More

    ಮರೆಯಾಗುತ್ತಿದೆ ಎಕರೆಗಟ್ಟಲೆ ವಿಶಾಲವಾದ ಮೈಂದು ಕೆರೆ

    ಹರಿಪ್ರಸಾದ್ ನಂದಳಿಕೆ ಕಾರ್ಕಳ


    ಹಲವು ವರ್ಷಗಳ ಹಿಂದೆ ವಿಶಾಲವಾಗಿ ಎಕರೆಗಟ್ಟಲೆ ಪ್ರದೇಶದಲ್ಲಿ ಹರಡಿಕೊಂಡಿದ್ದು, ಎರಡು ಗ್ರಾಮದ ಜನರಿಗೆ ಅಂತರ್ಜಲವೃದ್ಧಿಗೆ ಕಾರಣವಾಗಿದ್ದ ಪಿಲಾರು ಗ್ರಾಮದ ಸರ್ಕಾರಿ ಜಾಗದಲ್ಲಿರುವ ಮೈಂದು ಕೆರೆ ಇದೀಗ ಹೂಳು ತುಂಬಿ ಮರೆಯಾಗಿದೆ.

    ಒಂದೆಡೆ ಬೆಳ್ಮಣ್ ಗ್ರಾಪಂ ಮತ್ತೊಂದೆಡೆ ಮುದರಂಗಡಿ ಗ್ರಾಪಂ ಗಡಿ ಪ್ರದೇಶವಾದ ಪಿಲಾರು, ಪುನಾರು ಭಾಗದಲ್ಲಿ ಸುಮಾರು 1.27 ಎಕರೆ ವಿಸ್ತೀರ್ಣ ಹೊಂದಿರುವ ಕೆರೆ ಇದೀಗ ನಿರ್ವಹಣೆ ಕೊರತೆಯಲ್ಲಿ ಸಂಪೂರ್ಣ ಹೂಳು ತುಂಬಿ ಕೆರೆಯೇ ಮರೆಯಾಗುವಂತಾಗಿದೆ. ಈ ಹಿಂದೆ ಪಿಲಾರು ಹಾಗೂ ಬೆಳ್ಮಣ್ ಗ್ರಾಮದ ಪುನಾರು, ಜಂತ್ರ ಪರಿಸರದ ಜನರಿಗೆ ನೀರಿನ ಪ್ರಮುಖ ಮೂಲವಾಗಿದ್ದ ಮೈಂದು ಕೆರೆ ಪಾಲು ಬಿದ್ದಿದೆ.

    ಇದೇ ಕೆರೆ ನೀರನ್ನು ಈ ಭಾಗದ ಜನ ದಿನಬಳಕೆ ಮಾಡುತ್ತಿದ್ದರು ಅಲ್ಲದೆ, ಕೃಷಿ ಕಾರ್ಯಗಳಿಗಾಗಿ ವರ್ಷವಿಡೀ ಇದೇ ಕೆರೆ ನೀರನ್ನು ಉಪಯೋಗಿಸುತ್ತಿದ್ದು, ವರ್ಷದುದ್ದಕ್ಕೂ ಕೆರೆಯಲ್ಲಿ ನೀರಿನ ಮಟ್ಟ ಇರುತ್ತಿತ್ತು. ಪರಿಸರದ ಬಾವಿಗಳಲ್ಲಿ ನೀರಿನ ಒರತೆ ಹೆಚ್ಚಾಗುತ್ತಿತ್ತು. ಆದರೆ ಇತ್ತೀಚಿನ ಕೆಲವರ್ಷಗಳಿಂದ ಈ ಕೆರೆ ಸಂಪೂರ್ಣ ಹೂಳು ತುಂಬಿ ನೀರಿನ ಶೇಖರಣೆ ಕಡಿಮೆಯಾಗಿ ಫೆಬ್ರವರಿ ಅಂತ್ಯಕ್ಕೆ ಸಂಪೂರ್ಣ ಬತ್ತಿ ಹೋಗಿದೆ.

