ಬಾಗಲಕೋಟೆ: ಮಳೆ ನೀರಿನಿಂದ ಜಲಾವೃತವಾಗಿದ್ದ ಪಂಪ್ಸೆಟ್ ತೆಗೆದುಕೊಂಡು ಬರಲು ಹೋಗಿದ್ದ ಯುವಕನೊಬ್ಬ ನಾಪತ್ತೆಯಾಗಿದ್ದಾನೆ. ಬಾಗಲಕೋಟೆ ಜಿಲ್ಲೆಯಲ್ಲಿ ಇಂಥದ್ದೊಂದು ಅವಘಡ ಸಂಭವಿಸಿದ್ದು, ಆತನಿಗಾಗಿ ಹುಡುಕಾಟ ಆರಂಭವಾಗಿದೆ.
ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಹಿರೇಮಳಗಾವಿ ಗ್ರಾಮದ ದೇವಾನಂದ ಕಮ್ಮಾರ (18) ನಾಪತ್ತೆಯಾದ ಯುವಕ. ಹಿರೇಮಳಗಾವಿ ಗ್ರಾಮದ ಮಲಪ್ರಭಾ ನದಿಯಲ್ಲಿ ಈ ಘಟನೆ ನಡೆದಿದೆ. ಈತನಿಗೆ ಸೇರಿದ್ದ ಪಂಪ್ಸೆಟ್ ಮಲಪ್ರಭಾ ನದಿ ದಂಡೆಯಲ್ಲಿತ್ತು. ನದಿಯಲ್ಲಿ ಹರಿವು ಹೆಚ್ಚಾದ್ದರಿಂದ ಪಂಪ್ಸೆಟ್ ಜಲಾವೃತವಾಗಿತ್ತು.
ಪ್ರವಾಹದಿಂದ ಜಲಾವೃತವಾದ ಪಂಪ್ಸೆಟ್ ತೆಗೆದುಕೊಂಡು ಬರಲು ಹೋಗಿದ್ದಾಗ ಈತ ಕಾಣೆಯಾಗಿದ್ದಾನೆ. ಈತ ನೀರಿನಲ್ಲಿ ಮುಳುಗಿರಬಹುದು ಎಂಬ ಶಂಕೆಯ ಮೇರೆಗೆ ಇಳಕಲ್ ಅಗ್ನಿಶಾಮಕ ದಳದ ಸಿಬ್ಬಂದಿ ಶೋಧಕಾರ್ಯ ಆರಂಭಿಸಿದ್ದಾರೆ.