ಸುಕುಮಾರ್ ಹೆಗ್ಡೆ  
ಜಿಲ್ಲೆ

ಕಾಲು ಜಾರಿ ಬಿದ್ದು ವಾಚ್‌ಮನ್ ಮೃತ್ಯು

ಇಂದಿರಾ ಎನ್ ಕೆ

ಮೂಡುಬಿದಿರೆ: ಇಲ್ಲಿನ ಸಮಾಜ ಮಂದಿರ ಸಭಾದಲ್ಲಿ ವಾಚ್‌ಮನ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಸುಕುಮಾರ್ ಹೆಗ್ಡೆ(56) ಅವರು ಬಿಪಿ ಹೈ ಆಗಿ ಸೋಮವಾರ ಬೆಳಗ್ಗೆ ಬಿದ್ದು ಮೃತಪಟ್ಟಿದ್ದಾರೆ. ಕೊಕ್ರಾಡಿಯ ನಿವಾಸಿ ಸುಕುಮಾರ್ ಹೆಗ್ಡೆ ಅವರು ಕಳೆದ 5 ವರ್ಷಗಳಿಂದ ಸಮಾಜ ಮಂದಿರದಲ್ಲಿ ವಾಚ್‌ಮನ್ ಆಗಿ ರಾತ್ರಿ ವೇಳೆ ಕರ್ತವ್ಯ ನಿರ್ವಹಿಸುತ್ತಿದ್ದು, ಹಗಲಿನಲ್ಲಿ ಬೇರೆ ಕಡೆಗೆ ಕೂಲಿ ಕೆಲಸಕ್ಕೆ ಹೋಗುತ್ತಿದ್ದರು. ಅವರಿಗೆ ಉಳಿದುಕೊಳ್ಳಲು ಸಮಾಜ ಮಂದಿರದ ವತಿಯಿಂದಲೇ ಅಲ್ಲಿಯೇ ರೂಮ್ ನೀಡಲಾಗಿತ್ತು.

ಸೋಮವಾರ ಬೆಳಗ್ಗೆ ಸುಕುಮಾರ್ ಅವರು ಹೋಟೆಲ್‌ಗೆ ತೆರಳಿ ಉಪಹಾರ ಸೇವಿಸಿ ಮರಳಿ ಬಂದಿದ್ದರು. ಈ ಸಂದರ್ಭ ರಕ್ತದೊತ್ತಡ ಹೆಚ್ಚಾಗಿ ಸ್ವಾಧೀನ ಕಳೆದುಕೊಂಡು ಕೆಳಗೆ ಬಿದ್ದಿದ್ದಾರೆ. ಇದರಿಂದಾಗಿ ತಲೆಗೆ ತೀವ್ರ ತರಹದ ಏಟಾಗಿದ್ದು, ಅಧಿಕ ರಕ್ತಸ್ರಾವವಾಗಿ ಮೃತಪಟ್ಟಿದ್ದಾರೆ.
ಹಗಲು ಸಮಯದಲ್ಲಿ ಕರ್ತವ್ಯ ನಿರ್ವಹಿಸಲು ಆಗಮಿಸಿದ್ದ ವಾಚ್‌ಮನ್ ಮತ್ತು ಕೆಲಸದಾಳುವಿನ ಗಮನಕ್ಕೆ ಈ ಘಟನೆ ತಿಳಿದು ಬಂದಿದ್ದು, ತಕ್ಷಣ ಅವರು ಸಮಾಜ ಮಂದಿರ ಸಭಾದ ಅಧ್ಯಕ್ಷ, ಮಾಜಿ ಸಚಿವ ಕೆ.ಅಭಯಚಂದ್ರ ಜೈನ್ ಅವರಿಗೆ ತಿಳಿಸಿದ್ದಾರೆ. ಮೂಡುಬಿದಿರೆ ಪೊಲೀಸ್ ನಿರೀಕ್ಷಕ ಸಂದೇಶ ಪಿ.ಜಿ. ಘಟನಾ ಸ್ಥಳಕ್ಕೆ ಭೇಟಿ ನೀಡಿ ತನಿಖೆ ನಡೆಸುತ್ತಿದ್ದಾರೆ. ಅವರು ಪತ್ನಿ, ಪುತ್ರ ಹಾಗೂ ಪುತ್ರಿಯನ್ನು ಅಗಲಿದ್ದಾರೆ.