    ಕೆಲವರ್ಷಗಳ ಹಿಂದೆ ಈ ಕೆರೆ ನೀರು ವರ್ಷದ 365 ದಿನವೂ ಬತ್ತದೆ ವರದಾನವಾಗಿತ್ತು. ಇದೇ ನೀರನ್ನು ಬಳಸಿಕೊಂಡು ಈ ಭಾಗದ ನೂರಾರು ಮನೆಗಳ ಕೆಲಸ ನಡೆದಿದೆ. ಬಳಿಕದ ವರ್ಷಗಳಲ್ಲಿ ಜನಪ್ರತಿನಿಧಿಗಳ, ಅಧಿಕಾರಿಗಳ ಇಚ್ಛಾಶಕ್ತಿ ಕೊರತೆಯಿಂದ ಮೈಂದು ಕೆರೆಯೂ ಪಾಳು ಬೀಳುವ ಪರಿಸ್ಥಿತಿ ನಿರ್ಮಾಣವಾಗಿದೆ. ಇದೀಗ ಸಂಪೂರ್ಣ ಹೂಳು ತುಂಬಿ ಕೆರೆಯೇ ಮರೆಯಾಗುವ ಮಟ್ಟ ತಲುಪಿದೆ. ಸುತ್ತಲೂ ಗುಡ್ಡ ಪ್ರದೇಶವಾಗಿದ್ದು, ಗುಡ್ಡದಿಂದ ಹರಿದು ಬರುವ ನೀರು ಇದೇ ಕೆರೆಯಲ್ಲಿ ಸಂಗ್ರಹಗೊಂಡು ಮುಂದೆ ತಗ್ಗು ಪ್ರದೇಶ ಜನರಿಗೆ ಉಪಯೋಗಕ್ಕೆ ಬರುತ್ತಿತ್ತು. ಆದರೆ ಇದೀಗ ಹೂಳು ತುಂಬು ಕೆರೆಯೂ ಸಂಪೂರ್ಣ ಬತ್ತಿ ಹೋಗಿದ್ದು, ಕೆರೆ ಮೈದಾನದಂತೆ ಕಾಣುತ್ತಿದೆ.

    ಕೆರೆ ಅಭಿವೃದ್ಧಿ ಎಂದು?


    ಎರಡೂ ಗ್ರಾಪಂ ವ್ಯಾಪ್ತಿಯ ಜನರಿಗೂ ಉಪಯೋಗವಾಗುವ ಈ ಕೆರೆ ಅಭಿವೃದ್ಧಿ ಕಾರ್ಯ ಎಂದು? ಎಂದು ಗ್ರಾಮದ ಜನ ಪ್ರಶ್ನಿಸುತ್ತಿದ್ದರೂ ಕೆರೆ ಅಭಿವೃದ್ಧಿ ಕಾರ್ಯಕ್ಕೆ ಸಂಬಂಧಪಟ್ಟ ಮುದರಂಗಡಿ ಹಾಗೂ ಬೆಳ್ಮಣ್ ಗ್ರಾಪಂ ಸ್ಪಂದಿಸಿದಂತಿಲ್ಲ. ಅಲ್ಲದೆ ಯಾವುದೇ ಅಧಿಕಾರಿಗಳು, ಜನಪ್ರತಿನಿಧಿಗಳು ಈ ಬಗ್ಗೆ ಗಮನ ಹರಿಸಿದಂತಿಲ್ಲ. ಸಂಪೂರ್ಣ ಹೂಳು ತುಂಬಿ ಮರೆಯಾಗುವ ಮಟ್ಟ ತಲುಪಿದ ಕೆರೆ ಉಳಿವಿನ ಬಗ್ಗೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಮನಸ್ಸು ಮಾಡಿ ಅಭಿವೃದ್ಧಿ ಬಗ್ಗೆ ಚಿಂತನೆ ನಡೆಯಬೇಕಾಗಿದೆ.

