ ಇಂಧನದ ಕೊರತೆ ಉಂಟಾಗಲಿದೆ ಎಂಬ ಆತಂಕ ಜನರನ್ನು ಕಾಡತೊಡಗಿದೆ. ಈ ಕಳವಳ ಎಷ್ಟು ತೀವ್ರವಾಗಿದೆ ಎಂದರೆ ಜನರು ಈಗ ತಮ್ಮ ಬೈಕ್ ಟ್ಯಾಂಕ್‌ಗಳನ್ನು ಬಿಟ್ಟು, ಮನೆಗಳಲ್ಲಿರುವ ನೀರಿನ ಜಾರ್‌ಗಳು ಮತ್ತು ಬಾಟಲಿಗಳಲ್ಲಿ ಪೆಟ್ರೋಲ್ ತುಂಬಿಸಿಕೊಳ್ಳಲು ಮುಗಿಬೀಳುತ್ತಿದ್ದಾರೆ.
ತಮಿಳುನಾಡಿನ ಪೆಟ್ರೋಲ್ ಬಂಕ್ ಒಂದರಲ್ಲಿ ಇತ್ತೀಚೆಗೆ ಸೆರೆಯಾದ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಸಖತ್​ ವೈರಲ್ (Viral Video)​ ಆಗುತ್ತಿದ್ದೆ. ವಿಡಿಯೋದಲ್ಲಿ ಒಬ್ಬ ವ್ಯಕ್ತಿ ಬೈಕ್ ಮೇಲೆ ಕುಳಿತು ದೊಡ್ಡ ಪ್ಲಾಸ್ಟಿಕ್ ನೀರಿನ ಕ್ಯಾನ್ ಹಿಡಿದಿದ್ದಾನೆ.
ಪಂಪ್ ಉದ್ಯೋಗಿ ಯಾವುದೇ ಅಳುಕಿಲ್ಲದೆ ಆ ಪ್ಲಾಸ್ಟಿಕ್ ಜಾರ್‌ಗೆ ಪೆಟ್ರೋಲ್ ತುಂಬಿಸುತ್ತಿದ್ದಾನೆ. ಅದರ ಬೆನ್ನಲ್ಲೇ ಇನ್ನೊಬ್ಬ ವ್ಯಕ್ತಿ ಎರಡು ಲೀಟರ್ ಬಾಟಲಿ ಹಿಡಿದು ನಿಂತಿದ್ದಾನೆ. ಪಂಪ್ ಸುತ್ತಲೂ ಇಂಧನ ಪಡೆಯಲು ಜನ ಮುಗಿಬಿದ್ದಿರುವುದನ್ನು ನೋಡಿದರೆ, ಏನೋ ದೊಡ್ಡ ಆಪತ್ತು ಬಂದೇ ಬಿಟ್ಟಿದೆ ಎಂಬ ಭೀತಿ ಅವರ ಕಣ್ಣಲ್ಲಿ ಎದ್ದು ಕಾಣುತ್ತದೆ.

ಇದು ಉಪಾಯವಲ್ಲ; ಅಪಾಯ!

ಈ ದೃಶ್ಯವನ್ನು ಎಕ್ಸ್ (ಟ್ವಿಟರ್)ನಲ್ಲಿ ಹಂಚಿಕೊಂಡಿರುವವರು, ಇದು ಕಾನೂನುಬಾಹಿರ ಅಲ್ಲವೇ?" ಎಂದು ಪ್ರಶ್ನಿಸಿದ್ದಾರೆ. ನೆಟ್ಟಿಗರು ಕೂಡ ಇದಕ್ಕೆ ಆಕ್ರೋಶ ವ್ಯಕ್ತಪಡಿಸುತ್ತಾ, ಈ ವರ್ತನೆ ತೀರಾ ಅತಿರೇಕವಾಯಿತು, ಬಿಡಿ ಎಂದು ಒಬ್ಬರು ಹೇಳಿದರೆ, ಈ ಸೆಖೆಯಲ್ಲಿ ಈ ಪೆಟ್ರೋಲ್​ ತುಂಬಿರುವ ಬಾಟಲ್​ ಸ್ಪೋಟಗೊಂಡರೇ ಏನು ಗತಿ? ಎಂದು ಕಳವಳ ವ್ಯಕ್ತ ಪಡಿಸಿದ್ದಾರೆ.
ಸಾಮಾನ್ಯವಾಗಿ ಪ್ಲಾಸ್ಟಿಕ್ ಕಂಟೇನರ್‌ಗಳಲ್ಲಿ ಪೆಟ್ರೋಲ್ ಮಾರಾಟ ಮಾಡುವುದು ಕಾನೂನುಬಾಹಿರ. ಆದರೆ, ಇಂಧನ ಸಿಗುವುದಿಲ್ಲ ಎಂಬ ವದಂತಿ ಕೇಳುತ್ತಿದ್ದಂತೆ ಜನರು ಬುದ್ಧಿ ಮರೆತು ಇಂತಹ ಅಪಾಯಕಾರಿ ಕೆಲಸಗಳಿಗೆ ಮುಂದಾಗುತ್ತಿದ್ದಾರೆ.

ಪ್ಯಾನಿಕ್ ಖರೀದಿಯೇ ನಿಜವಾದ ಕೊರತೆಗೆ ಕಾರಣ!

ತಜ್ಞರು ಹೇಳುವ ಪ್ರಕಾರ, ನಿಜವಾದ ಸಮಸ್ಯೆ ಇರುವುದಕ್ಕಿಂತ ಹೆಚ್ಚಾಗಿ, ಜನರು ಭಯಪಟ್ಟು ಅನಗತ್ಯವಾಗಿ ಇಂಧನವನ್ನು ಸಂಗ್ರಹಿಸಲು ಶುರು ಮಾಡಿದಾಗ ಕೃತಕ ಕೊರತೆ ಸೃಷ್ಟಿಯಾಗುತ್ತದೆ. ನಮಗೆ ಅಗತ್ಯ ಇಲ್ಲದಿದ್ದರೂ, ಮುಂದಿನ ದಿನಗಳಲ್ಲಿ ಸಿಗಲ್ಲ ಎಂಬ ಭಯದಿಂದ ಎಲ್ಲರೂ ಒಂದೇ ಸಲ ಪೆಟ್ರೋಲ್ ಬಂಕ್‌ಗೆ ಬಂದರೆ ಪರಿಸ್ಥಿತಿ ಹದಗೆಡುವುದು ಸಹಜ.
ಇದು ಪೆಟ್ರೋಲ್ ಬಂಕ್ ಮಾಲೀಕರು ಮತ್ತು ಸಾರ್ವಜನಿಕರ ಜವಾಬ್ದಾರಿ. ಪಂಪ್ ಅಟೆಂಡೆಂಟ್‌ಗಳು ಇಂತಹ ಪ್ಲಾಸ್ಟಿಕ್ ಕ್ಯಾನ್​ಗಳಲ್ಲಿ ಪೆಟ್ರೋಲ್​ ನೀಡುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಬೇಕು ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಒತ್ತಾಯ ಕೇಳಿಬರುತ್ತಿದೆ,(ಏಜನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net