ಜಿಲ್ಲೆ

ಮಗ ಮಾಡಿದ ಆ ಒಂದು ಕೆಲಸ ಅಮ್ಮನನ್ನೂ ಬಲಿ ಪಡೆಯಿತಾ?; ಪತಿ ಸತ್ತ ಕೆಲವೇ ಕ್ಷಣಗಳಲ್ಲಿ ಪತ್ನಿಗೂ ಸಾವು!

ಚಿಕ್ಕಮಗಳೂರು: ತಿಳಿದೋ ತಿಳಿಯದೆಯೋ ಮಗ ಮಾಡಿದ ಆ ಒಂದು ಕೆಲಸ ಅಮ್ಮನೂ ಜೀವ ಕಳೆದುಕೊಳ್ಳುವಂತೆ ಮಾಡಿತಾ? ಎಂದು ಅನಿಸಬಹುದಾದ ಕರುಣಾಜನಕ ಪ್ರಸಂಗವೊಂದು ಕಾಫಿನಾಡಿನಲ್ಲಿ ನಡೆದುಹೋಗಿದೆ. ಪತಿ ಕೊನೆಯುಸಿರೆಳೆದ ಕೆಲವೇ ಕ್ಷಣಗಳಲ್ಲಿ ಪತ್ನಿಯೂ ಮೃತಪಟ್ಟಿದ್ದು, ದಂಪತಿ ಸಾವಲ್ಲೂ ಜತೆಯಾಗಿ ಹೆಜ್ಜೆ ಹಾಕಿದ್ದಾರೆ.

ಚಿಕ್ಕಮಗಳೂರಿನ ಕೋಟೆ ಬಡಾವಣೆಯ ಹರೀಶ್​-ಸೌಮ್ಯ ದಂಪತಿ ಮೃತಪಟ್ಟವರು. ನ್ಯುಮೋನಿಯಾದಿಂದ ಬಳಲುತ್ತಿದ್ದ ಹರೀಶ್​ ನಗರದ ಆಸ್ಪತ್ರೆಯೊಂದಕ್ಕೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು.

ಅಪ್ಪ ನಿಧನರಾದ ವಿಷಯವನ್ನು ಮಗ ಅಮ್ಮನಿಗೆ ಕರೆ ಮಾಡಿ ತಿಳಿಸಿದ್ದ. ಪತಿ ಅಗಲಿದ ಸಂಗತಿಯನ್ನು ಏಕಾಏಕಿ ಕೇಳಿ ಆಘಾತಕ್ಕೆ ಒಳಗಾದ ಪತ್ನಿಯೂ ಹೃದಯಾಘಾತಕ್ಕೆ ಒಳಗಾಗಿ ಮೃತಪಟ್ಟಿದ್ದಾರೆ. ಹರೀಶ್ ಅವರೇನೂ ಕೋವಿಡ್​-19 ಸೋಂಕಿಗೆ ಒಳಗಾಗಿರಲಿಲ್ಲ ಎಂದು ಮೂಲಗಳು ತಿಳಿಸಿವೆ.