ಸೂರ್ಯ ಆಕಾಶದಲ್ಲಿ ಚಲಿಸುತ್ತಾ ಮಧ್ಯಾಹ್ನ ಮೇಲಿರುತ್ತಾನೆಂದು ನಮಗೆ ತಿಳಿದಿದೆ. ಆದರೆ ಸೂರ್ಯ ಪ್ರತಿದಿನವೂ ನೇರವಾಗಿ ನಮ್ಮ ಮೇಲಿರುವುದಿಲ್ಲ. ಖಗೋಳಶಾಸ್ತ್ರದಲ್ಲಿ ತುತ್ತತುದಿ ಎಂಬ ಕಾಲ್ಪನಿಕ ಬಿಂದುವಿನ ಬಗ್ಗೆ ಹೇಳುತ್ತಾರೆ. ಈ ಬಿಂದುವು ಒಂದು ನಿರ್ದಿಷ್ಟ ಸ್ಥಳದ ನೇರವಾಗಿ ಮೇಲೆ ಇರುವ ಬಿಂದು. ಆದುದರಿಂದ ನಿಮ್ಮ ಕೆಳಗೇ ನೆರಳು ಬೀಳುವ ಹಾಗಾಗಬೇಕಾದರೆ ಸೂರ್ಯನು ಈ ಕಾಲ್ಪನಿಕ ಬಿಂದುವಿನ ಮೂಲಕ ಹಾದು ಹೋಗಬೇಕು. ಆದರೆ ಯಾವುದೇ ದಿನ, ಮಧ್ಯಾಹ್ನದ ವೇಳೆ ಸೂರ್ಯನು ಈ ಬಿಂದುವಿನ ಸ್ವಲ್ಪ ಎಡಗಡೆ ಅಥವಾ ಬಲಗಡೆ ಇರುತ್ತಾನಾದುದರಿಂದ ಸಣ್ಣ ನೆರಳು ಬೀಳುತ್ತದೆ. ವರ್ಷದಲ್ಲಿ ಎರಡು ದಿನ ಮಾತ್ರ(ನಿಮ್ಮ ಸ್ಥಳವನ್ನು ಅವಲಂಬಿಸಿ) ಸೂರ್ಯನು ಈ ಕಾಲ್ಪನಿಕ ಬಿಂದುವಿನಲ್ಲಿದ್ದು ನೆರಳು ಬೀಳದ ಹಾಗಾಗುತ್ತದೆ.
ಬೆಳಕನ್ನು ವಸ್ತುವಿನ ಮೂಲಕ ಪರದೆ ಮೇಲೆ ಹಾಯಿಸುವಾಗ ಆ ವಸ್ತು ಬೆಳಕನ್ನು ನಿರ್ಬಂಧಿಸುವುದರಿಂದ ನೆರಳು ರಚಿತವಾಗುತ್ತದೆ. ಸೂರ್ಯನು ಆಕಾಶದಲ್ಲಿ ಲಂಬವಾಗಿ ಚಲಿಸುವಾಗ ನಮ್ಮ ನೆರಳು, ನಮ್ಮ ಪಾದವು ನೆರಳಿನ ಪಾದಕ್ಕೆ ಹೊಂದಿಕೊಂಡಂತೆ, ರಚಿತವಾಗುತ್ತಾ ಹೋಗುತ್ತದೆ. ಸೂರ್ಯ ಚಲಿಸುತ್ತಿದ್ದಂತೆ, ಸೂರ್ಯಾಸ್ತದೊಂದಿಗೆ ನೆರಳೂ ಮರೆಯಾಗುತ್ತದೆ. ಆದರೆ ಸೂರ್ಯನು ನೇರವಾಗಿ ನಮ್ಮ ತಲೆಯ ಮೇಲೆ ಹೊಳೆಯುತ್ತಿದ್ದರೆ ಆಗ ನಮ್ಮ ನೆರಳು ಸರಿಯಾಗಿ ನಮ್ಮ ಕೆಳಗೇ ಇರುತ್ತದೆ, ಆದ್ದರಿಂದ ಕಾಣುವುದಿಲ್ಲ.
ಪ್ರತಿದಿನ ಯಾಕಿಲ್ಲ ಈ ವಿದ್ಯಮಾನ?: ಭೂಮಿಯು ಸೂರ್ಯನ ಸುತ್ತಲೂ ಸುತ್ತುತ್ತಿರುವುದರಿಂದ, ಭೂಮಿಯ ಉತ್ತರ ಧ್ರುವ ಒಮ್ಮೆ ಸೂರ್ಯನ ಕಡೆಗೂ ಮತ್ತೊಮ್ಮೆ ಸೂರ್ಯನ ವಿರುದ್ಧ ದಿಕ್ಕಿನಲ್ಲಿಯೂ ನೋಡುತ್ತಿರುವಂತಾಗುತ್ತದೆ. ಇದರಿಂದಾಗಿ ಸೂರ್ಯನ ಚಲನಾಪಥವು ಭೂಮಿಯ ಮೇಲ್ಮೈನಲ್ಲಿ ಅಲೆಯ ಹಾಗೆ ಇರುತ್ತದೆ. ಇದೇ ಚಲನೆಯನ್ನು ಭೂಮಿಯ ಮೇಲೆ ಯಾವುದೋ ಒಂದು ಪ್ರದೇಶದಿಂದ ನೋಡಿದರೆ, ದಿನ ಕಳೆದಂತೆ ಸೂರ್ಯನು ಸಮಭಾಜಕ ವೃತ್ತದಿಂದ ಅತ್ಯಂತ ಉತ್ತರಕ್ಕೂ, ನಂತರ ಹಿಂತಿರುಗಿ ಅತ್ಯಂತ ದಕ್ಷಿಣಕ್ಕೂ ಹೋಗುವಂತೆ ಭಾಸವಾಗುತ್ತದೆ. ಈ ಅತ್ಯಂತ ಉತ್ತರ( ಜೂನ್21) ಹಾಗೂ ಅತ್ಯಂತ ದಕ್ಷಿಣದ( ಡಿಸೆಂಬರ್21) ಬಿಂದುಗಳನ್ನು ನಾವು ಸಂಕ್ರಾಂತಿ ಎಂದು ಕರೆಯುತ್ತೇವೆ.