    ಎರಡೂ ಗ್ರಾಮಕ್ಕೆ ಉಪಯೋಗ

    ಪಿಲಾರು ಗ್ರಾಮ ಹಾಗೂ ಜಂತ್ರ ಪುನಾರು ಗ್ರಾಮದ ಜನರಿಗೆ ಉಪಯೋಗಕ್ಕೆ ಬರುವ ಮೈಂದು ಕೆರೆ ಪಿಲಾರು ಗ್ರಾಮದ ಸರ್ವೇ ನ.378/1ರಲ್ಲಿ ಸುಮಾರು 1.27 ಎಕರೆ ವಿಸ್ತೀರ್ಣ ಹೊಂದಿದೆ. ಈ ಕೆರೆಯಲ್ಲಿ ನೀರು ಶೇಖರಣೆಗೊಂಡಲ್ಲಿ ಈ ಭಾಗದ ಸುಮಾರು ನೂರಾರು ಎಕರೆ ಕೃಷಿ ಭೂಮಿಗೆ ವರದಾನವಾಗಲಿದೆ. ಅಲ್ಲದೆ ಪರಿಸರದ ನೂರಾರು ಮನೆಯ ಬಾವಿಗಳಲ್ಲಿ ನೀರಿನ ಒರತೆ ಹೆಚ್ಚಳವಾಗುತ್ತದೆ.

    ಕೆರೆ ಉಳಿಸಲು ಮುಂದಾದ ಲಯನ್ಸ್

    ಸ್ಥಳೀಯ ಬೆಳ್ಮಣ್ ಲಯನ್ಸ್ ಕ್ಲಬ್ ಅಧ್ಯಕ್ಷ ವಿಶ್ವನಾಥ್ ಪಾಟ್ಕರ್ ಮುತುವರ್ಜಿಯಲ್ಲಿ ಮೈಂದು ಕೆರೆ ಅಭಿವೃದ್ಧಿ ಬಗ್ಗೆ ಚಿಂತನೆ ನಡೆಸಿ, ದಾನಿಗಳ ಸಹಕಾರದಲ್ಲಿ ಕೆರೆ ಹೂಳೆತ್ತುವ ಕಾರ್ಯಕ್ಕೆ ಕೈ ಹಾಕಿದ್ದಾರೆ. ಸಂಪೂರ್ಣ ಹೂಳು ತುಂಬಿದ ಕೆರೆ ಹೂಳೆತ್ತಲು ಲಕ್ಷಾಂತರ ರೂ. ವೆಚ್ಚ ತಗುಲಲಿದ್ದು, ದಾನಿಗಳ ನೆರವಿನ ನಿರೀಕ್ಷೆಯಲ್ಲಿದ್ದಾರೆ. ಮೈಂದು ಕೆರೆ ಅಭಿವೃದ್ಧಿಯಲ್ಲಿ ಕೈ ಜೋಡಿಸುವವರು ಬೆಳ್ಮಣ್ ಲಯನ್ಸ್ ಕ್ಲಬ್‌ನ ಬ್ಯಾಂಕ್ ಆಫ್ ಬರೋಡಾ ಬೆಳ್ಮಣ್ ಶಾಖೆಯ ಖಾತೆ ಸಂಖ್ಯೆ 81990100004210 ಅಥವಾ ದೂರವಾಣಿ- 7090558346 ಸಂಪರ್ಕಿಸಿ ಧನಸಹಾಯ ಮಾಡಬಹುದು.

    ಮೈಂದು ಕೆರೆ ಹಲವು ವರ್ಷಗಳಿಂದ ಹೂಳು ತುಂಬಿ ಇದೀಗ ಬಹುಬೇಗನೆ ಬತ್ತಿ ಹೋಗುತ್ತಿದೆ. ಕೆರೆ ಅಭಿವೃದ್ದಿಯಾದಲ್ಲಿ ಎರಡೂ ಗ್ರಾಮದ ಜನರಿಗೆ ಉಪಯೋಗವಾಗಲಿದೆ. ಲಯನ್ಸ್ ಕ್ಲಬ್ ವತಿಯಿಂದ ಕೆರೆಯ ಹೂಳೆತ್ತುವ ಕಾರ್ಯಕ್ಕೆ ಮುಂದಾಗಿದ್ದೇವೆ. ಲಕ್ಷಾಂತರ ರೂ. ಅಗತ್ಯವಿದ್ದು, ದಾನಿಗಳ ಸಹಕಾರ ನಿರೀಕ್ಷಿಸುತ್ತಿದ್ದೇವೆ.
    ವಿಶ್ವನಾಥ್ ಪಾಟ್ಕರ್, ಅಧ್ಯಕ್ಷ, ಬೆಳ್ಮಣ್ ಲಯನ್ಸ್ ಕ್ಲಬ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts