ಜಿಲ್ಲೆ

ಕಾಂಗ್ರೆಸ್​ನ ಐಎಸ್​ಐ ಏಜೆಂಟ್​ ಅಂದ್ರೆ ಏನ್​ ಮಾಡ್ತಾರೆ? - ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಪ್ರಶ್ನೆ

ಧಾರವಾಡ: ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ತುಷ್ಟೀಕರಣದ ರಾಜಕಾರಣ ಮಾಡುತ್ತಾರೆ. ಅದಕ್ಕೇ ಆರ್​ಎಸ್​ಎಸ್​ ಬಗ್ಗೆ ಹೀಗೆಲ್ಲಾ ಮಾತಾಡ್ತಿದ್ದಾರೆ. ನಾವೂ ಅವರ ತರಹ ಕಾಂಗ್ರೆಸ್​ನ ಐಎಸ್​ಐ ಏಜೆಂಟ್​ ಅಂದ್ರೆ ಏನ್​ ಮಾಡ್ತಾರೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಪ್ರಶ್ನಿಸಿದ್ದಾರೆ.

ಆರ್​ಎಸ್​ಎಸ್​ನ ತಾಲಿಬಾನ್​ಗೆ ಹೋಲಿಸಿದ ಸಿದ್ದರಾಮಯ್ಯ ಮಾತಿಗೆ ಜೋಶಿ ಇಂದು ಧಾರವಾಡದಲ್ಲಿ ಪ್ರತಿಕ್ರಿಯಿಸಿದರು. ಹಿಂದೆ ಬಾಟ್ಲಾ‌ ಹೌಸ್ ಶೂಟೌಟ್ ಪ್ರಕರಣ ಆಗಿತ್ತು. ಆಗ ಮೋಹನ ಚಂದ್ರ ಶರ್ಮಾ ಸತ್ತಿದ್ದರು. ಶರ್ಮಾ ಸತ್ತಿದ್ದಕ್ಕೆ ಅತ್ತಿರಲಿಲ್ಲ, ಆದರೆ, ಅಲ್ಲಿ ಟೆರರಿಸ್ಟ್ ಸತ್ತಿದ್ದಕ್ಕೆ ಸೋನಿಯಾ ಗಾಂಧಿ ಅತ್ತಿದ್ದರು. ಇವರ ಸಹಜ ಸ್ವಭಾವವೇ ಇದು. ಮುಸ್ಲಿಂ ತುಷ್ಟೀಕರಣಕ್ಕಾಗಿ ಸಿದ್ದರಾಮಯ್ಯ ಈ ಹೇಳಿಕೆ ನೀಡುತ್ತಾರೆ ಎಂದು ಸಚಿವ ಪ್ರಹ್ಲಾದ ಜೋಶಿ ಟೀಕಿಸಿದರು.

ಸಿದ್ದರಾಮಯ್ಯಗೆ ಆರ್.ಎಸ್.ಎಸ್. ಅಂದ್ರೆ ಏನು ಗೊತ್ತು? ಮತ ಬ್ಯಾಂಕ್ ರಾಜಕಾರಣಕ್ಕೆ ಹೀಗೆ ಹೇಳಿಕೆ ನೀಡುತ್ತಾರೆ. ಹಿಂದೆ ರಾಮಜನ್ಮಭೂಮಿ ವಿರೋಧ ಮಾಡಿದ್ದರು. ಮುಸ್ಲಿಂ ಮಹಿಳೆಯ ಜೀವನಾಂಶ ವಿಷಯಕ್ಕೂ ವಿರೋಧ ಮಾಡಿದ್ದರು. ಇದೆಲ್ಲದರಿಂದ ಕಾಂಗ್ರೆಸ್ ಅಧೋಗತಿಗೆ ಇಳಿದಿದೆ. ಇವರು ಸುಧಾರಿಸಬೇಕು. ಇಲ್ಲದಿದ್ದಲ್ಲಿ ಜನ ಇನ್ನೂ ದಾರಿ ತೋರಿಸ್ತಾರೆ ಎಂದು ಜೋಶಿ ಹೇಳಿದರು.

ದೇಶದ ಜನಕ್ಕೆ ಆರ್‌ಎಸ್ಎಸ್, ಬಿಜೆಪಿ ಏನಂತ ಗೊತ್ತಿದೆ. ಅದನ್ನು ಸಿದ್ದರಾಮಯ್ಯ ಹೇಳಬೇಕಾಗಿಲ್ಲ. ಅವರೊಬ್ಬ ಗೌರವಾನ್ವಿತ ನಾಯಕ. ವೈಯಕ್ತಿಕವಾಗಿ ಅವರ ಬಗ್ಗೆ ನನಗೂ ಗೌರವ ಇದೆ. ಆದರೆ ಮಾತನಾಡುವಾಗ ಇತಿ ಮಿತಿ ಇರಬೇಕು. ನಾವು ಕಾಂಗ್ರೆಸ್‌ನವರಿಗೆ ಐಎಸ್‌ಐ ಏಜೆಂಟ್ ಅಂದ್ರೆ ಏನು ಮಾಡ್ತಾರೆ. ಆ ರೀತಿ ಮಾತನಾಡಬಾರದು. ಅದು ಸರಿಯಲ್ಲ ಎಂದು ಪ್ರಹ್ಲಾದ ಜೋಶಿ ಹೇಳಿದರು.