ಕಾರ್ಕಳ: ವಕ್ಫ್ ಆಸ್ತಿ ಒತ್ತುವರಿ ನೆಪದಲ್ಲಿ ರಾಜ್ಯದ ರೈತರ ಭೂಮಿ ಕಬಳಿಸಲು ಸರ್ಕಾರ ಮುಂದಾಗಿರುವುದು ವ್ಯವಸ್ಥಿತ ಷಡ್ಯಂತ್ರ ಎಂದು ಶಾಸಕ ವಿ.ಸುನೀಲ್ ಕುಮಾರ್ ಆರೋಪಿಸಿದ್ದಾರೆ.
ಹಿಂದಿನ ಆಯುಕ್ತೆ ಶಾಲಿನಿ ರಜನೀಶ್ ಕಂದಾಯ ಇಲಾಖೆಯ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದು 21,767 ಎಕರೆ ವಕ್ಫ್ ಭೂಮಿ ವಶಪಡಿಸಿಕೊಳ್ಳುವಂತೆ ಸೂಚಿಸಿದ್ದರು. ಈ ಸಂಬಂಧ ಕಂದಾಯ ಹಾಗೂ ವಕ್ಫ್ ಇಲಾಖೆ ಜಂಟಿ ಸಭೆ ನಡೆಸಿತ್ತು. ಆದರೆ ಈಗ ಸಿದ್ದರಾಮಯ್ಯ ಅವರ ಸೂಚನೆ ಅನ್ವಯ ಅಧಿಕಾರಿಗಳು ಎಲ್ಲ ನಿರ್ಧಾರಗಳನ್ನು ಬದಿಗೆ ಸರಿಸಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಅಬಕಾರಿ ಸಚಿವ ಆರ್.ಬಿ.ತಿಮ್ಮಾಪೂರ್ ಅಬಕಾರಿ ಇಲಾಖೆಯಲ್ಲಿ ವರ್ಗಾವಣೆ ವ್ಯವಹಾರ ನಡೆಸುತ್ತಿರುವುದು, ಪರವಾನಗಿ ನೀಡುವಿಕೆ ಸಹಿತ ವಿವಿಧ ಮೂಲಗಳಿಂದ 500 ಕೋಟಿ ರೂ. ಅಕ್ರಮವಾಗಿ ಹಣ ಸಂಪಾದಿಸುತ್ತಿದ್ದಾರೆ ಎಂಬ ಮದ್ಯ ಮಾರಾಟಗಾರರ ಸಂಘ ಆರೋಪ ಸತ್ಯ. ಈ ಹಿನ್ನೆಲೆಯಲ್ಲಿ ಸಚಿವರು ರಾಜೀನಾಮೆ ನೀಡಬೇಕು ಎಂದು ಪ್ರಕಟಣೆಯಲ್ಲಿ ಒತ್ತಾಯಿಸಿದ್ದಾರೆ.