ವಿಜಯವಾಣಿ ಸುದ್ದಿಜಾಲ ಕೊಕ್ಕಡ
ಕೊಕ್ಕಡದಲ್ಲಿ ಮತ ಚಲಾಯಿಸಬೇಕಿದ್ದ ಮತದಾರರೊಬ್ಬರು ಮತಗಟ್ಟೆ ಸಂಖ್ಯೆ ಬದಲಾಗಿ 60 ಕಿ.ಮೀ. ದೂರದ ಮಕರ್ಂಜದ ಮಿತ್ತಡ್ಕಕ್ಕೆ ಹೋಗಿ ಮತಚಲಾಯಿಸಬೇಕಾಗಿ ಬಂದ ಘಟನೆ ಚುನಾವಣಾ ದಿನದಂದು ನಡೆದಿದೆ.
ಸುಳ್ಯ ವಿಧಾನಸಭಾ ಕ್ಷೇತ್ರದ ಕೌಕ್ರಾಡಿ ಗ್ರಾಮದ ನೆಕ್ಕರ್ಲ ನಿವಾಸಿ ಅಶೋಕ ಅರುಣ ಚಿಪಳೂಣ್ಕರ್ ಅವರಿಗೆ ಮತಗಟ್ಟೆ ಸಂಖ್ಯೆ 23ರಲ್ಲಿ ಅಂದರೆ ಕೊಕ್ಕಡ ಸಮೀಪದ ಸಂತ ಜೋನರ ಅನುದಾನಿತ ಹಿ.ಪ್ರಾ.ಶಾಲೆ ಕೌಕ್ರಾಡಿಯಲ್ಲಿ ಮತ ಚಲಾವಣೆಗೆ ಅವಕಾಶ ಸಿಗಬೇಕಿತ್ತು. ಈ ಹಿಂದೆ ಪುಣೆಯಲ್ಲಿ ಉದ್ಯೋಗ ಮಾಡಿಕೊಂಡು ಅಲ್ಲೇ ಇದ್ದ ಕಾರಣ ಅಲ್ಲಿಯೇ ಮತ ಚಲಾಯಿಸುತ್ತಿದ್ದರು. ಆದರೆ ಇತ್ತೀಚೆಗೆ ಕೊಕ್ಕಡದ ತನ್ನ ಊರಿಗೆ ಬಂದು ನೆಲೆಸಿದ ಕಾರಣ ಮತದಾನ ಕೇಂದ್ರ ಊರಿಗೆ ಬದಲಾಯಿಸಿದ್ದರು.
ಮತದಾನ ಕೇಂದ್ರ ಬದಲಾಯಿಸುವ ಸಂದರ್ಭ ಚುನಾವಣಾ ಕೇಂದ್ರದಲ್ಲಿ ಮತಗಟ್ಟೆ ಸಂಖ್ಯೆ 23ರ ಬದಲು 213 ಎಂದು ನಮೂದಾಗಿ ಎಡವಟ್ಟಾಯಿತು. ಅಶೋಕ್ ಅವರ ಪತ್ನಿ, ಕಲ್ಪನಾಗೆ ಸಂತ ಜೋನರ ಶಾಲೆಯಲ್ಲಿಯೇ ಮತದಾನಕ್ಕೆ ಅವಕಾಶ ದೊರೆತಿತ್ತು. ಹೀಗಾಗಿ ಅವರು ವೆಬ್‌ಸೈಟ್ ಮೂಲಕ ಸರ್ಚ್ ಮಾಡಿ 213 ಮತಗಟ್ಟೆ ಕೇಂದ್ರ ಮಕರ್ಂಜದ ಮಿತ್ತಡ್ಕದಲ್ಲಿ ಬರುವುದನ್ನು ಖಚಿತಪಡಿಸಿ ಸುಮಾರು 60 ಕಿ.ಮೀ. ದೂರದಲ್ಲಿದ್ದ ಮಿತ್ತಡ್ಕ ದ.ಕ.ಜಿ.ಪ.ಹಿ.ಪ್ರಾ.ಶಾಲೆಯಲ್ಲಿ ಮತ ಚಲಾಯಿಸಿದರು.
ಅಶೋಕ್ ಅವರ ಮತದಾರರ ಗುರುತಿನ ಚೀಟಿ ಹಾಗೂ ಆಧಾರ್‌ನಲ್ಲಿ ಕೌಕ್ರಾಡಿಯ ವಿಳಾಸ ದಾಖಲಾಗಿದ್ದರೂ ಮತಗಟ್ಟೆ ಸಂಖ್ಯೆ ಬದಲಾದ ಕಾರಣ ಈ ಅವ್ಯವಸ್ಥೆ ಎದುರಿಸಬೇಕಾಯಿತು. ಆದರೂ ಮತದಾನದ ಅವಕಾಶ ಬಿಡದೆ ಮಕರ್ಂಜಕ್ಕೆ ಹೋಗಿ ಮತ ಚಲಾಯಿಸಿ ಬಂದರು.