ಲೈಫ್‌ಸ್ಟೈಲ್

ಬಿಸ್ಕತ್ತುಗಳು ದೇಹಕ್ಕೆ ಅಪಾಯಕಾರಿಯೇ? ತಜ್ಞರು ಹೇಳಿದ ಶಾಕಿಂಗ್​ ಸಂಗತಿ ಇಲ್ಲಿದೆ ನೋಡಿ... Biscuits

Biscuits : ನೀವು ಬೆಳಗಿನ ಉಪಾಹಾರದ ಬದಲು ಬಿಸ್ಕತ್ತು ತಿಂದು ನಿಮ್ಮ ಹಸಿವನ್ನು ನೀಗಿಸಿಕೊಳ್ಳುವವರಾಗಿದ್ದರೆ, ಈ ಮಾಹಿತಿಯನ್ನು ನೀವು ಓದಲೇಬೇಕು. ಬಹಳ ರುಚಿಕರವೆಂದು ಬಾಯಿ ಚಪ್ಪರಿಸಿ ತಿಂದರೆ ದೇಹದ ಮೇಲೆ ಏನೆಲ್ಲ ಪರಿಣಾಮ ಬೀರುತ್ತದೆ ಎಂಬುದನ್ನು ತಿಳಿದುಕೊಂಡರೆ ಒಳ್ಳೆಯದು.

ಅಂದಹಾಗೆ ಬಿಸ್ಕತ್ತುಗಳು ಇಂದು ಅತ್ಯಂತ ಜನಪ್ರಿಯ ತಿಂಡಿಗಳಲ್ಲಿ ಒಂದಾಗಿದ್ದು, ಮಕ್ಕಳಿಂದ ಹಿಡಿದು ದೊಡ್ಡವರವರೆಗೆ ಎಲ್ಲರೂ ಇದನ್ನು ಇಷ್ಟಪಡುತ್ತಾರೆ. ಪ್ರಯಾಣ ಮಾಡುವಾಗ ಬ್ಯಾಗ್​ನಲ್ಲಿ ಒಂದು ಬಿಸ್ಕತ್ತು ಪ್ಯಾಕೆಟ್​ ಇದ್ದೇ ಇರುತ್ತದೆ. ಅಲ್ಲದೆ, ಕಾಫಿ-ಟೀ ಕುಡಿವಾಗಂತೂ ಬಿಸ್ಕತ್ತನ್ನು ಅದರೊಳಗೆ ನೆನೆಸಿ ತಿನ್ನುವವರೆ ಹೆಚ್ಚು. ಆದರೆ, ಇದ್ಯಾವುದೂ ಒಳ್ಳೆಯ ಅಭ್ಯಾಸವಲ್ಲ ಅನ್ನೋದನ್ನ ನೆನಪಿನಲ್ಲಿಡಿ.

ಬಿಸ್ಕತ್ತು ಅಗತ್ಯ ಪೋಷಕಾಂಶಗಳ ಕೊರತೆಯಿರುವ ದೈನಂದಿನ ಅಭ್ಯಾಸವಾಗಿದೆ. ಹೆಚ್ಚಿನ ಬಿಸ್ಕತ್ತುಗಳಲ್ಲಿ ಅತಿಯಾದ ಸಕ್ಕರೆ ಮತ್ತು ಅನಾರೋಗ್ಯಕರ ಕೊಬ್ಬು ಇರುತ್ತದೆ. ಇದಲ್ಲದೆ, ಬಿಸ್ಕತ್ತುಗಳು "ಟ್ರಾನ್ಸ್ ಫ್ಯಾಟ್" ಎಂದು ಕರೆಯಲ್ಪಡುವ ಒಂದು ರೀತಿಯ ಕೊಬ್ಬಿನಿಂದ ಸಮೃದ್ಧವಾಗಿವೆ. ಇದು ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ಹೆಚ್ಚಿಸುತ್ತದೆ ಮತ್ತು ಒಳ್ಳೆಯ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುತ್ತದೆ.

ಅತಿಯಾಗಿ ಬಿಸ್ಕತ್ತು ತಿಂದರೆ, ಮಧುಮೇಹ ಬರುವ ಸಾಧ್ಯತೆ ಹೆಚ್ಚಿದೆ. ಇನ್ನು ಕೆಟ್ಟ ಕೊಲೆಸ್ಟ್ರಾಲ್​ ಮಟ್ಟ ಹೆಚ್ಚಾಗುವುದರಿಂದ ಹೃದಯದ ಆರೋಗ್ಯಕ್ಕೂ ಅಪಾಯಕಾರಿ. ಅಲ್ಲದೆ, ಸ್ಥೂಲಕಾಯ ಅಥವಾ ಬೊಜ್ಜು ಬರುವ ಸಾಧ್ಯತೆ ಹೆಚ್ಚಿರುತ್ತದೆ. ಇದಿಷ್ಟೇ ಅಲ್ಲದೆ, ಸಾಕಷ್ಟು ಆರೋಗ್ಯ ಸಮಸ್ಯೆಗಳು ಕಾಡುತ್ತವೆ. ಹಾಗಾಗಿ ಆದಷ್ಟು ಬಿಸ್ಕತ್ತಿನಿಂದ ದೂರವಿದ್ದರೆ, ಒಳ್ಳೆಯದು.

