ಅಣ್ಣನ ಪ್ರೀತಿಗೆ ತಮ್ಮ ಬಲಿ? "ಸಾವಿಗೆ ಕಾರಣರಾದವರು ಸಾಲ ತೀರಿಸಲಿ" ಎಂದು ಡೆತ್​ನೋಟ್!

sucide
Published on

ಹಾವೇರಿ: ಹಾವೇರಿಯ ಹಾನಗಲ್​ನಲ್ಲಿ ಒಂದು ವಿಚಿತ್ರ ಪ್ರಕರಣ ಬೆಳಕಿಗೆ ಬಂದಿದ್ದು ಇಲ್ಲಿ ಅಣ್ಣನಿಗೆ ಆದ ಪ್ರೇಮ ವೈಫಲ್ಯಕ್ಕೆ ತಮ್ಮನ ಪ್ರಾಣ ಹೋಗಿದೆ ಈತ ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲೂಕಿನ ಚಿಕ್ಕಮಾಗಡಿ ತಾಂಡದ ಯುವಕನಾಗಿದ್ದು ಹಂಸಬಾವಿಯಲ್ಲಿ ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮೃತರನ್ನು ಸುರೇಶ್ ನಾಯ್ಕ ಎಂದು ಗುರುತಿಸಲಾಗಿದೆ.

ಹೌದು, ಅಣ್ಣ ಮಂಜು ನಾಯ್ಕ ಕಳೆದ 8 ವರ್ಷದಿಂದ ಓರ್ವ ಯುವತಿಯನ್ನು ಪ್ರೀತಿಸುತ್ತಿದ್ದ. ಆಕೆ ಹಾನಗಲ್ ತಾಲೂಕಿನ ಬಾಳೂರು ತಾಂಡಾದ ಯುವತಿಯಾಗಿದ್ದು ಕೊನೆಗೆ ಮದುವೆಯಾಗಲು ನಿರಾಕರಿಸಿದ್ದಳು. ಕಡೆಗೆ ನಾಲ್ಕು ದಿನಗಳ ಹಿಂದೆ ಆಕೆ ಬೇರೆ ಯುವಕನ‌ ಜೊತೆ ಮದುವೆಯಾಗಿದ್ದಳು.

ಈ ಸಂದರ್ಭ ಅಣ್ಣ ಮಂಜು ನಾಯ್ಕ ಮೇಲೆ ಯುವತಿ ಕಡೆಯಿಂದ ದೂರು ದಾಖಲಾಗಿತ್ತು. ಪೊಲೀಸರಿಗೆ ಮಂಜು ನಾಯ್ಕ ಸಿಗದಿದ್ದಾಗ ಸಹೋದರ ಸುರೇಶ ನಾಯ್ಕರನ್ನು ವಶಕ್ಕೆ ಪಡೆದುಕೊಂಡು ಹೋದ ಪೊಲೀಸರು, ಠಾಣೆಯಲ್ಲಿ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಲಾಗಿದೆ.

ಅಣ್ಣ ಸಿಗದಕ್ಕೆ ತಮ್ಮನನ್ನು ವಶಕ್ಕೆ ಪಡೆದರಾ?!

ಇದ್ಯಾವುದರಲ್ಲೂ ಕೈಯಾಡಿಸದೇ ತನ್ನ ಪಾಡಿಗೆ ಬೆಂಗಳೂರಿನಲ್ಲಿ ಕಾರು ಚಲಾಯಿಸುತ್ತಾ ಜೀವನ ಸಾಗಿಸುತ್ತಿದ್ದ ತಮ್ಮ ಸುರೇಶ್ ನಾಯ್ಕರನ್ನು ಪೊಲೀಸರು ಅಣ್ಣ ಸಿಗಲಿಲ್ಲ ಎಂದು ವಶಕ್ಕೆ ಪಡೆದಿದ್ದಾರೆ ಎನ್ನಲಾಗಿದೆ.

ಈ ಸಂದರ್ಭದಲ್ಲಿ ಠಾಣೆಯಲ್ಲಿ ಕಿರುಕುಳ/ಟಾರ್ಚರ್​ ನೀಡಲಾಗಿದೆ ಎಂದೂ ಆರೋಪಿಸಲಾಗಿದೆ. ಆದರೆ ಸುರೇಶ್ ನಾಯ್ಕರನ್ನು ಬಿಟ್ಟು ಕಳಿಸುವಾಗ ಪೊಲೀಸರು, ಕಾರ್ ಇಟ್ಟುಕೊಂಡಿರುವ ಆರೋಪವೂ ಕೇಳಿ ಬಂದಿದೆ. ಎಷ್ಟೇ ಕೇಳಿದರೂ ಪೊಲೀಸರು ಕಾರ್ ಬಿಟ್ಟುಕೊಡಲಿಲ್ಲ ಎನ್ನಲಾಗಿದ್ದು ಇದರಿಂದ ಮನನೊಂದ ಯುವಕ ಸುರೇಶ್ ನಾಯ್ಕ ಡೆತ್​ನೋಟ್​ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಡೆತ್​ನೋಟ್​ನಲ್ಲಿ ಏನಿತ್ತು?

ಸುರೇಶ್ ನಾಯ್ಕ, ತಮ್ಮ ಡೆತ್​ನೋಟ್​ನಲ್ಲಿ ದುಡಿದು ತಿನ್ನಲು ಪೊಲೀಸರಿ ಕಾರ್​ ಹಿಂತಿರುಗಿಸದೇ ಇದ್ದ ಕಾರಣ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಬರೆದುಕೊಂಡಿದ್ದಾರೆ. ಅದಲ್ಲದೇ, ಅವರು ಯಾರಿಂದ ಎಷ್ಟು ಸಾಲವನ್ನು ತೆಗೆದುಕೊಂಡಿದ್ದಾರೆ ಎನ್ನುವ ಮಾಹಿತಿಯನ್ನೂ ಹಂಚಿಕೊಂಡಿದ್ದು ಆ ಸಾಲವನ್ನು ಸಾವಿಗೆ ಕಾರಣರಾದವರು ತೀರಿಸಬೇಕು ಎಂದು ಬರೆದುಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net