ಹಾವೇರಿ ಸಾಹಿತ್ಯ ಸಮ್ಮೇಳನ ಕುರಿತು ಬೆಂಗಳೂರಿನಲ್ಲಿ ಶನಿವಾರ ಕಸಾಪ ಅಧ್ಯಕ್ಷ ನಾಡೋಜ ಡಾ. ಮಹೇಶ ಜೋಶಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಡಾ. ಪ್ರಧಾನ ಗುರುದತ್ತ, ನಿವೃತ್ತ ಜಿಲ್ಲಾ ನ್ಯಾಯಾಧೀಶ ಬಿ. ಶಿವಲಿಂಗೇಗೌಡ ಇತರರು ಇದ್ದರು. 
ಜಿಲ್ಲೆ

ಕನ್ನಡ ಜಾತ್ರೆಯಲ್ಲಿ ಕನಕ, ಸರ್ವಜ್ಞ, ಶರೀಫರ ಗೋಷ್ಠಿ: ಹಾವೇರಿ ಸಾಹಿತ್ಯ ಸಮ್ಮೇಳನದ ಪ್ರಥಮ ಸಭೆಯಲ್ಲಿ ಮಹತ್ವದ ನಿರ್ಧಾರ

ಬೆಂಗಳೂರು: ಸ್ವಾತಂತ್ರ್ಯ ಹೋರಾಟದಲ್ಲಿ ಹಾವೇರಿಯ ಪಾತ್ರ, ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಕನ್ನಡ ಸಾಹಿತ್ಯದ ಪಾತ್ರ, ಹೈದರಾಬಾದ್ ಕರ್ನಾಟಕದ ವಿಮೋಚನಾ ಹೋರಾಟ ನಡೆದ ದಾರಿ, ಗಡಿ ಕರ್ನಾಟಕ ಸಮಸ್ಯೆಗಳು ಮತ್ತು ಪರಿಹಾರ ಸೇರಿ ನಾನಾ ಅಂಶಗಳ ಕುರಿತು ಮುಂಬರುವ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಗೋಷ್ಠಿಗಳಲ್ಲಿ ರ್ಚಚಿಸಲು ನಿರ್ಧರಿಸಲಾಗಿದೆ.

ಹಾವೇರಿಯಲ್ಲಿ ನವಂಬರ್ 11, 12 ಮತ್ತು 13ರಂದು ನಡೆಯಲಿರುವ 86ನೇ ಕನ್ನಡ ಸಾಹಿತ್ಯ ಸಮ್ಮೇಳನ ಕುರಿತು ಕಸಾಪದ ಶ್ರೀ ಕೃಷ್ಣರಾಜ ಪರಿಷತ್ತಿನ ಮಂದಿರದಲ್ಲಿ ಕಸಾಪ ಅಧ್ಯಕ್ಷ ನಾಡೋಜ ಡಾ. ಮಹೇಶ ಜೋಶಿ ನೇತೃತ್ವದಲ್ಲಿ ಶನಿವಾರ ನಡೆದ ಗೋಷ್ಠಿಗಳ ವಿಷಯ ರಚನೆ ಮತ್ತು ಸಂಪನ್ಮೂಲ ವ್ಯಕ್ತಿಗಳ ಆಯ್ಕೆ ಸಮಿತಿಯ ಪ್ರಥಮ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಯಿತು.

ಹಾವೇರಿಯು ಕನಕ-ಸರ್ವಜ್ಞ-ಶರೀಫರ ಪುಣ್ಯಭೂಮಿಯಾಗಿರುವ ಹಿನ್ನೆಲೆಯಲ್ಲಿ ಅವರ ಕುರಿತ ವಿಶೇಷ ಗೋಷ್ಠಿಯೊಂದಿಗೆ ಸಮ್ಮೇಳನ ಆರಂಭಿಸಲು ನಿರ್ಧರಿಸಲಾಗಿದೆ. ಅನುವಾದ ಸಾಹಿತ್ಯ-ಇದರಲ್ಲಿ ಕನ್ನಡ ಭಾಷೆಯಿಂದ ಇತರ ಭಾಷೆ ಹಾಗೂ ಇತರ ಭಾಷೆಗಳಿಂದ ಕನ್ನಡಕ್ಕೆ ಕೊಡುಗೆ, ಆರೋಗ್ಯ, ಜಾನಪದ ವೈವಿಧ್ಯ, ಕೃಷಿ, ಮಹಿಳೆ, ನೈಸರ್ಗಿಕ ವಿಪತ್ತು, ಕವಿಗೋಷ್ಠಿ, ಸನ್ಮಾನ, ಸಮ್ಮೇಳನಾಧ್ಯಕ್ಷರೊಂದಿಗೆ ಸಂವಾದ, ಹಾವೇರಿ ಜಿಲ್ಲಾ ದರ್ಶನ, ಕನ್ನಡದ ಅಸ್ಮಿತೆಯ ಸವಾಲುಗಳು, ಮಾಧ್ಯಮ ಮತ್ತು ಹೊಸ ಆವಿಷ್ಕಾರಗಳು, ಕೋವಿಡ್ ತಂದ ಆವಿಷ್ಕಾರ, ರಾಷ್ಟ್ರೀಯ ಶಿಕ್ಷಣ ನೀತಿಯ ಅರಿವು ಮತ್ತು ಅನುಷ್ಠಾನ, ಕನ್ನಡ ಸಾಹಿತ್ಯಕ್ಕೆ ಯುವಸ್ಪಂದನ, ನಾಡಿನ ಸಾಕ್ಷಿಪ್ರಜ್ಞೆಯ ಸಂಸ್ಥೆಗಳು ಸೇರಿದಂತೆ ಹಲವು ವಿಷಯಗಳನ್ನು ಗೋಷ್ಠಿಯಲ್ಲಿ ಸೇರಿಸಲು ಸಭೆಯಲ್ಲಿ ತೀರ್ವನಿಸಲಾಯಿತು.

