ಆರೋಗ್ಯವಾಗಿರಲು ಮತ್ತು ಫಿಟ್ ಆಗಿರಲು ಪೌಷ್ಟಿಕಾಂಶ-ಭರಿತ ಆಹಾರಗಳನ್ನು ಸೇವಿಸುತ್ತೇವೆ. ಇದು ದೈಹಿಕವಾಗಿ ಮಾತ್ರವಲ್ಲ ಮಾನಸಿಕ ಆರೋಗ್ಯದ ಬೆಳವಣಿಗಗೆಯಲ್ಲೂ ಪ್ರಮುಖ ಪಾತ್ರವಹಿಸುತ್ತವೆ. ಹೆಚ್ಚಿನ ಪ್ರಮಾಣದ ಜೀವಸತ್ವಗಳು ಮತ್ತು ಖನಿಜಗಳನ್ನು ಒದಗಿಸುವ ಹಣ್ಣುಗಳನ್ನು ಪ್ರತಿನಿತ್ಯ ತಿನ್ನುತ್ತೇವೆ. ಇದ್ದರಿಂದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ಆದರೆ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುವ ಅನೇಕ ಆಹಾರ ಪದಾರ್ಥಗಳಿವೆ ಎಂಬುದು ನಿಮಗೆ ತಿಳಿದಿದೆಯೇ? ಕೆಲವು ಪದಾರ್ಥಗಳನ್ನು ತಿಂದ ಬಳಿಕ ದೇಹದೊಳಗೆ ವಿಷವಾಗಿ ಪರಿಣಮಿಸುತ್ತವೆ. ಇಲ್ಲಿ ಕೆಲವು ಆಹಾರ ಪದಾರ್ಥಗಳ ಬಗ್ಗೆ ಮಾಹಿತಿಯನ್ನು ನೀಡಲಾಗಿದೆ.
- ಸೇಬಿನ ಬೀಜ: ಸೇಬಿನಲ್ಲಿರುವ ಬೀಜಗಳಲ್ಲಿ ಅಮಿಗ್ಡಾಲಿನ್ ಎಂಬ ವಸ್ತು ಕಂಡುಬರುತ್ತದೆ. ಇದರ ಬೀಜಗಳು ಸೈನೈಡ್ ವಿಷದಿಂದ ತುಂಬಿರುತ್ತವೆ. ಒಂದು ಸೇಬಿನ ಬೀಜದಲ್ಲಿ ಸೈನೈಡ್ ಪ್ರಮಾಣವು ಕಡಿಮೆಯಾಗಿದೆ, ಆದರೆ ನೀವು 20ಕ್ಕೂ ಹೆಚ್ಚು ಸೇಬುಗಳ ಬೀಜಗಳನ್ನು ಒಟ್ಟಿಗೆ ಸೇವಿಸಿದರೆ ಸಾವು ಖಚಿತ. ಆದ್ದರಿಂದ ಉತ್ತಮ ಆರೋಗ್ಯಕ್ಕಾಗಿ ಬೀಜಗಳನ್ನು ತೆಗೆದುಹಾಕಿದ ನಂತರ ಸೇಬನ್ನು ತಿನ್ನವುದು ಒಳ್ಳೆಯದು.
- ಹಸಿರು ಆಲೂಗಡ್ಡೆ: ತರಕಾರಿಗಳನ್ನು ಖರೀದಿಸುವಾಗ ಹಸಿರು ಆಲೂಗಡ್ಡೆಗಳನ್ನು ಪ್ರತ್ಯೇಕಿಸುತ್ತೇವೆ. ಆಲೂಗಡ್ಡೆ ಎಲೆಗಳು ಮತ್ತು ಕೊಂಬೆಗಳಲ್ಲಿ ಕಂಡುಬರುವ ಗ್ಲೈಕೋಲ್ಕಲಾಯ್ಡ್ಸ್ಎಂಬ ವಿಷಕಾರಿ ವಸ್ತು ಆಲೂಗಡ್ಡೆಯೊಂದಿಗೆ ಸಂಪರ್ಕಕ್ಕೆ ಬಂದಾಗ ಆಲೂಗಡ್ಡೆ ಹಸಿರು ಬಣ್ಣಕ್ಕೆ ತಿರುಗುತ್ತದೆ. ಹಸಿರು ಆಲೂಗಡ್ಡೆಯನ್ನು ಸೇವಿಸುವುದರಿಂದ ಅತಿಸಾರ, ವಾಕರಿಕೆ ಮತ್ತು ತಲೆನೋವಿನಂತಹ ಸಮಸ್ಯೆ ಉಂಟಾಗಬಹುದು.
