ಐಪಿಎಲ್

ಮುಂಬೈ ಇಂಡಿಯನ್ಸ್‌ನಲ್ಲಿ ದೊಡ್ಡ ಬದಲಾವಣೆ: ಮತ್ತೆ MI ನಾಯಕನಾಗಲಿದ್ದಾರಂತೆ ರೋಹಿತ್ ಶರ್ಮಾ!...ಹಾರ್ದಿಕ್​ ಮುಂದಿನ ನಡೆ ಏನು..? | Mumbai Indians

Mumbai Indians: ಮುಂಬರುವ 2027ರ ಐಪಿಎಲ್ ಸೀಸನ್‌ಗಾಗಿ ಮುಂಬೈ ಇಂಡಿಯನ್ಸ್ ಫ್ರಾಂಚೈಸಿಯು ತಂಡದ ನಾಯಕತ್ವದಲ್ಲಿ ದೊಡ್ಡ ಬದಲಾವಣೆಗೆ ಸಜ್ಜಾಗಿದ್ದು, ಹಿರಿಯ ಆಟಗಾರ ರೋಹಿತ್ ಶರ್ಮಾ ಅವರನ್ನು ಮತ್ತೆ ನಾಯಕನನ್ನಾಗಿ ಮರಳಿ ಕರೆತರಲು ತಯಾರಿ ನಡೆಸಿದೆ ಎಂದು ವರದಿಯಾಗಿದೆ.

ಮೂರು ವರ್ಷಗಳ ಹಿಂದೆ ರೋಹಿತ್ ಅವರ ಬದಲಿಗೆ ನಾಯಕತ್ವ ವಹಿಸಿಕೊಂಡಿದ್ದ ಹಾರ್ದಿಕ್ ಪಾಂಡ್ಯ ಅವರ ಕಾರ್ಯವೈಖರಿಯ ಬಗ್ಗೆ ತಂಡದ ಮ್ಯಾನೇಜ್‌ಮೆಂಟ್‌ಗೆ ಸಂಪೂರ್ಣ ತೃಪ್ತಿ ಇಲ್ಲ ಎನ್ನಲಾಗಿದ್ದು, ಹಾರ್ದಿಕ್ ನಾಯಕತ್ವದ ಈ ಅವಧಿಯಲ್ಲಿ ಮುಂಬೈ ತಂಡವು ಕೇವಲ ಒಮ್ಮೆ ಮಾತ್ರ ಪ್ಲೇಆಫ್‌ಗೆ ಪ್ರವೇಶಿಸಿದೆ. ಈ ಹಿನ್ನೆಲೆಯಲ್ಲಿ ಫ್ರಾಂಚೈಸಿಯು ಕೇವಲ ನಾಯಕನನ್ನು ಬದಲಾಯಿಸುವುದು ಮಾತ್ರವಲ್ಲದೆ, ಹಾರ್ದಿಕ್ ಪಾಂಡ್ಯ ಅವರನ್ನು ಬೇರೆ ತಂಡಕ್ಕೆ ಟ್ರೇಡ್ ಮಾಡುವ ಮನಸ್ಸು ಮಾಡಿದೆ ಎಂದು ಮೂಲಗಳು ತಿಳಿಸಿವೆ.

ಹೂ ಅಂದಬಿಟ್ರಾ ಹಿಟ್​ಮ್ಯಾನ್​..?

ನ್ಯೂಜಿಲೆಂಡ್‌ ವಿರುದ್ಧದ ಏಕದಿನ ಸರಣಿಗಾಗಿ ಹಿರಿಯ ಆಟಗಾರ ರೋಹಿತ್ ಶರ್ಮಾ ತೆರಳುವ ಮುನ್ನವೇ ಮುಂಬೈ ಇಂಡಿಯನ್ಸ್ ಮ್ಯಾನೇಜ್‌ಮೆಂಟ್ ಅವರನ್ನು ಸಂಪರ್ಕಿಸಿತ್ತು. ತಂಡದ ನಾಯಕತ್ವದ ಜವಾಬ್ದಾರಿಯನ್ನು ಮರಳಿ ವಹಿಸಿಕೊಳ್ಳುವಂತೆ ರೋಹಿತ್ ಅವರಿಗೆ ಪ್ರಸ್ತಾಪಿಸಲಾಗಿದ್ದು, ಸ್ವಾರಸ್ಯಕರವೆಂಬಂತೆ ರೋಹಿತ್ ಈ ಪ್ರಸ್ತಾವನೆಗೆ ಸಮ್ಮತಿ ಸೂಚಿಸಿದ್ದಾರೆ ಎಂದು ವರದಿಯಾಗಿದೆ. ಈ ಮಹತ್ವದ ಬೆಳವಣಿಗೆಯು ಫ್ರಾಂಚೈಸಿಯ ಕೋಚಿಂಗ್ ವಿಭಾಗದ ಪ್ರಮುಖ ಪುನಾರಚನೆಯ ಬೆನ್ನಲ್ಲೇ ಬಂದಿದ್ದು, ಶುಕ್ರವಾರದಂದು ಮುಂಬೈ ಇಂಡಿಯನ್ಸ್ ಒಟ್ಟು ನಾಲ್ಕು ಹೊಸ ಕೋಚ್‌ಗಳ ನೇಮಕವನ್ನು ಅಧಿಕೃತವಾಗಿ ಘೋಷಿಸಿತ್ತು.

