ನವದೆಹಲಿ : ಸುಡುವ ಬೇಸಿಗೆಯಲ್ಲಿ ಸಾಕಷ್ಟು ನೀರು ಕುಡಿಯುವುದರ ಹೊರತಾಗಿ ಶಾಖವನ್ನು ತಪ್ಪಿಸಲು ತಂಪು ಪಾನೀಯಗಳ ಮೊರೆಹೋಗುತ್ತೀವೆ. ಅದರಲ್ಲೂ ಕಬ್ಬಿನ ಜ್ಯೂಸ್ ಕುಡಿಯುವುದೆಂದರೆ ಎಲ್ಲರಿಗೂ ಖುಷಿ. ಕಬ್ಬಿನ ಜ್ಯೂಸ್ ಶಾಖದಿಂದ ಉಪಶಮನವನ್ನು ನೀಡುತ್ತದೆ. ಆದರೆ ಇದು ಆರೋಗ್ಯಕ್ಕೆ ಹಾನಿಯುಂಟು ಮಾಡಬಹುದು. ಈ ಕಾರಣದಿಂದಾಗಿ ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ಐಸಿಎಂಆರ್) ಕಬ್ಬಿನ ಜ್ಯೂಸ್ ಕುಡಿಯದಂತೆ ಎಚ್ಚರಿಕೆ ನೀಡಿದೆ. ಐಸಿಎಂಆರ್ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದ್ದು, ಪಾನೀಯಗಳನ್ನು ಯಾವ ಪ್ರಮಾಣದಲ್ಲಿ ಕುಡಿಯಬೇಕು ಎಂದು ಸೂಚಿಸಿದೆ.
ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ಐಸಿಎಂಆರ್) ಹೊರಡಿಸಿದ ಮಾರ್ಗಸೂಚಿಯಲ್ಲಿ ಕಬ್ಬಿನ ರಸದಲ್ಲಿ ಹೆಚ್ಚಿನ ಸಕ್ಕರೆ ಅಂಶವಿದೆ ಎಂದು ಹೇಳಲಾಗಿದೆ. ಆರೋಗ್ಯ ಸಂಬಂಧಿ ಸಮಸ್ಯೆಗಳ ದೃಷ್ಟಿಯಿಂದ ಕನಿಷ್ಠ ಪ್ರಮಾಣದ ಕಬ್ಬಿನ ರಸವನ್ನು ಕುಡಿಯಲು ಸಲಹೆ ನೀಡಲಾಗಿದೆ. ಆರೋಗ್ಯಕರ ಆಹಾರ ಪದ್ಧತಿಯನ್ನು ಉತ್ತೇಜಿಸಲು, ICMR ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ನ್ಯೂಟ್ರಿಷನ್ (NIN) ಸಹಯೋಗದೊಂದಿಗೆ 17 ಹೊಸ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ.
ಕಬ್ಬಿನ ಜ್ಯೂಸ್ ಹೆಚ್ಚಿನ ಪ್ರಮಾಣದ ಸಕ್ಕರೆಯನ್ನು ಹೊಂದಿರುತ್ತದೆ, 100ML ಕಬ್ಬಿನ ರಸದಲ್ಲಿ ಸುಮಾರು 13-15 ಗ್ರಾಂ ಸಕ್ಕರೆ ಕಂಡುಬರುತ್ತದೆ. ಇದು ಆರೋಗ್ಯಕ್ಕೆ ಹಾನಿಕಾರಕವಾಗಿದೆ. ವಯಸ್ಕರು ದಿನಕ್ಕೆ 30 ಗ್ರಾಂಗಿಂತ ಹೆಚ್ಚು ಸಕ್ಕರೆಯನ್ನು ಸೇವಿಸಬಾರದು, ಆದರೆ 7 ರಿಂದ 10 ವರ್ಷ ವಯಸ್ಸಿನ ಮಕ್ಕಳಿಗೆ 24 ಗ್ರಾಂ ಎಂದು ತಜ್ಞರು ಹೇಳುತ್ತಾರೆ. ಇಂಥಾ ಪರಿಸ್ಥಿತಿಯಲ್ಲಿ ದಿನಕ್ಕೆ ಒಮ್ಮೆ ಕಬ್ಬಿನ ಜ್ಯೂಸ್ ಸೇವಿಸಿದರೆ ದೈನಂದಿನ ಸಕ್ಕರೆಯ ಮಿತಿಗೆ ಹತ್ತಿರವಾಗುತ್ತೀರಿ ಎಂದು ಐಸಿಎಂಆರ್ ತಿಳಿಸಿದೆ.
ಎಲ್ಲಾ ರೀತಿಯ ಕಾರ್ಬೊನೇಟೆಡ್ ಮತ್ತು ಕಾರ್ಬೊನೇಟೆಡ್ ಅಲ್ಲದ ತಂಪು ಪಾನೀಯಗಳನ್ನು ಸಹ ಐಸಿಎಂಆರ್ ಪಟ್ಟಿಯಲ್ಲಿ ಸೇರಿಸಲಾಗಿದೆ. ಸಕ್ಕರೆಯೊಂದಿಗೆ ಕೃತಕ ಸಕ್ಕರೆ, ಖಾದ್ಯ ಆಮ್ಲಗಳು ಮತ್ತು ಕೃತಕ ಸುವಾಸನೆಗಳನ್ನು ಸಿಹಿಗಾಗಿ ಈ ಪಾನೀಯಗಳಿಗೆ ಸೇರಿಸಲಾಗುತ್ತದೆ. ಇದು ಆರೋಗ್ಯಕ್ಕೆ ಹಾನಿ ಉಂಟುಮಾಡಬಹುದು. ತಂಪು ಪಾನೀಯಗಳು ನೀರು ಮತ್ತು ತಾಜಾ ಜ್ಯೂಸ್ಗಳಿಗೆ ಪರ್ಯಾಯವಲ್ಲ, ಆದ್ದರಿಂದ ಅವುಗಳ ಸೇವನೆಯನ್ನು ತಪ್ಪಿಸಬೇಕು ಎಂದು ICMR ಹೇಳಿದೆ. ಇವುಗಳ ಬದಲಾಗಿ ಮಜ್ಜಿಗೆ, ನಿಂಬೆಹಣ್ಣಿನ ಜ್ಯೂಸ್, ಎಳನೀರು ಕುಡಿಯಲು ಸಲಹೆ ನೀಡಿದೆ.