ಲೈಫ್‌ಸ್ಟೈಲ್

ಭಾವಿಸಮೀರ ಶ್ರೀ ವಾದಿರಾಜರು: ಆರಾಧನಾ ಮಹೋತ್ಸವ

| ಶಿಲ್ಪಾ ಕುಲಕರ್ಣಿ

ದ್ವೈತ ಸಿದ್ಧಾಂತದ ನಿಷ್ಠರಾದ ಮಧ್ವಮತದ ಪರಿಪಾಲಕರು ಶ್ರೀ ವಾದಿರಾಜ ತೀರ್ಥರು. ಉಡುಪಿಯಿಂದ ಅನತಿ ದೂರದಲ್ಲಿರುವ ಹೂವಿನಕೆರೆಯಲ್ಲಿ ಕ್ರಿಶ 1481 ರ ಮಾಘ ಶುಕ್ಲ ದ್ವಾದಶಿಯಂದು ಜನಿಸಿ, 8ನೇ ವಯಸ್ಸಿನಲ್ಲಿಯೇ ಗುರುಗಳಾದ ಶ್ರೀ ವಾಗೀಶತೀರ್ಥರಿಂದ ಸನ್ಯಾಸದೀಕ್ಷೆ ಪಡೆದು ‘ವರಾಹ’ ಎಂಬ ಜನ್ಮಾಂಕಿತದಿಂದ ಶ್ರೀವಾದಿರಾಜ ತೀರ್ಥರಾದರು. ದಾಸತ್ರಯರೆಂದೇ ಪ್ರಖ್ಯಾತರಾದ ಶ್ರೀ ಮಧ್ವಾಚಾರ್ಯರು, ಶ್ರೀ ಜಯತೀರ್ಥರು ಮತ್ತು ಶ್ರೀ ವ್ಯಾಸತೀರ್ಥರಂತೆ ದ್ವೈತ ಸಿದ್ಧಾಂತದ ಪ್ರತಿಪಾದಕರಲ್ಲಿ ಮುಂಚೂಣಿಯಲ್ಲಿರುವವರು ವಾದಿರಾಜ ತೀರ್ಥರು. ಸಂಸ್ಕೃತ, ಕನ್ನಡ ಮತ್ತು ತುಳು ಭಾಷೆಗಳಲ್ಲಿ ಅನೇಕ ಕೃತಿಗಳನ್ನು ರಚಿಸಿದ್ದಾರೆ. ಇಷ್ಟದೇವರಾದ ವಿಷ್ಣುವನ್ನು ಹಯವದನ ರೂಪದಲ್ಲಿ ಸಾಕ್ಷಾತ್ಕರಿಸಿಕೊಂಡು ‘ಹಯವದನ’ ಅಂಕಿತದಲ್ಲಿ ಕೀರ್ತನೆಗಳನ್ನು ರಚಿಸಿದ್ದಾರೆ. ‘ಹರಿ ಸವೋತ್ತಮ ವಾಯು ಜೀವೋತ್ತಮ’ ತತ್ವ ಸಂದೇಶ ಸಾರಲು ಭಾರತದ ಉದ್ದಗಲಕ್ಕೂ ಮೂರು ಬಾರಿ ಸಂಚರಿಸಿದರು. ಈ ಸಂಚಾರಯಾತ್ರೆಯಲ್ಲಿ ‘ತೀರ್ಥ ಪ್ರಬಂಧ’ ಗ್ರಂಥ ರಚಿಸಿದರು. ಶ್ರೀ ಕೃಷ್ಣನ ಭಾಗವತದ ದಶಮ ಸ್ಕಂದದ ಕಥೆಯನ್ನು ಶ್ರೀಗಳು ‘ರುಕ್ಮಿಣೀಶ ವಿಜಯ’ದಲ್ಲಿ ವರ್ಣಿಸಿದ್ದಾರೆ. ಮಹಾಭಾರತಕ್ಕೆ ಅರ್ಥ ಬರೆದ ಗ್ರಂಥ ಲಕ್ಷಾಲಂಕಾರ, ಯುಕ್ತಿಮಲ್ಲಿಕ, ಸರಸ ಭಾರತಿ ವಿಲಾಸ, ಏಕಾದಶಿ ನಿರ್ಣಯ ಹೀಗೆ ಹಲವಾರು ಗ್ರಂಥಗಳನ್ನು ಸಂಸ್ಕೃತದಲ್ಲಿ ರಚಿಸಿದ್ದಾರೆ. ಕನ್ನಡದಲ್ಲಿ ‘ಲಕ್ಷ್ಮೀ ಶೋಭಾನೆ’, ‘ಗುಂಡಕ್ರೀಯ’ ಮತ್ತು ‘ವೈಕುಂಠ ವರ್ಣನೆ’ ಮೊದಲಾದ ಗ್ರಂಥಗಳನ್ನು ಬರೆದಿದ್ದಾರೆ. ಇವರ ಸುಲಲಿತ ಸಾಹಿತ್ಯದ ಕೌಶಲಕ್ಕೆ ವಿಜಯನಗರದ ಆಡಳಿತ ಅವಧಿಯಲ್ಲಿ ‘ಪ್ರಸಂಗಾಭರಣತೀರ್ಥ’ ಬಿರುದಿನಿಂದ ಪ್ರಸಿದ್ಧರಾಗಿದ್ದರು.

