ಆಟಗಾರನಾಗಿ ಕಪ್‌ಗಳನ್ನು ಗೆದ್ದುಕೊಟ್ಟಿದ್ದ ದೈತ್ಯ ಈಗ ಅದೇ ತಂಡಕ್ಕೆ ಗುರು!...ಮುಂಬೈ ಇಂಡಿಯನ್ಸ್ ಹೆಡ್‌ ಕೋಚ್ ಆದ ಖ್ಯಾತ ಆಲ್‌ರೌಂಡರ್! | MI Head Coach

MI Head Coach: ಐಪಿಎಲ್ ಇತಿಹಾಸದಲ್ಲಿಯೇ ಅತ್ಯಂತ ಯಶಸ್ವಿ ಫ್ರಾಂಚೈಸಿಯಾದ ಮುಂಬೈ ಇಂಡಿಯನ್ಸ್ ತಂಡದಲ್ಲಿ ಮಹತ್ವದ ಬದಲಾವಣೆಯೊಂದು ನಡೆದಿದ್ದು, ಹೊಸ ಹೆಡ್‌ ಕೋಚ್ ಆಗಿ ಸ್ಫೋಟಕ ಆಟಗಾರ
ಮುಂಬೈ ಇಂಡಿಯನ್ಸ್ ಹೆಡ್‌ ಕೋಚ್ ಆದ ಖ್ಯಾತ ಆಲ್‌ರೌಂಡರ್
ಮುಂಬೈ ಇಂಡಿಯನ್ಸ್ ಹೆಡ್‌ ಕೋಚ್ ಆದ ಖ್ಯಾತ ಆಲ್‌ರೌಂಡರ್
Published on: 

MI Head Coach: ಐಪಿಎಲ್ ಇತಿಹಾಸದಲ್ಲಿಯೇ ಅತ್ಯಂತ ಯಶಸ್ವಿ ಫ್ರಾಂಚೈಸಿಯಾದ ಮುಂಬೈ ಇಂಡಿಯನ್ಸ್ ತಂಡದಲ್ಲಿ ಮಹತ್ವದ ಬದಲಾವಣೆಯೊಂದು ನಡೆದಿದ್ದು, ಹೊಸ ಹೆಡ್‌ ಕೋಚ್ ಆಗಿ ಸ್ಫೋಟಕ ಆಟಗಾರ ಕೀರನ್ ಪೊಲಾರ್ಡ್ ಅಧಿಕಾರ ವಹಿಸಿಕೊಂಡಿದ್ದಾರೆ. ಮಹೇಲಾ ಜಯವರ್ಧನೆ ಅವರ ನಿರ್ಗಮನದ ಬಳಿಕ ತೆರವಾಗಿದ್ದ ಈ ಸ್ಥಾನಕ್ಕೆ ದೀರ್ಘಕಾಲದಿಂದ ತಂಡದೊಂದಿಗೆ ನಂಟಿರುವ ಪೊಲಾರ್ಡ್ ಅವರನ್ನು ನೇಮಕ ಮಾಡಿ ಶನಿವಾರ ಅಧಿಕೃತ ಘೋಷಣೆ ಹೊರಡಿಸಲಾಗಿದೆ. ಆಟಗಾರನಾಗಿ ಐದು ಟ್ರೋಫಿಗಳನ್ನು ಗೆದ್ದುಕೊಟ್ಟಿದ್ದ ಪೊಲ್ಲಿ ಈಗ ಕೋಚ್ ಜವಾಬ್ದಾರಿಯನ್ನು ಹೊತ್ತುಕೊಂಡಿರುವುದು ಅಭಿಮಾನಿಗಳಲ್ಲಿ ಸಂತಸ ತಂದಿದೆ.