ನೀವು ಕರ್ಕಾಟಕ ಸಂಕ್ರಾಂತಿ ವೃತ್ತ ಹಾಗೂ ಮಕರ ಸಂಕ್ರಾಂತಿ ವೃತ್ತದ ಮಧ್ಯದ ಪ್ರದೇಶದಲ್ಲಿ ಜೀವಿಸುತ್ತಿರುವವರಾಗಿದ್ದರೆ , ನೀವು ಅದೃಷ್ಟಶಾಲಿಗಳು. ಏಕೆಂದರೆ, ಈ ಎರಡು ಸಂಕ್ರಾಂತಿಗಳ ಮಧ್ಯೆ, ಎರಡು ದಿನ ಸೂರ್ಯನು ನೇರವಾಗಿ ನಿಮ್ಮ ಪ್ರದೇಶದ ಮೇಲಿರುತ್ತಾನೆ. ಈ ಎರಡು ದಿನಗಳ ಮಧ್ಯಾಹ್ನ, ಯಾವುದೇ ನೆರಳು ಬೀಳುವುದಿಲ್ಲ. ಹಾಗಾಗಿ ಈ ದಿನಗಳನ್ನು ಶೂನ್ಯ ನೆರಳಿನ ದಿನಗಳೆಂದು ಕರೆಯುತ್ತೇವೆ. ಒಂದು ವರ್ಷದಲ್ಲಿ, ಸೂರ್ಯನು ಈ ಸಂಕ್ರಾಂತಿ ವೃತ್ತಗಳ ಮಧ್ಯೆ ಸಾಗುತ್ತಾ ಸಮಭಾಜಕ ವೃತ್ತವನ್ನು ಎರಡು ಬಾರಿ ಹಾದು ಹೋಗುತ್ತದೆ. ಈ ಘಟನೆಯು ಉಡುಪಿ, ದಕ್ಷಿಣ ಕನ್ನಡದಲ್ಲಿ ಏಪ್ರಿಲ್ ಹಾಗು ಆಗಸ್ಟ್‌ನಲ್ಲಿ ನಡೆಯುತ್ತದೆ. ಉಡುಪಿಯಲ್ಲಿ 25 ಏಪ್ರಿಲ್12:29ಕ್ಕೆ ಮತ್ತು ಅಗಸ್ಟ್ 17ರಂದು ಮಧ್ಯಾಹ್ನ 12:34 ಕ್ಕೆ ನಡೆಯಲಿದೆ. ಮಂಗಳೂರಿನಲ್ಲಿ ಏಪ್ರಿಲ್ 24ರಂದು ಮಧ್ಯಾಹ್ನ 12:28 ಮತ್ತು ಆಗಸ್ಟ್ 18ರಂದು ಮಧ್ಯಾಹ್ನ 12:33ಕ್ಕೆ ನಡೆಯಲಿದೆ.
ಹೇಗೆ ನೋಡುವುದು?: ಮನೆಯ ಅಂಗಳ ಅಥವಾ ಟೆರೇಸ್‌ಗೆ ಹೋಗಿ ನಿಮ್ಮ ನೆರಳನ್ನು ನೋಡಿಕೊಳ್ಳಿ. ನೀವು ಅತಿ ಕಡಿಮೆ ನೆರಳನ್ನು ಗಮನಿಸುವಿರಿ. ಒಂದು ಕೊಳವೆಯನ್ನು ತೆಗೆದುಕೊಳ್ಳಿ ಮತ್ತು ಅದನ್ನು ಲಂಬವಾಗಿ ಇಡಿ. ಶೂನ್ಯ ನೆರಳಾಗುವ ಸಮಯಕ್ಕಿಂತ ಕೊಂಚ ಹೊತ್ತು ಮುಂಚೆಯೇ ಈ ವ್ಯವಸ್ಥೆ ಮಾಡಿಕೊಳ್ಳಿ. ಸೂರ್ಯ ಮೇಲೆ ಮೇಲೆ ಬರುತ್ತಿದ್ದಂತೆ, ನೆರಳು ಸಣ್ಣದಾಗುತ್ತಾ ಹೋಗುವುದನ್ನು ಗಮನಿಸಬಹುದು. ಹೀಗೆ ನಿರ್ದಿಷ್ಟ ಸಮಯದಲ್ಲಿ ನೆರಳು ಕಾಣದಂತಾಗುತ್ತದೆ.
(ಲೇಖಕರು ಪೂರ್ಣಪ್ರಜ್ಞ ಹವ್ಯಾಸಿ ಖಗೋಳ ವೀಕ್ಷಕರ ಸಂಘದ ಸಂಯೋಜಕರು)