ಅಯೋಧ್ಯೆಯಲ್ಲಿದ್ದ ಆಂಜನೇಯನನ್ನು ಉಡುಪಿಯಲ್ಲಿ ಪ್ರತಿಷ್ಠಾಪಿಸಿದರು. ವಾಯುದೇವರ ಅವತಾರರಾದ ಮಧ್ವಾಚಾರ್ಯರು ಉಡುಪಿಯಲ್ಲಿ ನೆಲೆಸಿರುವರೆಂದು ದ್ವಾರಕೆಯಿಂದ ಶ್ರೀ ಕೃಷ್ಣ ಉಡುಪಿಗೆ ಬಂದ. ಹಾಗೆಯೇ ಉಡುಪಿಯಲ್ಲಿ ಕೃಷ್ಣ ಇರುವನೆಂದು ಅಯೋಧ್ಯೆಯಲ್ಲಿದ್ದ ಆಂಜನೇಯ ವಾದಿರಾಜರ ಮೂಲಕ ಉಡುಪಿಗೆ ಬಂದ. ಹೀಗೆ ಕೃಷ್ಣನಿಗೂ, ವಾಯುದೇವರಿಗೂ ಅವಿಭಾಜ್ಯನಂಟು ಇರುವುದು ಸ್ಪಷ್ಟವಾಗುತ್ತದೆ. ಆಚಾರ್ಯ ಮಧ್ವರು ಆರಂಭಿಸಿದ ಅಷ್ಟಮಠಗಳ ಪೂಜಾ ಅವಧಿಯನ್ನು 2 ತಿಂಗಳಿಂದ 2 ವರ್ಷದ ಪರ್ಯಾಯ ಪದ್ಧತಿಗೆ ತರುವಲ್ಲಿ ಶ್ರೀಗಳು ನಿರ್ಣಾಯಕರಾದರು. ಅಷ್ಟ ಮಠಗಳಲ್ಲಿ ಒಂದಾದ ಸೋದೆ ಮಠದ ಮಠಾಧಿಪತಿಗಳಾಗಿ, ತತ್ವಜ್ಞಾನಿಗಳಾದ ಇವರು ಅನ್ಯಮತೀಯರಿಗೆ ಮಧ್ವಮತಕ್ಕೆ ಮುಕ್ತವಾಗಿ ಬರಮಾಡಿಕೊಂಡಿದ್ದಾರೆ. ವಾದಿರಾಜರು ಶ್ರೀಪತಿಯಾದ ಹಯವದನನಿಗೆ ದಿನಾಲೂ ಕಡಲೆಯನ್ನು ಬೇಯಿಸಿ ಬೆಲ್ಲ, ಏಲಕ್ಕಿ, ತುಪ್ಪ, ಬಾಳೆಹಣ್ಣು, ಕೊಬ್ಬರಿ ಮತ್ತು ದ್ರಾಕ್ಷಿಯನ್ನು ಸೇರಿಸಿ ತಯಾರಿಸಿದ ಹೂರಣವನ್ನು ನೈವೇದ್ಯಕ್ಕೆ ಅರ್ಪಿಸುತ್ತಿದ್ದರು. ಈ ಖಾದ್ಯ ‘ಹಯಗ್ರೀವ’ ಎಂದೇ ಪ್ರಸಿದ್ಧಿ ಪಡೆಯಿತು. ಮೇಲ್ನೋಟಕ್ಕೆ ಸಿಹಿ ಖಾದ್ಯ ಎನಿಸಿದರೂ ಶ್ರೀಗಳು ಕಡಲೆಯನ್ನು ಭಕ್ತಿಗೆ ಹೋಲಿಸಿ, ವೈರಾಗ್ಯ ಮತ್ತು ಜ್ಞಾನವನ್ನು ಬೆಲ್ಲಕ್ಕೆ ಹೋಲಿಸಿ, ಭಗವಂತನಲ್ಲಿ ಜ್ಞಾನ, ಭಕ್ತಿ ಮತ್ತು ವೈರಾಗ್ಯಕ್ಕಾಗಿ ಪ್ರಾರ್ಥಿಸಿದ್ದಾರೆ.

ಭಕುತಿ ಕಡಲೆ ಜ್ಞಾನ ವೈರಾಗ್ಯ ಬೆಲ್ಲದ |

ಮುಕುತಿ ಆನಂದ ಸುಖದ ಕ್ಷೀರ ಲಡ್ಡಿಗೆ |

ಯುಕುತಿ ಧ್ಯಾನ ಕೊಟ್ಟು ನೀನು ಎಲ್ಲ ಮಾತಲಿ |

ಶಕುತಿ ಸಂತೋಷ ಮಹಿಮೆ ತೋರ ಬಂದೆಯ ||

ನೂರಿಪ್ಪತ್ತು ವರ್ಷಗಳ ತುಂಬು ಬಾಳ್ವೆಯನ್ನು ಬಾಳಿದ ಶ್ರೀ ವಾದಿರಾಜರು ಸೋದೆ ಮಠದಲ್ಲಿ ಸಶರೀರರಾಗಿ ಫಾಲ್ಗುಣ ಮಾಸದಲ್ಲಿ ಬೃಂದಾವನಸ್ಥರಾದರು. ಪ್ರತಿ ವರ್ಷ ಸೋದೆ ಮಠದಲ್ಲಿ ಈ ದಿನವನ್ನು ಯತಿಗಳ ಆರಾಧನೆಯಾಗಿ ಆಚರಿಸಲಾಗುತ್ತದೆ. ಈ ವರ್ಷ ಮಾರ್ಚ್ 1ರಿಂದ 11ರವರೆಗೆ ಆರಾಧನಾ ಮಹೋತ್ಸವ ಮತ್ತು ಧಾರ್ವಿುಕ ಕೂಟ ಆಯೋಜಿಸಲಾಗಿದೆ.

(ಲೇಖಕರು ಹವ್ಯಾಸಿ ಬರಹಗಾರರು)