ಜಿಲ್ಲೆ

ಜೂ.1ಕ್ಕೆ ಮೆಟ್ರೋ ಆರಂಭ?

ಬೆಂಗಳೂರು: ಲಾಕ್​ಡೌನ್-4 ಮೇ 31ಕ್ಕೆ ಅಂತ್ಯವಾಗಲಿದ್ದು, ಜೂ. 1ರಿಂದ ರಾಜ್ಯದಲ್ಲಿ ಸಾರಿಗೆ ವ್ಯವಸ್ಥೆ ಸಹಜ ಸ್ಥಿತಿಗೆ ಬರುವ ಸಾಧ್ಯತೆಗಳಿವೆ. ದಿಗ್ಬಂಧನ ಸಡಿಲಿಕೆ ಪರಿಣಾಮ ಪ್ರಸ್ತುತ ಬೆಳಗ್ಗೆ 7ರಿಂದ ರಾತ್ರಿ 7ರವರೆಗೆ ಮಾತ್ರ ಬಸ್ ಸಂಚಾರಕ್ಕೆ ಸರ್ಕಾರ ಅನುಮತಿ ನೀಡಿದೆ.ಆದರೆ ಮೆಟ್ರೋ ರೈಲು ಸಂಚಾರಕ್ಕೆ ಕೇಂದ್ರ ಸರ್ಕಾರ ಅನುಮತಿ ನೀಡದ ಹಿನ್ನೆಲೆಯಲ್ಲಿ ಆ ಸೇವೆಯನ್ನು ಈವರೆಗೆ ಆರಂಭಿಸಿಲ್ಲ. ಜೂ.1ರಿಂದ ಈ ಸೇವೆಗೂ ಚಾಲನೆ ಸಿಗುವ ಸಂಭವ ವಿದ್ದು, ಅದಕ್ಕಾಗಿ ಬಿಎಂ ಆರ್​ಸಿಎಲ್ ಸಿದ್ಧತೆ ಮಾಡಿಕೊಳ್ಳುತ್ತಿದೆ. ಲಾಕ್ ಡೌನ್-3 ಮುಕ್ತಾಯದ ನಂತರವೇ ಮೆಟ್ರೋ ರೈಲು ಸೇವೆ ಆರಂಭಿಸಲು ನಿಗಮ ಉತ್ಸುಕತೆ ತೋರಿತ್ತು. ಆದರೆ, ಕೇಂದ್ರ ಸರ್ಕಾರ ನಿರ್ಬಂಧ ಹೇರಿತ್ತು. ಲಾಕ್​ಡೌನ್-4 ಮುಕ್ತಾಯವಾದಾಗಲಾದರೂ ಅನುಮತಿ ಲಭಿಸಬಹುದು ಎಂಬ ನಿರೀಕ್ಷೆ ಹಿನ್ನೆಲೆಯಲ್ಲಿ ಮೆಟ್ರೋ ರೈಲು ನಿಗಮ ನಿಯಮಿತ ಸಕಲ ತಯಾರಿ ನಡೆಸಿದೆ.

350 ಜನರ ಪ್ರಯಾಣ: ಈವರೆಗೆ ಒಂದು ಮೆಟ್ರೋ ರೈಲಿನಲ್ಲಿ ಒಮ್ಮೆಗೆ ಸರಾಸರಿ 1 ಸಾವಿರಕ್ಕೂ ಹೆಚ್ಚಿನ ಜನರು ಪ್ರಯಾಣಿಸಲು ಅವಕಾಶ ಕಲ್ಪಿಸಲಾಗುತ್ತಿತ್ತು. ಆದರೀಗ, ವ್ಯಕ್ತಿಗತ ಅಂತರ ಕಾಪಾಡಬೇಕಿರುವ ಕಾರಣ 6 ಬೋಗಿಯ ಒಂದು ರೈಲಿನಲ್ಲಿ 350 ಜನರು ಪ್ರಯಾಣಿಸಲಷ್ಟೇ ಅವಕಾಶ ನೀಡಲಾಗುತ್ತದೆ. ಪ್ರತಿ ಮೂರು ಆಸನಗಳ ಮಧ್ಯದ ಆಸನದಲ್ಲಿ ಯಾರೂ ಕೂರಬಾರದು ಎಂಬ ಸ್ಟಿಕ್ಕರ್ ಅಂಟಿಸಲಾಗುತ್ತಿದೆ. ಜತೆಗೆ ನಿಲ್ದಾಣಗಳಲ್ಲಿ ಮೆಟ್ರೋ ಸ್ಮಾರ್ಟ್ ಕಾರ್ಡ್ ಇದ್ದವರಿಗಷ್ಟೇ ಪ್ರವೇಶಕ್ಕೆ ಅವಕಾಶ ನೀಡಲಾಗುತ್ತದೆ. ಅದನ್ನು ಹೊರತುಪಡಿಸಿ ನಗದು ಮೂಲಕ ಟಿಕೆಟ್ ಖರೀದಿಯನ್ನು ಕೆಲದಿನ ನಿಷೇಧಿಸುವ ಬಗ್ಗೆ ಅಧಿಕಾರಿಗಳು ರ್ಚಚಿಸಿದ್ದಾರೆ.

ರಾತ್ರಿ ಸೇವೆ ಶೀಘ್ರ ಆರಂಭ: ರಾಜ್ಯ ಸರ್ಕಾರದ ಸೂಚನೆ ಮೇರೆಗೆ ಕೆಎಸ್ಸಾರ್ಟಿಸಿ ಭಾನುವಾರ ಹೊರತುಪಡಿಸಿ ಉಳಿದ 6 ದಿನಗಳು ಬೆಳಗ್ಗೆ 7ರಿಂದ ರಾತ್ರಿ 7ರವರೆಗೆ ಬಸ್ ಸೇವೆ ನೀಡುತ್ತಿದೆ. ಆದರೆ, ರಾತ್ರಿ ಸಂಚರಿಸುತ್ತಿದ್ದ ಬಸ್​ಗಳ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ. ಆದರೀಗ ರಾತ್ರಿ ಸೇವೆಯನ್ನು ಆರಂಭಿಸಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಈ ಕುರಿತು ಅಧಿಕಾರಿಗಳ ಜತೆ ಸಾರಿಗೆ ಸಚಿವ ಲಕ್ಷ್ಮಣ ಸವದಿ ಚರ್ಚೆ ನಡೆಸಿದ್ದಾರೆ. ಕರೊನಾ ಹರಡದಂತೆ ಎಲ್ಲ ರೀತಿಯ ನಿಯಮಗಳನ್ನು ಪಾಲಿಸುವ ಮೂಲಕ ರಾತ್ರಿ ಸೇವೆ ಆರಂಭಿಸಲು ಚಿಂತನೆ ನಡೆಸಲಾಗಿದೆ.

ಭವಿಷ್ಯದ ಮೇಲೆ ಕರಿನೆರಳು: ಬೆಂಗಳೂರಿನಲ್ಲಿ ವಾಹನದಟ್ಟಣೆ ಕಡಿಮೆ ಮಾಡುವ ಉದ್ದೇಶದಿಂದ ಸಮೂಹ ಸಾರಿಗೆ ಬಳಕೆಗೆ ಹಲವು ಸ್ವಯಂ ಸೇವಾ ಸಂಸ್ಥೆಗಳು, ಸರ್ಕಾರಿ ಸಂಸ್ಥೆಗಳು ಜಾಗೃತಿ ಮೂಡಿಸುವ ಕಾರ್ಯಗಳನ್ನು ಮಾಡಲಾಗುತ್ತಿತ್ತು. ಆದರೆ, ಕರೊನಾ ಭೀತಿಯಿಂದಾಗಿ ಸಮೂಹ ಸಾರಿಗೆ ಬಳಕೆಗೆ ಜನರು ಹಿಂದೇಟು ಹಾಕುವಂತಾಗುತ್ತಿದೆ. ಇದರಿಂದಾಗಿ ಭವಿಷ್ಯದಲ್ಲಿ ಸಮೂಹ ಸಾರಿಗೆ ಬಳಕೆದಾರರು ಕಡಿಮೆಯಾಗುವ ಆತಂಕ ಎದುರಾಗಿದೆ.