ಜಿಲ್ಲೆ

ನೀರಿನ ಪೈಪ್ ದುರಸ್ತಿ : ಒರತೆ ಎಂದು ಭಾವಿಸಿ ಸುಮ್ಮನಿದ್ದ ಆಡಳಿತ ವ್ಯವಸ್ಥೆ

ಸೌಮ್ಯ ಆರ್

ವಿಜಯವಾಣಿ ಸುದ್ದಿಜಾಲ ಉಪ್ಪಿನಂಗಡಿ

ಹೆದ್ದಾರಿವಿಸ್ತರಣೆ ಹಿನ್ನೆಲೆಯಲ್ಲಿ ನಿರ್ಮಿಸಲಾದ ಸರ್ವೀಸ್ ರಸ್ತೆಯ ಮಧ್ಯ ಭಾಗದಲ್ಲಿ ನೀರಿನ ಪೈಪ್ ಒಡೆದು ನೀರು ಪೋಲಾಗುತ್ತಿದ್ದ ಹಿನ್ನೆಲೆಯಲ್ಲಿ ಸ್ಥಳೀಯಾಡಳಿತ ತಕ್ಷಣವೇ ಕ್ರಮ ಕೈಗೊಂಡು ಪೈಪನ್ನು ದುರಸ್ತಿಪಡಿಸಿದೆ.

ಕಳೆದ ಹಲವು ದಿನಗಳಿಂದ ಉಪ್ಪಿನಂಗಡಿಯ ಲೋಬೋ ಕಾಂಪ್ಲೆಕ್ಸ್ ಬಳಿ ಎತ್ತರಿಸಿದ ಸೇತುವೆಯ ನಿರ್ಮಾಣದ ಕಾರಣಕ್ಕೆ ನಿರ್ಮಿಸಲಾದ ಸರ್ವೀಸ್ ರಸ್ತೆಯ ಮಧ್ಯ ಭಾಗದಲ್ಲಿ ನೀರಿನ ಸೆಲೆ ಕಾಣಿಸಿ ಆ ಸ್ಥಳದಲ್ಲಿ ದೊಡ್ಡ ಹೊಂಡ ನಿರ್ಮಾಣವಾಗಿತ್ತು. ಈ ಸಂದರ್ಭ ಸತತ ಮಳೆ ಸುರಿಯುತ್ತಿದ್ದ ಕಾರಣ ಸಹಜವಾಗಿ ಇಲ್ಲಿ ನೀರಿನ ಒರತೆ ಇರಬಹುದು ಎಂದು ಅಂದಾಜಿಸಲಾಗಿತ್ತು. ರಸ್ತೆ ಮಧ್ಯದಲ್ಲಿ ನಿರ್ಮಾಣವಾದ ಹೊಂಡಕ್ಕೆ ಪದೇ ಪದೆ ಜಲ್ಲಿ ಮಿಶ್ರಣ ತಂದು ಹಾಕಿದ್ದರೂ ಪ್ರಯೋಜನವಾಗಿರಲಿಲ್ಲ.

ಮಳೆ ಕಡಿಮೆಯಾದರೂ ನೀರು ಮೇಲೇಳುತ್ತಿದ್ದುದನ್ನು ಕಂಡು ಕುತೂಹಲದಿಂದ ಪರಿಶೀಲನೆ ನಡಿಸಿದ ಸ್ಥಳೀಯ ಉದ್ಯಮಿ ಕೊನೆಗೂ ನೀರಿನ ಪೈಪ್ ಒಡೆದಿರುವುದನ್ನು ಪತ್ತೆಹಚ್ಚಿದ್ದಾರೆ. ತಕ್ಷಣವೇ ಸ್ಥಳೀಯಾಡಳಿತದ ಗಮನಕ್ಕೆ ತರಲಾಗಿದ್ದು, ಹೆದ್ದಾರಿ ಕಾಮಗಾರಿ ಗುತ್ತಿಗೆ ವಹಿಸಿಕೊಂಡಿರುವ ಕೆಎನ್‌ಆರ್ ಸಂಸ್ಥೆ ಸಹಕಾರ ಪಡೆದು ನೀರಿನ ಪೈಪನ್ನು ದುರಸ್ತಿ ಪಡಿಸಲಾಯಿತು.