ತಂಡದ ನಾಯಕತ್ವದ ರೇಸ್‌ನಲ್ಲಿ ಸೂರ್ಯಕುಮಾರ್ ಯಾದವ್ ಮತ್ತು ಜಸ್‌ಪ್ರೀತ್ ಬುಮ್ರಾ ಅವರಂತಹ ಆಟಗಾರರ ಹೆಸರುಗಳೂ ಕೂಡ ಚರ್ಚೆಯಲ್ಲಿದ್ದವು. ಅಲ್ಲದೆ, ಯುವ ಬ್ಯಾಟರ್ ತಿಲಕ್ ವರ್ಮಾ ಅವರನ್ನು ಭವಿಷ್ಯದ ದೀರ್ಘಕಾಲೀನ ನಾಯಕನ ಆಯ್ಕೆಯಾಗಿ ಪರಿಗಣಿಸುವ ಬಗ್ಗೆಯೂ ಚರ್ಚೆ ನಡೆದಿತ್ತು. ಆದರೆ ಅಂತಿಮವಾಗಿ ರೋಹಿತ್ ಶರ್ಮಾ ಅವರೇ ತಂಡದ ಆದ್ಯತೆಯ ಆಯ್ಕೆಯಾಗಿ ಹೊರಹೊಮ್ಮಿದ್ದಾರೆ ಎಂದು ತಿಳಿದುಬಂದಿದೆ.

ರೋಹಿತ್ ಆರಂಭದಲ್ಲಿ ತಿಲಕ್ ವರ್ಮಾ ಅವರ ಹೆಸರನ್ನು ಸೂಚಿಸಿದ್ದರು. ಆದರೆ ಫ್ರಾಂಚೈಸಿಯು ರೋಹಿತ್ ಅವರನ್ನೇ ನಾಯಕತ್ವ ವಹಿಸಿಕೊಳ್ಳುವಂತೆ ಮನವಿ ಮಾಡಿಕೊಂಡಿತು, ಇದಕ್ಕೆ ಅವರು ಈಗ ಒಪ್ಪಿಗೆ ಸೂಚಿಸಿದ್ದಾರೆ. ರೋಹಿತ್ ನ್ಯೂಜಿಲೆಂಡ್‌ಗೆ ತೆರಳುವ ಮುನ್ನವೇ ಹಲವು ಹಂತದ ಮಾತುಕತೆಗಳು ನಡೆದಿದ್ದವು. ಹೊಸ ಕೋಚ್‌ಗಳ ನೇಮಕದ ಸಂದರ್ಭದಲ್ಲೂ ರೋಹಿತ್ ಅವರ ಸಲಹೆಗಳನ್ನು ಪಡೆಯಲಾಗಿತ್ತು ಎಂದು ದಿ ಇಂಡಿಯನ್ ಎಕ್ಸ್‌ಪ್ರೆಸ್​ಗೆ ಮೂಲಗಳು ತಿಳಿಸಿವೆ.

ಹಾರ್ದಿಕ್ ಪಾಂಡ್ಯ ಟ್ರೇಡ್..?