ಮಹೇಲಾ ಜಯವರ್ಧನೆ ಕೆಲ ತಿಂಗಳ ಹಿಂದಷ್ಟೆ ಮುಖ್ಯ ಕೋಚ್ ಸ್ಥಾನದಿಂದ ಕೆಳಕ್ಕಿಳಿದ ನಂತರ, ಆ ಜಾಗ ಖಾಲಿಯಿತ್ತು. ಮಹೇಲಾ ಅವರು ಮುಂಬೈ ತಂಡದೊಂದಿಗೆ ಎರಡು ಹಂತಗಳಲ್ಲಿ ಯಶಸ್ವಿ ಸೇವೆ ಸಲ್ಲಿಸಿದ್ದರು. ಮೊದಲ ಹಂತದಲ್ಲಿ 2017 ರಿಂದ 2022 ರವರೆಗೆ ಹಾಗೂ ಎರಡನೇ ಹಂತದಲ್ಲಿ 2024 ರಿಂದ 2026 ರವರೆಗೆ ಕೋಚ್ ಆಗಿ ಕಾರ್ಯನಿರ್ವಹಿಸಿ ತಂಡಕ್ಕೆ ತಮ್ಮ ಆದ ರೀತಿಯಲ್ಲಿ ಅಮೂಲ್ಯ ಕಾಣಿಕೆ ನೀಡಿದ್ದರು. ಇದೀಗ ಅವರ ಬದಲು ಪೊಲಾರ್ಡ್​ಗೆ ಪಟ್ಟಕಟ್ಟಲಾಗಿದೆ.

ಇದನ್ನೂ ಓದಿ:ರೋಹಿತ್ ಶರ್ಮಾ ಹಿಂದಿಕ್ಕಲು ಕೇವಲ 25 ರನ್ ಬಾಕಿ: ನ್ಯೂಜಿಲೆಂಡ್ ವಿರುದ್ಧ ಹೊಸ ದಾಖಲೆಗೆ ಸಜ್ಜಾದ ಸರ್ಪಂಚ್ ಸಾಬ್! | Shreyas Iyer

ವೆಸ್ಟ್ ಇಂಡೀಸ್‌ನ ಸ್ಫೋಟಕ ಆಲ್‌ರೌಂಡರ್ ಆಗಿದ್ದ ಕೀರನ್ ಪೊಲಾರ್ಡ್ ಅವರ ಮುಂಬೈ ಇಂಡಿಯನ್ಸ್ ಮೇಲಿನ ಒಡನಾಟ ಬಹಳ ಹಳೆಯದು. 2010 ರ ಐಪಿಎಲ್ ಹರಾಜಿನಲ್ಲಿ ಮುಂಬೈ ಫ್ರಾಂಚೈಸಿಯ ಪಾಲಾದ ಪೊಲಾರ್ಡ್, 2022 ರ ನವೆಂಬರ್‌ನಲ್ಲಿ ಐಪಿಎಲ್‌ಗೆ ಅಧಿಕೃತವಾಗಿ ವಿದಾಯ ಹೇಳುವವರೆಗೂ ಅದೊಂದೇ ತಂಡಕ್ಕಾಗಿ ಆಡಿ ನಿಷ್ಠೆ ಮೆರೆದಿದ್ದರು. ಮುಂಬೈ ಇಂಡಿಯನ್ಸ್ ತಂಡವು 2013, 2015, 2017, 2019 ಮತ್ತು 2020 ರಲ್ಲಿ ಐದು ಐಪಿಎಲ್ ಪ್ರಶಸ್ತಿಗಳನ್ನು ಗೆಲ್ಲುವಲ್ಲಿ ಪೊಲಾರ್ಡ್ ಅವರ ಪಾತ್ರವನ್ನು ಪದಗಳಲ್ಲಿ ಹೇಳಲು ಸಾಧ್ಯವಿಲ್ಲ. ಕ್ರಿಕೆಟ್ ವೃತ್ತಿಜೀವನಕ್ಕೆ ವಿದಾಯ ಹೇಳಿದ ತಕ್ಷಣವೇ, 2023 ರ ಸೀಸನ್‌ನಿಂದ ಮುಂಬೈ ತಂಡದ ಬ್ಯಾಟಿಂಗ್ ಕೋಚ್ ಆಗಿ ಅವರು ತಮ್ಮ ಹೊಸ ಇನ್ನಿಂಗ್ಸ್ ಆರಂಭಿಸಿದ್ದರು.