ಸಭೆಯಲ್ಲಿ ಡಾ. ಪ್ರಧಾನ ಗುರುದತ್ತ, ಎಸ್.ಬಿ. ರಂಗನಾಥ, ಡಾ. ಶುಭಚಂದ್ರ, ಪೂರ್ಣಿಮಾ ಸುರೇಶ್, ಡಾ. ಇಕ್ಬಾಲ್ ಅಹಮದ್, ಡ್ಯಾನಿ ಪಿರೇರಾ, ನಿವೃತ್ತ ಜಿಲ್ಲಾ ನ್ಯಾಯಾಧೀಶ ಬಿ. ಶಿವಲಿಂಗೇಗೌಡ, ಡಾ. ಶಿವಾನಂದ ಕೆಳಗಿನಮನಿ, ಡಾ. ನಾ. ದಾಮೋದರ ಶೆಟ್ಟಿ, ಡಾ. ಬಿ.ಕೆ. ರವಿ, ಕಸಾಪ ಗೌರವ ಕಾರ್ಯದರ್ಶಿ ನೇ.ಭ. ರಾಮಲಿಂಗ ಶೆಟ್ಟಿ, ಗೌರವ ಕೋಶಾಧ್ಯಕ್ಷ ಬಿ.ಎಂ. ಪಟೇಲ್ ಪಾಂಡು ಸೇರಿ ಹಲವರು ಪಾಲ್ಗೊಂಡಿದ್ದರು.

ಸಭೆಯ ನಿರ್ಧಾರಗಳು

ನಾಡಿನ ಎಲ್ಲ ಪ್ರದೇಶ, ಸಾಮಾಜಿಕ ನ್ಯಾಯ, ಮಹಿಳಾ ಮತ್ತು ಯುವಕರಿಗೆ ಪ್ರಾತಿನಿಧ್ಯ ಸೇರಿ ಸೂಕ್ತ ವಿಷಯ ತಜ್ಞರನ್ನು ಸಂಪನ್ಮೂಲ ವ್ಯಕ್ತಿಗಳಾಗಿ ಆಹ್ವಾನಿಸುವುದು. ಸಾಹಿತ್ಯ, ಪರಂಪರೆ, ಸಂಸ್ಕೃತಿ, ಶೈಕ್ಷಣಿಕ, ಆರೋಗ್ಯ, ಜಾನಪದ, ಕನ್ನಡ ಶಾಲೆಗಳ ಉಳಿವು, ಕನ್ನಡ ಅನ್ನದ ಭಾಷೆಯಾಗುವ ನಿಟ್ಟಿನಲ್ಲಿ ಜನಮುಖಿಯಾಗಲು ಸಾಧ್ಯವಿರುವ ಎಲ್ಲ ವಿಷಯಗಳನ್ನು ಸಮ್ಮೇಳನದ ಮೂರು ದಿನಗಳಲ್ಲಿ ಅರ್ಥಪೂರ್ಣವಾಗಿ ಅಳವಡಿಸಿಕೊಳ್ಳುವುದು. ಸಮ್ಮೇಳನದ ಗೋಷ್ಠಿಗಳ ಮಹತ್ವ ಹೆಚ್ಚಿಸಲು ಪ್ರಧಾನ ವೇದಿಕೆಯ ಜತೆ ಸಮಾನಾಂತರ ವೇದಿಕೆಗಳಿಗೂ ಸಮಾನ ಮಹತ್ವ ನೀಡಲು ಸಭೆಯಲ್ಲಿ ಒಮ್ಮತದ ನಿಲುವು ಕೈಗೊಳ್ಳಲಾಯಿತು.