ಜಿಲ್ಲೆ

'ನನ್ನ ಗಂಡನ ಜತೆ ನಿಂಗೇನು ಕೆಲಸ?' ಎಂದು ಗುಜರಿ ಅಂಗಡಿಗೆ ಬಂದಿದ್ದ ಮಹಿಳೆಗೆ ಬಾರಿಸಿದಳು; ಪತ್ನಿ ವಿರುದ್ಧ ಪತಿಯಿಂದಲೇ ದೂರು..

ಮಂಗಳೂರು: ಮಹಿಳೆಯೊಬ್ಬಳ ಮೇಲೆ ಇನ್ನೊಬ್ಬ ಮಹಿಳೆ ಮತ್ತು ಆಕೆಯ ಚಾಲಕ ಸೇರಿಕೊಂಡು ಥಳಿಸಿದ ಪ್ರಕರಣವೊಂದು ಮಂಗಳೂರಿನಲ್ಲಿ ನಡೆದಿದೆ. ಮತ್ತೊಂದೆಡೆ ಹೀಗೆ ಹೊಡೆದ ಮಹಿಳೆ ವಿರುದ್ಧ ಆಕೆಯ ಪತಿಯೇ ಪೊಲೀಸರಿಗೆ ದೂರು ನೀಡಿದ್ದಾನೆ.

ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಉಪ್ಪಿನಂಗಡಿಯ ಮಠ ಎಂಬಲ್ಲಿ ಈ ಪ್ರಕರಣ ನಡೆದಿದೆ. ಇಲ್ಲಿರುವ ಅಬ್ದುಲ್ ರಹಿಮಾನ್ ಎಂಬಾತನ ಗುಜರಿ ಅಂಗಡಿಗೆ ಶಹನಾಜ್ ಎಂಬಾಕೆ ಬಂದಿದ್ದಳು. ಆಗ ಹಠಾತ್ ಆಗಿ ಗುಜರಿ ಅಂಗಡಿಯಾತನ ಪತ್ನಿ ಹಸೀನಾ ಅಲ್ಲಿಗೆ ಬಂದಿದ್ದಾಳೆ.

ಅಂಗಡಿ ಬಳಿಗೆ ಬಂದಿದ್ದ ಹಸೀನಾ ತನ್ನ ಚಾಲಕ ಅಫ್ರಿದಿಯೊಂದಿಗೆ ಸೇರಿಕೊಂಡು ಶಹನಾಜ್​ಳನ್ನು ತರಾಟೆಗೆ ತೆಗೆದುಕೊಂಡಿದ್ದಾಳೆ. ಮಾತ್ರವಲ್ಲ, 'ನನ್ನ ಗಂಡನ ಜತೆ ನಿಂಗೇನು ಕೆಲಸ?' ಎಂದು ದಬಾಯಿಸಿ ಆಕೆ ಮೇಲೆ ಹಲ್ಲೆ ಮಾಡಿದ್ದಾಳೆ.

ಹಸೀನಾ ತನ್ನ ಕೈಗೆ ಸಿಕ್ಕ ಪ್ಲಾಸ್ಟಿಕ್ ಪೈಪ್ ಇತ್ಯಾದಿಯಿಂದ ಶಹನಾಜ್​ಳ ಮೇಲೆ ಹಲ್ಲೆ ಮಾಡಿದ್ದಳು. ಈ ಬಗ್ಗೆ ಅಬ್ದುಲ್ ರಹಿಮಾನ್​ ಪತ್ನಿ ಹಸೀನಾ ವಿರುದ್ಧ ಉಪ್ಪಿನಂಗಡಿ ಪೊಲೀಸರಿಗೆ ದೂರು ನೀಡಿದ್ದಾನೆ. ಪ್ರಕರಣದ ಹಿನ್ನೆಲೆ ಇತ್ಯಾದಿ ಕುರಿತ ಖಚಿತ ಮಾಹಿತಿ ಇನ್ನಷ್ಟೇ ಬಹಿರಂಗಗೊಳ್ಳಬೇಕಿದೆ. ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.