ಜಿಲ್ಲೆ

ಅಮ್ಚಿನಡ್ಕ-ಮುಖಾರಿಮೂಲೆಗೆ ಕಾಡಾನೆಗಳ ಲಗ್ಗೆ : ತೋಟಗಳಿಗೆ ನುಗ್ಗಿ ತೆಂಗು, ಅಡಕೆ, ಬಾಳೆ ಕೃಷಿ ನಾಶ

ಸೌಮ್ಯ ಆರ್

ಪುತ್ತೂರು ಗ್ರಾಮಾಂತರ: ಅರಿಯಡ್ಕ ಗ್ರಾಪಂ ವ್ಯಾಪ್ತಿಯ ಮಾಡ್ನೂರು ಗ್ರಾಮದ ಕಾವು ಸಮೀಪದ ಅಮ್ಚಿನಡ್ಕ, ಮುಖಾರಿಮೂಲೆ ಪರಿಸರಕ್ಕೆ ಕಾಡಾನೆಗಳು ನುಗ್ಗಿ ಕೃಷಿ ಹಾನಿ ಮಾಡಿರುವ ಘಟನೆ ಗುರುವಾರ ರಾತ್ರಿ ನಡೆದಿದೆ.

ಈ ಜನವಸತಿ ಪ್ರದೇಶಕ್ಕೆ ಪ್ರಥಮ ಬಾರಿಗೆ ಕಾಡಾನೆಗಳು ಕಾಲಿಟ್ಟಿರುವುದರಿಂದ ಸ್ಥಳೀಯರು ಆತಂಕಕ್ಕೀಡಾಗಿದ್ದಾರೆ. ಅಮ್ಚಿನಡ್ಕ ಸಮೀಪದ ಮುರಳಿಸ್ಟೋರ್‌ನ ಪ್ರಗತಿಪರ ಕೃಷಿಕ ಶರತ್‌ಕುಮಾರ್ ರೈ ತೋಟದಲ್ಲಿ ಬಾಳೆಹಿಂಡು, ಅಡಕೆ, ತೆಂಗಿನ ಗಿಡಗಳನ್ನು ಹಾಗೂ ತೋಟದ ಬದಿಯಲ್ಲಿದ್ದ ಈಚಲು ಮರವನ್ನು ಆನೆ ನಾಶ ಮಾಡಿದೆ. ಮುಖಾರಿಮೂಲೆಯ ಅಬ್ದುಲ್ ರಝಾಕ್ ಅವರ ಅಡಕೆ ತೋಟಕ್ಕೆ ನುಗ್ಗಿರುವ ಕಾಡಾನೆಗಳು ತೋಟದಲ್ಲಿದ್ದ ಬಾಳೆಹಿಂಡು, ಬಾಳೆಗಿಡಗಳು, ತೆಂಗಿನ ಮತ್ತು ಅಡಕೆ ಗಿಡಗಳನ್ನು ಹಾಗೂ ಬಾಳೆಗೊನೆಗಳನ್ನು ನಾಶ ಮಾಡಿದ್ದಲ್ಲದೆ ತೋಟದಲ್ಲಿ ಅಳವಡಿಸಲಾಗಿದ್ದ ಪೈಪ್‌ಲೈನ್‌ಗಳನ್ನು ಹಾಗೂ ಬೇಲಿಯನ್ನು ಪುಡಿಗೈದಿರುವುದಾಗಿ ತಿಳಿದು ಬಂದಿದೆ.

ಕಾಡಾನೆ ಉಪಟಳ ಕುರಿತು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದು ವಲಯ ಅರಣ್ಯಾಧಿಕಾರಿಗಳಾದ ಪಾಣಾಜೆ ವಲಯದ ಮದನ್, ಆನೆಗುಂಡಿ ವಲಯದ ಸೌಮ್ಯಾ, ಅರಣ್ಯ ಇಲಾಖೆಯ ಪ್ರಧಾನ ಕಚೇರಿಯ ಬಿ.ಟಿ.ಪ್ರಕಾಶ್, ಕುಮಾರಸ್ವಾಮಿ, ಫಾರೆಸ್ಟ್ ಗಾರ್ಡ್ ದೀಕ್ಷಿತ್ ಮತ್ತಿತರರು ಶುಕ್ರವಾರ ಅಂಕೋತಿಮಾರು ಪ್ರದೇಶಕ್ಕೆ ದಾಳಿ ಮಾಡಿ ಕೃಷಿ ಹಾನಿ ಕುರಿತು ಪರಿಶೀಲನೆ ನಡೆಸಿದ್ದಾರೆ. ರಾತ್ರಿ ವೇಳೆ ಸ್ಥಳಕ್ಕೆ ಬರುವುದಾಗಿ ತಿಳಿಸಿದ್ದಾರೆ.

ಅಪಾಯದಲ್ಲಿ ಸ್ಥಳೀಯರು

ಆನೆಗುಂಡಿ ರಕ್ಷಿತಾರಣ್ಯದಿಂದ ಕಾಡಾನೆಗಳು ಅಮ್ಚಿನಡ್ಕ-ಮುಖಾರಿಮೂಲೆ ಪರಿಸರಕ್ಕೆ ಬಂದಿದ್ದು, ಮತ್ತೆ ಮತ್ತೆ ಬಂದು ಕೃಷಿ ನಾಶ ಮಾಡುವ ಸಾಧ್ಯತೆ ಇದೆ. ಈ ಪ್ರದೇಶದಲ್ಲಿ ಹಲವಾರು ಮನೆಗಳಿವೆ. ಕುಡಿಯುವ ನೀರು ಸರಬರಾಜು ಯೋಜನೆಯ ಪಂಪ್‌ಹೌಸ್ ಇದೇ ಪರಿಸರದಲ್ಲಿ ಇದ್ದು, ನೀರಿನ ಆಪರೇಟರ್ ವಿದ್ಯುತ್ ಸ್ವಿಚ್ ಹಾಕಲು ರಾತ್ರಿಯ ವೇಳೆಯೂ ಅಲ್ಲಿಗೆ ಹೋಗುತ್ತಿದ್ದಾರೆ. ಶರತ್‌ಕುಮಾರ್ ರೈ ಅವರ ತೋಟದ ಬದಿಯಲ್ಲಿಯೇ ಅಲ್ಲಿನ ಕೆಲವು ಮನೆಗಳಿಗೆ ಸಂಪರ್ಕದ ದಾರಿಯಿದ್ದು, ರಾತ್ರಿ ವೇಳೆಯೂ ಆ ದಾರಿಯಾಗಿ ಜನ ಹೋಗುತ್ತಿದ್ದಾರೆ. ಅಡಕೆ ಕೃಷಿಕರು ಕೂಡ ರಾತ್ರಿ ವೇಳೆ ತೋಟಕ್ಕೆ ಹೋಗುತ್ತಿದ್ದಾರೆ. ಹಾಗಾಗಿ ಹಾವಳಿ ತಡೆಗೆ ಅರಣ್ಯ ಇಲಾಖೆ ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.