Also Read
ಆಯ್ಕೆಗಾರರ ನಿರ್ಲಕ್ಷ್ಯದಿಂದ 'ಫಿನಿಷರ್' ವರೆಗೆ...ಯಾರೀ ನಮನ್​ ಧೀರ್​...? ಆಪ್ತರು ಇವರನ್ನು ಜುಗಾಡು ಅನ್ನೋದ್ಯಾಕೆ...? | Naman Dhir
ಮುಂಬೈ ಇಂಡಿಯನ್ಸ್ ಹೆಡ್‌ ಕೋಚ್ ಆದ ಖ್ಯಾತ ಆಲ್‌ರೌಂಡರ್

ಪೊಲ್ಲಿ ಹೇಳಿದ್ದೇನು..?

ಮುಖ್ಯ ಕೋಚ್ ಆಗಿ ಬಡ್ತಿ ಪಡೆದಿರುವ ಕುರಿತು ಮಾತನಾಡಿದ ಕೀರನ್ ಪೊಲಾರ್ಡ್, ಮುಂಬೈ ಇಂಡಿಯನ್ಸ್ ತಂಡದ ಮುಖ್ಯ ಕೋಚ್ ಆಗಿ ಅಧಿಕಾರ ವಹಿಸಿಕೊಳ್ಳುವುದು ನನಗೆ ಅತ್ಯಂತ ಹೆಮ್ಮೆಯ ವಿಷಯ. ಮುಂಬೈ ತಂಡವು ನನ್ನ ಜೀವನದ ಮತ್ತು ವೃತ್ತಿಜೀವನದ ದೊಡ್ಡ ಭಾಗವಾಗಿದೆ. ಈ ತಂಡ, ಆಟಗಾರರು ಮತ್ತು ನಮ್ಮ ಪ್ರೀತಿಯ ಪಲ್ಟನ್ (ಅಭಿಮಾನಿಗಳು) ಜತೆಗಿನ ಒಡನಾಟ ನನ್ನ ಪಾಲಿಗೇ ದೊಡ್ಡದು ಎಂದು ಭಾವುಕರಾಗಿ ನುಡಿದರು.

ಮುಂದುವರಿದು ಮಾತನಾಡಿದ ಅವರು, ಒಬ್ಬ ಆಟಗಾರನಾಗಿ ಮತ್ತು ನಂತರ ಕೋಚ್ ಆಗಿ ಈ ಪ್ರಯಾಣವನ್ನು ಅನುಭವಿಸಿರುವ ನನಗೆ, ಮುಂಬೈ ಇಂಡಿಯನ್ಸ್ ತಂಡದ ಸಂಪ್ರದಾಯ ಹಾಗೂ ನೀತಿ-ನಿಯಮಗಳು ಚೆನ್ನಾಗಿ ತಿಳಿದಿವೆ. ನೀಲಿ ಮತ್ತು ಚಿನ್ನದ (Blue and Gold) ಜೆರ್ಸಿಯನ್ನು ಧರಿಸುವುದರ ಜತೆಗೆ ಎಷ್ಟು ದೊಡ್ಡ ಜವಾಬ್ದಾರಿಯಿದೆ ಎಂಬುದು ನನಗೆ ಗೊತ್ತು. ನನ್ನ ಮೇಲೆ ನಂಬಿಕೆ ಇಟ್ಟಿರುವ ನೀತಾ ಅಂಬಾನಿ, ಆಕಾಶ್ ಅಂಬಾನಿ ಹಾಗೂ ಸಂಪೂರ್ಣ ಎಂಐ ಕುಟುಂಬಕ್ಕೆ ಧನ್ಯವಾದಗಳು. ಆಟಗಾರರು ಮತ್ತು ಬೆಂಬಲ ಸಿಬ್ಬಂದಿಯೊಂದಿಗೆ ಒಟ್ಟಾಗಿ ಕೆಲಸ ಮಾಡಿ, ತಂಡದ ಪರಂಪರೆಯನ್ನು ಮುಂದುವರಿಸಲು ಹಾಗೂ ಅಭಿಮಾನಿಗಳಿಗೆ ಹಬ್ಬ ಮಾಡಲು ಹಲವು ಕಾರಣಗಳನ್ನು ನೀಡಲು ನಾನು ಉತ್ಸುಕನಾಗಿದ್ದೇನೆ ಎಂದು ಸಂತಸ ಹಂಚಿಕೊಂಡಿದ್ದಾರೆ(ಏಜೆನ್ಸೀಸ್​).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net