ಮುಂಬೈ ತಂಡದಲ್ಲಿ ಹಾರ್ದಿಕ್ ಪಾಂಡ್ಯ ಅವರ ಮುಂದಿನ ಭವಿಷ್ಯವೇನು ಎಂಬುದು ಸದ್ಯದ ಮತ್ತೊಂದು ಪ್ರಮುಖ ಪ್ರಶ್ನೆಯಾಗಿದೆ. ಈ ಆಲ್‌ರೌಂಡರ್ ಆಟಗಾರನನ್ನು ಟ್ರೇಡ್ ವ್ಯವಸ್ಥೆಯ ಮೂಲಕ ಬೇರೆ ಫ್ರಾಂಚೈಸಿಗೆ ವರ್ಗಾಯಿಸುವ ಸಾಧ್ಯತೆಗಳ ಬಗ್ಗೆಯೂ ಚರ್ಚೆಗಳು ನಡೆದಿವೆ. ಒಂದುವೇಳೆ ಅಂತಹ ಯಾವುದೇ ವ್ಯವಹಾರ ಅಥವಾ ಡೀಲ್ ಅಂತಿಮಗೊಳ್ಳದೆ ಹೋದರೆ, ಅವರು ರೋಹಿತ್ ಶರ್ಮಾ ಅವರ ನಾಯಕತ್ವದಡಿಯೇ ಮುಂಬೈ ತಂಡದಲ್ಲಿ ಆಡುವುದನ್ನು ಮುಂದುವರಿಸಲಿದ್ದಾರೆ.

ಗುಜರಾತ್ ತಂಡದಿಂದ ಆಲ್-ಕ್ಯಾಶ್ ಒಪ್ಪಂದದ ಮೂಲಕ ಮುಂಬೈ ಸೇರಿದ ಹಾರ್ದಿಕ್ ಪಾಂಡ್ಯ ಅವರನ್ನು 2024ರ ಸೀಸನ್‌ಗೂ ಮುಂಚಿತವಾಗಿ ನಾಯಕರನ್ನಾಗಿ ನೇಮಿಸಿದ್ದು ಮುಂಬೈ ಅಭಿಮಾನಿಗಳಲ್ಲಿ ತೀವ್ರ ಅಸಮಾಧಾನಕ್ಕೆ ಕಾರಣವಾಗಿತ್ತು. ತವರಿನ ಅಂಗಳವಾದ ವಾಂಖೆಡೆ ಕ್ರೀಡಾಂಗಣದಲ್ಲಿ ಅವರು ವೀಕ್ಷಕರಿಂದ ನಿರಂತರವಾಗಿ ವಿರೋಧ ಎದುರಿಸಬೇಕಾಗಿ ಬಂದಿತ್ತು. ಆದರೆ, ಟಿ20 ವಿಶ್ವಕಪ್ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ ಬಳಿಕ ಅವರು ಮತ್ತೆ ಅಭಿಮಾನಿಗಳ ಪ್ರೀತಿಯನ್ನು ಗಳಿಸುವಲ್ಲಿ ಯಶಸ್ವಿಯಾಗಿದ್ದರು.

ಮತ್ತೊಂದೆಡೆ, ಮುಂಬೈ ಇಂಡಿಯನ್ಸ್ ತನ್ನ ನೂತನ ಕೋಚಿಂಗ್ ಬಳಗವನ್ನು ಪ್ರಕಟಿಸಿದ್ದು, ಮಹೇಲಾ ಜಯವರ್ಧನೆ ಬದಲಿಗೆ ಕೀರನ್ ಪೊಲಾರ್ಡ್ ಅವರನ್ನು ಹೊಸ ಮುಖ್ಯ ಕೋಚ್ ಆಗಿ ನೇಮಿಸಲಾಗಿದೆ. ಬ್ಯಾಟಿಂಗ್ ಕೋಚ್​ ಜವಾಬ್ದಾರಿಯನ್ನು ರಾಬಿನ್ ಉತ್ತಪ್ಪ ವಹಿಸಿಕೊಳ್ಳಲಿದ್ದು, ನ್ಯೂಜಿಲೆಂಡ್‌ ಮಾಜಿ ವೇಗಿ ಮಿಚೆಲ್ ಮೆಕ್ಲೆನಗನ್ ಬೌಲಿಂಗ್ ಕೋಚ್ ಆಗಿ ಜವಾಬ್ದಾರಿ ವಹಿಸಿಕೊಳ್ಳಲಿದ್ದಾರೆ. ಹಾಗೆಯೇ, ಟಿ. ದಿಲೀಪ್ ಅವರನ್ನು ಫೀಲ್ಡಿಂಗ್ ಕೋಚ್ ಆಗಿ ಹಾಗೂ ಧವಳ್ ಕುಲಕರ್ಣಿ ಅವರನ್ನು ಡೆವಲಪ್‌ಮೆಂಟ್ ಬೌಲಿಂಗ್ ಕೋಚ್ ಆಗಿ ನೇಮಕ ಮಾಡಲಾಗಿದೆ(ಏಜೆನ್ಸೀಸ್​).