ಉಳ್ಳಾಲ: ವಾಸಕ್ಕೊಂದು ಸ್ವಂತ ಸೂರಿನ ಕನಸನ್ನು ಮನೆಮಗಳು ನಿಭಾಯಿಸಿದಳು. ಆದರೆ ಆ ಮನೆಗೆ ಬ್ಯಾಂಕ್ ಸಾಲ ಇರುವ ಬಗ್ಗೆ ಅರಿಯದೆ ಮೋಸ ಹೋದ ಆಕೆ ಗೃಹ ಪ್ರವೇಶವಾದ ಐದು ದಿನದೊಳಗೆ ಬದುಕಿಗೆ ವಿದಾಯ ಹೇಳಿದ್ದಾಳೆ. ಈ ಘಟನೆ ಗುರುವಾರ ಕುಂಪಲದಲ್ಲಿ ನಡೆದಿದೆ.
ಮೂಲತಃ ಫರಂಗಿಪೇಟೆಯ, ಪ್ರಸ್ತುತ ಕುಂಪಲ ಚಿತ್ರಾಂಜಲಿ ನಗರ ನಿವಾಸಿಯಾಗಿದ್ದ ಅಶ್ವಿನಿ ಬಂಗೇರ(25) ಆತ್ಮಹತ್ಯೆ ಮಾಡಿಕೊಂಡವರು. ಫರಂಗಿಪೇಟೆ ನಿವಾಸಿ ಮಧ್ಯಮ ವರ್ಗದ ಅಶ್ವಿನಿ, ವಿದೇಶದಲ್ಲಿ ಉದ್ಯೋಗದಲ್ಲಿದ್ದು ಒಂದೂವರೆ ತಿಂಗಳ ಹಿಂದೆ ಊರಿಗೆ ಬಂದಿದ್ದಳು. ವಾಸಕ್ಕೆ ಸ್ವಂತ ಸೂರಿನ ಕನಸು ಕಂಡಿದ್ದ ಆಕೆ, ಕುಂಪಲದ ಚಿತ್ರಾಂಜಲಿ ನಗರದಲ್ಲಿ ಮನೆ ಖರೀದಿಸಿದ್ದು, ಜೂನ್3ರಂದು ಗೃಹ ಪ್ರವೇಶವೂ ನಡೆದಿತ್ತು.ಮನೆಯಲ್ಲಿ ತಾಯಿ ದೇವಕಿ, ದೊಡ್ಡಮ್ಮನ ಇಬ್ಬರು ಗಂಡು ಮಕ್ಕಳೊಂದಿಗೆ ಅಶ್ವಿನಿ ನೆಲೆಸಿದ್ದರು.
ಗೃಹ ಪ್ರವೇಶದ ಬಳಿಕ ಆಕೆಯ ಸ್ನೇಹಿತರು ಬಂದು ಶುಭಹಾರೈಸಿ ಹೋಗುತ್ತಲೇ ಇದ್ದ ಕಾರಣ, ಸಂಭ್ರಮ ಮರೆಯಾಗಿರಲಿಲ್ಲ. ಆದರೆ ಗುರುವಾರ ಅಶ್ವಿನಿಯ ಶವ ಆತ್ಮಹತ್ಯೆಗೈದ ಸ್ಥಿತಿಯಲ್ಲಿ ಕೋಣೆಯಲ್ಲಿ ಪತ್ತೆಯಾಗುವ ಮೂಲಕ ಮನೆಯಲ್ಲಿ ಸೂತಕದ ಛಾಯೆ ಆವರಿಸಿದೆ. ಬುಧವಾರ ರಾತ್ರಿ ಮನೆಮಂದಿ ಜತೆಗಿದ್ದ ಅಶ್ವಿನಿ, ಕೋಣೆ ಸೇರಿ ನೇಣು ಬಿಗಿದುಕೊಂಡು ಸಾವಿಗೆ ಶರಣಾಗಿದ್ದು, ಗುರುವಾರ ಬೆಳಗ್ಗೆ ಪ್ರಕರಣ ಬೆಳಕಿಗೆ ಬಂದಿದೆ.
ಬುಧವಾರ ರಾತ್ರಿ ಅಶ್ವಿನಿ ತನ್ನ ಸ್ನೇಹಿತೆ ಜೊತೆ ಚಾಟ್ ಮಾಡಿದ್ದಳೆನ್ನಲಾಗಿದೆ. ಗುರುವಾರ ಬೆಳಗ್ಗೆ ಸ್ನೇಹಿತೆ ಬಂದಾಗ ಕೋಣೆಯ ಬಾಗಿಲು ತೆಗೆಯದ ಕಾರಣ ಒಡೆದು ನೋಡಿದಾಗ ಪ್ರಕರಣ ಬೆಳಕಿಗೆ ಬಂದಿದೆ.
ಮೃತದೇಹದ ಬಳಿ 24 ಪುಟಗಳ ಡೆತ್ ನೋಟ್ ಪತ್ತೆಯಾಗಿದೆ. ತಾನು ಮನೆ ಖರೀದಿಸಿ ಮೋಸ ಹೋಗಿದ್ದು, ಮನೆಗೆ ಬ್ಯಾಂಕ್ ಸಾಲ ಇದ್ದು ಅಧಿಕಾರಿಗಳು ಬಂದು ಪೀಡಿಸುತ್ತಿದ್ದಾರೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ. ಹಲವು ರೀತಿಯ ಸಂಕಷ್ಟ ಎದುರಿಸಿ ಖಿನ್ನತೆಗೊಳಗಾಗಿ ಆತ್ಮ ಹತ್ಯೆಗೈದಿರುವುದಾಗಿ ಪೊಲೀಸರು ಶಂಕಿಸಿದ್ದಾರೆ. ಡೆತ್‌ನೋಟ್‌ನಲ್ಲಿ ಪ್ರಿಯಕರನ ಹೆಸರು ಉಲ್ಲೇಖಿಸಿ ‘ಐ ಲವ್ ಯೂ’ ಅಂತ ಬರೆದಿದ್ದು ತಾನು ಬಳಸುತ್ತಿದ್ದ ಐ ಫೋನ್ ಆತನಿಗೆ ನೀಡಬೇಕೆಂದು ಅದರಲ್ಲಿ ಉಲ್ಲೇಖಿಸಿದ್ದಾಳೆಂದು ತಿಳಿದು ಬಂದಿದೆ. ಅಶ್ವಿನಿಯ ತಾಯಿ ಮಗಳ ಸಾವನ್ನು ಅರಗಿಸಿಕೊಳ್ಳಲಾಗದೆ ಮನೆಯೊಳಗೆ ನೆಲದಲ್ಲಿ ಬಿದ್ದು ಹೊರಳಾಡುತ್ತಿರುವ ದೃಶ್ಯ ಮನಕಲಕುವಂತಿತ್ತು.