ಟೀ, ಬಿಸ್ಕೆಟ್​ ಕಾಂಬಿನೇಷನ್ ಅಪಾಯಕಾರಿ

ಇನ್ನು ಟೀ ಜತೆ ಬಿಸ್ಕತ್ತು​ ಸೇವನೆ ಸಾಮಾನ್ಯವಾಗಿದೆ. ಆದರೆ, ಈ ಕಾಂಬಿನೇಷನ್​ ಹಿಂದಿರುವ ಅಪಾಯ ಮಾತ್ರ ಯಾರಿಗೂ ತಿಳಿದಿಲ್ಲ. ಕೆಲವರು ಇದನ್ನು ಅಭ್ಯಾಸವಾಗಿ ಮಾಡುತ್ತಿದ್ದಾರೆ. ಆದರೆ ಪ್ರತಿದಿನ ಚಹಾದೊಂದಿಗೆ ಬಿಸ್ಕತ್ತುಗಳನ್ನು ಸೇವಿಸುವುದರಿಂದ ಆರೋಗ್ಯ ಸಮಸ್ಯೆಗಳು ಉಂಟಾಗುತ್ತವೆ. ಚಹಾ ಮತ್ತು ಬಿಸ್ಕತ್ತುಗಳಲ್ಲಿ ಸಕ್ಕರೆ ಇರುತ್ತದೆ. ಹಾಗಾಗಿ ಅವುಗಳನ್ನು ತಿಂದಾಗ ದೇಹದಲ್ಲಿ ಸಕ್ಕರೆ ಅಂಶ ಹೆಚ್ಚುತ್ತದೆ. ಸಕ್ಕರೆ ಹೆಚ್ಚಿರುವ ಆಹಾರಗಳನ್ನು ನಿಯಮಿತವಾಗಿ ಸೇವಿಸುವುದರಿಂದ ರಕ್ತದಲ್ಲಿನ ಗ್ಲೂಕೋಸ್ ಮಟ್ಟವು ಕಾಲಾನಂತರದಲ್ಲಿ ಹೆಚ್ಚಾಗುತ್ತದೆ. ಅಧಿಕ ರಕ್ತದ ಗ್ಲೂಕೋಸ್ ಮಧುಮೇಹಕ್ಕೆ ಕಾರಣವಾಗಬಹುದು. ಪ್ರತಿನಿತ್ಯ ಸಕ್ಕರೆ ಹೆಚ್ಚಿರುವ ಆಹಾರವನ್ನು ಸೇವಿಸುವುದರಿಂದ ದೇಹವು ಹೆಚ್ಚು ಇನ್ಸುಲಿನ್ ಅನ್ನು ಉತ್ಪಾದಿಸುತ್ತದೆ. ಕಾಲಾನಂತರದಲ್ಲಿ ಇದು ಟೈಪ್ 2 ಮಧುಮೇಹಕ್ಕೆ ಕಾರಣವಾಗಬಹುದು.

ಇನ್ನು ರಾತ್ರಿ ಹಸಿವಾದರೂ, ರಕ್ತದಲ್ಲಿನ ಸಕ್ಕರೆ ಕಡಿಮೆ ಇದ್ದರೂ, ಪ್ರಯಾಣ ಮಾಡುವಾಗ ಆಹಾರವಿಲ್ಲದಿದ್ದರೂ ಬಿಸ್ಕತ್ತುಗಳು ತ್ವರಿತ ಪರಿಹಾರ. ಆದರೆ, ಅದನ್ನು ಅಭ್ಯಾಸ ಮಾಡಿಕೊಳ್ಳಬೇಡಿ, ಸಾಂದರ್ಭಿಕವಾಗಿ ತೆಗೆದುಕೊಳ್ಳಿ. ರಕ್ತದಲ್ಲಿನ ಗ್ಲೂಕೋಸ್ ಮಟ್ಟದ ತ್ವರಿತ ಏರಿಕೆಯಲ್ಲಿ ಬಿಸ್ಕತ್ತುಗಳು ಪ್ರಮುಖ ಪಾತ್ರವಹಿಸುತ್ತವೆ. ಇದನ್ನು ತಪ್ಪಿಸಲು, ಧಾನ್ಯಗಳೊಂದಿಗೆ ಸಕ್ಕರೆ ಮುಕ್ತ ಬಿಸ್ಕತ್ತುಗಳನ್ನು ತಿನ್ನಿರಿ ಮತ್ತು ನೀವು ಹಸಿದಿರುವಾಗ ಬಿಸ್ಕತ್ ಬದಲಿಗೆ ಪ್ರೋಟೀನ್​ ಭರಿತ ತಿಂಡಿಯನ್ನು ತಿನ್ನಿರಿ.

ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್​ ನೆಟ್​” ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ.