ಬೆಂಗಳೂರು: ಶ್ರೀ ಗುರು ರಾಘವೇಂದ್ರ ಸಹಕಾರಿ ಬ್ಯಾಂಕ್ ಹಾಗೂ ವಶಿಷ್ಠ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯಲ್ಲಿ ಕೋಟ್ಯಂತರ ರೂಪಾಯಿ ಠೇವಣಿ ಇಟ್ಟು ಹಣ ಕಳೆದುಕೊಂಡಿರುವ ಸಂತ್ರಸ್ತರಿಗೆ ನ್ಯಾಯ ಸಿಗವವರೆಗೂ ನಾನು ಹೋರಾಟ ನಡೆಸುತ್ತೇನೆ ಎಂದು ಕೆಪಿಸಿಸಿ ವೈದ್ಯಕೀಯ ಘಟಕ ಪ್ರಧಾನ ಕಾರ್ಯದರ್ಶಿ ಡಾ.ಶಂಕರ ಗುಹಾ ದ್ವಾರಕನಾಥ್ ಬೆಳ್ಳೂರು ಹೇಳಿದ್ದಾರೆ.
ಗಿರಿನಗರದಲ್ಲಿ ಸೋಮವಾರ ನಡೆದ ಕಾರ್ಯಕ್ರಮದಲ್ಲಿ ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ಶ್ರೀ ಗುರು ರಾಘವೇಂದ್ರ ಸಹಕಾರಿ ಬ್ಯಾಂಕ್ ಷೇರುದಾರರ ಮತ್ತು ಠೇವಣಿದಾರರ ಹಿತರಕ್ಷಣಾ ವೇದಿಕೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಹಣ ಕಳೆದುಕೊಂಡಿರುವ ಠೇವಣಿದಾರರ ಪರ ನಾನು ಮೊದಲಿಂದಲೂ ಹೋರಾಟ ಮಾಡಿಕೊಂಡು ಬರುತ್ತಿದ್ದೇನೆ. ಬ್ಯಾಂಕಿನಲ್ಲಿ ಠೇವಣಿ ಇಟ್ಟು ಕಳೆದುಕೊಂಡಿರುವ ಎಲ್ಲ ಸಂತ್ರಸ್ತರು ಅಧಿಕೃತವಾಗಿ ಸಂಘ ರಚಿಸಿಕೊಂಡಿದ್ದು, ಆ ಸಂಘಕ್ಕೆ ಅಧಿಕೃತವಾಗಿ ಚಾಲನೆ ನೀಡಿದ್ದೇನೆ. ಠೇವಣಿದಾರರ ಜತೆ ಕೈಜೋಡಿಸಿದ್ದು, ನ್ಯಾಯ ಸಿಗುವರೆಗೂ ಹೋರಾಟ ಮುಂದುವರಿಸುತ್ತೇನೆ. ಮುಂದಿನ ದಿನಗಳಲ್ಲಿ ಏನೇನು ಕ್ರಮ ಕೈಗೊಳ್ಳಬೇಕು ಹಾಗೂ ಯಾವ ರೀತಿ ಹೋರಾಟ ನಡೆಸಬೇಕು ಎಂಬುದರ ಬಗ್ಗೆ ವೇದಿಕೆ ಮೂಲಕ ರೂಪುರೇಷಗಳನ್ನು ಸಿದ್ಧಪಡಿಸಲಾಗುವುದು ಎಂದರು.
12 ಸಾವಿರ ಠೇವಣಿದಾರರು ಅತಂತ್ರ: ಶ್ರೀ ಗುರು ರಾಘವೇಂದ್ರ ಸಹಕಾರ ಬ್ಯಾಂಕ್‌ನಲ್ಲಿ ಒಟ್ಟು 46 ಸಾವಿರ ಠೇವಣಿದಾರರು ಇದ್ದಾರೆ. ಇದರಲ್ಲಿ ಕೆಲವು ಠೇವಣಿದಾರರಿಗೆ 1 ಲಕ್ಷ ರೂ.ವರಗೆ ಹಣ ಸಿಕ್ಕಿದೆ. ಆದರೂ, ಇನ್ನೂ 28 ಸಾವಿರ ಠೇವಣಿದಾರರು ಉಳಿದಿದ್ದಾರೆ ಡೆಪಾಸಿಟ್ ಇನ್ಸೂರೆನ್ಸ್ ಅಂಡ್ ಕ್ರೆಡಿಟ್ ಗ್ಯಾರಂಟಿ ಕಾಪೋರೇಷನ್(ಡಿಐಸಿಡಿಸಿ) ಮಸೂದೆ ಮೂಲಕ ಗ್ರಾಹಕರಿಗೆ ಠೇವಣಿ ಮತ್ತು ಬಡ್ಡಿ ಸೇರಿ 5 ಲಕ್ಷ ರೂ. ಸಿಗಲಿದೆ. ಆದರೆ, ಅಂದಾಜು 12 ಸಾವಿರ ಠೇವಣಿದಾರರಿಗೆ ಈವರೆಗೆ ಹಣ ಸಿಕ್ಕಿಲ್ಲ ಎಂದು ಡಾ.ಶಂಕರ ಗುಹಾ ಹೇಳಿದರು.
ಕೆಲವು ಠೇವಣಿದಾರರು ಬ್ಯಾಂಕಿನಲ್ಲಿ ಕೋಟ್ಯಂತರ ರೂಪಾಯಿ ಠೇವಣಿ ಇಟ್ಟಿದ್ದಾರೆ. ಅಂಥವರಿಗೆ ಪೂರ್ತಿ ಹಣ ಸಿಕ್ಕಿಲ್ಲ. ಅಂದಾಜು 12 ಸಾವಿರ ಠೇವಣಿದಾರರಿಗೆ 1,200 ಕೋಟಿ ರೂ. ಹಣ ಬರಬೇಕಿದೆ. ಆದರೆ, ಸ್ಥಳೀಯ ಶಾಸಕರು ಮತ್ತು ಸಂಸದರು ಈ ಬಗ್ಗೆ ತುಟಿ ಬಿಚ್ಚುತ್ತಿಲ್ಲ. ಸಂತ್ರಸ್ತರ ಪರ ನಿಲ್ಲುವ ಬದಲು ವಂಚನೆ ಮಾಡಿರುವ ಆರೋಪಿಗಳಿಗೆ ಒಳಗೊಳಗೆ ಸಹಾಯ ಮಾಡುತ್ತಿದ್ದಾರೆ. ಈ ಹಗರಣವನ್ನು ಸಿಬಿಐಗೆ ವಹಿಸಬೇಕು ಮತ್ತು ತಪ್ಪಿತಸ್ಥರಿಗೆ ಶಿಕ್ಷೆ ಆಗಲೇಬೇಕು. ಪೂರ್ತಿ ಹಣ ಸಂತ್ರಸ್ತರಿಗೆ ಸಿಗಬೇಕು ಎಂದು ಅವರು ಹೇಳಿದರು.