- ಹಸಿ ಮೊಟ್ಟೆ: ಹಸಿ ಮೊಟ್ಟೆ ಕೂಡ ನಮ್ಮ ಆರೋಗ್ಯಕ್ಕೆ ಹಾನಿಕಾರಕ ಎಂದು ಪರಿಗಣಿಸಲಾಗಿದೆ. ಸಾಲ್ಮೊನೆಲ್ಲಾ ಎಂಬ ಬ್ಯಾಕ್ಟೀರಿಯಾವು ಇದರಲ್ಲಿ ಕಂಡುಬರುವ ಕಾರಣ, ಹಸಿ ಮೊಟ್ಟೆಯು ದೇಹವನ್ನು ಪ್ರವೇಶಿಸಿದ ನಂತರ ಜ್ವರ, ವಾಂತಿ ಮತ್ತು ಭೇದಿಗೆ ಕಾರಣವಾಗಬಹುದು.
- ಬಾದಾಮಿ: ಹೆಚ್ಚು ಪ್ರೋಟೀನ್ನಿಂದ ಸಮೃದ್ಧವಾಗಿರುವುದು ಬಾದಾಮಿ. ಇದರ ಸೇವನೆಯು ಆರೋಗ್ಯಕ್ಕೆ ಅಪಾಯ ಉಂಟುಮಾಡುತ್ತದೆ ಎಂದರೆ ಆಶ್ವರ್ಯವಾಗುವುದು ಸಹಜ. ಅಸಲಿಗೆ ಹಸಿ ಬಾದಾಮಿ ತಿನ್ನುವುದರಿಂದ ಸಮಸ್ಯೆ ಎದುರಾಗುತ್ತದೆ. ಹಸಿ ಬಾದಾಮಿಯಲ್ಲಿ ಸೈನೈಡ್ ಕಂಡುಬರುತ್ತದೆ. 8 ಹಸಿ ಬಾದಾಮಿಗಳನ್ನು ಒಟ್ಟಿಗೆ ಸೇವಿಸಿದರೆ, ನೀವು ಆರೋಗ್ಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.
- ಮೊಳಕೆಕಾಳುಗಳು: ಆರೋಗ್ಯಕ್ಕೆ ಉತ್ತಮವೆಂದು ಮೊಳಕೆಕಾಳುಗಳುನ್ನು ತಿನ್ನಲಾಗುತ್ತದೆ. ಆದರೆ ಇದು ಇಕೋಲಿ, ಸಾಲ್ಮೊನೆಲ್ಲಾ, ಲಿಸ್ಟೇರಿಯಾದಂತಹ ಬ್ಯಾಕ್ಟೀರಿಯಾಗಳನ್ನು ಹೊಂದಿರಬಹುದು. ಹೊರಗಿನಿಂದ ಮೊಳಕೆಕಾಳುಗಳನ್ನು ಖರೀದಿಸಿ ತಿನ್ನುವಾಗ ಎಚ್ಚರವಹಿಸಿ. ಏಕೆಂದರೆ ಅವು ಎಷ್ಟು ದಿನ ಹಳೆಯದು ಎಂಬುದು ನಿಮಗೆ ತಿಳಿದಿರುವುದಿಲ್ಲ. ಮೊಳಕೆಕಾಳುಗಳನ್ನು ಹೆಚ್ಚು ಸಮಯ ಬಿಟ್ಟರೆ ಅದು ಅಪಾಯಕಾರಿ ಬ್ಯಾಕ್ಟೀರಿಯಾವನ್ನು ಹೊಂದಿರುತ್ತದೆ. ಅದು ನಿಮ್ಮ ಆರೋಗ್ಯಕ್ಕೆ ಹಾನಿ ಮಾಡುತ್ತದೆ. ಆದ್ದರಿಂದ ಹಳೆಯ ಮೊಳಕೆಕಾಳುಗಳನ್ನು ತಿನ್ನುವುದನ್ನು ಅಥವಾ ಹೊರಗಿನಿಂದ ಮೊಳಕೆಕಾಳುಗಳನ್ನು ಖರೀದಿಸುವುದನ್ನು ತಪ್ಪಿಸಬೇಕು.