ಬೆಂಗಳೂರು: ಮೂರು ಕ್ಷೇತ್ರಗಳ ಉಪಚುನಾವಣೆ ಫಲಿತಾಂಶವು ಐದು ಗ್ಯಾರಂಟಿ ಅನುಷ್ಠಾನದ ಮೂಲಕ ನುಡಿದಂತೆ ನಡೆದ ಸರ್ಕಾರಕ್ಕೆ ಜನರು ನೀಡಿದ ಆಶೀರ್ವಾದ ಎಂದು ವಸತಿ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಜಮೀರ್(Zameer) ಅಹಮದ್ ಖಾನ್ ಹೇಳಿದ್ದಾರೆ.
ಉಪಚುನಾವಣೆ ಫಲಿತಾಂಶದ ಕುರಿತು ಮಾತನಾಡಿದ ಅವರು, ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ನೇತೃತ್ವದ ನುಡಿದಂತೆ ನಡೆದ ರಾಜ್ಯದ ಕಾಂಗ್ರೆಸ್ ಸರ್ಕಾರಕ್ಕೆ ಜನರು ನೀಡಿದ ಆಶೀರ್ವಾದವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ನಿರಂತರ ಅಪಪ್ರಚಾರ ಮಾಡಿ ಸರ್ಕಾರದ ಅಭಿವೃದ್ಧಿ ಕೆಲಸ ಮರೆ ಮಾಚಿ ಜನರ ದಿಕ್ಕು ತಪ್ಪಿಸಲು ಬಿಜೆಪಿ -ಜೆಡಿಎಸ್ ಕುತಂತ್ರಕ್ಕೆ ಮತದಾರ ಸೂಕ್ತ ಉತ್ತರ ನೀಡಿದ್ದಾರೆ ಎಂದು ತಿಳಿಸಿದ್ದಾರೆ.
ಮೂಡಾ, ವಕ್ಫ್, ಚನ್ನಪಟ್ಟಣದಲ್ಲಿ ನಾನು ಹೇಳಿದ ಹೇಳಿಕೆ ವಿವಾದ ಮಾಡಿ ರಾಜಕೀಯ ಲಾಭಕ್ಕೆ ಯತ್ನಿಸಿದವರಿಗೆ ತಕ್ಕ ಶಾಸ್ತಿ ಆಗಿದೆ. ಅಹಿಂದ ನಾಯಕ ಸಿದ್ದರಾಮಯ್ಯ ವಿರುದ್ಧ ಪ್ರತಿಪಕ್ಷ ಮಾಡಿದ ಆರೋಪಗಳನ್ನು ರಾಜ್ಯದ ಜನತೆ ಸಹಿಸುವುದಿಲ್ಲ ಎಂಬುದಕ್ಕೆ ಫಲಿತಾಂಶವೇ ಸಾಕ್ಷಿ. ಈ ಉಪಚುನಾವಣೆಯಲ್ಲೂ ಮುಸ್ಲಿಂ ಸಮುದಾಯ ಪೂರ್ಣ ಪ್ರಮಾಣದಲ್ಲಿ ಕಾಂಗ್ರೆಸ್ ಕೈಹಿಡಿದು ಬಲ ಪಡಿಸಿದೆ. ಕಾಂಗ್ರೆಸ್ ಸರ್ಕಾರದ ಪರ ವಿಶ್ವಾಸ ತೋರಿಸಿದೆ ಎಂದು ಹೇಳಿದ್ದಾರೆ.
ಪ್ರತಿಪಕ್ಷಗಳು ಇನ್ನು ಮುಂದೆಯಾದರೂ ನಮ್ಮ ಅಭಿವೃದ್ದಿಗೆ ಕೈಜೋಡಿಸಲಿ. ನಕಾರಾತ್ಮಕ ರಾಜಕಾರಣ ಕೈಬಿಡಲಿ. ಉಪಚುನಾವಣೆಯಲ್ಲಿ ಗೆಲುವು ಸಾಧಿಸಿದ ಮೂವರು ಕಾಂಗ್ರೆಸ್ ಅಭ್ಯರ್ಥಿಗಳಿಗೆ ನಾನು ಅಭಿನಂದನೆ ಸಲ್ಲಿಸುತ್ತೇನೆ ಎಂದು ತಿಳಿಸಿದ್ದಾರೆ.