ಜಿಲ್ಲೆ

ವೈದ್ಯರ ಏಪ್ರನ್ ಧರಿಸಿ ತರಕಾರಿ ತರಲು ದ್ವಿಚಕ್ರ ವಾಹನದಲ್ಲಿ ಹೋದ; ಆಮೇಲಾಗಿದ್ದು ನಗೆಪಾಟಲು!

ಬೆಳಗಾವಿ: ಲಾಕ್​ಡೌನ್​ ಸಮಯದಲ್ಲಿ ಏನಾದರೂ ನೆಪವಿಟ್ಟು ಪೊಲೀಸರಿಗೆ ಸುಳ್ಳುಸುಳ್ಳೇ ಹೇಳಿ ವಾಹನದಲ್ಲಿ ಓಡಾಡುವವರಿಗೇನೂ ಕಡಿಮೆ ಇಲ್ಲ. 'ಉದರನಿಮಿತ್ತಂ ಬಹುಕೃತವೇಷಂ' ಎನ್ನುವ ಹಾಗೆ ಲಾಕ್​ಡೌನ್ ಅವಧಿಯಲ್ಲಿ ಹೊರಗಡೆ ವಾಹನದಲ್ಲಿ ನಾನಾ ಸೋಗಿನಲ್ಲಿ ಸುತ್ತಾಡುವವರು ಪೊಲೀಸರಿಗೆ ಕೈಗೆ ಸಿಕ್ಕಿಬೀಳುತ್ತಿದ್ದಾರೆ. ಅಂಥದ್ದೇ ಒಂದು ಸಾಹಸ ಮಾಡಲು ಹೋಗಿ ಇಲ್ಲೊಬ್ಬ ಯುವಕ ಕೊನೆಗೆ ಮನೆಗೆ ನಡೆದುಕೊಂಡೇ ತೆರಳುವಂತಾಗಿದೆ.

ವೈದ್ಯರ ಏಪ್ರನ್ ಧರಿಸಿ ಹೋದರೆ ಡಾಕ್ಟರ್ ಅಥವಾ ವೈದ್ಯಕೀಯ ಸಿಬ್ಬಂದಿ ಎಂದುಕೊಂಡು ಪೊಲೀಸರು ಸುಮ್ಮನೆ ಬಿಡುತ್ತಾರೆ ಎಂದುಕೊಂಡು ಈ ಯುವಕ ಏಪ್ರನ್ ಧರಿಸಿ, ತಾಯಿಯನ್ನು ಕೂರಿಸಿಕೊಂಡು ದ್ವಿಚಕ್ರವಾಹನದಲ್ಲಿ ಹೋಗಿದ್ದಾನೆ. ಆದರೆ ರಸ್ತೆ ಮಧ್ಯೆ ತಪಾಸಣೆ ಮಾಡಿದ ಪೊಲೀಸರಿಗೆ ಸೂಕ್ತ ದಾಖಲೆ/ಗುರುತಿನ ಚೀಟಿ ಕೊಡಲಾಗದೆ ಸಿಕ್ಕಿಬಿದ್ದಿದ್ದಾನೆ. ಬೆಳಗಾವಿಯಲ್ಲಿ ಇಂಥದ್ದೊಂದು ಘಟನೆ ನಡೆದಿದೆ.

ತಾಯಿಯನ್ನು ಕೂರಿಸಿಕೊಂಡು ತರಕಾರಿಗೆ ಬಂದು ಸಿಕ್ಕಿ ಹಾಕಿಕೊಂಡ ಈತ, ನಮ್ಮ ಅಣ್ಣನ ಏಪ್ರನ್​ ಇದು, ಮರೆತು ಹಾಕಿಕೊಂಡು ಬಂದಿದ್ದೇನೆ, ಬಿಟ್ಟು ಬಿಡಿ ಸರ್ ಎಂದು ಗೋಗರೆದಿದ್ದಾನೆ. ಆಯ್ತು ಪರವಾಗಿಲ್ಲ ಎಂದ ಪೊಲೀಸರು ಮನೆಗೆ ಹೋಗಿ ಐಡಿ ತೆಗೆದುಕೊಂಡು ಬಾ ಎಂದು ಗಾಡಿ ಜಪ್ತಿ ಮಾಡಿಕೊಂಡಿದ್ದಾರೆ. ರಸ್ತೆಬದಿಯಲ್ಲಿ ಎಲ್ಲರೆದುರು ನಗೆಪಾಟಲಿಗೀಡಾದ ಈ ಯುವಕ ಕೊನೆಗೆ ತರಕಾರಿ ಹೊತ್ತುಕೊಂಡು ನಡೆದೇ ಮನೆ ಕಡೆಗೆ ಸಾಗುವಂತಾಯಿತು.